ನಾಳೆಯ valentines ದಿನದಂದು ನಿಮ್ಮ ತಾಯಿಯನ್ನು ಪ್ರೀತಿಸಿ.

ನಾಳೆಯ valentines ದಿನದಂದು ನಿಮ್ಮ ತಾಯಿಯನ್ನು ಪ್ರೀತಿಸಿ.

ಫೆಬ್ರವರಿ ೧೪ ಬಂತೆಂದರೆ ಕೆಲವರಲ್ಲಿ ಅದೇನೋ ಒಂದು ರೀತಿಯ ರೋಮಾಂಚನ ಮಿಶ್ರಿತ ನಡುಕವಾದರೆ ಮತ್ತೆ ಕೆಲವರಿಗೆ ಭೀತಿಯ ನಡುಕ. ಪ್ರೇಮಿಗಳಿಗೆ ತನ್ನನ್ನು ಪ್ರೀತಿಸುವ ವ್ಯಕ್ತಿ ಏನು ತರಬಹುದು, ಯಾವ ರೆಸ್ಟುರಾಂಟ್ ಗೆ ಕರೆದುಕೊಂಡು ಹೋಗಬಹುದು ಎನ್ನುವ ನವಿರೇಳುವ ನಡುಕವಾದರೆ, ಜೋಡಿಗಳನ್ನು ಆಮಂತ್ರಿಸಿದ್ದಕ್ಕೆ, ಹುರಿದುಂಬಿಸಿದ್ದಕ್ಕೆ  ತನ್ನ ಅಂಗಡಿ ಅಥವಾ ರೆಸ್ಟುರಾಂಟ್ ನ ಗಾಜುಗಳು ಎಲ್ಲಿ ವಿರೋಧಿಸುವವರ ಕಲ್ಲಿಗೆ ಚಲ್ಲಾಪಿಲ್ಲಿ ಆಗಬಹುದೋ ಎನ್ನುವ ಭೀತಿಯ ನಡುಕ ಇನ್ನು ಕೆಲವರಿಗೆ.   


ಮಕ್ಕಳ ದಿನಾಚರಣೆಯಿಂದ ಹಿಡಿದು ಊರುಗೋಲು ಹಿಡಿದು ನಡೆಯುವವರ ದಿನದವರೆಗೂ ವೈವಿಧ್ಯಗಳಿವೆ ದಿನಾಚರಣೆಗಳಿಗೆ. ಪ್ರೇಮಿಗಳಿಗೂ ಒಂದು ದಿನ. ಅದೇ valentine’s day. ಆದರೆ ಪ್ರೀತಿ ಎನ್ನುವುದು  ಬರೀ ಗಂಡು ಹೆಣ್ಣಿನ ನಡುವಿನ ಸಾಂಗತ್ಯ ಅಥವಾ ಸರಸವೇ ಆಗಬೇಕಿಲ್ಲ. ಪ್ರೀತಿಯನ್ನು platonic love ಆಗಿ ಪರಿವರ್ತಿಸಿದಾಗ ನಮ್ಮ ಸಹೋದ್ಯೋಗಿ, ನೆರೆಯವರು, ಸ್ನೇಹಿತರು, ಉದ್ರಿ ಕೊಡುವ ದಿನಸಿ ಅಂಗಡಿಯವ, ದಿನಪತ್ರಿಕೆ ಹಾಕುವ ವ್ಯಕ್ತಿ ಹೀಗೆ ಎಲ್ಲರೂ ಅರ್ಹರಾಗಬಹುದು ನಮ್ಮ ಪ್ರೀತಿಗೆ. ಈ ಕೆಳಗೆ ಕಾಣಿಸಿದ ಸಲಹೆಗಳು valentines ದಿನಕ್ಕೆ ಒಂದು ಹೊಸ ರೀತಿಯ ಹುರುಪು, ಭರವಸೆ ಮೂಡಿಸಬಹುದು.


ಬೆಳ್ಳಂಬೆಳಗ್ಗೆ ನಮ್ಮ ಗೇಟಿಗೆ ನ್ಯೂಸ್ ಪೇಪರ್ ಸಿಕ್ಕಿಸುವ ಹುಡುಗನನ್ನು ಹುಬ್ಬು ಗಂಟಿಕ್ಕಿ ಸ್ವಾಗತಿಸುವುದಕ್ಕಿಂತ ಅವನು ನಮ್ಮ ಹಾಗೆಯೇ ಒಬ್ಬ ಮನುಷ್ಯ ಎಂದು ಬಗೆದು ಮುಗುಳ್ನಕ್ಕು, ಒಂದು ಲಕೋಟೆಯಲ್ಲಿ ೧೦ ರೂಪಾಯಿ ಇಟ್ಟು ಕೊಟ್ಟರೆ ಹೇಗಿರಬಹುದು? ಅವನು ಆಸೆ ಪಡುತ್ತಿದ್ದ ಯಾವುದಾದರೂ ವಸ್ತು ಕೊಳ್ಳಲು ನಿಮ್ಮ ಆ ಕಾಣಿಕೆ ಅವನಿಗೆ ನೆರವಾಗಬಹುದು.


ಮನೆಯ ಮುಂದೆ ನಿಂತು ಈರುಳ್ಳಿ, ಟೊಮೇಟೋ ಎಂದು ಕೂಗುತ್ತಾ ತರಕಾರಿ ಮಾರುವವನಿಗೆ ಒಂದು ದಿನವಾದರೂ ಚೌಕಾಶಿಯಿಂದ ಮುಕ್ತಿ ಕೊಡಿಸಿ. ಈ ಒಂದು ದಿನವಾದರೂ ಅವನು ಹೇಳಿದ ಬೆಲೆ ಕೊಟ್ಟು ಬೆಳ್ಳುಳ್ಳಿ ಕೊಂಡು ಕೊಳ್ಳಿ. ಅಯ್ಯೋ ಇನ್ನೊಂದು ಬೆಳ್ಳುಳ್ಳಿ ಹಾಕು, ನಿನ್ ಗಂಟು ಹೋಗಲ್ಲ ಎಂದು ಗದರಿಸಿ greedy ಆಗಬೇಡಿ.


ನಿಮ್ಮ ತಾಯಿಯನ್ನು ಪ್ರೀತಿಸಿ. ಹಾಂ, ನಾವು ಯಾವಾಗಲೂ ಪ್ರೀತಿಸುತ್ತೇವೆ, ಅಷ್ಟು ಮಾತ್ರವಲ್ಲ mother’s day ಇದ್ದೇ ಇದೆಯಲ್ಲ ಎಂದು ಹೇಳಬೇಡಿ. ತಾಯಿ ಅಂದರೆ ನಮ್ಮ ಹೆತ್ತಬ್ಬೆ ಅಲ್ಲ, ಕೋಟ್ಯಂತರ ಹೆತ್ತಬ್ಬೆಯರನ್ನೂ, ನಮ್ಮನ್ನೂ ಹೊತ್ತೂ ಹೊತ್ತೂ ಬಳಲಿದ “ಭೂತಾಯಿ” ಯನ್ನು ಪ್ರೀತಿಸಿ. ಈ ಒಂದು ದಿನವಾದರೂ disposable ಗಳ ಸಹವಾಸ ಬಿಡಿ. ಅವು ಕಳಿಸುವ CFC (chloro fluoro carbon)  ನಮ್ಮ ತಾಯಿಯನ್ನು ಇನ್ನಷ್ಟು ಕ್ಷೀಣಗೊಳಿಸುತ್ತಿದೆ. ಸಾಧ್ಯವಾದರೆ ಕಳೆದ ಆರು ತಿಂಗಳಿನಿಂದ ಸೋರುತ್ತಿರುವ ನಲ್ಲಿಗೆ ಏನಾದರೂ ರಿಪೇರಿ ಮಾಡಿ, ಅಮೂಲ್ಯವಾದ ನೀರಿನ ಹನಿಗಳನ್ನು ಉಳಿಸಿ.


ಬೆಳಿಗ್ಗೆ ಸ್ನಾನ ಮಾಡಿ ಬಟ್ಟೆ ತೊಡುವಾಗ ಡಿಸ್ಕೌಂಟ್ ಆಸೆಗೆ ಬಿದ್ದು ಖರೀಸಿದ ಆದರೆ ಎಂದೂ ತೊಡದ ಆ ಟೀ ಶರ್ಟ್ ಅಥವಾ “ಮ್ಯಾಕ್ಸಿ” ಯನ್ನು ಯಾರಿಗಾದರೂ ದಾನ ಮಾಡಿ. ಹಾಗೆಯೆ ಯಾವುದಾದರೂ ಉಪಯೋಗಿಸದ ವಸ್ತು ಅಟ್ಟದ ಮೇಲಿದ್ದರೆ ಅದಕ್ಕೂ ಮೋಕ್ಷ ಕಾಣಿಸಿ. ದಾನ ನೀಡುವವನು “ದಾನವ” ನಾಗೋಲ್ಲ ಬದಲಿಗೆ ನಿಜವಾದ ಮನುಷ್ಯನಾಗುತ್ತಾನೆ, ದೇವರ ಮುಖದ ಮೇಲೆ ಮಂದಹಾಸ ತರುತ್ತಾನೆ. ಹಿಂಸೆ ಕಂಡೂ ಕಂಡೂ ರೋಸಿದ ಪರಮಾತ್ಮನಿಗೂ ಒಂದು smile ದಾನ ಮಾಡಿದಂತೆ ಈ ಸುದಿನದಂದು.


ದೊಡ್ಡ ಮನಸ್ಸು ಮಾಡಿ ಒಂದು ಪುಸ್ತಕ ಖರೀದಿಸಿ. ರಕ್ತದೊತ್ತಡ ಹೆಚ್ಚು ಮಾಡುವ ಪುಸ್ತಕವೋ, ಪತ್ರಿಕೆಯೋ ಅಲ್ಲ. ಏಗ್ದಾಗೆಲ್ಲಾ ಐತೆ ತೆರನಾದ, ಅಥವಾ ಅಕ್ಕ ಮಹಾದೇವಿ, ಶಿಶುನಾಳ ಶರೀಫರ ಬದುಕಿನ ನಿಜವಾದ ಅರ್ಥ ಹೇಳುವ ಪುಸ್ತಕವನ್ನು ಕೊಳ್ಳಿ.


ರಸ್ತೆಯಲ್ಲಿ ಹಾದುಹೋಗುವಾಗ ಯಾವುದಾದರೂ ಆಸ್ಪತ್ರೆ ಕಂಡರೆ ಜಗುಲಿಯ ಮೇಲೆ ಅಸಹಾಯಕನಾಗಿ ಕೂತ ವನಿಗೆ ಹಣ್ಣು ಹಂಪಲು ಕೊಡಿಸಿ ಅಥವಾ ಏನಾದರೂ ಧನ ಸಹಾಯ ಮಾಡಿ. ಅವನ ಮುಖದ ಮೇಲೆ ನೀವು ಕಾಣುವ ಹರ್ಷ ನಿಮ್ಮ valentine ದಿನಕ್ಕೆ ಒಂದು ಹೊಸ, ಅವರ್ಣನೀಯ ಅರ್ಥವನ್ನು ತಂದು ಕೊಡುತ್ತದೆ.


ಮೊಬೈಲ್ ಉಪಕರಣದ ರಿಂಗ್ ಟೋನ್ ವಾಲ್ಯೂಮ್ ಇನ್ನಷ್ಟು ಕಡಿಮೆ ಮಾಡಿ. ನೀವು ಹಾಕಿರುವ ಆ ಕರ್ಕಶ ಹಾಡನ್ನು ಇಡೀ ವಿಶ್ವ ಈಗಾಗಲೇ ಕೇಳಿಯಾಗಿದೆ. ಮೊಬೈಲ್ ರಿಂಗ್ ಆದ ಕೂಡಲೇ ಅಲ್ಲೇ ಪಕ್ಕದಲ್ಲೇ ಇರುವ “silence” ಗುಂಡಿಯನ್ನು ಒತ್ತಿ ಶಬ್ದ ಮಾಲಿನ್ಯ ಕಡಿಮೆ ಮಾಡಿ.           


ಸೂಟು ಬೂಟು ತೊಟ್ಟು ಅಥವಾ ಆಕರ್ಷಕವಾಗಿ ಬಟ್ಟೆ ಧರಿಸಿಯೂ ಕನ್ನಡ ಮಾತನಾಡಬಹುದು ಎಂದು ಸುತ್ತಲಿನವರಿಗೆ ತೋರಿಸಿ. ಆಂಗ್ಲ ಭಾಷೆಯೂ ಇರಲಿ, ಆದರೆ ಕನ್ನಡ ಹೆಚ್ಚು ಆಕರ್ಷಕ ಎಂದು ಮನವರಿಕೆ ಮಾಡಿಸಿ.    


ಟ್ರಾಫಿಕ್ ಸಿಗ್ನಲ್ ಬಳಿಯೋ, ಪಾರ್ಕಿಂಗ್ ಲಾಟ್ ಹತ್ತಿರವೋ ಸಿಗುವ ಸಪ್ಪೆ ಮುಖದ ಅಪರಿಚಿತನ ಕಡೆ ಮುಗುಳ್ನಗೆ ಬೀರಿ. ಪ್ರಪಂಚ ನಾವೆಣಿಸಿದಷ್ಟು ಕೆಟ್ಟಿಲ್ಲ ಎನ್ನುವ ಭಾವನೆ ಅವನಲ್ಲಿ ಮೂಡಿಸಿ.   


ಬೆಳಗ್ಗಿನಿಂದ ರಾತ್ರಿವರೆಗೂ ಕರಿದಿದ್ದು, ಹುರಿದಿದ್ದು ತಿಂದೂ ತಿಂದೂ ಏರಿಸಿಕೊಂಡ BP ಎನ್ನುವ “ಮೌನ ಹಂತಕ” (SILENT KILLER) ನ ಕಡೆ ಕಣ್ಣು ಹಾಯಿಸಿ. ಉದಾಸೀನ ಮಾಡದೆ bp ಪರೀಕ್ಷಿಸಿ. ಉಪ್ಪಿಗಿಂತ ರುಚಿಯಿಲ್ಲ ಎನ್ನೋ ಮಾತು ಗಾದೆಗೆ ಸೀಮಿತವಾಗಲಿ, ಟೇಬಲ್ ಸಾಲ್ಟ್ ಅನ್ನು ಸಂಪೂರ್ಣ ಉಪೇಕ್ಷಿಸಿ. ಒಂದರ್ಧ ಘಂಟೆ ನಡೆಯಿರಿ. ಇಂದೂ, ದಿನವೂ.  ನಿಮ್ಮ ದೀರ್ಘಾಯಸ್ಸು ನಿಮಗಲ್ಲದಿದ್ದರೂ ನಿಮ್ಮನ್ನು ಪ್ರೀತಿಸುವವರಿಗಾಗಿರಲಿ.     


ಕೊನೆಯದಾಗಿ, ತನಗಿರುವ ಎರಡು ಕೈ, ಎರಡು ಕಾಲುಗಳನ್ನು ದ್ವಿಗುಣ, ತ್ರಿಗುಣಗೊಳಿಸಿ ಹೆಣಗುತ್ತಾ ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಆಫೀಸಿಗೆ ಮತ್ತು ಶಾಲೆಗೆ ಹೊರಡಿಸುವ ತಂಗಾಳಿ ರೀತಿಯ thankless ಜೀವಕ್ಕೊಂದು ಕೆಂಪು ಗುಲಾಬಿ ಕೊಟ್ಟು ನೀನಿಲ್ಲದ ದಿನ ದಿನವೇ ಅಲ್ಲ ಎನ್ನುವ ಭಾವನೆ ವ್ಯಕ್ತಪಡಿಸಿ.  


ನಲ್ಮೆಯ ಸಂಪದದ ಬಂಧು ಭಗಿನಿಯರಿಗೆ ಪ್ರೀತಿಯ ದಿನದ ಅತ್ಯಂತ ಪ್ರೀತಿಯ ಹಾರೈಕೆಗಳು. 


ಮೇಲಿನ ಲೇಖನಕ್ಕೆ ಸ್ಫೂರ್ತಿ ಈ ವೆಬ್ ತಾಣ: http://philanthropywriting.com/2011/02/09/16-charitable-ways-to-celebrate-valentines-day/  


 

Rating
No votes yet

Comments