ನಾನು ಸಣ್ಣಗಾಗಲು ಹೊರಟಿದ್ದು

ನಾನು ಸಣ್ಣಗಾಗಲು ಹೊರಟಿದ್ದು

ಈಗಂತೂ ಎಲ್ಲರೂ ಸಣ್ಣಗಾಗುತ್ತಿದ್ದಾರೆ. ನಾನೂ ಯಾಕೆ ಇದರ ಉಪಯೋಗ ಪಡ್ಕೋಬಾರದು? ಅಂತ ಯೋಚಿಸಿದ್ದೇ ತಡ ಸಣ್ಣ ಗಾಗಲು ನೂರಾರು ಯೋಚನೆಗಳು ಹೊಳೆದವು. ಅದನ್ನೇಲ್ಲಾ ಕಾರ್ಯರೂಪಕ್ಕೆ ತರಲು ಸಿದ್ಧಳಾದೆ.
ಸರಿ ಯೋಗ ಅತ್ಯುತ್ತಮ ದಿವ್ಯೌಷಧ. ಯೋಗ ಕ್ಲಾಸ್ಗೆ ಸೇರ್ಕೊಂಡೆ. ಆಸನಗಳನ್ನು ಹಾಕಿಸಕ್ಕೆ ಶುರುಮಾಡಿದ್ರು. ನನಗ್ಯಾವುದೂ ಕಿವಿಗೆ ಬೀಳಲಿಲ್ಲ. ಶವಾಸನ ಹಾಕಿದ್ದೇ ನೆನಪು. ಕೊನೆಯಲ್ಲಿ ಯೋಗ ಟೀಚರ್ ಬಿರುದು ಕೊಟ್ರು ಶವಾಸನ ಚೆನ್ನಾಗಿ ಹಾಕ್ತೀಯಮ್ಮ.
ಮುಂದೇನು ಮಾಡಲಿ ಉಪಾಯ ಹೊಳೆದದ್ದು, ಕಣ್ಣು ಬಿದ್ದದ್ದು ನಮ್ಮೆಜಮಾನರಮೇಲೆ. ಸರಿ ಮಾರನೇ ದಿನದಿಂದ ನೀವೂ ನನ್ನೊಡನೆ ಯೋಗ ಕ್ಲಾಸ್ಗೆ ಬನ್ನಿ ಎಂದು ಕರ್ಕೊಂಡು ಹೋದೆ. ಯೋಗ ಕ್ಲಾಸಿರುವುದು ನಮ್ಮನೆಯಿಂದ ಎರಡು ಕಿ.ಮೀ, ದೂರದಲ್ಲಿ. ಸರಿ ನಡ್ಕೊಂಡು ಹೋಗಕ್ಕೆ ಆಗತ್ತಾ? ಯಜಮಾನರು ಕಾರ್ ತೆಗೆದರು ಗೊಣಗುತ್ತಲೇ. ಒಳ್ಳೆ ಸಕ್ಕರೆ ನಿದ್ದೆ ಹಾಳು ಮಾಡಿದ್ಯಲ್ಲೇ ಅಂತ. ನಾನೇನು ಕಿವಿಗೆ ಹಾಕ್ಕೊಳ್ಲಿಲ್ಲ
ಯೋಗ ಮುಗಿದಮೇಲೆ ಜ್ಯೂಸ್ ಕುಡೀಬೇಕಲ್ಲಾ, ಮನೆಗೆ ಬಂದು ಲೌಕಿ (ಸೋರೆಕಾಯಿ) ಜ್ಯೂಸ್
ಮಾಡಿದೆ.ಕುಡಿಯಲು ಬಾಯಿಗೆ ರುಚಿಸಲಿಲ್ಲ. ಎರಡು ಚಮಚ ಕುಡಿದು ಮಿಕ್ಕಿದ್ದು, ನನ್ನನ್ನೇ ನೋಡುತ್ತಿದ್ದ ಪತಿರಾಯರ ಪಾಲಾಯಿತು. ಗೊಣಗುತ್ತಲೇ ಕುಡಿದು ಮುಗಿಸಿದರು. ದಿನಚರಿ ಹೀಗೆಯೇ ಮುಂದುವರಿಯಿತು. ನಮ್ಮನೆಯವರು ಪೂರ್ಣ ಯೋಗಾಸನದ ಪಟುವಾದರು, ನಾನು ಒಂದೇ ಆಸನದಿಂದ ಮುಂದೆ ಹೋಗಲಿಲ್ಲ.
ಸರಿ ಸಣ್ಣಗಾಗಲು ಹೊರಟಾಗ ಹಣ್ಣುಗಳಿಲ್ಲದೆ ನಡೆಯತ್ಯೇ? ಈಗ ಎಲ್ಲಾ ಹೇಳ್ತಾರಲ್ಲ ಹಣ್ಣು ತಕಾರಿ ತಿನ್ನಿ ಸಣ್ಣಗಾಗಿ ಅಂತ. ಕೇಳಬೇಕೇ? ಫ್ರಿಜ್ ತುಂಬ ಹಣ್ಣುಗಳೇ.... ತುಂಬಿದವು. ಊಟವಾದಮೇಲೆ ಯಥೇಚ್ಚವಾಗಿ ಹಣ್ಣುಗಳನ್ನು ತಿಂದೆ. ಮಕ್ಕಳ ಹತ್ತಿರ ಮೊದಲೇ ಮಾತು ತೊಗೊಂಡಿದ್ದೆ ಯಾರೂ ಮುಟ್ಟಬಾರದು, ಇವೆಲ್ಲಾ ನನಗೋಸ್ಕರ ನಾನು "ಸ್ಲಿಂ ಅಂಡ್ ಟ್ರಿಂ" ಆಗಕ್ಕೆ. ಮಕ್ಕಳು ಮರು ಮಾತಾಡದೆ ತಲೆಯಲ್ಲಾಡಿಸಿದವು.
ಸಣ್ಣಗಾದೆ ಅಂತ ತಿಳ್ಕೊಳ್ಳೋದು ಹೇಗೇ? ಉಪಾಯ ಹೊಳೆದೇ ಬಿಟ್ಟಿತು. ಮಾರನೇದಿನ ಮನೆಗೊಂದು 'weighing machine' ಬಂದೇ ಬಿಟ್ಟಿತು. ನನಗೆಷ್ಟು ಖುಷಿಯಾಯಿತೆಂದರೆ ಅದನ್ನು ನೋಡಿದೇಟಿಗೆ ಹತ್ತುಕಿಲೊ ಸಣ್ಣಗಾಗಿ ಹೋದೆ. ತಕ್ಷಣವೇ ತೂಕ ನೋಡಿಕೊಂಡೆ. 75 ಆಸು ಪಾಸಿನಲ್ಲಿತ್ತು. ಡೌಟ್ ಬಂತು. ನಮ್ಮನೆಯವರನ್ನು ಕೇಳಿದೆ, ಮಿಷಿನ್ ಚನ್ನಾಗಿದ್ಯೇನ್ರೀ, ಸರ್ಯಾಗಿ ತೂಕ ತೋರುಸ್ತಿಲ್ಲ ಏನಾದ್ರೂ ಟೋಪಿ ಹಾಕಿಸ್ಕೋಡ್ರಾ? ಅಂದೆ. ಇಲ್ಲಕಣೆ ಪೂರ್ತಿ ಚಕ್ ಮಾಡಿಕೊಂಡೇ ಬಂದಿರೋದು ಸರಿಯಾಗಿದೆ. ಹೌದಾ? ನಾಳೆಗೆ ಸರಿಹೋಗತ್ತೆ ಬಿಡಿ.
ರಾತ್ರಿಯೆಲ್ಲಾ ಸರ್ಯಾಗಿ ನಿದ್ದೆ ಬರಲಿಲ್ಲ. 10-20 ಕೆ.ಜಿ, ಸಣ್ಣ ಆದ್ ಹಾಗೆ ಕನಸುಬಿತ್ತು. ಸರಿ ಬೆಳಗಾದ ತಕ್ಷಣ ಯೋಗ ಕ್ಲಾಸ್ಗೆ ಹೋಗಿ ಬಂದೆವು. ತೂಕ ನೋಡ್ಕೊಂಡೇ. ಮತ್ತದೇ ತೋರಿಸಿತು 75 ಆಸು ಪಾಸಿನಲ್ಲಿತ್ತು. ಪತಿರಾಯರು ನಾನೂ ನೋಡಲಾ? ಪರ್ಮೀಷನ್ ಕೇಳಿದರು ಹುಂ ಅಂದೆ ಒಲ್ಲದ ಮನಸ್ಸಿನಿಂದ. ನೋಡಿಕೊಂಡರು ನನ್ನಕಣ್ಣನ್ನು ನಾನೇ ನಂಬಲಿಲ್ಲ 60 ಆಸು ಪಾಸಿನಲ್ಲಿತ್ತು. ಅದೇ ಕಣ್ಣುಗಳನ್ನು ಕೆಂಗಣ್ಣು ಮಾಡಿಕೊಂಡು ಅವರತ್ತ ತಿರುಗಿಸಿದೆ. ನನ್ನದೇನೂ ತಪ್ಪಿಲ್ಲಕಣೆ ಅಂದರು.
ಹೀಗೇ ಒಮ್ಮೆ ನಮ್ಮವರೊಡನೆ ವಾಕಿಂಗ್ ಹೋಗುತ್ತಿದ್ದಾಗ ಒಬ್ಬರು ಕೇಳಿದರು ನೀ ಕೊಡಕಾ? (ನಿನ್ನ ಮಗನಾ) ಅಂತ (ನಾವಿರುವುದು ಹೈದ್ರಾಬಾದ್ನಲ್ಲಿ). ನನ್ನ ಮೈಯೆಲ್ಲಾ ಉರಿದುಹೋಯಿತು. ಬೀದೀಲೇನು ಜಗಳ ಸುಮ್ಮನಾದೆ. ಮಾರನೇ ದಿನವೇ ಯೋಗ ಟೀಚರ್ ಕೂಡ ಹೇಳ್ಬಿಟ್ರು. ಅಮ್ಮ ನಿಮಗಿಂತ ನಿಮ್ಮ ಮಗನೇ ಆಸನಗಳನ್ನು ಚೆನ್ನಾಗಿ ಹಾಕ್ತಾರೆ. ಅಲ್ಲೇ ಅವರನ್ನು(ಯಜಮಾನರನ್ನು) ತಿಂದು ಬಿಡುವಂತೆ ದುರುಗುಟ್ಟಿಕೊಂಡು ನೋಡಿದೆ.
ಏನ್ರೀ ಯೋಗ ಟೀಚರ್ ಹಾಗಂತಿದ್ರೆ ಇವಳು ನನ್ನ ಹೆಂಡತಿ ಅನ್ನೋಕ್ಕೆ ಬಾಯಿರಲಿಲ್ಲವೇನ್ರೀ? ತಮಾಷೆ ನೋಡ್ತಾ ನಿಂತಿದ್ರಿ. ಹಾಗೆ ಹೇಳುವ ಹೊತ್ತಿಗೇ ಕಣ್ಣೂ ಮೂಗಿನಿಂದ ಗಂಗಾ ಭವಾನಿ ಧಾರಾ ಕಾರವಾಗಿ ಬಂದವು ಅಷ್ಟೊತ್ತಿಗಾಗಲೇ ನಾನು 80 ಕಿ.ಲೊ, ಆಸುಪಾಸಿನಲ್ಲಿದ್ದೆ. ನಮ್ಮನೆಯವರು 55ಕಿ.ಲೊ, ಆಸು ಪಾಸಿನಲ್ಲಿದ್ದರು. ಇದೆಲ್ಲಾಹೇಗಾಯಿತು?...
ಅಷ್ಟೂ ಹೊತ್ತೂ ಸುಮ್ಮನಿದ್ದ ನಮ್ಮನೆಯವರು ಬಾಯಿ ಬಿಟ್ಟರು ಇನ್ನೇನಾಗತ್ತೆ ಯೋಗದಲ್ಲಿ ಎಲ್ಲಾ ಆಸನಗಳನ್ನು ನಾನೇ ಹಾಕಿದೆ. ನೀನು ಒಂದೆ ಆಸನಹಾಕಿದೆ (ಶವಾಸನ) ಜ್ಯೂಸ್ ಎರಡು ಚಮಚದಮೇಲೆ ನೀನು ಕುಡೀಲಿಲ್ಲ, ದೊಡ್ಡ ಲೋಟದಲ್ಲಿ ನಾನೇ ಕುಡಿದೆ ಊಟವಾದ ಮೇಲೇ ಧಾರಾಳವಾಗಿ ಹಣ್ಣುಗಳನ್ನು ತಿಂದೆ. ಮಕ್ಕಳಿಗೂ ಕೊಡದೆ. ಅದರ ಫಲಿತಾಂಶ ಇವೆಲ್ಲ. ಮಕ್ಕಳನ್ನು ನೋಡು ಹೇಗೆ ಸಣ್ಣಗಾಗಿದ್ದಾರೆ ಪಾಪ. ಅಳಬೇಡಾ ಸ್ಲಿಂ ಅಂಡ್ ಟ್ರಿಂ ಆಗೋ ಯೋಚನೆ ಬಿಟ್ಟು ಮೋದಲಿನಂತಿರು. ಹೀಗೆ ಬುದ್ದಿವಾದ ಹೇಳಿದರು.
ಸೀತಾ ಇದೆಲ್ಲಾ ಬೇಕಿತ್ತಾ? ಮುಂದೆ ಇನ್ನೇನು ವ್ಯಂಗ ಅಪಮಾನ ಕಾದಿದೆಯೋ. ಯಾರೋ ಕಿವಿಯಲ್ಲಿ ಗುಯ್ ಗುಟ್ಟಿದ ಹಾಗಿತ್ತು
ಈಗಂತೂ ನಮ್ಮೆಜಮಾನರ ಜೊತೆ ಯೋಗ, ವಾಕಿಂಗ್ ಎಲ್ಲೂ ಹೋಗ್ತಿಲ್ಲ. ಹೋದ್ರೆ ಎಲ್ಲರ ಕೆಟ್ಟ ದೃಷ್ಟಿ ನಮ್ಮ ಮೇಲೇ ಬೀಳತ್ತೆ.
ಪ್ರಸ್ಥುತ:- ಸಕ್ಕರೆ ನಿದ್ದೆ ಮಾಡಲು ನಮ್ಮೆಜಮಾನರನ್ನು ಬಿಟ್ಟು ನಾನೂ ನಿದ್ದೆಗೆ ಜಾರಿದ್ದೀನಿ.

ಹಾಸ್ಯ.
ಸೀತ ಆರ್. ಮೊರಬ್

Rating
No votes yet

Comments