ನಾಳೆ ಹಬ್ಬ!

ನಾಳೆ ಹಬ್ಬ!

ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?"

ಮತ್ತೊಂದು ಫೋನ್ ಕಾಲ್ ಬಂದು ನನಗೂ ಏನೂ ಹೇಳಲಾಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಫೋನ್ ಮಾಡಿ ಹೇಳಿದರು: "ಗೊತ್ತಾಯ್ತು! ಗ್ನು/ಲಿನಕ್ಸ್ ಹಬ್ಬ ಅಲ್ವ? ಮೈಸೂರಲ್ಲಿ!"

ನಾಳೆ ಮೈಸೂರಿನಲ್ಲಿ ಗ್ನು/ಲಿನಕ್ಸ್ ಹಬ್ಬದ ಎರಡನೇ ಆವೃತ್ತಿ. ಮೈಸೂರಿನ ಶಶಿಶೇಖರ್ ರವರು ನಡೆಸಿಕೊಂಡು ಬರುತ್ತಿರುವ ಇನ್ಫರ್ಮೀಡಿಯ ಕಂಪೆನಿ ಖರ್ಚಿನ ಜವಾಬ್ದಾರಿ ಹೊತ್ತಿಕೊಂಡಿದೆ. ನಿರ್ವಹಣೆ, ಸಂಯೋಜನೆ volunteers ಜವಾಬ್ದಾರಿ. ಸಂಪದ ಸಮುದಾಯದ ಸುಮಾರು ಜನ ಈ ತಂಡದಲ್ಲಿದ್ದಾರೆ. ಆಶಯ, ಗ್ನು/ಲಿನಕ್ಸ್ ಬಗ್ಗೆ ತಿಳಿಸಿಕೊಡುವುದು ಹಾಗು ಸ್ವತಂತ್ರ ತಂತ್ರಾಂಶದ ಕಡೆ ಸಾಮಾನ್ಯ ಕಂಪ್ಯೂಟರ್ ಬಳಕೆದಾರರಲ್ಲಿ ಒಂದಷ್ಟು ಬೆಳಕು ಹರಿಸುವುದು, ಕನ್ನಡದ ಸೊಗಡು ತುಂಬಿ, ಅದೂ. ಹೋದ ಸಲ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಮೊದಲ ಆವೃತ್ತಿ ನಡೆದಾಗಿನಿಂದಲೂ ಇದು ನಮಗೆ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಂಡಿರುವ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಮೀಸಲಾದ ದಿನ, ಖುಷಿ ಕೊಡುವ ದಿನ, ಒಂದು ರೀತಿಯ ಹಬ್ಬ. ಅಥವ, ನಾಗೇಶ ಹೆಗಡೆಯವರು ಹೇಳುವಂತೆ "ಹೊಸ ಸ್ಟೈಲ್" ಹಬ್ಬ :-)

Rating
No votes yet

Comments