ನಾನು ಮತ್ತು ಜೇನು
ಹಲವು ವರ್ಷಗಳ ಕೆಳಗೆ ’ಮಯೂರ’ದಲ್ಲಿ ಜೇನ್ನೊಣಗಳ ಹಿನ್ನೆಲೆಯನ್ನೊಳಗೊಂಡ ಕಥೆಯೊಂದು ಬಂದಿತ್ತು. ಆ ಕಥೆಯಲ್ಲಿ ಬಂದಂತಹ ಜೇನ್ನೊಣಗಳು ಮಧುವನ್ನು ಹೀರಿಕೊಂಡು ತಮ್ಮ ಗೂಡಿಗೆ ಮರಳುವಾಗ ನೃತ್ಯದ ಮೂಲಕ ಇತರೆ ಜೇನ್ನೊಣಗಳಿಗೆ ತಾವು ಮಧುವನ್ನು ಹೀರಿಕೊಡು ಬಂದ ಹೂವಿರುವ ಸ್ಥಳವನ್ನು ಸೂಚಿಸುತ್ತವೆ ಎಂಬ ಅಂಶ ನನ್ನಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಇಂತಹ ಕುತೂಹಲವನ್ನು ತಣಿಸಿಕೊಳ್ಳುವ ಅವಕಾಶ ನಾನು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ವಿದ್ಯಾರ್ಥಿನಿಲಯದಲ್ಲಿದ್ದಾಗ ಒದಗಿ ಬಂತು.
ವಿದ್ಯಾರ್ಥಿನಿಲಯದಲ್ಲಿ ನಾನಿದ್ದದ್ದು ಎರಡನೇ ಮಹಡಿಯಲ್ಲಿ, ಅಲ್ಲಿ ಮಳೆಯ ಎರಚಲು ಕಾರಿಡಾರಿಗೆ ನುಗ್ಗದಂತೆ, ಕಾರಿಡಾರಿನ ಒಂದು ಬದಿಗೆ ಉದ್ದಕ್ಕೂ ಇದ್ದ ತಡೆಗೋಡೆಯ ನೇರಕ್ಕೆ ಮೇಲ್ಭಾಗದಲ್ಲಿ ಆರ್.ಸಿ.ಸಿ.ಗೆ ಹೊಂದಿಕೊಂಡಂತೆ, ಮೇಲಿನಿಂದ ಕೆಳಭಾಗಕ್ಕೆ ಎರಡಡಿಯಷ್ಟುದ್ದದ ತಡೆಗೋಡೆಯನ್ನು ನಿರ್ಮಿಸಿದ್ದರು. ಆ ತಡೆಗೋಡೆಯ ಮೂಲೆಗಳಿಗೆ ಬಿಸಿಲು ಬೀಳುತ್ತಿರಲಿಲ್ಲ. ಸಹಜವಾಗಿಯೇ ತಂಪಾಗಿದ್ದ ಈ ಪ್ರದೇಶಗಳು ಬಹುಶ: ಜೇನ್ನೊಣಗಳಿಗೆ ತಮ್ಮ ಗೂಡನ್ನು ನಿರ್ಮಿಸಲು ಪ್ರಶಸ್ತವಾದ ಸ್ಥಳವಾಗಿ ಕಂಡಿರಬೇಕು. ಒಂದು ಮಧ್ಯಾಹ್ನ, ಒಂದಷ್ಟು ಜೇನ್ನೊಣಗಳು ಗುಂಯ್ ಗುಡುತ್ತಾ ತಡೆಗೋಡೆಯ ಮೂಲೆಗಳ ವಾಸ್ತು ಪರಿಶೀಲಿಸುತ್ತಿದ್ದವು. ನೋಡ ನೋಡುತ್ತಿದ್ದಂತೆ, ಜೇನ್ನೊಣಗಳ ಸಂಖ್ಯೆ ಹೆಚ್ಚುತ್ತಾ ಹೋಗಿ, ಮೂಲೆಯೊಂದರಲ್ಲಿ ಗುಂಪು ಗುಂಪಾಗಿ ತಮ್ಮ ನಿಲಯ ನಿರ್ಮಾಣವನ್ನು ಪ್ರಾರಂಭಿಸಿಯೇ ಬಿಟ್ಟವು. ಸಂಜೆಯಾಗುವಷ್ಟರಲ್ಲಿ ಮಧ್ಯಮ ಗಾತ್ರದ ಜೇನು ಗೂಡು ನಿರ್ಮಾಣವಾಗಿಯೇ ಬಿಟ್ಟಿತ್ತು. ತೀರ ಕೈಯಳತೆಯಲ್ಲಿಯೇ ಜೇನು ಗೂಡು ನಿರ್ಮಾಣವಾದ್ದರಿಂದ ಒಂದಷ್ಟು ಜನ ವಿದ್ಯಾರ್ಥಿಗಳು ಮ್ಯಾನೇಜರ್ ಗೆ ಸಮಸ್ಯೆ ವಿವರಿಸಿ, ಅ ಜೇನುಗೂಡನ್ನು ತೆಗೆಸುವಂತೆ ಕೇಳಿಕೊಂಡೆವು. ಕನ್ನಡದ ಭಕ್ತಿ ಪ್ರಧಾನ ಚಿತ್ರಗಳ ಕಥಾನಾಯಕನಂತೆ ಆತ ತನ್ನೆರಡು ಕೈಗಳನ್ನು ಕೆನ್ನೆಗೆ ಬಡಿದುಕೊಂಡು, ಜೇನು ಸಾರ್, ಲಕ್ಷ್ಮಿ ಸಾರ್, ಅಂಗೆಲ್ಲಾ ಓಡಿಸಬಾರದು ಎಂಬ ವಿವರಣೆ ಕೊಟ್ಟ. ಅದುವರೆಗೂ ಅವುಗಳಿಂದ ನಮಗೆ ಅಂತಹ ಕಿರಿಕಿರಿಗಳೇನು ಆಗಿಲ್ಲವಾದ್ದರಿಂದ ನಾವೂ ಸುಮ್ಮನಾದೆವು. ಹೀಗೆ ಒಂದೆರಡು ದಿನ ಕಳೆದವು.
ಒಂದು ದಿನ ನಾನು ಕಾರಿಡಾರಿನ ಮೂಲಕ ನನ್ನ ಕೊಠಡಿಗೆ ಮರಳುತ್ತಿದ್ದಾಗ ನನಗೆ ಮಯೂರದ ಜೇನ್ನೊಣಗಳ ಕಥೆ ನೆನಪಾಗಿ ಬಿಟ್ಟಿತು. ನನ್ನ ಜೊತೆಗೆ ಗೆಳೆಯ ಅಮರೇಶ್ ಇದ್ದ. ಸರಿ ಇವತ್ತು ಜೇನ್ನೊಣಗಳ ಡ್ಯಾನ್ಸ್ ನೋಡಿಯೇ ಬಿಡಬೇಕೆಂದು ನಿರ್ಧರಿಸಿ ಜೇನುಗೂಡಿನ ಸಾಕಷ್ಟು ಹತ್ತಿರ ಹೋದೆ. ಅಲ್ಲಿ ಜೇನ್ನೊಣಗಳು ಅತ್ತಿಂದಿತ್ತ ಸರಿದಾಡುತ್ತಿದ್ದವೇ ಹೊರತು, ಯಾವ ಜೇನೂ ಡ್ಯಾನ್ಸ್ ಮಾಡುತ್ತಿರಲಿಲ್ಲ. ಸರಿ ಇನ್ನು ಹತ್ತಿರ ಹೋಗಿ ನೋಡೋಣ ಎಂದುಕೊಂಡು ಜೇನುಗೂಡಿನ ಸಾಕಷ್ಟು ಹತ್ತಿರ ಹೋದೆ. ಅಮರೇಶ್ ದೂರ ನಿಂತುಕೊಂಡು ನೋಡುತ್ತಿದ್ದ. ಯಾವಾಗ ನನ್ನ ಉಸಿರು ಜೇನ್ನೊಣಗಳಿಗೆ ತಾಗುವಷ್ಟು ಹತ್ತಿರವಾದೇನೋ ಒಂದಷ್ಟು ಜೇನುಗಳು ಗೂಡಿನಿಂದ ಎದ್ದು ನನ್ನ ತಲೆಗೆ ಮುತ್ತಿಕೊಂಡವು, ನನಗೆ ಅಸಾಧ್ಯ ಗಾಬರಿಯಾಯಿತು. ನನಗಿಂತಲೂ ಗಾಬರಿಗೊಂಡಿದ್ದ ಅಮರೇಶ್ ಅವಾಗಲೇ ಓಡಿ ಹೋಗಿದ್ದ. ನಾನು ಗಾಬರಿಯಿಂದ ಕೈಯಿಂದ ತಲೆಗೆ ಮುತ್ತಿಕೊಂಡಿದ್ದ ಜೇನುಗಳನ್ನು ಕೊಡುವುದಕ್ಕೆಂದು ಕೈ ಎತ್ತಿದೆ,
(ಮುಂದುವರೆಯುವುದು)
Comments
ಉ: ನಾನು ಮತ್ತು ಜೇನು