ನಾನು ಹಾಗು ಬೀದಿನಾಯಿಗಳು

ನಾನು ಹಾಗು ಬೀದಿನಾಯಿಗಳು

ಚಿತ್ರ

ನಾನು ಹಾಗು ಬೀದಿನಾಯಿಗಳು 
(ಲಘು ಹಾಸ್ಯ ಬರಹ ) 

ಅದೇನೊ ನನಗೂ ಬೀದಿ ನಾಯಿಗಳಿಗೂ ಮೊದಲಿನಿಂದಲೂ ಆಗಿ ಬಂದಿಲ್ಲ ಬಿಡಿ !

ಇದೇನು ಇವೆನೆಂತಹವನು ತನ್ನನ್ನು ಬೀದಿ ನಾಯಿಯ ಜೊತೆ ಹೋಲಿಸಿಕೊಳ್ಳುತ್ತಿದ್ದಾನಲ್ಲ ಮತ್ತೇನು ಸಿಗಲಿಲ್ಲವೇ ಎಂದು ಯೋಚಿಸಬೇಡಿ. ಕೆಲವು ಸಣ್ಣ ವಿಷಯ ಎಂದು ಭಾವಿಸುವುದು ಜೀವನ ಪೂರ್ತಿ ನಿಮ್ಮನ್ನು ಕಾಡುತ್ತಲೇ ಇರುತ್ತದೆ. ಹಾಗೆ ಈ ಬೀದಿ ನಾಯಿಗಳು ಸಹ. 

ಸಣ್ಣ ವಯಸಿನಿಂದಲೂ ಅಷ್ಟೆ ಅದೇನೊ ಬೀದಿನಾಯಿಗಳು ಸದಾ ನನ್ನನ್ನು ಕಾಡುತ್ತಿದ್ದವು. ಹಾಗೆಂದು ಹೇಳಿದರೆ ಅದು ಪೂರ್ತಿ ಹೇಳಿದ ಹಾಗೆ ಆಗಲಿಲ್ಲ ನಾನು ಅವನ್ನು ಸಾಕಷ್ಟು ಕಾಡಿದ್ದೆ ಅನ್ನುವ ನಿಜ ಹೇಳಲೇ ಬೇಕು. ನನ್ನ ತೀರ ಚಿಕ್ಕ ವಯಸಿನಲ್ಲಿ  ಮನೆಯ ಬಾಗಿಲಲ್ಲಿ ಬಂದು ಮಲಗುತ್ತಿದ್ದ ನಾಯಿಗಳನ್ನು ಕಾಡುವುದು ಎಂದರೆ ನನಗೇನೊ ಖುಷಿ. ಮೂರು ಮನೆಗಳಲ್ಲಿ ಮದ್ಯಾನ್ಹದ ಊಟ ಮುಗಿಸಿ, ನಮ್ಮ ಮನೆಯ ಜಗಲಿಯಲ್ಲಿ ನೆಮ್ಮದಿಯಾಗಿ ಬಂದು ಮಲಗುತ್ತಿದ್ದ  ಆ ನಾಯಿಗೆ ಪ್ರಥಮ ಶತ್ರು ನಾನೆ ಆಗಿದ್ದೆ. 

ನಾಯಿಯ ಹಾಗೆ,  ಕ್ಷಮಿಸಿ , ನಾಯಿ ಮಲಗಿದ ಹಾಗೆ ನೆಮ್ಮದಿಯಿಂದ ಮನೆಯಲ್ಲಿ ಇರುವರೆಲ್ಲ ಮಲಗಿರುವಾಗ ನನಗೆ ಅದೇನೊ ನೆಮ್ಮದಿಯೆ ದೊರೆಯುತ್ತಿರಲಿಲ್ಲ ಹಾಗಾಗಿ ಈಚೆ ಬಂದರೆ ಮೊದಲು ಕಾಣಿಸುತ್ತ ಇದ್ದದ್ದು ಜಗಲಿಯಲ್ಲಿ ಮಲಗಿದ ನಾಯಿ. ನಾಯಿಗಿಂತ ನನ್ನ ಗಮನ ಸೆಳೆಯುತ್ತ ಇದ್ದದ್ದು ಅದರ ಬಾಲ. ಹಾಗಾಗಿ ಕುತೂಹಲಕ್ಕೆ ಅದನ್ನು ಎಳೆಯುತ್ತಿದ್ದೆ, ಅದನ್ನು ನೇರ ಮಾಡುವ ಉದ್ದೇಶ ನನಗೆ ಇಲ್ಲದಿದ್ದರೂ ಸಹ ನಾಯಿಗೆ ಅದೇನೊ ರೇಗುತ್ತಿತ್ತು. 

ನಾಯಿಗಳೆ ಹಾಗೆ ಬಿಡಿ ,  ಕೋಪದಿಂದ ಅದರ ತಲೆಯು ಮೇಲೆ ಒಂದು ಮೊಟಕಿಬಿಡಿ ಅವೇನು ಕೋಪ ಮಾಡಿಕೊಳ್ಳುವದಿಲ್ಲ ಆದರೆ ಅದರ ಬಾಲ ಮುಟ್ಟಿದರೆ ಮಾತ್ರ ಅಭಿಮಾನ ಭಂಗವಾಗಿ ಅದನ್ನು ಬೊಗಳುವಿಕೆಯ ರೂಪದಲ್ಲಿ ನಿಮ್ಮತ್ತ ತೋರಿಸುತ್ತದೆ. 

ಆದರೆ ನಾನೇನು ಬೊಗಳುವಿಕೆಗೆ ಹೆದರಿದವನಲ್ಲ. ಒಮ್ಮೆ ಬೊಗಳಿ ಮತ್ತೆ ನಿದ್ದೆಯ ಮಂಪರಿಗೆ ಜಾರುತ್ತಿದ್ದ ಆ ನಾಯಿಯನ್ನು ಮತ್ತೆ ಮತ್ತೆ ಕೆಣಕಿ ಅದರ ನೆಮ್ಮದಿ ಹಾಗು ಸಹನೆ ಹಾಳಾಗುವಂತೆ ಮಾಡುತ್ತಿದ್ದೆ. ಹಾಗಾಗಿ ಆ ನಾಯಿಗೆ ನನ್ನ ಬಗ್ಗೆ ಮಡುವು ಗಟ್ಟಿದ ಅಸಹನೆ ಹಾಗು ಕೋಪಗಳಿದ್ದು ನನ್ನ ಮುಖ ನೋಡುವಾಗಲೆ ಅದರ ಹಲ್ಲುಗಳೆಲ್ಲ ಹೊರಗೆ ಕಾಣುತ್ತಿದ್ದವು ಹಾಗು ತನ್ನ ಬಾಲವನ್ನು ಮಾತ್ರ ಜೋಪಾನವಾಗಿ ಕಾಲುಗಳ ನಡುವೆ ಇಟ್ಟುಕೊಂಡು ನನ್ನನ್ನು ಹೆದರಿಸುತ್ತ ಇತ್ತು. 

ಇಂತಹ ನಾಯಿ ಮತ್ತು ಅದರ ಮಿತ್ರ ಬಳಗಕ್ಕೆ ನಾನು ರಸ್ತೆಗೆ ಇಳಿದನೆಂದರೆ ಕಾರ್ಗಿಲ್ ಯುದ್ದ ನಡೆದ ಸಂಭ್ರಮ. ನಾನು ಹಾಗು ನನ್ನ ಸ್ನೇಹಿತರ ಬಳಗವನ್ನು  ಅವು ಸಹ ಎದುರಿಸುತ್ತಿದ್ದವು. ನಮ್ಮ ಬಳಿ ಇದ್ದ ಆಯುದಗಳೆಂದರೆ ಕಲ್ಲುಗಳು.  

ಅಜ್ಜಿ ಹೇಳುತ್ತಿದ್ದರು ’ಕೋತಿಗೆ ಕೋಲು ನಾಯಿಗೆ ಕಲ್ಲು ’ ಎಂದು ಅದು ಸತ್ಯವಾಗಿತ್ತು. ಒಮ್ಮೊಮ್ಮೆ ಅವುಗಳಿಗೆ ಕಲ್ಲು ಎಸೆಯುವ ಅಗತ್ಯವು ಇರುತ್ತಿರಲಿಲ್ಲ. ತೀರ ತುರ್ತಿನಲ್ಲಿ ಕೈಲಿ ಕಲ್ಲು ಇಲ್ಲದಾಗಲು, ಕಲ್ಲು ತೆಗೆದುಕೊಳ್ಳುವಂತೆ ನೆಲಕ್ಕೆ ಬಗ್ಗಿ, ಮತ್ತೆ ಎಸೆಯುವ ನಾಟಕವಾಡಿದ್ದರೆ ಸಾಕಿತ್ತು ಅವುಗಳನ್ನು ಹತ್ತು ನಿಮಿಷ ನಿಭಾಯಿಸಬಹುದಿತ್ತು.  

ಇಂತಹ ನಾಯಿಗಳು, ನಾನು ಶಾಲೆಯಿಂದ ಬರುವಾಗ ರಸ್ತೆಯ ತುದಿಯಲ್ಲಿ ಕಾಯುತ್ತ ಕುಳಿತಿದ್ದು, ನನ್ನನ್ನು ಕಾಣುತ್ತಲೆ, ಆಕ್ರಮಣ ಸಿದ್ದವಾಗಿ ಬಂದಾಗ ನಾನು ರಸ್ತೆಯ ತುದಿಯಿಂದ ನಮ್ಮ ಮನೆಯ ಮೆಟ್ಟಿಲಿನವರೆಗೂ ಓಡಿ ಬರುವುದು ಅನಿವಾರ್ಯವಾಗುತ್ತಿತ್ತು. ಒಮ್ಮೆ ಹಾಗೆ ಪುಸ್ತಕದ ಚೀಲದ ಸಮೇತ ಓಡಿ ಬಂದು ಮನೆಯ ಮೆಟ್ಟಿಲಿನ ಹತ್ತಿರವೆ ಎಡವಿ ಬಿದ್ದು, ಎದ್ದು ತರಚಿದ ಮಂಡಿಯನ್ನು ಸವರಿ ಅಳುತ್ತಿರುವಾಗ , ನಾಯಿಗಳ ಗುಂಪು ನಿಂತು ಸಂತಸದಿಂದ ಗಮನಿಸುತ್ತಿದ್ದವು.ಸಾಮಾನ್ಯವಾಗಿ ಎರಡು ರಸ್ತೆಗಳ ನಾಯಿಗಳ ನಡುವೆ ಜಗಳ ಸದಾ ನಡೆಯುತ್ತಿದ್ದಾಗಲು  ನನ್ನನ್ನು ಕಂಡಾಗ ಮಾತ್ರ ಆ ಎರಡು ರಸ್ತೆಗಳ ನಡುವಿನ ನಾಯಿಗಳ ದ್ವೇಷ,ಜಗಳಗಳೆಲ್ಲ ಮಾಯವಾಗಿ ನನ್ನನ್ನು  ’ಸಾಮಾನ್ಯ’   ಶತೃವನ್ನಾಗಿ ಪರಿಗಣಿಸಿ ನೋಡುತ್ತ ಇದ್ದವು. ಹಾಗು ಆ ಎರಡು ರಸ್ತೆಯ ನಾಯಿಗಳ ನಡುವೆ ಏಕಭಾವ ಮೂಡುತ್ತಿತ್ತು. 

ನನ್ನ ಬುದ್ದಿ ಬಲಿತಂತೆ ನಾಯಿಗಳನ್ನು ಗೋಳಾಡಿಸಲು ವಿಧ ವಿಧವಾದ ತಂತ್ರಗಳನ್ನು ಬಳಸುತ್ತಿದ್ದೆ. ಕನ್ನಡಿಯನ್ನು ಅದರ ಎದುರಿಗೆ ಇಟ್ಟು ಬಿಟ್ಟರಂತು ಆ ನಾಯಿಯ ವರ್ತನೆ ’ಕೋತಿಗೆ ಹೆಂಡ ಕುಡಿಸುವುದು’ ಅನ್ನುತ್ತಾರಲ್ಲ ಹಾಗೆ ಇರುತ್ತಿತ್ತು. 

ಒಮ್ಮೆ ಹೀಗೆ ಆಯಿತು, ಮನೆಯಲ್ಲಿ ಆಗಿನ್ನು  ಹೊಸದಾಗಿ ವಿಧ್ಯುತ್ ಸಂಪರ್ಕ ಪಡೆಯುತ್ತಿದ್ದರು, ಅದರ ಕೆಲಸ ನಡೆಯುತ್ತಿದ್ದು, ಮನೆಯ ಒಳಗಿನ ಅಂಗಳದಲ್ಲಿ ಅದರ ಕಪ್ಪನೆಯ ಉದ್ದನೆ ಪೈಪುಗಳಿದ್ದವು, ಅವು ಸರಿ ಸುಮಾರು ಇಪ್ಪತ್ತು ಅಡಿಗಳಿದ್ದರಬಹುದು. ಎಂದಿನಂತೆ ನಾಯಿ ತನ್ನ ಊಟ ಮುಗಿಸಿ, ನಮ್ಮ ಮನೆಯ ಜಗಲಿ ಹತ್ತಿ ಸುತ್ತಲೂ,  ಒಮ್ಮೆ ನೋಡಿ ತನ್ನ ಮುಂಗಾಲುಗಳ ಮೇಲೆ ತಲೆಯನ್ನಿಟ್ಟು ನೆಮ್ಮದಿಯ ನಿದ್ದೆಗೆ ಪ್ರಾರಂಭಿಸಿತು. ನನ್ನ ಜೊತೆಗೆ ನಮ್ಮ ಚಿಕ್ಕಪ್ಪನ ಮಗನೂ ಊರಿನಿಂದ ಬಂದಿದ್ದ.  ನಮ್ಮಿಬ್ಬರ  ಬುದ್ಧಿ ಚುರುಕಾಯಿತು,   ಜಗಲಿಯ ಮೇಲೆ ಸಣ್ಣ ಕಿಟಕಿ ಒಂದಿತ್ತು. ನಾವಿಬ್ಬರು ಮನೆಯ ಒಳಗಿನಿಂದ ಕಿಟಕಿಯ ಮೂಲಕ ಪೈಪನ್ನು ತೂರಿಸಿ, ಅದರ ಒಂದು ತುದಿ ನೇರ ನಾಯಿಯ ಕಿವಿಯ ಹತ್ತಿರ ಬರುವಂತೆ ಸರಿಪಡಿಸಿದೆವು, ನಾಯಿಗೆ ಎಚ್ಚರವೇ ಇಲ್ಲ, ಒಮ್ಮೆಲೆ ಮನೆಯ ಒಳಗಿನಿಂದ ಅದರ ಇನ್ನೊಂದು ತುದಿಗೆ ನನ್ನ ಬಾಯಿ ಇಟ್ಟು ’ಬೌ...ಬೌ’ ಎಂದೆ. 

ತಕ್ಷಣದ ಪ್ರತಿಕ್ರಿಯೆ ಎನ್ನುವಂತೆ , ಎಚ್ಚೆತ್ತ ನಾಯಿ ಮಿಂಚಿನ ವೇಗದಲ್ಲಿ ಜಗಲಿಯಿಂದ ಕೆಳಗೆ ದುಮಿಕಿತು. ಹಾಗೆ ದುಮಿಕಿದ ನಾಯಿ ನಂತರ ಜಾಗವನ್ನು ದೂರದಿಂದ ಪರಿಶೀಲಿಸಿತು. ಜಗಲಿಯ ಮೇಲೆ ಯಾವ ನಾಯಿಯೂ ಇಲ್ಲ. ಅದಕ್ಕೆ ಅರ್ಥವಾಗಲಿಲ್ಲ. ತನ್ನ ಕಿವಿಯ ಒಳಗೆ ಇನ್ನೊಂದು ನಾಯಿ ಬೊಗಳಿದ ಶಬ್ದ ಮಾತ್ರ ಕೇಳಿಸಿ ಕೆಳಗೆ ಹಾರಿದ್ದ ಆ ನಾಯಿಗೆ ಜಗಲಿಯಲ್ಲಿ ನಾಯಿ ಕಾಣದಾದಾಗ ಗಾಭರಿಯೆ ಆಗಿತ್ತು. ನಂತರ ಅದರ ವೈಜ್ಞಾನಿಕ ಬುದ್ದಿ ಹೊರಬಂದು ಪ್ರೇರಿಪಿಸಲು, ನಾಯಿ ಬೊಗಳುವಿಕೆಯ ಶಬ್ದದ ಮೂಲ ಶೋದಿಸಲು ಪುನಃ ಜಗಲಿಯನ್ನು ಹತ್ತಿತ್ತು. ಅಲ್ಲಿ ಕಿಟಕಿಯಿಂದ ಹೊರಗೆ ಬಂದಿದ್ದ ಕಪ್ಪನೆಯ ಪೈಪನ್ನು ಹೊರತುಪಡಿಸಿ ಮತ್ತೇನು ಇರಲಿಲ್ಲ. ನಾಯಿ ಕುತೂಹಲದಿಂದ ಪೈಪನ್ನು ಪರಿಶೀಲಿಸುತ್ತ ಇತ್ತು. ಅದನ್ನು ಮೂಸುತ್ತ ಪೈಪಿನ ತುದಿಗೆ ಅದರ ಮುಖ ಬರುತ್ತಿರುವಾಗ , ಸರಿ ಸುಮಾರು ಪೈಪಿನ ತುದಿ ಅದರ ಕಿವಿಯ ಹತ್ತಿರವಿರುವಾಗ ನಾನು ಒಳಗಿನಿಂದ ಪುನಃ ಪೈಪಿನ ಬಾಯಿಗೆ ಮುಖವಿಟ್ಟು ’ಬೌ’ ಎಂದೆ. 

ಆ ನಾಯಿ ಪುನಃ ಜಗಲಿಯಿಂದ ಕೆಳಗೆ ದುಮುಕಿತು.

ಸ್ವಲ್ಪದೂರ ಹೋಗಿ ಪುನಃ ಹಿಂದೆ ಬಂದು ಕೆಳಗೆ ನಿಂತು ನೋಡುತ್ತ ಇತ್ತು. ಅದಕ್ಕೆ ವಿಸ್ಮಯವನ್ನು ಜೀರ್ಣಿಸಿಕೊಳ್ಳಲು ಆಗಿರಲಿಲ್ಲ. ಸಣ್ಣಗೆ ಉದ್ದಕ್ಕೆ ಕೋಲಿನಂತ ಪೈಪು ನಾಯಿಯಂತೆ ಬೊಗಳಿ ಶಬ್ದಮಾಡುವುದು ಎನ್ನುವದನ್ನು ಅದಕ್ಕೆ ವಿಶ್ಲೇಷಿಸಲು ಆಗಲಿಲ್ಲ ಅನ್ನಿಸುತ್ತೆ. ಸ್ವಲ್ಪ ಕಾಲ ನೋಡುತ್ತ ಇದ್ದು ತನ್ನ ಅನುಮಾನ ಪರಿಹರಿಸಿಕೊಳ್ಳಲು  ಎನ್ನುವಂತೆ ಮತ್ತೆ ಜಗಲಿ ಹತ್ತಿ ಪೈಪಿನ ತುದಿಗೆ ತನ್ನ ಮುಖವಿಟ್ಟಿತ್ತು, ಶಬ್ದದ ಪುನಾರವರ್ತನೆ, ಈ ಬಾರಿ ಅದು ಗಾಭರಿಯಿಂದ ಓಡಿಹೋಗದಿದ್ದರು ಸಹ ಜಗಲಿಯಿಂದ ದುಮುಕಿ ಕೆಳಗೆ ನಿಂತಿತು. ಅದೇಕೊ ಅದಕ್ಕೆ ಪುನಃ ಮೇಲೆ ಬರುವ ದೈರ್ಯವಾಗಲಿಲ್ಲ.  ನಾನು ಹಾಗು ನನ್ನ ಚಿಕ್ಕಪ್ಪನ ಮಗ ಮಾತ್ರ ನಕ್ಕಿದ್ದೆ ನಕ್ಕಿದ್ದು.

ಇಂತಹ ನಾಯಿಗಳ ಬಗ್ಗೆ ನನಗೆ ಒಂದೆರಡು ಬಾರಿ ಅಯ್ಯೋ ಅನ್ನಿಸಿದ್ದು ಇದೆ. ಆಗೆಲ್ಲ ಮನೇಕಗಾಂದಿಯವರ ಪ್ರಾಣಿಧಯೆಯ ಕಾನೂನಿನ ವಿದಿಗಳು ಜಾರಿಗೆ ಬಂದಿರಲಿಲ್ಲ. ಬೀದಿನಾಯಿಗಳ ಕಾಟ ಜಾಸ್ತಿ ಅನ್ನಿಸಿದಾಗ, ಅಲ್ಲಿಯ ಪುರಸಭೆಯವರು ನಾಯಿಗಳನ್ನು ವಿಷ ಹಾಕಿ ಕೊಲ್ಲುತ್ತಿದ್ದರು. ಬಕೆಟ್ಟಿನಲ್ಲಿ ವಿಷ ಹಾಕಿದ ಅನ್ನವನ್ನೊ ಮತ್ತೇನನ್ನೊ ಒಬ್ಬಾತ ತಂದು ಪ್ರತಿ ಬೀದಿಯಲ್ಲು ಇರುವ ನಾಯಿಗಳನ್ನು ಕರೆದು ರಸ್ತೆಯಲ್ಲಿದ್ದ ಕಲ್ಲಿನ ಮೇಲೆ ಅನ್ನವನ್ನು ಹಾಕಿ ಹೋಗುತ್ತಿದ್ದ. ಅದನ್ನು ತಿನ್ನುತ್ತಿದ್ದ ನಾಯಿಗಳು ಕೆಲವು ಗಂಟೆಗಳಲ್ಲಿ ಅಲ್ಲಿ ಇಲ್ಲಿ ಒದ್ದಾಡಿ ಸತ್ತು ಬೀಳುತ್ತಿದ್ದವು, ಮಾರನೆ ದಿನ ಅದೇ ಪುರಸಭೆಯವರೆ ಪುನಃ ಬಂದು ಸತ್ತು ಬಿದ್ದಿದ್ದ ನಾಯಿಗಳಿಗೆ ಹಗ್ಗ ಕಟ್ಟಿ ಎಳೆಯುತ್ತ ಹೋಗಿ ತಾವು ತಂದಿದ್ದ ವಾಹಗಳಲ್ಲಿ ಹಾಕಿಕೊಂಡು ಊರಹೊರಗೆ ಹೋಗುತ್ತಿದ್ದರು. 

ಆದರೆ ನಾಯಿಗಳಿಗೆ ರಾಜನಾದ ನಮ್ಮ ಮನೆಯ ಹತ್ತಿರವಿದ್ದ ನಾಯಿ ಮಾತ್ರ ಬಹಳವೆ ಹುಷಾರಿನ ಆಸಾಮಿ. ಹಾಗೆ ನಾಯಿಗಳನ್ನು ಕೊಲ್ಲಲ್ಲು ಬಂದವರನ್ನು ಅದು ಹೇಗೋ ತನ್ನ ಅತೀಂದ್ರಿಯ ಶಕ್ತಿಯಿಂದ ಗುರುತಿಸಿಬಿಡುತ್ತಿತ್ತು. ವಿಷ ಹಾಕಲಿ ಅಥವ ಹಾಗೆ ಎಳೆದುಕೊಂಡು ಹೋಗವರು ಬರಲಿ , ಆ ನಾಯಿ, ರಸ್ತೆಯ ಪಕ್ಕದಲ್ಲಿ ಚರಂಡಿಯ ಮೇಲೆ ಉದ್ದಕ್ಕೂ ಹಾಸಿದ್ದ ಕಲ್ಲಿನ ಕೆಳಗೆ ತೂರಿ ಮಾಯವಾಗುತ್ತಿದ್ದ ಅದು, ಪುನಃ ಮೇಲೆ ಬರುತ್ತ ಇದ್ದಿದ್ದು ಅವರೆಲ್ಲ ಹೋದ ಮೇಲೆಯೆ. 

ಮತ್ತೊಮ್ಮೆ ಯಾರೊ ಕೆಲವರು ನಾಯಿಗೆ ಹುಚ್ಚು ಹಿಡಿದಿದೆ ಎಲ್ಲರನ್ನು ಕಚ್ಚುತ್ತೆ ಎಂದು ತೀರ್ಮಾನಿಸಿ ಒಂದು ನಾಯಿಯನ್ನು ಅಟ್ಟಡಿಸುತ್ತ ಕೋಲಿನಿಂದಲೆ ಹೊಡೆದು ಕೊಂದಿದ್ದು ಮಾತ್ರ ತೀರ ಬೇಸರ ಜಿಗುಪ್ಸೆ ಮೂಡಿಸಿತ್ತು. 

ಹೀಗೆ ನನ್ನ ಹಾಗು ಬೀದಿನಾಯಿಗಳ ನಡುವಿನ ಭಾವನಾತ್ಮಕವಾದ ಸಂಬಂದ ಉಳಿದು ಬೆಳೆದು, ನಾನು ಕೆಲಸಕ್ಕೆ ಸೇರಿ ಈಗ ಹೊಸ ಮನೆ ಕಟ್ಟುವವರೆಗೂ ಉಳಿದು ಬಂತು 

ಬೆಂಗಳೂರಿನಿಲ್ಲಿ ಮನೆ ಕಟ್ಟ ಬೇಕೆಂದು ಸೈಟ್ ನೋಡಿತಿದ್ದಾಗ ಎಲ್ಲ ವಿಷಯಗಳ ಬಗ್ಗೆ ಸಹ ಯೋಚಿಸಿದೆನಾದರು ಅದು ಹೇಗೋ ಬೀದಿ ನಾಯಿಗಳ ಬಗ್ಗೆ ಚಿಂತಿಸಲಿಲ್ಲ. ಗೃಹಪ್ರವೇಶದ ದಿನವೆ ಮನೆಯ ಸುತ್ತಲು ಗುಂಪುಗಟ್ಟಿ ತಿರುಗುತ್ತಿದ್ದ ನಾಯಿಗಳನ್ನು ಗಮನಿಸಿದ್ದು. ಅವುಗಳನ್ನು ನಾನು ಹೆಚ್ಚು ನಿಂದಿಸುವಂತಿರಲಿಲ್ಲ ಏಕೆಂದರೆ ಆ ಬೀದಿನಾಯಿಗಳೆಲ್ಲ ನನಗಿಂತ ಮುಂಚೆಯೆ ಆ ಏರಿಯಾದಲ್ಲಿ ವಾಸವಾಗಿದ್ದು , ನಾನು ನಂತರ ಹೋದವನು.  ಹಾಗಾಗಿ ಅವುಗಳಿಗೆ ಸಹಜವಾಗಿ ಹೆಚ್ಚು ಹಕ್ಕಿತ್ತು. ಅವುಗಳ ಮಾತ್ರಕ್ಕೆ ಅವು ಬೀದಿಯಲ್ಲಿ ಸುತ್ತಿಕೊಂಡಿದ್ದರೆ ನನಗೆ ಹೆಚ್ಚು ಅಕ್ಷೇಪಣೆ ಏನು ಇರಲಿಲ್ಲ . ಆದರೆ ಬೆಂಗಳೂರಿನ ನಾಯಿಗಳು ಹಗಲು ಮಾತ್ರವಲ್ಲದೆ ಕೆಲವು ರಾತ್ರಿಯ ಶಿಫ್ಟ್ ನಲ್ಲೂ ಕೆಲಸ ಮಾಡುತ್ತವೆ ಇದು ನನ್ನ ಅಭಿಪ್ರಾಯ. ಬಹುಶಃ ಬೆಂಗಳೂರಿನಲ್ಲಿ ಐಟಿ ಬೀಟಿ ಗಳು ಬೆಳೆದಿದ್ದರ ಪ್ರಭಾವ ಎಂದು ಕಾಣುತ್ತದೆ, ಅಮೇರಿಕದಲ್ಲಿ ಹಗಲಿದ್ದರೆ ನಮಗೆ ರಾತ್ರಿ ಆದರೆ ಐಟಿ ಕೆಲಸಗಾರರಿಗೆ ರಾತ್ರಿಯೆ ಹಗಲು. 

ಒಂದು ವಾಹನ ಓಡಿಯಾಡುವಾಗ, ಕೆಲವು ಐಟಿ ಕೆಲಸಗಾರರ ಡ್ರಾಪ್ ಹಾಗು ಪಿಕ್ ಅಪ್ ವಾಹನಗಳು ಬರುವಾಗಲೆಲ್ಲ  ಈ ನಾಯಿಗಳು ಹೆಚ್ಚು ಸಕ್ರಿಯವಾಗುತ್ತಿದ್ದವು. ಮತ್ತೆ ರಾತ್ರಿ ಬೀಟ್ ಪೋಲಿಸರು ಬರುವಾಗ ಅವರ ಕಾವಲಿಗೆ ಹತ್ತೆಂಟು ನಾಯಿಗಳು ಓಡಿಯಾಡುವುವು, ಹಾಗು ಆಗಲೆಲ್ಲ ರಸ್ತೆಯಲ್ಲಿ ಸಾಕಷ್ಟು ಗಲಾಟೆ ಎಬ್ಬಿಸುವುವು. 

ನಾನು ಹೊಸಮನೆಯ ರೂಮಿನಲ್ಲಿ ಮಲಗಿದ ಎರಡನೆ ರಾತ್ರಿ ಇರಬಹುದು, ಹೊರಗೆ ಕಿಟಕಿ ಬಳಿ ಒಂದು ದೊಡ್ಡ  ಮರವಿದೆ, ಅದಕ್ಕೊಂದು ಕಲ್ಲಿನ ಜಗಲಿಯನ್ನು ಸುತ್ತಲೂ ಕಟ್ಟಲಾಗಿದೆ ಅದೇನು ಕಲ್ಲಿನ ಜಗಲಿಗು ನಾಯಿಗೂ ನೆಂಟೋ ಗೊತ್ತಿಲ್ಲ, ಒಂದು ನಾಯಿ ರಾಜನಂತೆ ಅದರ ಮೇಲೆ ಕುಳಿತು, ಮುಖವನ್ನು ಮೇಲಿ ಎತ್ತಿ ಸತತವಾಗಿ ಬೊಗಳುತ್ತಿತ್ತು. ನನಗೆ ಈ ಗಲಾಟೆಯಲ್ಲಿ ನಿದ್ದೆ ಬರುವದಿಲ್ಲ, ಹಾಗಾಗಿ ಕಿಟಕಿಯ ಬಳಿ ಬಗ್ಗಿ ನೋಡಿದೆ , ದೂರಕ್ಕೆ ನಾಯಿ ಕಾಣುತ್ತಿತ್ತು, 

’ಚೂ...ಚೂ ’ ಎಂದೆ , 

ಹೊರಗಿನಿಂದ ಯಾವುದೆ ಪ್ರತಿಕ್ರಿಯೆ ಇಲ್ಲ.  ಆದರೆ ಬೊಗಳುವಿಕೆಯೂ ನಿಲ್ಲಲಿಲ್ಲ, 
ಮತ್ತೆ ಜೋರಾಗಿ ’ಹೇ...ಹೇ ’ ಎಂದೆ 

ಒಮ್ಮೆ ಹಿಂದಕ್ಕೆ ತಿರುಗಿನೋಡಿತು ನಾಯಿ, ಆದರೆ ಕತ್ತಲೆಯಲ್ಲಿ ಅದಕ್ಕೆ ನಾನು ನಿಂತಿರುವುದು ಕಾಣಿಸಲಿಲ್ಲ, ಹಾಗಾಗಿ ಅದು ನನ್ನ         ’ಹೇ’ಕಾರವನ್ನು ನಿರ್ಲಿಕ್ಷಿಸಿ ಮತ್ತೆ ಬೊಗಳಿತು. ಈಗ ಏನು ಮಾಡುವಂತಿರಲಿಲ್ಲ, ಕಡೆಗೊಮ್ಮೆ ಸೋತು, ಹೊರಗೆ ಹೋಗಿ ಓಡಿಸಬೇಕೆಂದು ನಿರ್ಧರಿಸಿ, 
ರೂಮಿನಿಂದ ಹೊರಗೆ ಬಂದು ಹೊರಗಿನ ಬಾಗಿಲನ್ನು ತೆಗೆಯುತ್ತಿರುವಾಗ, ಒಳಗೆ ಮಲಗಿದ್ದ ನನ್ನಾಕೆ 
"ಏನಾಯ್ತು, ಏಕೆ ಬಾಗಿಲು ತೆರೆಯುತ್ತಿರುವಿರಿ?"ಎಂದಳು
"ಹಾಳಾದ್ದು ನಾಯಿಗಳ ಗಲಾಟೆ" ಎಂದೆ, 
ನನ್ನ ಹಾಗು ಬೀದಿ ನಾಯಿಗಳ ಸತತ ವೈರತ್ವದ ಬಗ್ಗೆ ಅರಿವಿದ್ದ ಅವಳು, ಏನಾದರು ಮಾಡಿಕೊಳ್ಳಲಿ ಎಂಬಂತೆ ಸುಮ್ಮನಾದಳು.
ಬಾಗಿಲು ತೆರೆದು ಹೊರಬಂದು, ಕತ್ತಲಲ್ಲಿಯೆ ಕಾಂಪೋಡಿನಲ್ಲಿ ಗೋಡೆಯ ಪಕ್ಕವೆ ಚಲಿಸುತ್ತ ನಾಯಿ ಇರುವ ಬಾಗಕ್ಕೆ ಬಂದೆ
ಈಗ ನಿಂತು, 
ಜೋರಾಗಿ " ಹೇ... ಹೇ ’ ಎಂದು ಕೂಗಿದೆ
ಅರ್ಧರಾತ್ರಿಯಲ್ಲೂ ಬಾಗಿಲು ತೆರೆದು ಹೊರಬಂದು ನಿಂತಿದ್ದ ನನ್ನನ್ನು ಕಂಡು ನಾಯಿಗೆ ಆಶ್ಚರ್ಯವಾಯಿತೇನೊ, ಒಂದು  ಕ್ಷ್ಣಣ ಬೊಗಳುವಿಕೆ ನಿಲ್ಲಿಸಿ ನನ್ನ ಕಡೆ ನೋಡಿತು.  ಆದರೆ ಅಷ್ಟರಲ್ಲಿ ದೂರದಿಂದ ಮತ್ತೊಂದು ನಾಯಿ ಒಮ್ಮೆ ಬೊಗಳಿದ ಶಬ್ದ ಕೇಳಿಸಿತು, 
ಒಡನೆಯೆ ಈ ನಾಯಿ  ಆಕಾಶವನ್ನು ನೋಡುತ್ತ, ಒಮ್ಮೆ ದೀರ್ಘವಾಗಿ ಬೊಗಳಿತು, ನಾನು ಅಲ್ಲಿ ಬಂದು ನಿಂತಿರುವುದು ಅದನ್ನು ಬೊಗಳುವುದನ್ನು ನಿಲ್ಲಿಸಲು ಎಂದು ಅದಕ್ಕೆ ಅರಿವೇ ಎಲ್ಲ. ಬಹುಶಃ ನಾಯಿಗಳಿಗೆ ರಾತ್ರಿ ದೆವ್ವ ಕಾಣುತ್ತದೆ ಎನ್ನುವುದು ನಿಜವೋ ಏನೊ ಎನ್ನುವ ಅನುಮಾನ ಕಾಡಿತು. 

ಈ ನಾಯಿಗಳು ರಾತ್ರಿ ವೇಳೆ ಬೊಗಳುವದನ್ನು ನೋಡುವಾಗ ನನಗೆ ಆನಿಸುವಂತೆ ಅವು ಒಂದು ಬಾಗದಿಂದ ಮತ್ತೊಂದು ಬಾಗಕ್ಕೆ ಏನೊ ಸಂದೇಶವನ್ನು ಕಳಿಸುತ್ತವೆ ಎನ್ನುವ  ವಿಚಾರವಿದೆ. ಇಲ್ಲದಿದ್ದರೆ ನಾನು ಅಲ್ಲಿ ನಿಂತಿರುವಾಗಲು ನನ್ನನ್ನು ನಿರ್ಲಕ್ಷಿಸಿ ಕಣ್ಣಿಗೆ ಕಾಣದೆ ದೂರದಲ್ಲಿ ಎಲ್ಲಿಯೋ ಇರುವ ನಾಯಿಗೆ ಇದು ಉತ್ತರಿಸುವುದು ಎಂದರೇನು. ತನ್ನ ಎದುರಿಗಿದ್ದವರ ಜೊತೆ ಮಾತನಾಡದೆ ದೂರದಿಂದ ಮೊಬೈಲ್ ನಲ್ಲಿ ಕಾಲ್ ಮಾಡುವರ ಜೊತೆ ಮಾತನಾಡುವ ಮನುಷ್ಯನ ಬುದ್ದಿಯೇ ಈ ನಾಯಿಗೂ ಬಂದಿರುವಂತಿದೆ. 
ನನ್ನ ಸಹನೆ ಮೀರಿ ಒಮ್ಮೆ ಜೋರಾಗಿ 
"ಏಯ್ ಥೂ ....’ಎಂದೆ 
ಅದು ನನ್ನ ಕಡೆಗೊಮ್ಮೆ ವಿಚಿತ್ರವಾಗಿ ನೋಡಿತು. 
ಆಗ ಮತ್ತೆ ಚಿಕ್ಕ ವಯಸಿನಲ್ಲಿ ಅಜ್ಜಿ ಹೇಳುತ್ತಿದ್ದ ಮಾತು ನೆನಪಿಗೆ ಬಂದಿತು, ’ನಾಯಿಗೆ ಕಲ್ಲು ’ ಎಂದು, 
ಆದರೆ ಮನೆಯ ಕಾಂಪೋಡಿನ ಕಾಂಕ್ರೀಟಿನ ನೆಲದಲ್ಲಿ ಕಲ್ಲನೆಲ್ಲಿ ಹುಡುಕುವುದು, ಆದರು ನಾಯಿಗಳ ಸ್ವಭಾವ ನೆನಪಿಗೆ ಬಂದು ಅದು ನನ್ನನ್ನು ನೋಡುತ್ತಿರುವಾಗಲೆ , ಕಲ್ಲನ್ನು ತೆಗೆದುಕೊಳ್ಳುವನಂತೆ ನೆಲಕ್ಕೆ ಬಗ್ಗಿದೆ, 

ಆದರೆ ಅದರಿಂದ ಯಾವ ಉಪಯೋಗವೂ ಇಲ್ಲ, ನಾನು ಬಗ್ಗಿದಾಗ ಕಾಪೋಂಡಿನ ಗೋಡೆ ಕಾರಣ ಅದಕ್ಕೆ ನಾನು ಕಾಣಿಸುತ್ತಲೆ ಇಲ್ಲ, ಮತ್ತೆ ನಿಂತಾಗ ಮಾತ್ರ ನನ್ನನ್ನು ವಿಚಿತ್ರವಾಗಿ ನೋಡಿತು. ಇದೇನು ಅರ್ಧರಾತ್ರಿಯಲ್ಲಿ ಹೊರಬಂದು ವ್ಯಾಯಾಮ ಮಾಡುತ್ತಿರುವನಲ್ಲ ಎನ್ನುವಂತೆ, ಬೆಂಗಳೂರಿನ ವಿವಿಧ ಸ್ವಭಾವದ ಜನರನ್ನು ನೋಡಿರುವ ಆ ನಾಯಿಗೆ ನನ್ನ ವರ್ತನೆ ಹೆಚ್ಚು ಆಶ್ಚರ್ಯ ಉಂಟುಮಾಡಲಿಲ್ಲ. ಮತ್ತೊಮೆ ಪ್ರಯತ್ನಿಸಿದೆ ಈಗಲೂ ಅದೇ ಪರಿಣಾಮ. ನಾಯಿ ತನ್ನ ಜಾಗದಿಂದ ಕದಲಲಿಲ್ಲ. 

ಈಗ ಬೇರೆ ಚಿಂತಿಸಬೇಕಾಗಿತ್ತು, ಕಾಂಪೋಡ್ ಬಿಟ್ಟು ಗೇಟಿಗೆ ಹಾಕಿರುವ ಬೀಗವನ್ನು ತೆಗೆದು ಹೊರಹೋಗುವುದು ಅಷ್ಟೊಂದು ಸುರಕ್ಷತೆ ಇರುವಂತೆ ಅನ್ನಿಸಲಿಲ್ಲ. ಸರಿ ಸುತ್ತಲು ನೋಡುವಾಗ ಹೋಮಕ್ಕೆ ಬಳಸಿ ಅಲ್ಲಿ ಎಸೆದಿದ್ದ ಉರಿದು ಮಿಕ್ಕಿದ್ದ ಕಟ್ಟಿಗೆ ತುಂಡುಗಳು ಕಾಣಿಸಿದವು. ಅದನ್ನೆ ಒಂದು ತೆಗೆದುಕೊಂಡೆ, ನಾಯಿಗೆ ತೋರಿಸುತ್ತ 
’ಹೇ... ದೂರ ಹೋಗು ’ ಎಂದೆ. ಅದಕ್ಕೆ ಈಗ ನನ್ನ ಕೈಲಿದ್ದ ಕಟ್ಟಿಗೆ ನೋಡುತ್ತ ಗೊಂದಲ. ಸ್ವಲ್ಪ ಎದ್ದಂತೆ ಮಾಡಿತು, ಈಗ ವಿದಿ ಇಲ್ಲದೆ ಕೈಲಿದ್ದ ಕೋಲನ್ನು ಜೋರಾಗಿ ಎಸೆದೆ, ಅದಕ್ಕೆ ತಗಲಿತೋ ಇಲ್ಲವೋ ಗೊತ್ತಿಲ್ಲ, ಆದರೆ ಕಟ್ಟಿಗೆ ಅಲ್ಲಿ ಹೋಗುವ ಮುಂಚೆಯೆ ನಾಯಿ ಅಲ್ಲಿಂದ ಎಗರಿ ದೂರ ಓಡಿತು. ಮನಸಿಗೆ ತೃಪ್ತಿ ಅನ್ನಿಸಿತು. ಒಂದು ಕ್ಷಣ ನೋಡುತ್ತ ನಿಂತು. ಒಳಗೆ ಬಂದು ಹೊರಬಾಗಿಲ ಚಿಲವನ್ನೆಲ್ಲ ಭದ್ರಪಡಿಸಿ ರೂಮಿಗೆ ಬಂದೆ. ಕಟ್ಟಿಗೆ ಎಸೆಯುವಾಗದ ಅದರ ಸಿಬಿರು ಕೈಗೆ ತಗಲಿತ್ತೊ ಏನೊ ಬಲಗೈ ಉರಿಯುತ್ತಿತ್ತು. 
ಸರಿ ಎಂದು ಹಾಸಿಗೆಯಲ್ಲಿ ಮಲಗಿದೆ, ಹೊರಗೆ ನಿಶ್ಯಬ್ದ ಆವರಿಸಿತು.  ನೆಮ್ಮದಿಯಿಂದ ಕಣ್ಣು ಮುಚ್ಚಿದೆ, ಐದು ನಿಮಿಷ ಕಳೆಯುತ್ತಿರುವಂತೆ, ನಿದಾನವಾಗಿ ನಿದ್ರೆ ಆವರಿಸುತ್ತ ಇತ್ತು, ಆಗ ಮತ್ತೆ ಕಿವಿಗೆ ಅದೇ ಕರ್ಕಶ ದ್ವನಿ ನಾಯಿಯ ಬೊಗಳುವಿಕೆ. ಬೆಚ್ಚಿ ಎದ್ದು ಕುಳಿತು ಮತ್ತೆ ಕಿಟಕಿಯ ಬಳಿ ಬಂದು ನಿಂತು ಬಗ್ಗಿ ನೋಡಿದೆ. 
ಹಾಳಾದ ಅದೇ ನಾಯಿ ಮತ್ತೆ ಬಂದು ಸ್ವಸ್ಥಾನದಲ್ಲಿ ಕುಳಿತು ಬೊಗಳುತ್ತಿದೆ!!! . 
ಆ ರಾತ್ರಿಯೆಲ್ಲ  ನಿದ್ರೆಯ ಕೊಲೆ ಆಯಿತು, ಕಡೆಗೆ ನಾಯಿ ತನ್ನ ಡ್ಯೂಟಿ ಮುಗಿಸಿ ಇಳಿದು ಹೋದ ನಂತರ ನನಗೆ ನಿದ್ರೆ ಹತ್ತುವಾಗ ಆಗಲೆ ಬೆಳಗಿನ ಜಾವದ ಹತ್ತಿರ. 

ಎರಡು ದಿನ ಇದೇ ಪುನಾರಾವರ್ತನೆ ಆದಾಗ,  ಬೆಳಗ್ಗೆ ಸಮಯದಲ್ಲಿ ಜ್ಞಾನೋದಯವಾಗಿತ್ತು. ನಾಯಿಯನ್ನು ಓಡಿಸಲು ಸ್ವಲ್ಪ ಕಲ್ಲುಗಳನ್ನು ಕಾಪೋಂಡಿನಲ್ಲಿ ಇಟ್ಟಿದ್ದರೆ ಉತ್ತಮ. 
ಈಗ ನಾನು ’ONE MAN ARMY'  ರೀತಿಯಲ್ಲಿ ರಾತ್ರಿಯಲ್ಲಿ ನಾಯಿಗಳನ್ನು ಓಡಿಸಲು ತಯಾರಿ ನಡೆಸಬೇಕಾಯಿತು. ಹೊರಗೆ ರಸ್ತೆಯಲ್ಲಿ ಓಡಾಡಿ ಅಲ್ಲಲ್ಲಿ ಸಿಗುವ ದೊಡ್ಡ ಹಾಗು ಸಣ್ಣ ಕಲ್ಲುಗಳನ್ನು ತಂದು ಕಾಂಪೋಡಿನಲ್ಲಿ  ಹಾಕಿಕೊಂಡೆ. ಹೊರಗೆ ಬಂದ ಪತ್ನಿ ಇದೇನು ಎನ್ನುವಾಗ, ಅವಳಿಗೆ ವಿವರಿಸಿದೆ ರಾತ್ರಿ ಬರುವ ನಾಯಿಗಳನ್ನು ಓಡಿಸಲು ಬೇಕಾಗುತ್ತೆ ಎಂದು. ಅವಳ ನನ್ನ ಭಯಂಕರ ’ನಾಯಿ ಫೋಭ್ಹಿಯೊ ’ ಕಂಡು ತಲೆ ಚಚ್ಚಿಕೊಳ್ಳುತ್ತ ಒಳಗೆ ಹೋದಳು. ನಾನು ಕಲ್ಲುಗಳನ್ನು ಸಂಗ್ರಹಿಸುತ್ತಿರುವದನ್ನು ಎದುರು ಮನೆಯಾತ ಕುತೂಹಲ ಹಾಗು ಭಯದಿಂದ ನೋಡುತ್ತಿದ್ದರು. 

ಸರಿ ಅಂದು ರಾತ್ರಿ ನಮ್ಮ ಮನೆಯ ಕಿಟಕಿಯ ಬಳಿ ಬಂದು ಕುಳಿತುಕೊಳ್ಳುವ ನಾಯಿಗೆ ಅನಿರೀಕ್ಷಿತ ಆಕ್ರಮಣ. ಅರ್ಧ ರಾತ್ರಿಯಲ್ಲಿ ನಾನು ಅದರ ಮೇಲೆ ಕಲ್ಲಿನಿಂದ ಆಕ್ರಮಣ ನಡೇಸುವಾಗ ಅದು ಆಶ್ಚರ್ಯ ಹಾಗು ಹೆದರಿಕೆಯಿಂದ ಎದ್ದು ಓಡಿಹೋಗಿತ್ತು. ಅದರ ಸ್ವಭಾವ ಗೊತ್ತಿದ್ದ ನಾನು ಸುಮಾರು ಐದು ನಿಮಿಶ ಹೊರಗೆ ಬಾಗಿಲ ಬಳಿ ನಿಂತಿದ್ದೆ, ಆಗ ಮತ್ತೆ ಬಂದು ಕುಳಿತ ನಾಯಿಗೆ ಮತ್ತೆ ಕಲ್ಲಿನ ಪೂಜೆ. ಸರಿ ಅದಕ್ಕೆ ಖಾತ್ರಿಯಾಯಿತು ಅನ್ನಿಸುತ್ತೆ ಇವನು ತನ್ನನ್ನು ಅಲ್ಲಿ ಕುಳಿತು ಬೊಗಳಲು ಬಿಡುವದಿಲ್ಲ ಎಂದು ಅದು ಪುನಃ ಬರಲಿಲ್ಲ .

ಸದ್ಯ ನಮ್ಮ ದೇಶದಲ್ಲಿ ನಾಯಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ತೊಂದರೆಪಡಿಸಿದಲ್ಲಿ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮ ಜರಿಗಿಸುವ ಯಾವುದೇ ಕಾನೂನು ಇಲ್ಲ. ಹಾಗಾಗಿ ನಾನು ಸುರಕ್ಷಿತ. 

ನಮ್ಮ ಮನೆ ಪಕ್ಕದ ಆ ಜಾಗದಲ್ಲಿ ಬಂದು ಕುಳಿತು ಬೊಗಳುವ ಆ ನಾಯಿ ಅಭ್ಯಾಸ ತಪ್ಪಿಸಲು ನಾನು ಎರಡು ಮೂರು ರಾತ್ರಿ ಕಷ್ಟ ಪಡಬೇಕಾಯಿತು. ಬೆಳಗ್ಗೆ ಸಮಯದಲ್ಲಿ ಮುಂಚೆಯೆ ಹೊರಗೆ ಹೋಗಿ ಆ ಕಲ್ಲುಗಳನ್ನೆಲ್ಲ ತಂದು ಒಳಗೆ ಇಡುತ್ತಿದೆ. ರಾತ್ರಿ ಆ ಕಲ್ಲುಗಳಿಂದ ಅಲ್ಲಿ ಬಂದು ಕುಳಿತುಕೊಳ್ಳುವ ನಾಯಿಯನ್ನು ಓಡಿಸುತ್ತಿದೆ. 

ನಂತರ ಅನ್ನಿಸಿತು, ಈ ನಾಯಿಗಳಿಗೆ ತನ್ನದೆ ಆದ ಬೌಂಡರಿ ಇರುತ್ತದೆ, ಅವು ನಮ್ಮ ಮನೆಯ ಸುತ್ತಲ ಮುತ್ತಲ ಜಾಗವನ್ನು ತನ್ನೆದೇ ಸಾಮ್ರಾಜ್ಯ ಅಂದುಕೊಂಡು ಬಿಟ್ಟೆದೆ, ಆ ಅಭ್ಯಾಸ ತಪ್ಪಿಸಬೇಕು ಅಂದರೆ ಅವು ಆದಷ್ಟು ನಮ್ಮ ಮನೆಯ ಸುತ್ತ ಸುಳಿಯದಂತೆ ಆಗಾಗ್ಯೆ ಅವುಗಳಿಗೆ ತೊಂದರೆ ಕೊಡಬೇಕು ಆಗ ಇಲ್ಲಿ ಬರುವದಿಲ್ಲ ಎಂದು, ಈಗ ಹಗಲು ಸಮಯಲ್ಲು ಕೆಲವೊಮ್ಮೆ ಕಾಂಪೋಡಿನಲ್ಲಿ ನಿಂತು ಮನೆಯ ಮುಂದು ನಿರ್ಭಯವಾಗಿ ಸಾಗುವ ನಾಯಿಗಳನ್ನು ಕಲ್ಲಿನಿಂದ ಎಸೆದು ಓಡಿಸುತ್ತಿದ್ದೆ. ಹಾಗಾಗಿ ಅವುಗಳ ಚಲನವಲನ ಸಾಕಷ್ಟು ಕಮ್ಮಿಯಾಗಿತ್ತು. ಸಾಮಾನ್ಯವಾಗಿ ಎಲ್ಲ ನಾಯಿಗಳು ನಮ್ಮ ಮನೆಯ ಮುಂದೆ ಸಾಗುವಾಗ ಸ್ವಲ್ಪ ಎಚ್ಚರ ವಹಿಸುತ್ತಿದ್ದವು. ಹೊರಗೆ ಕಾಪೊಂಡಿನಲ್ಲಿ ನಾನು ನಿಂತಿರುವುದು ದೂರದಿಂದ ಕಾಣಿಸಿದರೆ ಸಾಕು ಅವು ತಮ್ಮ ಗಮನವನ್ನು ಬದಲಿಸಿಬಿಡುತ್ತಿದ್ದವು. ಒಂದು ವೇಳೆ ಅಲ್ಲಿ ಹೋಗಲೇ ಬೇಕಾದ ಅವಶ್ಯಕತೆ ಅವುಗಳಿಗೆ ಬಂದಲ್ಲಿ, ರಸ್ತೆಯ ಮತ್ತೊಂದು ತುದಿಗೆ ಹೋಗಿ ಎಚ್ಚರಿಕೆಯಿಂದ ನಮ್ಮ ಮನೆ ಕಡೆ ನೋಡುತ್ತ ಹೋಗುತ್ತಿದ್ದವು. 

ಆದರೆ ನಾನು ಈ ಅಭ್ಯಾಸದಿಂದ ಕೆಲವೊಮ್ಮೆ ತೊಂದರೆಗೆ ಸಿಕ್ಕಿದ್ದೆ, ಸಂಜೆ ಹೀಗೆ ಮನೆಯ ಮುಂದೆ ನಿಂತಿರುವಾಗ ನಾಯಿಯೊಂದು ಹೀಗೆ ಚಲಿಸುತ್ತಿತ್ತು, ನಾನು ಕಲ್ಲೊಂದನ್ನು ತೆಗೆದು ಸರಿಯಾಗಿ ಗುರಿಯಿಟ್ಟು ಬೀಸಿದೆ ಆದರೆ ಆ ಪಾಪಿ ನಾಯಿ ನನಗಿಂತ ಚುರುಕಾಗಿದ್ದು, ಠಣ್ಣಗೆ ಎಗರಿ ಆ ಕಲ್ಲಿನಿಂದ ತಪ್ಪಿಸಿಕೊಂಡು ಓಡಿತು, ಆದರೆ, ರಾಮ ಬಿಟ್ಟ ಬಾಣ ಒಮ್ಮೆಯೂ ವ್ಯರ್ಥವಾಗಲಿಲ್ಲವಂತೆ ಹಾಗೆ ನಾನು ಎಸೆದ ಕಲ್ಲು ನಾಯಿಯನ್ನು ತಲುಪಲು ವಿಫಲವಾದರು ಸಹಿತ, ಎದುರು ಮನೆಯ ಗೇಟಿಗೆ ಅಪ್ಪಳಿಸಿ ರಸ್ತೆಯಲ್ಲಿಯೆಲ್ಲ ಬಯಂಕರ ಶಬ್ದವನ್ನು ಸೃಷ್ಟಿಸಿತು. 
ನನಗೆ ಭಯವಾಯಿತು, 
ಅಲ್ಲ ಈ  ವಯಸ್ಸಿನಲ್ಲಿ ಎದುರು ಮನೆಯ ಗೇಟಿಗೆ ಕಲ್ಲು ಎಸೆದು ಅವರಿಂದ ಬೈಸಿಕೊಳ್ಳುವದೆಂದರೆ ಎಂತಹ ಅವಮಾನ, ತಕ್ಷಣ ಬಾಗಿಲು ಹಾಕಿ ಒಳಗೆ ಬಂದುಬಿಟ್ಟೆ. ಎದುರು ಮನೆಯಾತ ಹೊರಗೆ ಬಂದವನು ಯಾರನ್ನು ಕಾಣದೆ. ಕಲ್ಲೆ ಎಸೆದಿದ್ದು ನಾನು ಇರಬಹುದೆಂಬ ಕಲ್ಪನೆಯಲ್ಲಿ ನಮ್ಮ ಮನೆಯತ್ತ ನೋಡುತ್ತ ತನ್ನೊಳಗೆ ತಾನು ಗೊಣಗುತ್ತ ಒಳಹೋದದ್ದು ಕಿಟಕಿಯಿಂದ ಕಾಣಿಸಿತು, ಅಂದು ಪೂರ್ತಿ ನಾನು ನಾಯಿಗಳ  ಈ  ’ನಾಕಾಬಂದಿ’ ಕಾರ್ಯಕ್ರಮವನ್ನು  ಸ್ಥಗಿತಗೊಳಿಸಿ ಒಳಗೆ ಉಳಿದೆ. 
ನಂತರ ನನ್ನ ನಾಯಿಗಳನ್ನು ಹೆದರಿಸುವಾಗ ಕಲ್ಲು ಎಸೆಯುವಾಗ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಯಿತು. ನಾಯಿ ಕಂಡ ತಕ್ಷಣ ಬೇಕಾಬಿಟ್ಟಿ ಕಲ್ಲು ಎಸೆಯುವಂತಿರಲಿಲ್ಲ, ನಮ್ಮ ಮನೆ ಎದುರಿಗೆ ಎರಡು ಮನೆಗಳ ನಡುವೆ ಒಂದು ಖಾಲಿ ಸೈಟ್ ಇತ್ತು. ನಾಯಿ ಒಂದು ಮನೆಯನ್ನು ದಾಟಿ ಮುಂದೆ ಬಂದಾಗ, ನಾನು , ನಾಯಿ ಹಾಗು ಖಾಲಿ ಸೈಟು ಒಂದೇ ರೇಖೆಯಲ್ಲಿರುವಾಗ (ಗ್ರಹಕೂಟದಂತೆ ಅಂದುಕೊಳ್ಳಿ!  ) ನಾಯಿಯ ಮೇಲೆ ಸರ್ವ ಬಲವನ್ನು ಪ್ರಯೋಗಿಸಿ ಕಲ್ಲು ಎಸೆಯುತ್ತಿದ್ದೆ, ಆಗ ಒಂದು ವೇಳೆ ನನ್ನ ಗುರಿ ತಪ್ಪಿದರು ಸಹ ಕಲ್ಲು ಯಾರದೋ ಮನೆಯೊಳಗೆ ಹೋಗದೆ, ಖಾಲಿ ಸೈಟಿನ ದಿಕ್ಕಿನಲ್ಲಿ ಹೋಗಿ, ಪೊದೆಗಳ ನಡುವೆ ಮರೆಯಾಗುತ್ತಿತ್ತು. 

ಅಲ್ಲದೆ ನಾಯಿಗಳು ರಸ್ತೆಯಲ್ಲಿ ನಡೆಯುತ್ತಿರುವಾಗ ಸಹ ಕಲ್ಲು ಎಸೆದರೆ, ಅದು ಕೆರೆಯ ಮೇಲೆ ನಾವು ಎಸೆಯುತ್ತಿದ್ದ ಬಿಲ್ಲೆಗಳಂತೆ ನೆಲದ ಮೇಲೆ ಅಲೆಗಳ ರೀತಿ ಉರುಳುತ್ತ ಹೋಗಿ ಯಾವುದೋ ನಿಂತಿರುವ ಕಾರಿಗೆ, ಅಥವ ಚಲಿಸಿತ್ತಿರುವ ಬೈಕಿಗೆ ತಗಲುವ ಸಂಭವನೀಯತೆ ಇತ್ತು , ಆಗೆಲ್ಲ ನಾನು ಕಲ್ಲಿನ ವೇಗವನ್ನು ನಾಯಿಗೆ ತಗಲುವ ಮಟ್ಟಿಗೆ ಮಾತ್ರ ಇರುವಂತೆ ನಿಯಂತ್ರಿಸಬೇಕಿತ್ತು. ಚಿಕ್ಕ ವಯಸಿನ ಅನುಭವ ನನಗೆ ಸಾಕಷ್ಟು ಸಹಾಯ ಮಾಡುತ್ತಿತ್ತು. 
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಾನು ನಾಯಿಗೆ ಕಲ್ಲು ಎಸೆಯುವ ಪರಿಣಿತಿಯನ್ನು  ಮಲ್ಯರಂತವರು ನೋಡಿದ್ದರೆ ಖಂಡಿತಕ್ಕೂ ನನ್ನನ್ನು ಅವರ IPL  ಕ್ರಿಕೇಟ್ ಲೀಗಿಗೆ ಕರ್ನಾಟಕದ ಪರ ಎಸೆಯಲು ಚೆಂಡನ್ನು ನನ್ನ ಕೈಗೆ ಕೊಡುತ್ತಿದ್ದರು ಎಂದು ನನಗೆ ಬಹಳ ಸಾರಿ ಅನ್ನಿಸಿದಿದ್ದಿದೆ. 

ಹೊರದೇಶದಲ್ಲಿ ನಾಯಿ ಬೊಗಳವುದನ್ನು ತಪ್ಪಿಸಲು ಅವುಗಳ ದ್ವನಿ ಪೆಟ್ಟಿಗೆಯನ್ನು ನಿಶ್ಕ್ರಿಯಗೊಳಿಸುವರಂತೆ, ಅಲ್ಲದೆ ನಾಯಿಗಳಿಗೊಂದು ವಿಶೇಷ ಕುತ್ತಿಗೆಯ ಪಟ್ಟಿ ಬಂದಿದ್ದು, ಅದನ್ನು ಕಟ್ಟಿದ್ದರೆ ಅವು ಬೊಗಳುವಾಗಲೆಲ್ಲ ಅದಕ್ಕೆ ಸಣ್ಣ ವಿದ್ಯುತ್ ಶಾಕ್ ತಗಲುತ್ತಿದ್ದು ಕ್ರಮೇಣ ಅವು ಬೊಗಳುವುದನ್ನೆ ನಿಲ್ಲಿಸಿಬಿಡುವದಂತೆ.  ಹಾಳು ಮೊಬೈಲ್ ಗಳು ಭಾರತಕ್ಕೆ ಕಾಲಿಡುವ ಬದಲಿಗೆ ಇಂತಹ ಅವಿಷ್ಕಾರಗಳು ಅದೇಕೆ ಬರುತ್ತಿಲ್ಲ ಎಂದು ನನಗೆ ಚಿಂತೆ .! 

ಹೀಗೆ ನಾಯಿಯ ಬಗ್ಗೆ ಬರೆಯಬೇಕಾದ ವಿಷಯ ಇನ್ನು ಸಾಕಷ್ಟು ಇವೆ. 

ಇರಿ, ಇರಿ ಒಂದು ನಿಮಿಶ ಇರಿ, ಹೊರಗೆ ಯಾವುದೋ ನಾಯಿ ಬೊಗಳುವ ಶಬ್ದ ಕೇಳಿ ಬರುತ್ತಿದೆ !  ಹೀಗೆ ಹೊರಗಿ ಹೋಗಿ ಬಂದು ಬಿಡುತ್ತೇನೆ ಒಂದು ನಿಮಿಶ ಕಾಯುತ್ತ ಇರಿ..............


 

 

Rating
No votes yet

Comments

Submitted by nageshamysore Sat, 07/19/2014 - 06:29

ಪಾರ್ಥಾ ಸಾರ್, 'ನಾಯಿ ಪಾಡಿಗೊಳಗಾಗುವ' ಮನುಷ್ಯರ ಹಾಗು 'ನಾಯಿಪಾಡಾಗುವ' ನಾಯಿಗಳ ನಾಯಿ ಪುರಾಣ  ಅರ್ಥಾತ್ 'ಶ್ವಾನಾಯಣ' ಪ್ರಬಂಧ ಚೆನ್ನಾಗಿದೆ :-)

Submitted by ಗಣೇಶ Sun, 07/20/2014 - 21:01

>>ಅದನ್ನು ಮೂಸುತ್ತ ಪೈಪಿನ ತುದಿಗೆ ಅದರ ಮುಖ ಬರುತ್ತಿರುವಾಗ , ಸರಿ ಸುಮಾರು ಪೈಪಿನ ತುದಿ ಅದರ ಕಿವಿಯ ಹತ್ತಿರವಿರುವಾಗ ನಾನು ಒಳಗಿನಿಂದ ಪುನಃ ಪೈಪಿನ ಬಾಯಿಗೆ ಮುಖವಿಟ್ಟು ’ಬೌ’ ಎಂದೆ. :):)
>>ಹೀಗೆ ನಾಯಿಯ ಬಗ್ಗೆ ಬರೆಯಬೇಕಾದ ವಿಷಯ ಇನ್ನು ಸಾಕಷ್ಟು ಇವೆ. ಇರಿ, ಇರಿ ಒಂದು ನಿಮಿಶ ಇರಿ, ಹೊರಗೆ ಯಾವುದೋ ನಾಯಿ ಬೊಗಳುವ ಶಬ್ದ ಕೇಳಿ ಬರುತ್ತಿದೆ...:) :)
‍‍-ಪಾರ್ಥರೆ, ನಿಮ್ಮ ಮತ್ತು ಶ್ವಾನ ಕಾಳಗ ಬಹಳ ಮಜವಾಗಿದೆ. ಮುಂದುವರೆಸಿ.. ಕಲ್ಲು ಬೇಕಿದ್ದರೆ ನಾನು ಗೋಣಿಚೀಲ ತುಂಬಾ ತಂದು ಹಾಕುವೆ. :)

Submitted by kavinagaraj Tue, 07/22/2014 - 11:00

:) ನಾಯಿಗಳ ಸೈಕಾಲಜಿ ಅರ್ಥ ಮಾಡಿಕೊಂಡಿರುವಿರಿ! ಬೀದಿ ನಾಯಿಗಳ ಬಗ್ಗೆ ಹುಷಾರಾಗಿ ಹೇಗಿರಬೇಕೆಂದು ನನಗೂ ಅರ್ಥವಾಗಿದೆ. ಅವುಗಳ ಇರುವನ್ನು ಗಮನಿಸದಂತೆ ನಿಧಾನವಾಗಿ ಹೋದರೆ ಅವು ಏನೂ ಮಾಡುವುದಿಲ್ಲ. ಅವುಗಳನ್ನು ಗಮನಿಸುತ್ತಾ ವೇಗವಾಗಿ ಹೋದರೆ ಅಟ್ಟಿಸಿಕೊಂಡು ಬರುತ್ತವೆ!