ನಾಪತ್ತೆಯಾದವರ ಪತ್ತೆಗೆ ಅಪ್ಪಿಕೋ ಚಳವಳಿ !
ಬೊಗಳೂರು, ಡಿ.13- ಡ್ರ್ಯಾಗನ್ಗಳಿರುವ ನಾಡಿನಲ್ಲಿ ಅಪ್ಪಿಕೋ ಚಳವಳಿ ನಡೆಯುತ್ತಿದೆ, ಅದು ಭಾರತಕ್ಕೂ ವ್ಯಾಪಿಸುವ ಎಲ್ಲ ಸಾಧ್ಯತೆಗಳಿಗೆ ಪೊಲೀಸರು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಧಾವಿಸಿದಾಗ ಪತ್ತೆಯಾದದ್ದು ಈ ಸುದ್ದಿ. (bogaleragale.blogspot.com)
ಅಲ್ಲಿ ಸಿನಿಮಾ ಮಂದಿರಗಳಲ್ಲಿ ಡಿಸ್ಕೋಉಂಟು ನೋಡಲು ಹೋದವರಿಗೆ ಟಿಕೆಟ್ನಲ್ಲಿ ಡಿಸ್ಕೌಂಟ್ ಕೊಡಲಾಗುತ್ತದೆ. ಆದರೆ ಅದಕ್ಕೆ ಅಪ್ಪಿಕೋ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದು ಅಲ್ಲಿನವರ ಶರತ್ತು.
ಚಲನಚಿತ್ರವು ಪ್ರೇಮ ಕಥಾನಕ. ಅರುವತ್ತು ವರ್ಷಗಳ ಕಾಲ ಬೇರ್ಪಟ್ಟಿದ್ದ ಪ್ರೇಮಿಗಳು ಒಂದಾಗುವ ಚಿತ್ರ ವೀಕ್ಷಿಸಿದಾಗ ಅವರಿಗೆ ಎಷ್ಟು ವಯಸ್ಸಾಗಿದೆ ಎಂಬುದು ತಿಳಿದುಬರುವ ಕಾರಣ ಚಿತ್ರಕ್ಕೆ ವೀಕ್ಷಕರನ್ನು ಸೆಳೆಯುವ ಈ ತಂತ್ರ ಅನುಸರಿಸಲಾಗಿದೆ ಎಂದು ವಿಫಲಪ್ರೇಮಿಯೊಬ್ಬರು ತಿಳಿಸಿದ್ದಾರೆ.
60-70 ವರ್ಷದವರ ಪ್ರೇಮ ಕಥಾನಕ ಎಂದರೆ ಇಂದಿನ ಹೈಟೆಕ್ ಯುವ ಜನಾಂಗ ಮೂಗು ಮುರಿಯುತ್ತದೆ. ಈ ಕಾರಣಕ್ಕೆ ಯುವ ಪ್ರೇಮಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಈ ಕ್ರಮಕೈಗೊಂಡಿರುವುದು ಸಾಬೀತಾಗಿತ್ತು.
ಈ ಮಧ್ಯೆ, ಕಾಲೇಜಿಗೆ ತೆರಳಿ ದಿಢೀರ್ ನಾಪತ್ತೆಯಾಗುತ್ತಿದ್ದ ತಮ್ಮ ಹದಿಹರೆಯದ ಮಕ್ಕಳೆಲ್ಲರೂ ಈ ಚಿತ್ರಮಂದಿರದ ಸುತ್ತಮುತ್ತಲೇ ಪತ್ತೆಯಾಗಿರುವ ಕಾರಣ ಹರ್ಷಚಿತ್ತರಾದ ಹೆತ್ತವರು ಚಿತ್ರಮಂದಿರದ ಮಾಲಿಕರಿಗೆ ಮತ್ತೆ ಮತ್ತೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಸಂತುಷ್ಟವಾದ ಭಾರತೀಯ ಪೊಲೀಸರ ದಂಡು, ಹೆಚ್ಚಿನ ಅಧ್ಯಯನಕ್ಕಾಗಿ ಚೀನಾಕ್ಕೆ ಪ್ರವಾಸ ತೆರಳಿದೆ. ಇತ್ತೀಚೆಗಿನ ದಿನಗಳಲ್ಲಿ ಹದಿಹರೆಯದ ಹುಡುಗ-ಹುಡುಗಿಯರು ಕಾಲೇಜಿಗೆಂದು ತೆರಳಿ ನಾಪತ್ತೆಯಾಗುತ್ತಿರುವ ಪ್ರಸಂಗ ಹೆಚ್ಚಾಗುತ್ತಿದೆ. ಇಂಥ ಕೇಸುಗಳು ಪೋಲಿ ಠಾಣೆಗಳಲ್ಲಿ ರಾಶಿ ರಾಶಿ ಬೀಳುತ್ತಿದ್ದು, ಒಂದು ಪರಿಹಾರ ಕಾಣುವ ಸಂದರ್ಭ ಇನ್ನೂ ನಾಲ್ಕು ಕೇಸುಗಳು ಬಂದು ಬಿದ್ದಿರುತ್ತವೆ.
ಹಾಗಾಗಿ ತಲೆ ಕೆಡಿಸಿಕೊಂಡ ಪೊಲೀಸರು, ಇದೇ ತಂತ್ರಜ್ಞಾನವನ್ನು ಭಾರತದಲ್ಲೂ ಅಳವಡಿಸಲು ಚಿಂತನೆ ನಡೆಸುತ್ತಿದ್ದಾರೆ. ಹದಿಹರೆಯದವರು ಎಲ್ಲೇ ನಾಪತ್ತೆಯಾಗಿರಲಿ, ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ ಎಂಬ ಮಾತಿಗೆ ತಕ್ಕಂತೆ, ಸಿನಿಮಾ ಮಂದಿರಕ್ಕೆ ಬಂದೇ ಬರುತ್ತಾರೆ ಎಂದು ಗ್ಯಾರಂಟಿ ಆಗಿರುವುದರಿಂದ ತಮ್ಮ ಪತ್ತೆ ಕಾರ್ಯ ಫಲಿಸುತ್ತದೆ ಎಂಬುದು ಪೋಲಿಗಳಿಗೆ ಬಲವಾದ ವಿಶ್ವಾಸ.