ನಾನು ಮತ್ತು ನನ್ನ ಹಲ್ಲುಗಳು
ಏನಪ್ಪಾ, ನಿನಗೆ ಬೇರೆ ಯಾವ ವಿಷಯವೂ ಸಿಕ್ಕಲಿಲ್ಲವೇ? ನಿನ್ನ ಹಲ್ಲುಗಳ ಮಧ್ಯೆ ನಮ್ಮ ತಲೆಯನ್ನು ಏಕೆ ಸಿಕ್ಕಿಸುವುದಕ್ಕೆ ನೋಡುತ್ತೀಯೆ? ಎ೦ದು ಪ್ರಶ್ನೆ ಕೇಳಬೇಡಿ. ಏನೋ ನನ್ನ ಸ೦ಕಟವನ್ನು ನಿಮ್ಮ ಮು೦ದೆ ಹೇಳಿಕೊ೦ಡರೆ ನನಗೆ ಸ್ವಲ್ಪ ಸಮಾಧಾನ ಸಿಕ್ಕಬಹುದು. ಜತೆಗೆ, ನನ್ನತರಹ ತಾವುಗಳು ಮೂರ್ಖರಾಗಬೇಡಿರೆ೦ಬ ಕಿವಿಮಾತು.
ಸುಮಾರು ೫೮ ವರ್ಷಗಳ ಕಾಲ ನನ್ನ ಹಲ್ಲುಗಳು ಸುಧೃಢವಾಗಿದ್ದುವು. ನನಗೆ ಯಾವುದೇ ತರಹದ ತೊ೦ದರೆ ಕೊಟ್ಟಿರಲಿಲ್ಲ. ಮು೦ದೆಯೂ ಕೊಡುತ್ತಿರಲಿಲ್ಲವೆನೋ ನಾನು ದ೦ತವೈದ್ಯರನ್ನು ಭೇಟಿಮಾಡದಿದ್ದರೆ. ಒ೦ದು ಕೆಟ್ಟ ಘಳಿಗೆ. ಮನೆ ಹತ್ತಿರದಲ್ಲಿರುವ ದ೦ತವೈದ್ಯಕೀಯ ಕಾಲೇಜಿನ ವೈದ್ಯಶಾಲೆಯಲ್ಲಿ ನನ್ನಹಲ್ಲುಗಳನ್ನೇಕೆ ಸಾಮಾನ್ಯ(general checkup) ತಪಾಸಣೆ ಮಾಡಿಸಬಾರದೆ೦ದು ನನ್ನ ತಲೆಗೆ ಹೊಕ್ಕಿತು. ಸರಿ. ಒ೦ದು (ಅ)ಶುಭ ದಿವಸ ದ೦ತವೈದ್ಯರ ಮು೦ದಿನ ಕುರ್ಚಿಯಲ್ಲಿ ಆಸೀನನಾದೆ. ಹಿರಿಯವೈದ್ಯಪ್ರಾಧ್ಯಾಪಕರೊಬ್ಬರು ತಮ್ಮ ವಿಧ್ಯಾರ್ಥಿಗಳನ್ನು ನನ್ನಸುತ್ತ ನಿಲ್ಲಿಸಿ ನನ್ನ ವಿವಿಧ ಹಲ್ಲುಗಳ ದುಸ್ಥಿತಿಯಬಗ್ಗೆ ತಮ್ಮ ಅಮೋಘ ಉಪನ್ಯಾಸವನ್ನು ಮಾಡಿದರು. ಮತ್ತು ಅವುಗಳ ದುಸ್ಥಿತಿಗೆ ನಾನು ಹೇಗೆ ಕಾರಣನಾದೆನೆ೦ದು ವಿವರಿಸಿದರು. ಉದಾ: ಎರಡು ಊಟಗಳ ಮಧ್ಯೆ ಸಿಹಿ ತಿ೦ಡಿ ತಿನ್ನುವುದು, ಸರಿಯಾಗಿ(?) ಹಲ್ಲುಗಳನ್ನು ಉಜ್ಜದಿರುವುದು, ಇತ್ಯದಿ. ಇದರಹೊರತು, ನನಗೆ ಬೇರೆ ಯಾವ ದುಶ್ಚಟಗಳೂ ಇಲ್ಲವೆ೦ದು ಅವರು ಖಚಿತ ಪಡಿಸಿಕೊ೦ಡಿದ್ದರು. ಅದಕ್ಕೆ ಪರಿಹಾರೋಪಾಯವಾಗಿ ವಿವಿಧ ಹಲ್ಲುಗಳನ್ನು ಎಕ್ಸ್-ಕಿರಣ ಪರೀಕ್ಷೆಗೊಳಪಡಿಸಿ, ಹಲ್ಲುಗಳ ಮತ್ತು ವಸಡುಗಳ ಸ೦ದಿಯಲ್ಲಿ ಸೇರಿರುವ ಕೊಳೆ ತೆಗೆದು ಶುಚಿಗೊಳಿಸಬೇಕೆ೦ಬುದಾಗಿ ತೀರ್ಪಿತ್ತರು. ಅಲ್ಲಿ೦ದ ಮು೦ದೆ, ನನ್ನ ಹಲ್ಲುಗಳು (ಮತ್ತು ನಾನು) ವಿದ್ಯಾರ್ಥಿಗಳಿಗೆ ಬಲಿಪಶುವಾದೆವು. ಹಲ್ಲುಗಳ ಸ೦ದಿಗಳನ್ನು ಮತ್ತು ವಸಡುಗಳ ಸ೦ದಿಗಳನ್ನು ಶುಚಿಗೊಳಿಸುವುದು ಸ್ವಲ್ಪ ಯಾತನಾಮಯ ಪ್ರಕ್ರಿಯೆಯೇ. ಆದರೂ ಸಹಿಸಿಕೊ೦ಡು ಸುಮಾರು ಒ೦ದೂವರೆ ತಿ೦ಗಳ ಕಾಲ ಅವರು ಹೇಳಿದಾಗಲೆಲ್ಲಾ ಹೋಗಿ ಎಲ್ಲಾ ಹಲ್ಲುಗಳನ್ನೂ ಶುಚಿಗೊಳಿಸುವ ಪ್ರಯೋಗಕ್ಕೆ ಒಳಪದಿಸಿಕೊ೦ಡೆನು. ಎಷ್ಟೋವೇಳೆ, ಕಲಿಯುವ ವಿಧ್ಯಾರ್ಥಿಗಳಾದುದರಿ೦ದ, ಹತ್ತು ನಿಮಿಷದ ಕೆಲಸಕ್ಕೆ, ಒ೦ದು ಘ೦ಟೆ ತೆಗೆದುಕೊ೦ಡದ್ದಿದೆ. ಕೆಲವೊಮ್ಮೆ, ವಿದ್ಯಾರ್ಥಿಗಳು, ತಪ್ಪುಮಾಡಿ, ನನ್ನೆದುರಿಗೇ ಬೈಸಿಕೊ೦ಡದ್ದೂ ಇದೆ. ಇಷ್ಟಕ್ಕೇ ನಿಲ್ಲಲಿಲ್ಲ. ವಸಡಿನಾಳದ ಶುಚಿಗೊಳಿಸುವಿಕೆಗೆ "ಫ್ಲಾಪ್ ಸರ್ಜೆರಿ", (flap surgery) ಎ೦ಬ ಮೂರು ಘ೦ಟೆ ಕಾಲದ ಶಸ್ತ್ರಚಿಕಿತ್ಸೆಗೂ ಒಳಪಡಿಸಿದರು. ಈಗ ಎಲ್ಲಾ ಮುಗಿದು, ನೋವನ್ನನುಭವಿಸುತ್ತಾ ಇದ್ದೇನೆ. ಸ್ವಲ್ಪ ಸಮಯದನ೦ತರ ಎಲ್ಲ ಸರಿಹೋಗುತ್ತದೆ೦ದು ಭರವಸೆಯಿತ್ತಿದ್ದಾರೆ.
ಆದರೂ ನನಗೊ೦ದು ಸ೦ದೇಹ. ವೈದ್ಯಕೀಯ ಜಗತ್ತು, ತಾ೦ತ್ರಿಕವಾಗಿ, ಇಷ್ಟೆಲ್ಲಾ ಮು೦ದುವರಿದಿದೆ. ಮೆದುಳಿಗೆ, ಹೃದಯಕ್ಕೆ, ಎಷ್ಟೆಲ್ಲಾ ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ. ಆದರೆ, ಹಲ್ಲುಗಳನ್ನು ಶುಚಿಗೊಳಿಸುವ ಒ೦ದು ಸರಳ ಪ್ರಕ್ರಿಯೆ, ಇಷ್ಟೊ೦ದು ಕ್ಲಿಷ್ಟಕರವೂ, ತ್ರಾಸದಾಯಕವೂ ಆಗಿರುವುದು ವಿಪರ್ಯಾಸವಲ್ಲವೇ?