ನಾನೂ ಡಾಕ್ಟ್ರಾದೆ

ನಾನೂ ಡಾಕ್ಟ್ರಾದೆ

ಈವತ್ತು ನಾನು ಇಂಜಕ್ಷನ್ ಕೊಡುವ ಸುರುವಿನ ದಿನ.ನಾನೆಷ್ಟು ಒಳ್ಳೆಯವಳು ಎಂದರೆ,ಬೆಳಗ್ಗೆ ಬೇಗನೆ ಎದ್ದು,ಸ್ನಾನ ಮಾಡಿ,ದೇವರಿಗೆ ಕೈಮುಗಿದು,`ಈ ಇಂಜಕ್ಷನ್ ಕೊಡುವುದು ಆದಷ್ಟೂ ತಪ್ಪಿ,ಮಾತ್ರೆಯಲ್ಲೇ ರೋಗ ಗುಣವಾಗುವಂತೆ ಮಾಡಪ್ಪಾ' ಎಂದು ಬೇಡಿದೆ.
ನಂತರ ಸ್ಪಿರಿಟ್,ಸಿರಿಂಜ್,ಹತ್ತಿ,ಔಷಧಿ ಎಲ್ಲಾ ರೆಡಿಮಾಡಿಟ್ಟೆ.ತೊಡೆಯ ಬಟ್ಟೆ ಸರಿಸಿ,ಹತ್ತಿಯಿಂದ ಒರಸಿ,ಸೂಜಿಯನ್ನು ತೊಡೆಯ ಬಳಿ ತೆಗೆದುಕೊಂಡು ಹೋದೆನಷ್ಟೆ,ಕರೆಂಟ್ ಹೊಡೆದ ಹಾಗೆ ಕೈ ವಿಪರೀತ ನಡುಗಲು ಸುರುವಾಯಿತು.ಮೈಯೆಲ್ಲಾ ಬೆವರಿ ಹಣೆಯಿಂದ ಬೆವರು ತೊಟ್ಟಿಕ್ಕಲು ಸುರುವಾಯಿತು.Fan ಹಾಕುತ್ತೇನೆಂದು ನೋಡಿದರೆ ಅದು ತಿರುಗುತ್ತಲೇ ಇದೆ.ಸೆಕೆಯೇ ಇಲ್ಲದ ಸಮಯದಲ್ಲಿ fan ನ ಅಡಿಯಲ್ಲಿದ್ದೂ, ಬರೀ ಒಂದು ಸೂಜಿಗೆ ನಾನು ಇಷ್ಟು ಬೆವರಿ ನಡುಗುತ್ತಿರಬೇಕಾದರೆ,ಆ ಭೀಮ, ಅವನ ಗಧೆ,ಅವನ ಗರ್ಜನೆಗೆ ದುರ್ಯೋಧನ`ನೀರೊಳಗಿರ್ದುಂ ಬೆಮರ್ತಮ್'ಅನ್ನೋದರಲ್ಲಿ ಅತಿಶಯವೇನಿಲ್ಲ ..
ಸೂಜಿ ಚರ್ಮದ ಮೇಲಿಟ್ಟು ಎಷ್ಟು ಒತ್ತಿದರೂ ಒಳಗೇ ಹೋಗುತ್ತಿಲ್ಲಾ! INsulinನಲ್ಲಿ ಎರಡೆರಡು IN ಇದೆ.ಇಲ್ಲಿ ನೋಡಿದರೆ ಒಂದು ಸಲಕ್ಕೂ ಔಷಧಿ ಇನ್ನಾಗುತ್ತಿಲ್ಲಾ! ದುಃಖದಿಂದ ಮಂಜಾದ ಕಣ್ಣನ್ನು ಒರಸಿಕೊಂಡು ನೋಡಿದರೆ ಸುತ್ತಲೂ ಮನೆಮಂದಿಯೆಲ್ಲಾ ಮುಸುಮುಸು ನಗುತ್ತಾ ನಿಂತಿದ್ದಾರೆ.ಬೇಸರ,ಸಿಟ್ಟು,ದುಃಖ ಎಲ್ಲಾ ಒಟ್ಟೊಟ್ಟಿಗೆ ಬಂತು.ಕೆಳಗೆ ನೋಡಿದರೆ ಸೂಜಿ ಚರ್ಮದೊಳಗೆ ಹೋಗಿದೆ.ಅಳುತ್ತಾನಗುತ್ತಾ ಇಂಜಕ್ಷನ್ ಕೊಟ್ಟುಕೊಂಡೆ.ಓದಿಲ್ಲದಿದ್ದರೂ ಮಕ್ಕಳ ಬಾಯಲ್ಲಿ ಡಾಕ್ಟ್ರಾದೆ!

Rating
No votes yet