ನಾಯಿಯನ್ನು ಹಿಂಬಾಲಿಸಿದ ಕತೆ
ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರತಿ ಸೆಮಿಸ್ಟರಿನಲ್ಲಿ ಒಮ್ಮೆ ಒಂದು ಪ್ರವಾಸ ಹೋಗುವುದು ವಾಡಿಕೆಯಾಗಿತ್ತು. ಆದರೆ ೨-೩ ದಿನ ಪ್ರವಾಸ ಹೋದರೆ ಪ್ರಯಾಣ, ಆಹಾರ, ಉಳಿದುಕೊಳ್ಳಲು ಆಗುವ ಖರ್ಚೆಷ್ಟು! ಆಗಲೇ ಹೊಳೆದದ್ದು ಟ್ರೆಕಿಂಗ್ ಜಾಗಗಳನ್ನು ನೋಡುವ ಒಂದು ಅಗ್ಗವಾದ ವಿಧಾನ ಎಂದು. 7ನೇ ಸೆಮಿಸ್ಟರ್ ನಲ್ಲಿರಬೇಕಾದರೆ (೨೦೦೫ ಸೆಪ್ಟೆಂಬರ್) ನಾವು ಹೊರಟಿದ್ದು ಮುಳ್ಳಯ್ಯನ ಗಿರಿ, ಬಾಬಾ ಬುಡನ್ ಗಿರಿ ನೋಡಲು.
ಚಿಕ್ಕಮಗಳೂರಿಗೆ ಹೋಗಿ ಅಲ್ಲಿಂದ ೧೦ಕಿ.ಮೀ. ದೂರದಲ್ಲಿರುವ ಮುಳ್ಳಯ್ಯನ ಗಿರಿ ಬಟ್ಟದ ಕೆಳಗಿನವರೆಗೆ (ಊರಿನ ಹೆಸರು ನೆನಪಿಲ್ಲ. ಕೈಕಂಭ ಎಂತಲೋ ಏನೋ ಇತ್ತು) ಬಸ್ಸಿನಲ್ಲಿ ಹೋಗಿ ಅಲ್ಲಿಂದ ಸುಮಾರು ೮ ಕಿ.ಮೀ. ನಡೆದು ಮುಳ್ಳಯ್ಯನ ಗಿರಿಗೆ ಹೋದೆವು. ದಾರಿಯಲ್ಲಿ ಒಂದೇ ಸಮನೆ ಮಳೆ, ಮಂಜು. ೫ ಅಡಿಗಿಂತ ಮುಂದೆ ಏನೂ ಕಾಣುತ್ತಿರಲಿಲ್ಲ. ಜೊತೆಗೆ ಜೋರಾಗಿ ಗಾಳಿ ಬೇರೆ. ಹಾಗೂ ಹೀಗೂ ಮುಳ್ಳಯ್ಯನ ಗಿರಿ ತಲುಪಿದೆವು. ಮುಳ್ಳಯ್ಯನ ಗಿರಿಯಲ್ಲಿ ಒಂದು ಸುಂದರ ದೇವಾಲಯ ಇದೆ. ದೇವರ ದರ್ಶನ ಮಾಡಿ ಅರ್ಚಕರ ಮನೆಯಲ್ಲೇ ಕಾಫಿ ಕುಡಿದೆವು. ತೆಗೆದುಕೊಂಡು ಹೋಗಿದ್ದ ಬ್ರೆಡ್ ತಿಂದು ಜೊತೆಗೇ ಮನೆಯ ಬಳಿ ಇದ್ದ ನಾಯಿಗೆ ಸ್ವಲ್ಪ ಬ್ರೆಡ್ ಹಾಕಿದೆವು. ನಾಯಿ ಬಹಳ ಖುಶಿಯಾಗಿ ಬಾಲ ಆಡಿಸುತ್ತಾ ಹಾಕಿದ್ದ ಬ್ರೆಡ್ಡನ್ನು ತಿಂದಿತು.
ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಾವು ಬಾಬಾ ಬುಡನ್ ಗಿರಿಯ ಕಡೆ ಹೊರಟೆವು. ಅರ್ಚಕರು ದೇವಸ್ಥಾನದ ಎಡಬದಿಯಲ್ಲಿ ಬಾಬಾ ಬುಡನ್ ಗಿರಿಗೆ ಕಾಲುದಾರಿ ಇದೆ. ಅದರಲ್ಲೇ ಹೋಗಿ ಎಂದರು. ಸರಿ ಎಂದು ಹೊರಟರೆ, ಮನೆಯ ಬಳಿಯಿದ್ದ ನಾಯಿ ನಮ್ಮ ಹಿಂದೆಯೇ ಬರತೊಡಗಿತು. ಮುಂದೆ ಹೋದರೆ ಸರಿಯಾದ ದಾರಿಯೇ ಇಲ್ಲ. ಹಿಂದೊಮ್ಮೆ ಕಾಲುದಾರಿ ಇದ್ದ ಕುರುಹು ಇತ್ತಷ್ಟೇ. ಆಮೇಲೆ ತಿಳಿದದ್ದು ಆ ದಾರಿಯಲ್ಲಿ ಯಾರೂ ಓಡಾಡುವುದೇ ಇಲ್ಲ, ಹಾಗಾಗಿ ದಾರಿಯಲ್ಲಿ ಹುಲ್ಲು ಬೆಳೆದು ದಾರಿ ಮುಚ್ಚಿಹೋಗಿದೆ ಎಂದು.
ದಾರಿಯಲ್ಲಿ ವಿಪರೀತ ಮಂಜು. ಮೋಡಗಳ ಒಳಗೇ ಸಾಗುತ್ತಿದ್ದೆವು ಅನಿಸುತ್ತೆ. ಮುಂದಿನ ಬೆಟ್ಟಗಳೂ ಕಾಣುತ್ತಿಲ್ಲ. ಹಿಂದೆ ಮುಳ್ಳಯ್ಯನ ಗಿರಿಯೂ ಕಾಣುತ್ತಿಲ್ಲ. ಇಷ್ಟೆಲ್ಲದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಅಲ್ಪ ಸ್ವಲ್ಪ ಕಾಣುತ್ತಿದ್ದ ದಾರಿ ಕವಲೊಡೆಯಿತು. ಎಡಗಡೆ ಒಂದು ದಾರಿ, ಬಲಗಡೆ ಒಂದು ದಾರಿ. ಆಗ ನನ್ನ ಸ್ನೇಹಿತ ಎನೋ ಕಂಡುಹಿಡಿದಂತೆ ಹೇಳಿದ "ಮಗಾ, ನಾವು ಕಳೆದುಹೋಗಿದೀವಿ". ಯಾವ ಕಡೆ ಹೋಗುವುದೆಂದು ತೋಚದೆ ಕೊನೆಗೆ ಬಲಗಡೆ ದಾರಿಯಲ್ಲಿ ಹೊರಟೆವು. ಆದರೆ ಅಷ್ಟು ಹೊತ್ತು ನಮ್ಮ ಜೊತೆ ಬರುತ್ತಿದ್ದ ನಾಯಿ ಅಲ್ಲೇ ನಿಂತುಬಿಟ್ಟಿತು. ನಾಯಿಯನ್ನು ಅಲ್ಲೇ ಬಿಟ್ಟು ಅಗಾಧ ಮಂಜಿನಲ್ಲಿ ಸ್ವಲ್ಪ ಮುಂದೆ ಹೋಗಿ ನೋಡಿದರೆ, ದೊಡ್ಡ ಪ್ರಪಾತ. ಇನ್ನೊಂದು ಹೆಜ್ಜೆ ಕಾಲಿಟ್ಟಿದ್ದರೆ, ಡೈರೆಕ್ಟಾಗಿ ಭಗವಂತನ ಪಾದ.
ಈಗ ಏನು ಮಾಡುವುದು? ಬಂದ ದಾರಿಯಲ್ಲೇ ಹಿಂದೆ ಹೋಗೋಣವೇ? ಇನ್ನೊಂದು ದಾರಿಯಲ್ಲಿ ಮುಂದೆ ಹೋದರೆ ಮತ್ತೆಲ್ಲೋ ಕಳೆದು ಹೋದರೆ? ಎಂದು ಯೋಚಿಸುತ್ತಾ ಹಿಂದೆ ಬಂದರೆ ಅಲ್ಲೇ ಇದ್ದ ನಾಯಿ ಎಡಗಡೆ ದಾರಿಯಲ್ಲಿ ಸ್ವಲ್ಪ ಮುಂದೆ ಹೋಗಿ ನಿಂತುಕೊಂಡಿತು. ಅದು ನಿಂತುಕೊಂಡ ಭಂಗಿ "ನನಗೆ ದಾರಿ ಗೊತ್ತಿದೆ. Follow me" ಎಂಬಂತಿತ್ತು. ಸರಿ ಆ ದಾರಿಯಲ್ಲೂ ಸ್ವಲ್ಪ ಮುಂದೆ ಹೋಗಿ ನೋಡೇಬಿಡೋಣ ಎಂದು ಹೊರಟರೆ ನಾವು ಮುಂದೆ ಹೋದಂತೆಲ್ಲಾ ನಮ್ಮ ನಾಯಿ ನಮಗಿಂತ ಸ್ವಲ್ಪ ಮುಂದೆ ಹೋಗಿ ನಿಲ್ಲುತ್ತಿತ್ತು. ಆಗ ನಾವು ನಿರ್ಧರಿಸಿಬಿಟ್ಟೆವು. ನಾಯಿಗೆ ದಾರಿ ಸರಿಯಾಗಿ ಗೊತ್ತಿದೆ. ನಾವು ಅದನ್ನು ಹಿಂಬಾಲಿಸಬೇಕಷ್ಟೇ ಎಂದು. ನಂತರ ಒಂದೂವರೆ ಗಂಟೆ ಎಲ್ಲೂ ನಿಲ್ಲದೆ ನಾಯಿಯ ಹಿಂದೆ ಓಡಿದೆವು. ನಾವು ಸ್ವಲ್ಪ ನಿಧಾನ ಮಾಡಿದರೆ, ನಾಯಿ ಮುಂದೆ ಹೋಗಿ ಎತ್ತರದ ಸ್ಥಳದಲ್ಲಿ ನಿಂತು ಕಾಯುತ್ತಿತ್ತು. ಇನ್ನೂ ನಿಧಾನ ಮಾಡಿದರೆ ಹಿಂದೆ ಬಂದು ಬೊಗಳುತ್ತಿತ್ತು. ಹೀಗೇ ತುಂಬಾ ಹೊತ್ತು ಓಡಿ ಓಡಿ ಸುಸ್ತಾಗಿ ಏದುಸಿರು ಬಿಡುತ್ತಾ ನಿಂತಿದ್ದಾಗ ದೂರದಲ್ಲೆಲ್ಲೋ ವಾಹನದ ಹಾರ್ನ್ ಶಬ್ದ ಕೇಳಿಸಿತು. ಆಮೇಲೆ ಮತ್ತೆ ಹತ್ತು ನಿಮಿಷ ನಾಯಿಯ ಹಿಂದೆ ಓಡಿದ ಮೇಲೆ ಕಾಣಿಸಿದ ದೃಶ್ಯ ನೋಡಿ ಎಲ್ಲರಿಗೂ ಖುಷಿಯೋ ಖುಷಿ. ನಮ್ಮ ಮುಂದೆ ಇದ್ದದ್ದು ಬಾಬಾ ಬುಡನ್ ಗಿರಿ - ೬ ಕಿ. ಮೀ. ಎಂಬ ಫಲಕ ಮತ್ತು ಡಾಂಬರು ರಸ್ತೆ.
ನಾಯಿಯಂತೂ "ನನ್ನ ಕೆಲಸ ಮುಗೀತು ನೀವೇನಾದ್ರೂ ಮಾಡ್ಕೊಳಿ" ಅಂತ ಅಲ್ಲೇ ಮಲಗಿಬಿಟ್ಟಿತು. ಅದರ ಬೆನ್ನು ಸವರಿ ಅದಕ್ಕೆ ಸ್ವಲ್ಪ ಬ್ರೆಡ್ ಹಾಕಿ, ನಾವೂ ಸ್ವಲ್ಪ ಹೊತ್ತು ವಿರಮಿಸಿದೆವು. ಆಮೇಲೆ ಬಾಬಾ ಬುಡನ್ ಗಿರಿ ಹೋಗುವುದೇನೂ ಕಷ್ಟ ಆಗಲಿಲ್ಲ. ನಾಯಿಯೂ ನಮ್ಮ ಜೊತೆಗೇ ಬಂದು ನಾವು ಬಾಬಾ ಬುಡನ್ ಗಿರಿಯಲ್ಲಿದ್ದಷ್ಟು ಹೊತ್ತು ನಮ್ಮ ಬಳಿಯೇ ಇತ್ತು. ರಾತ್ರಿ ಬಾಬಾ ಬುಡನ್ ಗಿರಿಯಲ್ಲಿದ್ದು ಮುಂದೆ ಹತ್ತಿರದ ಜಲಪಾತ ನೋಡಿ, ಬಾಬಾ ಪೀಠ, ದತ್ತ ಪೀಠ ಎಲ್ಲ ನೋಡಿ ವಾಪಸ್ ಬೆಂಗಳೂರಿಗೆ ಬಸ್ ನಲ್ಲಿ ಹೊರಟಾಗ ಎಲ್ಲರ ಕಣ್ಣಲ್ಲೂ ನೀರು. ನಮ್ಮ ಬಸ್ಸು ಕಣ್ಮರೆಯಾಗುವವರೆಗೂ ನಾಯಿ ಬಸ್ಸಿನತ್ತಲೇ ನೋಡುತ್ತಿತ್ತು.
ಮನೆಗೆ ಬಂದು ಅಮ್ಮನಿಗೆ ನಡೆದ ಕಥೆಯನ್ನು ಹೇಳಿದರೆ "ದತ್ತಾತ್ರೇಯನೇ ನಾಯಿ ರೂಪದಲ್ಲಿ ಬಂದು ನಿಮ್ಮನ್ನು ಕಾಯ್ದಿರಬೇಕು" ಎಂದರು. ನಾನು "ಇರಬಹುದು" ಎಂದಷ್ಟೇ ಹೇಳಿ ಇನ್ನು ಸ್ವಲ್ಪ ಹೊತ್ತು ಅಲ್ಲಿದ್ದರೆ ನಮ್ಮಮ್ಮನಿಗೆ ನಾವು ಪಟ್ಟ ಪಾಡು ನೆನಪಿಗೆ ಬಂದು ಬೈಸಿಕೊಳ್ಳಬೇಕಾಗುತ್ತದೆ ಎಂದು ಅಲ್ಲಿಂದ ಮಾಯವಾದೆ.
Comments
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
In reply to ಉ: ನಾಯಿಯನ್ನು ಹಿಂಬಾಲಿಸಿದ ಕತೆ by sumanajois
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
In reply to ಉ: ನಾಯಿಯನ್ನು ಹಿಂಬಾಲಿಸಿದ ಕತೆ by girish.rajanal
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
In reply to ಉ: ನಾಯಿಯನ್ನು ಹಿಂಬಾಲಿಸಿದ ಕತೆ by Jayalaxmi.Patil
ಉ: ನಾಯಿಯನ್ನು ಹಿಂಬಾಲಿಸಿದ ಕತೆ
ಉ: ನಾಯಿಯನ್ನು ಹಿಂಬಾಲಿಸಿದ ಕತೆ
In reply to ಉ: ನಾಯಿಯನ್ನು ಹಿಂಬಾಲಿಸಿದ ಕತೆ by kadakolla05
ಉ: ನಾಯಿಯನ್ನು ಹಿಂಬಾಲಿಸಿದ ಕತೆ