ನಾನು ಮತ್ತು ನನ್ನ ಬದಲಾದ ತಲೆಯೂ

ನಾನು ಮತ್ತು ನನ್ನ ಬದಲಾದ ತಲೆಯೂ

ಚಿತ್ರ

ನಾನು ಮತ್ತು ನನ್ನ ಬದಲಾದ ತಲೆಯೂ

 

ನಾಟಕ ಮುಗಿಸಿ ಮನೆ ತಲುಪುವಾಗ ರಾತ್ರೆ ಹನ್ನೊಂದೂವರೆ ಆಗಿಯೇ ಹೋಗಿತ್ತು. 

ಮಗರಾಯ ನಾವು ಸೄಷ್ಟಿ ವೆಂಚರ್ಸ್ ನಿಂದ ಹೊರಡುವಾಗಲೇ ಅಮ್ಮನಿಗೆ ಬರುವಾಗ ಏನಾದರೂ ಕಟ್ಟಿಕೊಂಡೇ ಬನ್ನಿ ಅಂತ ತಾಕೀತು ಬೇರೆ ಮಾಡಿದ್ದ. ಅದೂ ನಿಜವೇ ಮನೆಯಲ್ಲಿಯೇ ಕುಳಿತರೆ ಹಸಿವು ಜಾಸ್ತಿಯೇ ಅಲ್ಲವೇ.

ಗುರುಗುಂಟೆ ಪಾಳ್ಯದ ಶಿವ ಭೋಜ್ ನಮ್ಮ ಅತ್ಯಂತ ಪ್ರೀತಿ ಪಾತ್ರ ಹೋಟೆಲ್. ಅಲ್ಲಿನ ಉತ್ತರ ಭಾರತದ ತಿಂಡಿಗಳು ತುಂಬಾ ರುಚಿಕಟ್ಟಾಗಿರುತ್ತವೆ. ಮಕ್ಕಳ ಜತೆ ಹೋಗುವುದಾದರೆ ನಮ್ಮ ಮೊದಲ ಒಲವು ಒಂದೋ ಈ ಶಿವ ಭೋಜ್ ಅಲ್ಲವಾದರೆ ಮಂತ್ರಿ ಮಾಲ್ ನಲ್ಲಿರೋ ಶಿವ ಸಾಗರ್.

ಅಲ್ಲಿಗೆ ಹೋಗಿ ರಾತ್ರೆ ಊಟ ಕಟ್ಟಿಸಿಕೊಂಡು ಮನೆಗೆ ತಲುಪಿದ್ದೆವು. ಊಟ ಮುಗಿಸಿ ಅದೂ ಇದೂ ಮಾತನಾಡಿ ಮಲಗುವಾಗ ಹನ್ನೆರಡೂವರೆ. ಮತ್ತೆ ನಾನು ಮಾತನಾಡುವುದು ನನ್ನೊಂದಿಗೇ ಅಂತ ಗೊತ್ತಾದದ್ದು ನನ್ನವಳು ನನ್ನ ಜೋಕಿಗೂ ನಗದಿದ್ದಾಗ. ಯಾಕೆ ಅಂತ ನೋಡಿದರೆ ಅವಳು ಯಾವಾಗಲೋ ನಿದ್ದೆಗೆ ಶರಣಾಗಿದ್ದಳು.

 

ಅದಕ್ಕಾಗಿಯೇ ಬೆಳಿಗ್ಗೆ ಏಳುವುದು ಸ್ವಲ್ಪ ತಡವಾಯ್ತು, ಆದರೂ ನಮ್ಮ ಎಚ್ ಆರ್ ಮೆನೇಜರ ನ ವೇದ ವಾಕ್ಯ ನೆನಪಿಗೆ ಬಂತು.

ಯಾಕಪ್ಪಾ ಹೇರ್ ಕಟ್ ಮಾಡಿಸಿಕೊಂಡಿಲ್ಲ ಅಂತ ಕೇಳಿದ್ದ ಮೊನ್ನೆ ಮೊನ್ನೆ. ನನ್ನ ಕಿವಿಯ ಮೇಲೂ ತಲೆ ಹಿಂದಿನಿಂದಲೂ ಪುಂಖಾನುಪುಂಕವಾಗಿ ಗಾಳಿಯಲ್ಲಿ ಹಾರಾಡುತ್ತಿರುವ ಕೂದಲುಗಳು ಅವನಿಗೆ ಯಾವಾಗಲೂ ಮತ್ಸರಕ್ಕೆ ಕಾರಣವೇ, ಯಾಕೆಂದರೆ ಅವನ ಹಣೆಯಲ್ಲಿ ಹತ್ತಿಂಚೂ ಕೂದಲಿಲ್ಲ. ನಾನು ನನ್ನದೊಂದು ಸ್ಟೇಜ್ ಶೋ ಇದೆ, ಅದು ಮುಗಿದ ಕೂಡಲೇ ಚಿಕ್ಕದು ಮಾಡಿಕೊಳ್ತೇನೆ ಅಂದಿದ್ದೆ,

 

ಇತ್ತೀಚೆಗೆ ನಿಮ್ಮ ಮೀಸೆ ನೋಡಿಯೇ ನೀವು ಮಿಲಿಟರಿಯವರೇನೋ ಅನ್ನೋ ಗುಮಾನಿ ನನಗೆ ಮೊದಲಿಂದ ಇತ್ತು ಅನ್ನುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಅದಕ್ಕೆ ಗೆಳೆಯರೆಲ್ಲರೂ ರಾಜನಿಗೆ ಮೀಸೆ ಬೇಕಲ್ಲಾ ಅಂತ ಹೇಳಿದ್ದುದೂ ಕಾರಣವಾಗಿತ್ತು.

ಸರಿ, ಅದಕ್ಕೆಂದೇ ಹೊರಟಿದ್ದೆ ಬೆಳಿಗ್ಗೆ ಬೆಳಿಗ್ಗೆ ಸಲೂನ್ ಹುಡುಕಿಕೊಂಡು ಅಲ್ಲಲ್ಲ ನಮ್ಮ ಮನೆಗೆ ಬರುವ ದಾರಿಯಲ್ಲಿ ಇರೋದೇ ಎರಡು ನಾಪಿತ ಸಲೂನಿಗಳು. ಒಂದು ರಸ್ತೆಯ ಬಲಗಡೆ  ಇದ್ದರೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಎಡಗಡೆ ಇದೆ.

ಮೊದಲು ಬಲಗಡೆಯವನ ಹತ್ರ ಹೋದೆ. ಮೊದಲು ಸಿಗುವ ಅಂಗಡಿ ಅದು. ಈ ಅಂಗಡಿ ಅನ್ನೋ ಶಬ್ದ ಈ ನಾಪಿತ ಸಲೂನಿಗೆ ಇಡಬಹುದಾ ಅಥವಾ ಬಾರದಾ ಅನ್ನುವುದೂ ಇಂದಿಗೂ ನನ್ನ ಕಾಡುವ ಪ್ರಶ್ನೆಯೇ.

ನೋಡಿದರೆ ನನ್ನ ಮೊದಲೇ ಸುಮಾರು ಐದಾರು ಜನ ಕಾದಿದ್ದರು ಸರದಿಯಲ್ಲಿ. ನನ್ನ ಸರದಿಗೆ ಒಂದೂವರೆ ಗಂಟೆಯಾದರೂ ಕಾಯಬೇಕೇನೋ ಅನ್ನಿಸಿತು, ಅದೂ ಒಬ್ಬನೇ ಇದ್ದ. ಮಡದಿ ಹೇಳಿದ ಹಾಲು ತನ್ನಿ ಅನ್ನುವ ಮಾತು ನೆನಪಾಗಿ ಹಾಲು ತೆಗೆದು ಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟೆ. ಹಾಲಿನವ ಅಲ್ಲಿಂದ ಬರೇ ಅರ್ಧ ಕಿ ಮೀ ದೂರದಲ್ಲಿದ್ದಾನೆ. ಹಾಲು ತೆಗೆದುಕೊಂಡು ಇಲ್ಲಿ ಕನ್ನಡ ಪೇಪರ್ ಎಲ್ಲಿ ಸಿಗುತ್ತದೆ ಅಂತ ಕೇಳಿದೆ. ನಮ್ಮ ಮನೆಯಲ್ಲಿ ಒಂದು ಬರುತ್ತಾದರೂ ಇವತ್ತು ರವಿವಾರದ ಕನ್ನಡಮ್ಮನ ಪೂಜೆ ಮಾಡೋಣ ಅನ್ನಿಸಿ ಕೇಳಿದ್ದೆ. ಆತ ಇದಿರನ ಕಿರಾಣಿ ಅಂಗಡಿ ಹೊಕ್ಕೆ. ನಾನು ಕನ್ನಡ ಪೇಪರ್ ಯಾವುದಿದೆ ಕೇಳಿದ್ದಕ್ಕೆ ನನ್ನನ್ನಾತ ನಖಶಿಕಾಂತ ನೋಡಿ ಹಾಲು ಇದಿರಿಂದ ತಕ್ಕೊಂಡ್ರಾ ಅಂತ ಕೇಳಿದ. ಹೌದು ಪೇಪರ್ ಅಂತ ಹಲ್ಲು ಗಿಂಜಿದೆ. ಆತ ಇಲ್ಲಿ ಒಂದೇ ಪೇಪರ್ ಬರೋದು ಈ ದಿನ  ರವಿವಾರವಾದುದರಿಂದ ಪೇಪರ್ ಬರೋದು ತಡ ಅಂದ. ಬೇರೆ ಎಲ್ಲಿಯಾದರೂ ಕನ್ನಡ  ನಿಯತಕಾಲಿಕಗಳ ಅಂಗಡಿ ಇಲ್ಲವೇ ಕೇಳಿದರೆ, ಇಲ್ಲಿ ಎಲ್ಲಿಯೂ ಇಲ್ಲ ಸಾರ್ ಅಂದ ಪ್ರಾಣಿ. ನೀವು ಬೇಕಾದರೆ ಮೇಲಿನ ಬಸ್ ನಿಲ್ದಾಣದಲ್ಲಿ ವಿಚಾರಿಸಿ ಅಂದ. ಅಷ್ಟು ಸಮಯ ನನ್ನಲ್ಲೆಲ್ಲಿದೆ.

ಅಂತೂ ಹಾಲು ಪಡೆದು ನಡೆಯುತ್ತಾ ಇನ್ನೊಂದು ಸಲೂನು ತಲುಪಿದೆ. ಅಲ್ಲಿ ನೋಡಿದರೆ ಅಲ್ಲಿನ ಹುಡುಗ ಕಣ್ಣೊರಸುತ್ತಾ ನೆಲ ಗುಡಿಸುತ್ತಿದ್ದ. ಬನ್ನಿ ಕೂತ್ಕೊಳ್ಳೀ ಅಂತ ಕಸಬರಿಕೆ ಹಿಡಿದೇ ಬೆಂಚು ತೋರಿಸಿದ. ಅನಿವಾರ್ಯವಾಗಿ ಕುಳಿತೆ. ಬೇರೆ ಯಾರೂ ಇನ್ನೂ ಬಂದಿರಲಿಲ್ಲವಾದುದರಿಂದ ನನ್ನದು ಮೊದಲ ನಂಬ್ರ ಅಂತೂ ಖಾತರಿಯಾಗಿತ್ತು.

ಆತ ಕಸಗುಡಿಸಿ ಅದೆಲ್ಲವನ್ನೂ ಕೆಳಗೆ ತಳ್ಳಿದ. ಪಕ್ಕದಲ್ಲಿದ ಬಕೆಟೂ ನೀರೂ ತೆಗೆದುಕೊಂಡು ಹೊರ ಹೊರಟ.ಹೊರಗಿನ ರಸ್ತೆಯವರೆಗಿನ ಅವನ ಸುಫರ್ಧಿಯ ಜಾಗವನ್ನೆಲ್ಲಾ ತೋಯಿಸಿ ಒಳಬಂದು. ಇನ್ನೊಂದು ಕೊಡಪಾನವೆತ್ತಿಕೊಂಡು ಹೊರಹೊರಟ, ನಾನು ಮಿಕಮಿಕ ನೋಡುತ್ತಿದ್ದಂತೆಯೇ.

ಅಂತೂ ಇಂತೂ ಆತನ ನೀರಾಟ ಮುಗಿದು ಮತ್ತೆ ಒಳಬಂದು ಮೂಲೆಯಲ್ಲಿದ್ದ ಚಿಕ್ಕ ಬೆಂಚ ತೆಗೆದು ನನ್ನ ಪಕ್ಕದಲ್ಲಿಟ್ಟು ನೋಡನೋಡುತ್ತಿದ್ದಂತೆ ಅದರ ಮೇಲೆ ಹತ್ತಿ ನಿಂತ. ಮೇಲಿಟ್ಟ ದೇವರ ಫಟಕ್ಕೆ ದೀಪ ಹಚ್ಚಿ ಊದು ಕಡ್ಡಿಹಚ್ಚಿ ಕೈಮುಗಿದು ಕೆಳಗಿಳಿದು ನನಗೆ ಆತನ ಖುರ್ಚಿ ತೋರಿಸಿದ. ಅಕ್ಕಡ ಕುರ್ಚಂಡಿ.

ತದನಂತರ ನನ್ನಖುರ್ಚಿಯ ಪಕ್ಕದಲ್ಲಿದ್ದ ಮತ್ತೊಂದು ಕುರ್ಚಿ ಹತ್ತಿ ಮೇಗಡೆ ಇಟ್ಟ ಎಫ಼್ ರೇಡಿಯೋ ಶುರು ಹಚ್ಚಿಸಿದ. ವೆಂಕಟೇಷ್ವರ ಸುಪ್ರಭಾತ ಅಲೆಯಾಗಿ ತೇಲಿಬಂತು.

ಕೆಳಗಿಳಿದು ನನ್ನ ಪಕ್ಕಕ್ಕೆ ಬಂದು ನನಗೆ ಮೇಲುದೆ ಕಟ್ಟಿ, ಕನ್ನಡಕ ತೀಸ್ಕೊಂಡಿ ಅಂದ. ನೆನಪಿಗೆ ಬಂತು ನನ್ನ ಸುಲೋಚನದಲ್ಲೇ ಮೇಲಿನದೆಲ್ಲಾ ನಾನು ನಿರೀಕ್ಷಣೆ ಮಾಡಿದ್ದು. ತೆಗೆದು ಬದಿಗಿರಿಸಿದೆ.

ಯಾವ ಮಾಯದಲ್ಲೋ ಆತನ ಮುಂದಿನ ಪ್ರಶ್ನೆಗೆ ಮಿಲಿಟರಿ ಕಟ್ ಎಂದಿದ್ದೆ.

ಆತ ಕತ್ತರಿ ತೆಗೆದು ನನ್ನ ಪ್ರೀತಿ ಪಾತ್ರ ಕೂದಲುಗಳ ಮೇಲೆ ಹಾರಿ ಬಿದ್ದ. ಕರ ಕರ ಶಬ್ದಗಳ ಜತೆ ನನ್ನ ಎರಡ್ಮೂರು ತಿಂಗಳುಗಳ ಆಹಾರದ ಮೆಹನಿತ್ತಿನ ಫಲ ಕರಕರನೆ ಕಡಿದು ಬೀಳುತ್ತಿದ್ದವು. ಕೆಲವೊಮ್ಮೆ ನನಗೆ ಅನುಮಾನವೂ ಬಂತು. ನಾವು ವಾಹನ ಚಲಾವಣೆ ಮಾಡುವಾಗ ಕೆಲವೊಮ್ಮೆ ( ಬರೀ ಅಪರೂಪ ಅದು, ನಿದ್ದೆ ಬರುತ್ತ ಇರುವಾಗ ಏನಾಗುತ್ತೆ ಹೇಳೀ) ಹಾಗೆ ಒಂದೇ ಜಾಗದಲ್ಲಿ ಕರಕರ ಮಾಡುತ್ತಲಿದ್ದ. ಯಾವ ಮಾಯದಲ್ಲೋ ಪಕ್ಕದಲ್ಲಿನ ಯಂತ್ರದ ಬಾಯನ್ನು ನನ್ನ ಪೊದೆಗೂದಲಿನ ಮಧ್ಯದಲ್ಲಿಟ್ಟು ಕಟಕಟ ಮಾಡತೊಡಗಿದ. ಮೊದಲೇ ನನ್ನ ನಿದ್ದೆಯ ಮಂಪರು, ಆತನ ಬಾನುಲಿಯ ಸುಪ್ರಭಾತ ಎಲ್ಲವೂ ಸೇರಿ ನಾನು ಕಣ್ಣು ತೆರೆದು ನೋಡುವಾಗ ನಾನು ನಾನಾಗಿರಲಿಲ್ಲ ಹೀಗಾಗಿದ್ದೆ.

ಅಯ್ಯೋ ನನ್ನ ತಲೆಯೇ ಅನ್ನಿಸಿತು.

ಇದೂ ಒಂದು ಹೊಸತನ ಇರಲಿ ಅಂದುಕೊಂಡೆ.

ಮನೆಗೆ ಬಂದರೆ ಮಗರಾಯ ಕೇಳಿದ ಈ ತರ ಯಾಕಪ್ಪ ಮಾಡಿಕೊಂಡಿರಿ?

ಅವನಮ್ಮ, ರೀ ಹಿಂದು ಗಡೆ ಇಲಿ ತಿಂದ ಹಾಗೆ ಮಾಡಿದ್ದಾನೆ ಅಂದಳು.

ಇರಲಿ ಬಿಡು ಆತನ ಮೊದಲ ಪ್ರಯೋಗ ಪ್ರಾಯಷಃ ನನ್ನ ಮೇಲೆಯೇ ಇರಬೇಕು ಅಂದೆ.

ಮುಂದಿನ ತಿಂಗಳಿನಿಂದ ನಾನು ಬಲಗಡೆಯವನ ಹತ್ರವೇ ಹೋಗಬೇಕು ಅಂದುಕೊಂಡೆ ನೀವೇನಂತೀರಾ..??

 

 

 

 

Rating
No votes yet