ನಾನು ಮತ್ತು ನಾನು
ನನ್ನ ಅಧಿಕೃತ, ಅಂದರೆ ಅಿಶಿಯಲ್ ಹುಟ್ಟುಹಬ್ಬ ಜನವರಿ ೨೨. ನನ್ನ ಎಲಿಮೆಂಟರಿ ಸ್ಕೂಲಿನ ಟೀಸಿ, ಎಸ್ಸೆಸೆಲ್ಸಿ ಮಾರ್ಕ್ಸ್ಕಾರ್ಡು, ಕಾಲೇಜಿನ ಡಿಗ್ರೀ ಸರ್ಟಿಫ಼ಿಕೇಟು, ಸೈಟಿನ ರಿಜಿಸ್ಟ್ರಿ, ಪಾಸ್ಪೋರ್ಟ್, ವೀಸಾ, ಕೆಲಸಕ್ಕೆ ಸೇರುವ ದಿನ ಮತ್ತು ಜತೆಗೆ ಕೆಲಸ ಮಾಡುವ ಎಲ್ಲರಲ್ಲೂ ಅಂದು ನಾನು ಘಟಿಸಿದ ದಿನ. ಅಧಿಕೃತೋದ್ಭವ.
ಆದರೆ ಅಮ್ಮ ಎಣ್ಣೆ ನೀರೆರೆರೆದು, ಕೊಬ್ಬರಿಮಿಠಾಯಿ ಮಾಡಿ ಹೊಸ ಅಂಗಿ ಹೊಲೆಸಿ, ಉಪನಯನ ಮಾಡಿ, ನಂತರ ಪೂರ್ವಿಯ ಜತೆಗೆ ಮದುವೆ ನಿಶ್ಚಯವಾದಾಗ ಆಮಂತ್ರಣ ಪತ್ರಿಕೆಯಲ್ಲಿ ಘಟಿಸಿದ್ದು ನಿಜವಾದ ನಾನು, ಅದು ಆಗಸ್ಟ್ ಇಪ್ಪತ್ತೈದು. ಎರಡಕ್ಕೂ ಎಂಟುತಿಂಗಳ ವ್ಯತ್ಯಾಸವಿದೆ. ತಮಾಷೆಯೆಂದರೆ, ಜಾತಕದಲ್ಲಿ ವಯಸ್ಸು ಇಪ್ಪತ್ತಾರೆಂದಿದ್ದು, ಮದುವೆಯನ್ನು ಅಧಿಕೃತವಾಗಿ ನೋಂದಣಿ ಮಾಡಿಸಲು ಹೋದಾಗ ಅಲ್ಲಿ ಇಪ್ಪತ್ತೇಳು ವರ್ಷವಾಗಿದ್ದಾಗ ಪೂರ್ವಿಯನ್ನು ಬಿಟ್ಟು ಬೀಗರೆಲ್ಲರಿಗೂ ಸ್ವಲ್ಪ ತಡಬಡಾಯಿಸುವಂತೆ ಆಗಿತ್ತು.
ಅಧಿಕೃತ ನಾನು, ನನ್ನಿಂದ ಎಂಟು ತಿಂಗಳು ಕಾಲೇಜು, ಸಂಬಳ, ಬಡ್ತಿ ನಿವೃತ್ತಿ ಇತರೇ ಅತಿ ಅಧಿಕೃತ ಕಾರ್ಯಗಳಲ್ಲಿ ಮುಂದೆ ಹೋಗುತ್ತಲೇ ಇರುತ್ತೇನೆ. ಹಾಗೆಯೇ ನಾನು ಹಿಂದೆಹಿಂದೆ. ನಾನು ಸತ್ತಾಗಲೂ ಅಧಿಕೃತವಾಗಿ ನನಗಿಂತಲೂ ನಾನು ದೊಡ್ಡವನಾಗಿರುತ್ತೇನೆ. ನಾನು ನಿವೃತ್ತಿಯಾದಮೇಲೂ ನಾನು ನನಗಿಂತಲೂ ಚಿಕ್ಕವನಾಗಿರುತ್ತೇನೆ.
* * * * *
ನಾನು ತುಂಬಾ ಚೂಟಿಯಂತೆ. ನನಗೆ ನಾಲ್ಕೂವರೆವರ್ಷವಾದಾಗ ಅಪ್ಪ ಶಾಲೆಗೆ ಸೇರಿಸಲು ಹೋಗಿದ್ದರಂತೆ. ಆದರೆ, ಐದುವರ್ಷ ಹತ್ತು ತಿಂಗಳಾಗದೇ ಶಾಲೆಗೆ ಸೇರಿಸಿಕೊಳ್ಳುವುದಿಲ್ಲವೆಂದಿದ್ದನಂತೆ ಮೈಸೂರಿನ ಲಲಿತಮಹಲಿನ ಎದುರಿಗಿದ್ದ ಶ್ರೀವಾಣೀ ಪಾಠಶಾಲೆಯ ರಾಮರಾಯ ಎಂಬ ಹೆಡ್ಮಾಸ್ಟರ್. ಅದಕ್ಕೆ ನಮ್ಮಪ್ಪ ಸ್ವಲ್ಪವೂ ನಿಧಾನಿಸದೇ 'ಅದಕ್ಕೇನು ಬರ್ಕಳ್ರೀ' ಅಂದು ಜನವರೀ ೨೨ಅನ್ನು ಸೂಚಿಸಿದರಂತೆ. ಅದ್ಯಾಕೆ ಆ ತೇದಿಯನ್ನು ಸೂಚಿಸಿದರೋ ನಾಕಾಣೆ. ಅಂದರೆ ಆಗಸ್ಟ್ ಇಪ್ಪತ್ತೈದು ಹುಟ್ಟಿದ್ದ ನಾನು ಜನವರಿ ೨೨ರಂದು ಮತ್ತೊಮ್ಮೆ ಲಲಿತಮಹಲಿನ ಎದುರಿರುವ ಶ್ರೀವಾಣೀ ಪಾಠಶಾಲೆಯಲ್ಲಿ ಮತ್ತೆ ಹುಟ್ಟಿದೆ, ಹೆಡ್ ಮಾಸ್ಟರ್ ರಾಮರಾಯನ ಮುಂದೆ.
ರಾಮರಾಯನ ಸ್ಕೂಲಿನ ಬೆಂಚುಗಳ ಮಧ್ಯದಲ್ಲಿ ಒಮ್ಮೊಮ್ಮೆ ಸ್ಕೂಲಿಗೆ ಬೆಳಿಗ್ಗೆ ಹೋದ ತಕ್ಷಣ ಒಂದು ಒದ್ದೆ ಕಾಂಡೋಮು ಸಿಗುತ್ತಿತ್ತು. ಅದೆಲ್ಲಿಂದ ಬರುತ್ತಿತ್ತೋ ಗೊತ್ತಿಲ್ಲ. ಸ್ಕೂಲು ರಾತ್ರಿ ಇನ್ನೇನೋ ಆಗಿರುತ್ತದೆ ಅಂತ ಸ್ಕೂಲಿನ ದೊಡ್ಡ ಹುಡುಗ ಒಬ್ಬ ಹೇಳಿದ್ದ. ಅವನ ಹೆಸರು ಮರೆತುಹೋಗಿದೆ. ಆದರೆ, ಅವನಿಗೆ 'ಮಾಮ' ಎಂದು ಕರೆಯುತ್ತಿದ್ದರು. ಮಾಮ ಪೋಲಿ ಸೂಳೆಮಗ. ಆ ಒದ್ದೆ ಕಾಂಡೋಮನ್ನೇ ಕೈಯಲ್ಲಿ ಹಿಡಕೊಂಡು ಏನೇನೋ ಪೋಲಿಪೋಲಿಯಾಗೆಲ್ಲಾ ಮಾತಾಡುತ್ತಿದ್ದ. ಅವನಿಗೆ ಆಗಲೇ ಮೀಸೆಯಿತ್ತು. ಅಫ಼ಿಶಿಯಲ್ಲಾಗಿ ನನಗಾಗ ಹತ್ತು ವರ್ಷವಿರಬಹುದು. ಮಾಮ ಹೇಳಿದೆಲ್ಲ ಸುಳ್ಳೆಂದು ಹೇಳಿಬಿಡಲು ಅಧಿಕೃತವಾಗಿ ಸಾಧ್ಯವಾಗುತ್ತಿರಲಿಲ್ಲ. ನಿಜವೆಂದೂ ನಂಬದ ನಾನು ಅರ್ಥಮಾಡಿಕೊಳ್ಳಲು ಇನ್ನೂ ಕ್ಲಾಸಿಗೇ ಚಿಕ್ಕ ಹುಡುಗ ಅಂದುಕೊಂಡಿದ್ದೆ.
* * * * *
ನಾನು ಹುಟ್ಟಿದ ಜನವರಿ ೨೨ ನನ್ನ ಅಪ್ಪ, ಅಮ್ಮನ ಮದುವೆಯಾಗಿ ಕೇವಲ ಆರುತಿಂಗಳಿಗೆ ಬಂದಿತ್ತು ಅಂದರೆ ನಮ್ಮಮ್ಮ ಅಪ್ಪನ ಮದುವೆ ಆಗಿದ್ದು ಜೂನ್ ನಲ್ಲಿ. ಆದ್ದರಿಂದ ತಾಂತ್ರಿಕವಾಗಿ ನನ್ನ ಅಧಿಕೃತ ಅಸ್ತಿತ್ವ ಒಂದು ಭ್ರಮೆ. ಅಧಿಕೃತವಾದ ನಾನು ಹುಟ್ಟೇ ಇಲ್ಲ. ಅದೊಂದು ತರಾ 'ವರ್ಚುಯಲ್ ರಿಯಾಲಿಟಿ' ಆದರೂ ನನ್ನ ಈ ಅಸ್ತಿತ್ವ ಈ ವಾಸ್ತವದಲ್ಲೇ ಹುದುಗಿದೆ. ಆಗಸ್ಟ್ ಇಪ್ಪತ್ತೈದು ಈಗ ನನ್ನ ಪೂರ್ವಿ ಕೊಡುವ ಒಂದು ದಪ್ಪರಟ್ಟಿನ ಪುಸ್ತಕದ ಸೆಟ್ಟೋ, ಟೈ ಅತವಾ ಜೀನ್ಸ್ ಇನ್ನಿತರ ನನ್ನ ತೀರ ವೈಯುಕ್ತಿಕ ಅವಶ್ಯಕತೆ ಎಂದುಕೊಳ್ಳುವ ಉಡುಗೊರೆಯ ಆಕರಮಾತ್ರ ಆಗಿದೆ. ಕಾಲೇಜಿನ 'ಇಯರ್ ಬುಕ್ಕಿ'ನಲ್ಲೂ ನಾನು ನಾನಾಗಿಲ್ಲ.
ಆಫ಼ೀಸಿನ ನ್ಯೂಸ್ಲೆಟರ್ ಮಾಡೋಣ ಎಂದಳು, ಕೋಕಿಲ. ಎಲ್ಲರ ಹುಟ್ಟುಹಬ್ಬ ಗುರುತುಹಾಕಿಕೊಂಡು ಬಂದು ನನಗಾಗಿ ನನಗೆ ಗೊತ್ತಿಲ್ಲದಂತೆ ಒಂದು ಕೇಕು ತಂದರು. ಆದರೆ ನನಗೆ ಅದು ಮುಂಚೆಯೇ ಗೊತ್ತಿತ್ತು. ಹೀಗೆ ಈ ಕ್ಲೀಷೆಯ ಕಾರಣಗಳನ್ನು ಕೊಟ್ಟುಕೊಂಡು ಸ್ಟ್ರಾಬೆರಿ ಹಂಚಿಕೊಳ್ಳದೇ ನಾಗರಿಕನಾಗಲು ಸಾಧ್ಯವಿಲ್ಲ ಎಂಬ ಕೋಡ್ ಆಫ಼್ ಕಂಡಕ್ಟ್ ಅನ್ನು ನಾವಾಗೇ ಲಗತ್ತಿಸಿಕೊಂಡಿದ್ದರಿಂದ ನಾನು 'ಬೆಬೆಬೆ' ಎಂದೆ. ಕಾರಣವಿಲ್ಲದೇ ಚಿಕ್ಕವನಾಗಬಾರದು ಎಂದು ಕೇಕು ಕತ್ತರಿಸಿದೆ. ಆದರೆ, 'ಬೆಬೆಬೆ' ಅಂದದ್ದು ನನಗೆ ಇನ್ನೂ ಅಷ್ಟೊಂದು ವಯಸ್ಸಾಗಿಲ್ಲದಿರುವುದರಿಂದ ಎಂದು ಕೋಕಿಲಳಿಗೆ ಗುಟ್ಟಾಗಿ ಹೇಳಿದೆ. ಅವಳಿಗೆ ಅಪ್ಪ ಮಾಡಿದ ಪ್ರಮಾದವನ್ನೂ ಮತ್ತು ಅಪ್ಪ, ಅಮ್ಮನ ಮದುವೆಯಾಗಿ ಆರೇ ತಿಂಗಳಲ್ಲಿ ನಾನು ಹುಟ್ಟಬಹುದಾದ ಸಾಧ್ಯತೆಯ ಅಸಾಧ್ಯತೆಯನ್ನು ಮನನಮಾಡಿಕೊಟ್ಟೆ. ಕೋಕಿಲ ನನ್ನ ನಂಬಿದಳು. ಎಂಟು ತಿಂಗಳ ನಂತರ ಇನ್ನೊಂದು ಕೇಕು ತಂದಳು. ಆಫ಼ೀಸಿನವರೆಲ್ಲಾ 'ಇನ್ನೂ ಮೊನ್ನೆ ತಾನೇ ನಿನ್ನ ಹುಟ್ಟುಹಬ್ಬ ಆಗಿದ್ದಂತಿತ್ತು. ಆಗಲೇ ಇನ್ನೊಂದಾ. ನೀನು ವಯಸ್ಸಾದ ಹಾಗೇ ಕಾಣುವುದಿಲ್ಲ' ಅಂದರು. ಅಂದಿನಿಂದ ಇನ್ನೊಮ್ಮೆ ಜನವರಿಯಲ್ಲಿ 'ಬೆಬೆಬೆ' ಅಂದಿಲ್ಲ.
ನನ್ನ ಕಳೆದ ಹುಟ್ಟುಹಬ್ಬದ ದಿನ ಪೂರ್ವಿ ನನ್ನ ಒಂದು ರ್ರೆಸ್ತುರೆಂಟಿಗೆ ಕರಕೊಂಡು ಹೋಗಿದ್ದಳು. ಒಂದೆರಡು ಒಗರೊಗರಾದ ಬಿಯರುಕುಡಿದ ಮೇಲೆ ಮನೆಗೆ ಬಂದು ಉಸ್ಸೆಂದು ಮಲಗಿದಾಗ, ಕಾರಿನ, ಮನೆಯ ಮಾರ್ಟ್ಗೇಜಿನ ಪೇಪರುಗಳನ್ನು ಹರಡಿಕೊಂಡು ಕೂತಿದ್ದಳು, ಪೂರ್ವಿ. ಎಲ್ಲದರಲ್ಲಿ ನನ್ನ ಹೆಸರು ಬರೀ ಜನ್ಮದಿನಾಂಖವಲ್ಲದೇ ವಯಸ್ಸೂ ನಂಬರದ ಮೂಲಕ ದಾಖಲಾಗಿದ್ದನ್ನು ನೋಡಿ, ಆ ವಯಸ್ಸನ್ನು ಎಂಟು ತಿಂಗಳು ಹಿಂದೆಹಾಕಿದ ಸಂತೋಷದಿಂದ ಬೀಗಿ ಪೂರ್ವಿಯನ್ನು ಹತ್ತಿರ ಎಳೆದೆ. ಪೂರ್ವಿ ಕೊಸರಿಕೊಳ್ಳುವ ಮೂಲಕ ನಾಲ್ಕುತಿಂಗಳ ನಂತರದ ಭವಿಷ್ಯವನ್ನು ನನಗೆ ಈಗೇ ತೋರಿದಳು.
* * * * *
ನನಗೆ ಎಲ್ಲಕ್ಕಿಂತ ಕಸಿವಿಸಿ ಕೊಡುವುದು ಫ಼ೆಬ್ರವರಿ ತಿಂಗಳ ಡಾಕ್ಟರ ಚೆಕಪ್ಪು. ಇನ್ನೂ ಬಿಯರು ಕುಡಿದು ಕೇಕು ತಿಂದು ನಾಲ್ಕು ತಿಂಗಳಾಗಿರೋದಿಲ್ಲ, ಅಷ್ಟರಒಳಗೆ ಮತ್ತೊಮ್ಮೆ ಘಟಿಸಿ ನಾನು ಡಾಕ್ಟರ ಬಳಿ ಹೋಗಿಬರುತ್ತೇನೆ. ಇದು ಪೂರ್ವಿಯ ಉಮೇದು. ಅಧಿಕೃತವಾದ ಪರೀಕ್ಷೆಗಳು ಅಧಿಕೃತವಾಗೇ ಆಗಬೇಕಂತೆ. ಆದ್ದರಿಂದ ಎಂಟುತಿಂಗಳ ನಂತರದ ನನ್ನ ಕೊಲೆಸ್ಟೆರಾಲು ನನಗೆ ಇಂದೇ ಗೊತ್ತಾಗಿರುತ್ತದೆ. ನನ್ನ ಕೊಲೆಸ್ಟೆರಾಲು, ಅಪ್ಪನ ಆಂಜಿಯೋಪ್ಲಾಸ್ಟಿ ಮತ್ತು ನನ್ನ ಗಂಡಸುತನ, ಎಲ್ಲಾ 'ರಿಸ್ಕ್'ಗಳಿಗೆ ಇನ್ನೊಂದು ವರ್ಷ ಹೆಚ್ಚಾದ ನನ್ನ ವಯಸ್ಸು ಸೇರಿ ನನ್ನ ಹೃದಯಾಘಾತದ ಸಾಧ್ಯತೆ ಎಂಟು ತಿಂಗಳ ಹೆಚ್ಚಿನ ಸರಾಸರಿಗೆ ಪ್ರಮಾಣಬದ್ಧವಾಗಿ ಏರಿರುತ್ತದೆ. ಮುಂದಿನ ವರ್ಷ ಟ್ರೆಡ್ ಮಿಲ್ ಹತ್ತಿಸುತ್ತಾನಂತೆ. ಅದರ ಮುಂದಿನ ವರ್ಷ ಜೀವವಿಮೆಯ ಪ್ರಿಮಿಯಮ್ ಹೆಚ್ಚುತ್ತದಂತೆ.
ನನಗೆ ಅತಿ ಖುಷಿ ಕೊಡುವ ಸಮಯವೆಂದರೆ, ಈ ಅಫ಼ಿಷಿಯಲ್ ನಾನು ನಿಜವಾದ ನಾನಾಗುವ ನಡುವಿನ ವೇಳೆ. ಒಂದು ರೀತಿ ಈ ಅಫ಼ಿಷಿಯಲ್ ನಾನು, ನಿಜವಾದ ನನ್ನನ್ನು ಈ ಟೆಸ್ಟುಗಳು, ಪಾಲಿಸಿಗಳು, ಕೆಲಸದ ಭತ್ಯೆಗಳು, ಹೆಚ್ಚಿದ 'ರಿಸ್ಕ್'ಗಳು ಮುಂತಾದುವುದರಿಂದ ಒಂದು ರೀತಿಯ ವಾಸ್ತವಕ್ಕೆ ಮುಂಚೆಯೇ ತಯಾರು ಮಾಡಿಬಿಡುತ್ತೇನೆ. ಹೆಚ್ಚಿದ್ದಕ್ಕೆ ನಾನು ನಾನಲ್ಲವಾಗಿ, ಕಮ್ಮಿಯಾಗಿದ್ದಕ್ಕೆ ನಾನು ನಾನಾಗಿ ಖುಷಿ ಪಡುತ್ತೇನೆ. ಕೊಲೆಸ್ಟೆರಾಲ್ ಟೆಸ್ಟ್ ಮಾಡಿಸಿ ಎಂದು ಯಾವನೋ ಡಾಕ್ಟರೊಬ್ಬ ಹೇಳಿದರೆ, ಇನ್ನೂ ಟೈಮಿದೆ ಅಂದು ನಗುತ್ತೇನೆ. ಇಲ್ಲ ನಿಮಗೆ ಈ ಜನವರಿಗೇ ವಯಸ್ಸಾಗಿದೆ ಅಂದಾಗ, ಪೂರ್ವಿಯ ಮುಖ ನೋಡಿ ನಗುತ್ತೇನೆ. ನಂತರ ಆಗಸ್ಟಿನಲ್ಲಿ ಮಾಡಿಸಿದಾಗ, ಅದರ ನಂಬರುಗಳನ್ನು ನೋಡಿ ಇವು ಎಂಟು ತಿಂಗಳ ಹಿಂದೆ ಗೊತ್ತಿದ್ದರೆ ಏನು ಉಪಯೋಗವಿತ್ತು ಅಂದು ಸಮಾಧಾನಪಟ್ಟುಕೊಳ್ಳುತ್ತೇನೆ. ಆದರೆ, ನನಗೆ ಹೆದರಿಕೆಯಾಗುವುದೇ ಇಲ್ಲ. ಎಲ್ಲ ಅಧಿಕೃತವಾದವೂ ಎಂಟು ತಿಂಗಳು ಮುಂಚೆಯೇ ಘಟಿಸಿ, ಪ್ರತಿವರ್ಷ ಜನವರಿಯಿಂದ ಆಗಸ್ಟ್ನವರೆಗಿನ ವೇಳೆ ಒಂದು ಬೋನಸ್ ಎಂದುಕೊಂಡು ಬೀಗುತ್ತೇನೆ. ಬೇಕಾದ್ದು ತಿನ್ನಲು, ಸಿಕ್ಕಿದ್ದು ಕುಡಿಯಲು ನನಗೆ ಇವೆಲ್ಲ ಕಾರಣಗಳು ಅಂದುಕೊಂಡರೂ ಮನೆಯ ಟ್ರೆಡ್ಮಿಲ್ ಕೂಡ ಈ ಎಂಟು ತಿಂಗಳೇ ಜಾಸ್ತಿ ಓಡುತ್ತದೆ ಅನ್ನುವುದೂ ಸತ್ಯವೆಂದು ಪೂರ್ವಿ ಹೇಳುತ್ತಾಳೆ. ಆದರೆ, ಅದು ಸುಳ್ಳೋ ನಿಜವೋ ಆ ನಾನೇ ಈ ನಾನು ಎಂದು ಗೊತ್ತಾಗಲು ಎಂಟು ತಿಂಗಳು ತೆಗೆದುಕೊಂಡಿರುತ್ತೇನೆ. ಅಕಸ್ಮಾತ್ ಪ್ರೊಮೋಶನ್ ಆದರೆ, ಅಷ್ಟೇ ಬೇಗ ರಿಟೈರಾಗಬೇಕಲ್ಲ ಅಂತಲೂ ಅನ್ನಿಸುತ್ತದೆ. ಆದರೆ, ರಿಟೈರಾಗುವುದಕ್ಕೆ ಸಂತೋಷಪಡಬೇಕೋ, ದುಃಖಪಡಬೇಕೋ ಗೊತ್ತಾಗುವುದಿಲ್ಲ.
* * * * *
ಕಾಲೇಜಿನಲ್ಲಿ ನನಗೆ ಪೂರ್ವಿ ಸಿಕ್ಕಿದ್ದು. ನಾನು ಯಾವುದೋ ಮರದ ಬೆಂಚಿನ ಕೆಳಗೆ ಕೂತಾಗ ಪೂರ್ವಿ ಹುಲ್ಲು ಕಚ್ಚುತ್ತಾ ಕೇಳಿದ್ದಳು. ಇಷ್ಟು ಬೇಗ ನಿನಗೆ ಕೂದಲು ಉದುರುತ್ತಾ ಇದೆಯಲ್ಲ ಅಂತ. ಹಾಗೆಂದ ಮೇಲೆ, ಬೇಜಾರಾಗುತ್ತದೆಂದು ನನ್ನ ಮುದ್ದು ಮಾಡಲು ಬಂದಿದ್ದಳು. ಪೂರ್ವಿಗೆ ನಾನು ನಾನೆಂದು ಇನ್ನೂ ಗೊತ್ತಿರಲಿಲ್ಲ. ನನ್ನ ಡ್ರೈವಿಂಗ್ ಲೈಸೆನ್ಸನ್ನು ತೋರಿಸಿ ದೊಡ್ಡವನಾಗಿದ್ದೆ. ಪೂರ್ವಿ, ನೀನು ಅಷ್ಟು ದೊಡ್ಡವನಾ ಎಂದು ಮೂಗಿನ ಮೇಲೆ ಬೆರಳಿಟ್ಟಾಗಲೂ. ಈ ಹುಡುಗಿಯರಿಗೆ ಉದುರಿದ ಕೂದಲು ನನ್ನಂತವನನ್ನು ಎಂಟು ತಿಂಗಳು ದೊಡ್ಡವನಾಗಿ ಮಾಡಿಬಿಡುತ್ತದೆಯಾ ಅಥವಾ ನಾನು ಎಂಟು ತಿಂಗಳು ದೊಡ್ಡವನೆಂದು ಹೇಳಿದ ಮೇಲೆ ಈ ಉದುರಿದ ಕೂದಲು ಈ ತಲೆಗೆ ಚಂದ ಕಾಣುತ್ತದೆಯಾ. ಒಟ್ಟು, ಈ ಎಂಟು ತಿಂಗಳ ಮುಖವಾಡ ನಮ್ಮ ನಿಶ್ಚಿತಾರ್ಥದವರೆಗೂ ನಡೆಯಿತು. ಆಮೇಲೆ, ಹುಬ್ಬುಗಂಟಿಕ್ಕಿ ನನ್ನ ಮೈಕೈಮೇಲೆ ಕೈಯಾಡಿಸಿ ಎಲ್ಲ ಎಂಟು ತಿಂಗಳು ಚಿಕ್ಕವು ಅಂತ ಪೂರ್ವಿ ಹೇಳಿದಾಗ, ಈ ಚಿಕ್ಕವು ದೊಡ್ಡವನ್ನು ತಿಂಗಳುಗಳಲ್ಲಿ ಹೇಗೆ ಹೇಳುತ್ತಾರೆ ಹುಡುಗಿಯರು ಎಂದು ಆಶ್ಚರ್ಯಗೊಂಡಿದ್ದೆ.
* * * * *
ಒಮ್ಮೆ ಬೇಸರಗೊಂಡು ಅಧಿಕೃತವಾಗಿ ನಾನು ನಾಶವಾಗಿ, ಒಂದೇ ಆಶಯದ ಒಂದೇ ಅಸ್ತಿತ್ವಕ್ಕೆ ಪ್ರಯತ್ನಿಸೋಣ ಎಂದುಕೊಂಡೆ. ಅಮ್ಮ ಅಪ್ಪನಿಗೆ ನಮಸ್ಕಾರ ಮಾಡೋದಿನವೇ ಮುಂದಿನ ವರ್ಷದ ಬೋನಸ್ಸನ್ನು ಸಹಿ ಮಾಡುವ ಅಸ್ತಿತ್ವ, ಪೂರ್ವಿಯ ಹಾರ್ಡ್ ಕವರ್ ಅಥವಾ ಪೇಪರ್ಬ್ಯಾಕುಗಳನ್ನು ಬಣ್ಣದ ಕಾಗದಗಳಿಂದ ತೆಗೆಯುತ್ತಲೇ ಆಫ಼ೀಸಿನಲ್ಲಿ ಕೋಕಿಲಳ ಜತೆಗೂ ಕೇಕು ಕತ್ತರಿಸುವ ಅಸ್ತಿತ್ವ, ಕೋಕಿಲಳ ಕೇಕನ್ನೂ ಪೂರ್ವಿಯ 'ಲೈಫ಼್ ಆಫ಼್ ಪೈ' ಜತೆಗೆ ತೂಗಿ ನೋಡುವ ಅಸ್ತಿತ್ವ. ಕೋರ್ಟಲ್ಲಿ ಅಫ಼ೆಡವಿಟ್ ಮಾಡಿ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡು, ಕಾಲೇಜಿನ ಡಿಗ್ರಿ ಸರ್ಟಿಫ಼ಿಕೇಟು, ಪಾಸ್ಪೋರ್ಟು, ವೀಸಾ, ಕೆಲಸದ ಕಾಂಟ್ರಾಕ್ಟು, ಮನೆಯ ಕಾರಿನ ಸಾಲದ ಪತ್ರಗಳು, ಜೀವವಿಮೆ, ಹೆಲ್ತ್ ಕೇರ್ ಪಾಲಿಸಿಗಳು ಎಲ್ಲದರಲ್ಲೂ ನಾನು ನಾನಾಗಬೇಕೆಂದುಕೊಂಡೆ. ಆದರೆ ಈ ಎರಡೆರಡರ ಅರಿವು, ಯಾವುದಾದರೂ ಒಂದನ್ನುಖಾಸಗೀ ಅನುಕೂಲಕ್ಕಾಗಿ ಮರೆಯುವಂತೆ ಮಾಡುವುದು ಬಹು ಖುಷಿಯ ವಿಷಯ. ನಾನು ಕಂಡುಕೊಂಡ ಪರಿಹಾರ-ರ್ಯಾಷನಲೈಸ್ ಮಾಡಿಬಿಡುವುದು 'ನನ್ನ ವರ್ಚುಯಲ್ ಅಸ್ತಿತ್ವ ಕದಲಿಸಲು ಹಲವಾರು ಸರ್ಕಸ್ ಮಾಡಬೇಕು. ಆದರೆ, ಅದನ್ನು ಉಳಿಸಲು ಮಾಡಬೇಕಾದ್ದು ಒಂದೇ. ಪೂರ್ವೀಗೆ 'ಲೈಫ಼್ ಆಫ಼್ ಪೈ' ಅನ್ನ್ನು ಜನವರಿ ಇಪ್ಪತ್ತೆರಡಕ್ಕೇ ಕೊಡು ಅಂತ ಹೇಳೋದು. ಅವಳಿಗಿಂತ ಇನ್ನೊಂದು ಎಂಟು ತಿಂಗಳು ಜಾಸ್ತಿ ದೊಡ್ಡೋನಾಗ್ತೇನೆ ಅಷ್ಟೇ ಅಲ್ಲವಾ?
ಅಥವಾ 'ಲೈಫ಼್ ಆಫ಼್ ಪೈ' ತನ್ನ ಪ್ಯಾರಲಲ್ ನೆರೇಟಿವ್ ನಿಂದ ಓದಿಸಿಕೊಂಡು ಹೋಗುತ್ತಿಲ್ಲವೋ? ಕೋಕಿಲ ಕೇಕಿಗೆ ಐಸಿಂಗ್ ಚೆನ್ನಾಗಿ ಹಾಕುತ್ತಾಳೋ?
'ನಾನು ಹೋದರೆ ಹೋದೇನು' ಅನ್ನುವ ದಾಸವಾಣಿ ಯಾವ ನನಗೆ ಅನ್ವಯವಾಗುತ್ತಿದೆ? ಪರಾಂಜಪೆ ನೋಡುವ ಪೂರ್ವಿಯ ನಾನೋ, ಟೆರಾಂಟಿನೋ ನೋಡುವ ಕೋಕಿಲಳ ನಾನೋ. ಕೋಕಿಲಳ ನಾನು ಹೋದರೆ ಪೂರ್ವಿಯ ನಾನೂ ಹೋಗಿರುತ್ತೇನೆ ಆದರೆ, ದಾಖಲೆಗಳಲ್ಲಿ ನಾನು ಎಂಟು ತಿಂಗಳು ಮುಂಚೆಯೇ ಹೋದೆ ಎಂದು ಬರೆಯಲಾಗಿರುತ್ತದೆ. ಪೂರ್ವಿಯ ನಾನು ಹೋದರೆ, 'ಲೈಫ಼್ ಆಫ಼್ ಪೈ'ಮತ್ತಿತ್ಯಾದಿಗಳು ಮಾತ್ರ ನನ್ನ ಲೆಗಸಿಯಾಗಿ ಕಪಾಟಿನಲ್ಲಿ ಉಳಿದಿರುತ್ತೆ. ಪೂರ್ವಿ ಅಳುತ್ತಾಳೆ. ಕೋಕಿಲಾ ಇನ್ನೊಂದು ಕೇಕು ಹಂಚುತ್ತಾಳೆ, ನಾನು ಸತ್ತಾಗಲೂ.
ಈ ಇಬ್ಬರೂ 'ನಾನು' ಗಳ ಒಂದು ಸಾಮಾನ್ಯ ಗುಣ ಏನೆಂದರೆ ಯಾರೂ ಹುಟ್ಟಿದ್ದ ವರ್ಷ ಕೇಳೋದಿಲ್ಲ. ಕೋಕಿಲಳೂ ಅಷ್ಟೇ, ಪೂರ್ವಿಯೂ ಅಷ್ಟೇ. ಬರೀ ಎಂಟು ತಿಂಗಳ ನಾನು ನಾನುಗಳ ವ್ಯತ್ಯಾಸದಲ್ಲೇ ನಾನು ಏನು, ಯಾರು ಎಂದು ಅವರು ಕಂಡುಕೊಂಡುಬಿಡುತ್ತಾರೆ. ನನಗೆ ಇಷ್ಟ ಈ ದೊಡ್ಡ ದೊಡ್ಡ ದಶಮಾನಗಳನ್ನು ಆಚರಿಸಿಕೊಳ್ಳೋದು, ಉದಾಹರಣೆಗೆ, 'ದಿ ಬಿಗ್ ಫ಼ೋರ್ ಓ' 'ಫ಼ೈವ್ ಓ' ಆಮೇಲೆ ಷಷ್ಟ್ಯಬ್ದಿ. ಅಮಿತಾಬ್ ಬಚನ್ ಆಚರಿಸಿಕೊಂಡನಲ್ಲ ಹಾಗೇ. ಆದರೆ, ಪೂರ್ವಿಗೆ ಈ ಬಹಿರಂಗ ಅಂತರಂಗದ ಕಣ್ಣುಮುಚ್ಚಾಲೆ ಇಷ್ಟ. ಅಥವಾ ಈ ಎಂಟು ತಿಂಗಳ ನನ್ನ ಹಿರಿತನ ಅವಳನ್ನು ನನಗಿಂತ ತೀರ ಚಿಕ್ಕವಳನ್ನಾಗಿ ಮಾಡಿಬಿಡುತ್ತದೆಯೆಂಬ ಅಳುಕೋ, ಅಥವಾ ಅದಕ್ಕೆ ತಕ್ಕಂತೆ ಅವಳ ವಯಸ್ಸೂ ಮೇಕಪ್ಪೂ ಬದಲಾಗಬೇಕೆಂಬ ಬಳುಕೋ? ಕೋಕಿಲಾಳಿಗೆ ಬರೀ ಸ್ಟ್ರಾಬೆರಿ, ವೆನಿಲ, ಚಾಕೊಲೇಟ್ಗಳಲ್ಲೇ ಆಸಕ್ತಿ. ಭ್ರಮೆಯ ವಾಸ್ತವ, ಆದರೆ ಈನಡುವೆ 'ಆರ್ಗಾನಿಕ್ ಕೇಕ್' ತರುತ್ತಾಳೆ.ಬಕ್ಕ ತಲೆ, ಬಿಳಿಯ ಉಳಿದಿರುವ ಕೂದಲು ಸತ್ಯವನ್ನು ಹೇಳಲು ತಯಾರಿದೆ. ಆದರೆ, ಐಲೈನರುಗಳು ಮತ್ತು ಮಸ್ಕಾರಾಗಳ ನಡುವಿನ ಕೊಳಗಳು ಫಳಫಳ ಹೊಳೆಯುತ್ತಾ ಬಕ್ಕತಲೆಯ ಮಿಂಚನ್ನೂ ಹೊಳಪೆಂದುಕೊಳ್ಳುತ್ತವೆ..
ಕೇಕಿನ ಮೇಲೆ ಮಾತ್ರ ಒಂದೇ ಬತ್ತಿಯಿರತ್ತೆ ಯಾವಾಗಲೂ.
ನನ್ನ ಕಪಾಟಿಗೆ 'ಆರ್ಟ್ ಆಫ಼್ ಲಿವಿಂಗ್'ನ ಒಂದು ಹೊಸಾ ಪುಸ್ತಕ ಬಂದಿದೆ. ಬಿಯರಿನ ಬದಲು ಕೆಂಪು ವೈನು ಕುಡಿ ಎಂದು ಹೇಳುತ್ತಾಳೆ, ಪೂರ್ವಿ.
ಡಾ. ಗುರುಪ್ರಸಾದ್ ಕಾಗಿನೆಲೆ
ಜನವರಿ ೨೪, ೨೦೦೬
Comments
ನಾನು