ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?
ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?
ಕಳೆದ ವಾರದ ನನ್ನ 'ವಾರದ ಒಳನೋಟ' ಅಂಕಣದ ಬರಹ ತಲುಪಿದ ದಿನವೇ ಪತ್ರಿಕೆಯ ಗೌ|| ಸಂಪಾದಕರಾದ ಮಿತ್ರ ರವೀಂದ್ರ ರೇಷ್ಮೆಯವರು 'ಇನ್ಫೋಸಿಸ್'ನ ನಾರಾಯಣ ಮೂರ್ತಿಯವರ ಸಾಧನೆಗಳ ಬಗ್ಗೆ ನನ್ನೊಡನೆ ಸುಮಾರು ಅರ್ಧ ತಾಸು ದೂರವಾಣಿಯಲ್ಲಿ ಮಾತನಾಡಿದರು. ಆ ಮಾತುಕತೆಯ ಹೂರಣವೆಲ್ಲ ಅದೇ ಸಂಚಿಕೆಯಲ್ಲಿ ಪ್ರಕಟವಾಗಿರುವ ಅವರ ಮುಖಪುಟ ಲೇಖನದಲ್ಲಿ ಪ್ರಸ್ತುತಗೊಂಡಿದೆ. ರೇಷ್ಮೆಯವರು ನನ್ನೊಡನೆ ಮಾತನಾಡಿದ್ದು ಆ ಲೇಖನವನ್ನು ಬರೆಯುವ ಮುನ್ನವೋ, ಬರೆದ ನಂತರವೋ ತಿಳಿಯದು. ಆದರೆ ಅವರು ನಾರಾಯಣಮೂರ್ತಿಯವರನ್ನು ಕುರಿತ ತಮ್ಮ ನಿಲುವನ್ನು ಪರಿಶೀಲಿಸಿಕೊಳ್ಳಲು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿದ್ದಲ್ಲಿ, ಅವರಿಗೆ ನಾನುತರ ಕೃತಜ್ಞ. ಏಕೆಂದರೆ, ನಾರಾಯಣ ಮೂರ್ತಿಯವರನ್ನು ಕುರಿತ ನನ್ನ ನಿಲುವನ್ನು ನಾನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳಲು ಅವರು ಈ ಮೂಲಕ ನೆರವಾಗಿದ್ದಾರೆ.
ಈ ದೂರವಾಣಿ ಮಾತುಕತೆಯಲ್ಲಿ, ರಾಷ್ಟ್ರಗೀತೆ ಗಾಯನಕ್ಕೆ ಸಂಬಂಧಿಸಿದಂತೆ ನಾರಾಯಣ ಮೂರ್ತಿಯವರು ನೀಡಿದ ಹೇಳಿಕೆ ಹುಟ್ಟು ಹಾಕಿರುವ ಗದ್ದಲದ ವೈಪರೀತ್ಯಗಳ ಬಗ್ಗೆ ನಮ್ಮಲ್ಲಿ ಸಹಮತ ವ್ಯಕ್ತವಾಯಿತು. ಅಂದರೆ, ನಾರಾಯಣ ಮೂರ್ತಿ ಮಾಡಿರುವುದು ಅಕ್ಷಮ್ಯ ಅಪರಾಧವೇನೂ ಅಲ್ಲ; ಒಮ್ಮೆ ಅವರು ಕ್ಷಮೆ ಕೋರಿದೊಡನೆ ಆ ಪ್ರಕರಣ ಮುಕ್ತಾಯವಾಗಬೇಕು. ಆದರೆ ಅದೇ ಸಮಯದಲ್ಲಿ, ಅವರಿಗೆ ಇಂತಹ ಹೇಳಿಕೆಗಳನ್ನು ಪದೇ ಪದೇ ನೀಡುವ (ಉದಾ: ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಲು ಆಗ್ರಹ, ಮೀಸಲಾತಿಗೆ ವಿರೋಧ, ಅಧ್ಯಕ್ಷ ಪದ್ಧತಿಯ ರಾಷ್ಟ್ರಾಡಳಿತದ ಸಲಹೆ ಇತ್ಯಾದಿ) ಧೈರ್ಯದ ಮೂಲ ಹಾಗೂ ಅವು ಹುಟ್ಟಿಸುವ ಪ್ರತಿರೋಧದಿಂದ ಅವರನ್ನು ರಕ್ಷಿಸುವ ಶಕ್ತಿಗಳ ಹಿಂದಿರುವ ರಾಜಕಾರಣದ ಬಗ್ಗೆ ನನ್ನಂತಹವರ ಕುತೂಹಲ ಇದ್ದೇ ಇದೆ. ನಾರಾಯಣ ಮೂರ್ತಿಯವರು ಇಂದು ಭಾರತ ಕಂಡ ಅಪರೂಪದ ಲೌಕಿಕ ಯಶಸ್ಸಿನ ಸಂಕೇತವೆಂದು ರಾಷ್ಟ್ರಾದ್ಯಂತ ಪ್ರಸ್ತುತಪಡಿಸಲ್ಪಡುತ್ತಿದ್ದಾರೆ. ಹಾಗೇ, ಈ ಯಶಸ್ಸಿನ ರುಚಿ ನೋಡಿರುವ ನಮ್ಮ ಸಮಾಜದ ಒಂದು ವರ್ಗದ ಪಾಲಿಗೆ ಅವರು, ಭವಿಷ್ಯದ ರಾಷ್ಟ್ರ ಪ್ರಗತಿಯ ತೋರುಗೈಯಾಗಿ ಪರಿಣಮಿಸಿದ್ದಾರೆ. ಹಾಗಾಗಿ, ಈ ಪರಿಣಾಮಕ್ಕೊಂದು ನೆಲೆ ಕಾಣಿಸುವ ಪ್ರಯತ್ನವಾಗಿಯೇ ಅವರನ್ನು ರಾಷ್ಟ್ರಪತಿ ಮಾಡುವ ಸಲಹೆಗೆ (ಬಹು ಹಿಂದಿನಿಂದಲೇ) ಚಾಲನೆ ನೀಡಲಾಗಿದ್ದು; ಅದನ್ನು ಈಗ ರಾಷ್ಟ್ರಪತಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಚುರುಕುಗೊಳಿಸಲಾಗಿದೆ ಎಂದು ಜನ ಭಾವಿಸತೊಡಗಿದರೆ ಆಶ್ಚರ್ಯವೇನು?
ಭಾರತದ ಯಾವುದೇ ಅರ್ಹ ಪ್ರಜೆ ರಾಷ್ಟ್ರಪತಿಯಾಗುವ ಅವಕಾಶ ಸಂವಿಧಾನದಲ್ಲಿರುವಾಗ, ನಾರಾಯಣ ಮೂರ್ತಿಯವರನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಪ್ರಯತ್ನಕ್ಕೆ ಯಾರದೇ ಅಡ್ಡಿ ಇರಲಾರದು. ಆದರೆ, ರಾಷ್ಟ್ರಪತಿ ಸ್ಥಾನಕ್ಕೆ ಅವರು ಅಭ್ಯರ್ಥಿಯಾಗುವುದೇ ಆದರೆ; ಯಾರ ಮತ್ತು ಯಾವ ಹಿತಾಸಕ್ತಿಗಳ ಪ್ರತಿನಿಧಿಯಾಗಿ ಈ ಸ್ಥಾನಕ್ಕೆ ಅವರು ಅಭ್ಯರ್ಥಿಯಾಗ ಬಯಸಿದ್ದಾರೆ ಎಂಬುದು ಬಹು ದೊಡ್ಡ ಚರ್ಚೆಯ ವಿಷಯವೇ ಆಗುತ್ತದೆ. ರೇಷ್ಮೆಯವರು ತಮ್ಮ ಲೇಖನದಲ್ಲಿ ಅವರ ಸದ್ಗುಣಗಳ ಪಟ್ಟಿ ಮಾಡಿದ್ದಾರೆ. ನಿರ್ದಿಷ್ಟವಾಗಿ ಕರ್ನಾಟಕದ ಉದ್ಯೋಗ, ಶಿಕ್ಷಣ, ಬೆಂಗಳೂರು ನಗರಾಡಳಿತ ಹಾಗೂ ತನ್ನ ಆಂತರಿಕ ಆಡಳಿತ ವಿಷಯಗಳಲ್ಲಿ ಅವರ ಇನ್ಫೋಸಿಸ್ ಮಾಡಿರುವ ಸಾಧನೆಗಳನ್ನು ವಿಷದೀಕರಿಸಿದ್ದಾರೆ. ಈ ಬಿಡಿ ಬಿಡಿ ಸಾಧನೆಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ಯಾರೂ ಅವನ್ನು ಅಲ್ಲಗೆಳೆಯಲಾರರು. ಆದರೆ ಇವುಗಳನ್ನೇ ಆಧಾರವಾಗಿಟ್ಟುಕೊಂಡು, ಇದು ರಾಷ್ಟ್ರಕ್ಕೆ ದೊರಕಿರುವ ಪರ್ಯಾಯ ಅಭಿವೃದ್ಧಿ ಮಾದರಿಯೆಂದು ನಂಬಿಬಿಡುವುದು ಹುಂಬತನ ಮಾತ್ರವಾದೀತು. ಹಾಗಾಗಿಯೇ, ರೇಷ್ಮೆಯವರು ನನ್ನೊಡನೆ ನಡೆಸಿದ ಮಾತುಕತೆಯ ಕೊನೆಗೆ ಪ್ರಸ್ತಾಪ ಮಾಡಿದ, 'ನಾರಾಯಣ ಮೂರ್ತಿಯವರು ಪ್ರತಿನಿಧಿಸುವ ಗುರಿ ಮತ್ತು ಮಾರ್ಗಗಳ ಬಗ್ಗೆ ಅವರೊಂದಿಗೆ ನಮ್ಮಂತಹವರು ಒಂದು ಸಂಭಾಷಣೆಯನ್ನು ಏಕೆ ಆರಂಭಿಸಬಾರದು?' ಎಂಬ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವ ಮುನ್ನ ನಮಗೆ ನಾವೇ ಸ್ಪಷ್ಟಪಡಿಸಿಕೊಳ್ಳಬೇಕಾದ ಹಲವು ಮುಖ್ಯ ವಿಚಾರಗಳಿವೆ ಎಂದು ನಾನು ಭಾವಿಸಿದ್ದೇನೆ. ಈ ಸಂಬಂಧದ ಮುಖ್ಯ ಪ್ರಶ್ನೆಗಳೆಂದರೆ:
1. ನಾರಾಯಣ ಮೂರ್ತಿ ಇಂದು ಪ್ರತಿನಿಧಿಸುತ್ತಿರುವ ತ್ವರಿತ ಹಾಗೂ ವಿಪರೀತ ಪ್ರಮಾಣದ ಆಸ್ತಿ ನಿರ್ಮಾಣದ ತರ್ಕ ಹಾಗೂ ಅದು ನಂಬಿರುವ ಮಾಹಿತಿ ತಂತ್ರಜ್ಞಾನದ ಹೊರಗುತ್ತಿಗೆ ಪದ್ಧತಿ ಎಷ್ಟು ಕಾಲ ಬಾಳಬಲ್ಲುದು?
2. ಈ ಹೊಸ ಕೈಗಾರಿಕಾ ಪದ್ಧತಿ ಸೃಷ್ಟಿ ಮಾಡಿರುವ ಸಮೃದ್ಧಿಯ ದ್ವೀಪಗಳು ಇಡೀ ಸಮಾಜದ ಮೇಲೆ ಯಾವ ಯಾವ ನೆಲೆಗಳಲ್ಲಿ ಮತ್ತು ಯಾವ ಯಾವ ರೀತಿಯ ಒತ್ತಡಗಳನ್ನು ಉಂಟುಮಾಡುತ್ತಿವೆ? ಧ್ಯಾನ ಮತ್ತು ಕೊಲೆ ಸಂಸ್ಕೃತಿಗಳು ಒಟ್ಟೊಟ್ಟಿಗೆ ಬೆಳೆಯುತ್ತಿರುವದರ ಮರ್ಮವಾದರೂ ಏನು?
3. ಈ ದ್ವೀಪಗಳಲ್ಲಿನ ಜನ ಅಳವಡಿಸಿಕೊಳ್ಳುತ್ತಿರುವ ಜೀವನ ಶೈಲಿ ಸಮಾಜದ ಎಲ್ಲರಿಗೂ ವಿಸ್ತರಿಸುವ ಸಾಧ್ಯತೆ ಎಷ್ಟರಮಟ್ಟಿಗಿದೆ? ಆ ಸಾಧ್ಯತೆ ಹೆಚ್ಚುತ್ತಿದ್ದಂತೆ ನಮ್ಮ ಜೀವ ಪರಿಸರ ಹಾಗೂ ಸಾಮಾಜಿಕ ಪರಿಸರಗಳ ಮೇಲೆ ಆಗುವ ಪರಿಣಾಮಗಳೇನು? ಹಾಗೇ, ಆ ಸಾಧ್ಯತೆ ಕಡಿಮೆಯಾಗುತ್ತಿದ್ದಂತೆ ಉಂಟಾಗಬಹುದಾದ ಸಾಮಾಜಿಕ ಅನಾಹುತಗಳೆಂತಹವು?
4. ಇನ್ಫೋಸಿಸ್ ಪ್ರತಿನಿಧಿಸುತ್ತಿರುವ ಅಭಿವೃದ್ಧಿ ಮೀಮಾಂಸೆ ಇಡೀ ಜಗತ್ತನ್ನು ನಗರೀಕರಿಸುವ ಅಗತ್ಯದ ಮೇಲೆ ನಿಂತಿದೆ.(ಇದನ್ನು ಈ ಸಂಸ್ಥೆಯ ನಂದನ್ ನಿಲೇಕಿಣಿ ಅವರು ಇತ್ತೀಚಿನ 'ಔಟ್ಲುಕ್' ಪತ್ರಿಕೆಯ ಸಂಚಿಕೆಯ ಲೇಖನವೊಂದರಲ್ಲಿ ಸುಸ್ಪಷ್ಟಗೊಳಿಸಿದ್ದಾರೆ.) ಇದು ನಮ್ಮ 'ದುಡಿಮೆ' ಹಾಗೂ ಅದನ್ನಾಧರಿಸಿದ 'ಸಂಸ್ಕೃತಿ'ಯ ಅರ್ಥಗಳನ್ನೇ ಮೂಲಭೂತವಾಗಿ ಪಲ್ಲಟಗೊಳಿಸುವಂತಹದು. ಈ ಪಲ್ಲಟವನ್ನು ತಡೆದುಕೊಳ್ಳುವ ಶಕ್ತಿ ನಮ್ಮ ಗ್ರಾಮೀಣ ಭಾರತಕ್ಕಿದೆಯೆ? ಇಂತಹ ಪಲ್ಲಟಕ್ಕೆ ಈ ಹಿಂದೆಯೇ ಪ್ರಯತ್ನಿಸಿದ ನೆಹರೂ ಕಾಲದ ಆಧುನೀಕರಣವು ಅದನ್ನು ನಡು ನೀರಿನಲ್ಲಿ ಕೈ ಬಿಟ್ಟಿರುವ ದುರಂತ, ನಿಲ್ಲದ ರೈತರ ಆತ್ಮಹತ್ಯೆ ಸರಣಿ ರೂಪದಲ್ಲಿ ನಮ್ಮ ಕಣ್ಮುಂದೆಯೇ ಸಂಭವಿಸುತ್ತಿಲ್ಲವೇ? ಯಾಕೆ ಮತ್ತು ಯಾರಿಗಾಗಿ ಈ ನಗರೀಕರಣದ ತೆವಲು? ಇಂತಹ ಜಾಗತಿಕ ಅಭಿವೃದ್ಧಿ ಮೀಮಾಂಸೆ ಹಿಂದಿನ ರಾಜಕಾರಣ ಇಂದು ಅನೇಕ ರೂಪಗಳಲ್ಲಿ ಬಟ್ಟ ಬಯಲಾಗುತ್ತಿರುವಾಗಲೂ ಏಕೀ ಆಕರ್ಷಣೆ?
5. ಬರೀ ತಂತ್ರಜ್ಞಾನದ ವೈವಿಧ್ಯಮಯ ಅನ್ವಯವನ್ನೇ ನಂಬಿ ಬೆಳೆಯುತ್ತಿರುವ ಈ ಸಿರಿಗರ ಬಡಿದುಕೊಂಡ ನಾಗರೀಕತೆ, ಮೂಲಭೂತ ವಿಜ್ಞಾನ ಹಾಗೂ ಮಾನವಿಕ ಶಾಸ್ತ್ರಗಳ ಸಾವನ್ನು ಪರೋಕ್ಷವಾಗಿ ಸಾರುತ್ತಾ, ಮನುಕುಲದ ಮನಸ್ಸನ್ನು ಏಕಾಕಾರಕ್ಕೆ ಒಗ್ಗಿಸುತ್ತಿರುವ ಪ್ರಯತ್ನದ ದೂರಗಾಮಿ ಪರಿಣಾಮಗಳೇನು? ರೇಷ್ಮೆಯವರು ವಿವರಿಸಿರುವ ನಾರಾಯಣ ಮೂರ್ತಿಯವರ ಪ್ರಾಮಾಣಿಕ ಪ್ರಯತ್ನ ಭಾರಿ ಯಶಸ್ಸಿನಂತೆ ಕಾಣುತ್ತಿರುವುದು, ನಮ್ಮ ಸರ್ಕಾರಿ ಯಂತ್ರವು ಭ್ರಷ್ಟಾಚಾರ ಹಾಗೂ ಅದಕ್ಷತೆಗಳಿಂದಾಗಿ ಕುಸಿದು ಬಿದ್ದಿರುವ ದುರಾಡಳಿತದ ಹಿನ್ನೆಲೆಯಲ್ಲಿ ಎಂಬುದನ್ನು ನಾವು ಮರೆಯುವಂತಿಲ್ಲ. ಹಾಗಾಗಿ ನಾವು ಬಾಣಲೆಯಿಂದ ಬೆಂಕಿಗೆ ಬೀಳುವಂತಾಗದಿರಲು, ಮೇಲಿನ ಪ್ರಶ್ನೆಗಳಿಗೆ ಬಹು ಎಚ್ಚರದಿಂದ ಉತ್ತರಗಳನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ಈ ಉತ್ತರಗಳನ್ನು ಎಲ್ಲೆಯಿಲ್ಲದ ವಿಸ್ತರಣೆಯ ಮಾದರಿಯ ಮೇಲೆ ಕಟ್ಟಲ್ಪಡುತ್ತಿರುವ ಪ್ರಸ್ತುತ ಆಧುನಿಕ ನಾಗರೀಕತೆಯ ಇಬ್ಬರು ಮಹಾನ್ ವಿಮರ್ಶಕರೆನಿಸಿದವರ ಈ ಎರಡು ಅರ್ಧ ಲೌಕಿಕ ಹಾಗೂ ಅರ್ಧ ದಾರ್ಶನಿಕ ಮಾತುಗಳ ನಿಕಷಕ್ಕೊಡ್ಡಿ ಪರಿಶೀಲಿಸಕೊಳ್ಳಬೇಕಿದೆ:
ಇರುವ ಈ ಒಂದು ನಮ್ಮ ಭೂಮಿ ಎಲ್ಲರ ಆಶೆಗಳನ್ನು ಪೂರೈಸಬಲ್ಲದು; ದುರಾಶೆಗಳನ್ನಲ್ಲ-ಮಹಾತ್ಮ ಗಾಂಧಿ
ಕೊನೆಗೂ ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?-ಮಹರ್ಷಿ ಟಾಲ್ಸ್ಟಾಯ್
ಅಂದಹಾಗೆ : ಈಚೆಗೆ ಇನ್ಫೊಸಿಸ್ನ ಮೋಹನದಾಸ್ ಪೈ, ಟಿ.ವಿ.ವಾಹಿನಿಯೊಂದರಲ್ಲಿ ನಾರಾಯಣ ಮೂರ್ತಿ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ಕೇಳಿದ ವರದಿಗಾರನಿಗೆ 'ನಾನೇನೂ ಹೇಳೊಲ್ಲ...ಏನು ಹೇಳಿದರೂ ಜನ ಕಲ್ಲು ಹೊಡೆಯುತ್ತಾರೆ' ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಆದರೆ ಜನವೂ ಕಲ್ಲು ಹೊಡೆಯುವುದು ಅಸಹಾಯಕರಾಗಿಯೇ ಎಂಬುದು ಇವರಿಗೇಕೆ ಹೊಳೆಯುತ್ತಿಲ್ಲ? ಅವರ ಈ ಅಸಹಾಯಕತೆಗೆ ತಾವೇನಾದರೂ ಕಾರಣವೇ ಎಂದು ಒಮ್ಮೆಯಾದರೂ ಇನ್ಫೋಸಿಸ್ ವಿವರವಾಗಿ ಆತ್ಮಾವಲೋಕನ ಮಾಡಿಕೊಂಡರೆ, ಜನ ನಿಷ್ಕಾರಣವಾಗಿ ಕಲ್ಲು ಹೊಡೆಯುವುದನ್ನು ನಿಲ್ಲಿಸಿಯಾರು! ಇದನ್ನು ಮನವರಿಕೆ ಮಾಡಿಕೊಡುವ ಮೂಲಕ ಇನ್ಫೋಸಿಸ್ನೊಂದಿಗೆ, ರೇಷ್ಮೆಯವರು ಪ್ರಸ್ತಾಪ ಮಾಡಿರುವ ಸಂಭಾಷಣೆಯನ್ನು ಆರಂಭಿಸಬಹುದೆಂದು ಕಾಣುತ್ತದೆ!
Comments
ಉ: ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?
In reply to ಉ: ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ? by Rohit
ಉ: ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?
ಉ: ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?
ಉ: ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?
ಉ: ನಾರಾಯಣಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ?