ನಾವೆಲ್ಲ ತಂತಿ ಕಂಬಗಳು.- ಓದಿದ ಒಂದು ಕಥೆ
ಶ್ರೀಮಂತೆಯೊಬ್ಬಳು ಅನಾಥಾಲಯಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ನಾಲ್ಕಾರು ಹುಡುಗರು ತಮ್ಮತಮ್ಮಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಈ ಕಿತ್ತಾಟ ಒಂದು ಪುಸ್ತಕಕ್ಕಾಗಿ. ಈ ಸಂಗತಿ ಅವಳನ್ನು ವಿಚಲಿತಗೊಳಿಸಿತು. ಒಬ್ಬ ಉನ್ನತ ಸರಕಾರೀ ಅಧಿಕಾರಿಯೊಂದಿಗೆ ಈ ಸಂಗತಿಯನ್ನು ಹಂಚಿಕೊಂಡಳು. ಅವನ ಮನಸ್ಸು ನೊಂದ ಹಾಗಾಗಿ ತನ್ನ ಹತ್ತಿರ ಮಕ್ಕಳಿಗಾಗಿ ಕೆಲವು ಪುಸ್ತಕಗಳು ಇವೆ , ಅವನ್ನು ಆ ಅನಾಥಾಲಯಕ್ಕೆ ಕೊಡಬಹುದು. ಆದರೆ ತನ್ನ ಪುಸ್ತಕಗಳ ರಾಶಿಯಿಂದ ಅವನ್ನು ಹುಡುಕುವದು ಬಲು ಕಷ್ಟ ಎಂದ. ಅವನು ಫಿಸಿಕ್ಸ್ ಪ್ರೊಫೆಸರ್ ಆದ ತನ್ನ ಗೆಳೆಯನೊಂದಿಗೆ ಹೋಗಿ ಒಂದು ಪತ್ರಿಕೆಯ ಸಂಪಾದಕರಿಗೆ ಈ ಬಗ್ಗೆ ಮನವಿ ಮಾಡಿಕೊಂಡ. ಆ ಪತ್ರಕರ್ತರು ಮರುದಿನದ ಪತ್ರಿಕೆಗೆ ಏನಾದರೂ ರೋಚಕ ಸುದ್ದಿಗಾಗಿ ಕಾಯುತ್ತಿದ್ದರು. ಮರುದಿನದ ಪತ್ರಿಕೆಯಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟವಾಯಿತು-'ಅನಾಥ ಪುಟಾಣಿ ಕಂದಮ್ಮಗಳು ಜ್ಞಾನದಾಹದಿಂದ ಪುಸ್ತಕಗಳಿಗಾಗಿ ಪರಿತಪಿಸುತ್ತಿವೆ. ಅವುಗಳ ಆಕ್ರಂದನಕ್ಕೆ ಓಗೊಡಿ'.
ಕೆಲದಿನಗಳ ನಂತರ ಒಬ್ಬ ಕೊಳಕು ಬಟ್ಟೆಯ ಒಬ್ಬ ಮುದುಕ ಮಾಸಿದ ಉಡುಪಿನ ಒಬ್ಬ ಬಡ ಹುಡುಗಿಯ ಜತೆಗೆ ಪತ್ರಿಕಾ ಕಚೇರಿಗೆ ಬಂದ. ಅವಳ ಕೈಯಲ್ಲಿ ಕೆಲವು ಪುಸ್ತಕಗಳ ಗಂಟು ಇದ್ದಿತು. ಅದನ್ನು ಪತ್ರಿಕಾಲಯದಲ್ಲಿದ್ದವರಿಗೆ ಒಪ್ಪಿಸಿದ. ಅಂಜುತ್ತಾ ತಿಳಿಸಿದ - 'ನೀವು ಪರಿತಪಿಸುವ ಕಂದಮ್ಮಗಳಿಗಾಗಿ ಬೇಕು ಎಂದಿದ್ದಿರಲ್ಲ ... ಅದಕ್ಕೆ...'. ಅವರು ಅವನ ಹೆಸರು ಕೇಳಿದರು, ಪತ್ರಿಕೆಯಲ್ಲಿ ಪ್ರಕಟಿಸುವುದಕ್ಕಾಗಿ. 'ಅದೇನೂ ಅಗತ್ಯವಿಲ್ಲ ದಯವಿಟ್ಟು ಬೇಡ. ಕಾರ್ಖಾನೆಯಲ್ಲಿ ಕೆಲಸ ಮಾಡುವ ಬಡವ ನಾನು.. ಪ್ರಕಟಣೆ ಗಿಕಟಣೆ ಏನೂ ಬೇಡ ಸರ್' ಅಂದು ಹೊರಟುಹೋದ.
ಫಿಸಿಕ್ಸ್ ಪ್ರೊಫೆಸರರಿಗೆ ಅನಿಸಿತು- ಅನಾಥಾಲಯ ಮುಖ್ಯ ಟೆಲಿಗ್ರಾಫ್ ಕಚೇರಿಯ ಹಾಗೆ.ಫ್ಯಾಕ್ಟರಿಯ ಆ ಬಡ ಕೆಲಸಗಾರ ಸ್ವೀಕಾರ ಕೇಂದ್ರ. ಮುಖ್ಯ ಕಚೇರಿ ತಂತಿಸಂದೇಶ ಕಳಿಸಿತು. ಸ್ವೀಕಾರ ಕೇಂದ್ರ ಅದನ್ನು ಸ್ವೀಕರಿಸಿ ಅದರ ಬೇಡಿಕೆಯನ್ನು ಈಡೇರಿಸಿತು. ಉಳಿದ ನಾವೆಲ್ಲ ತಂತಿ ಕಂಬಗಳು.
(ನವಕರ್ನಾಟಕ ಪ್ರಕಾಶನದ ವಿಶ್ವ ಕಥಾಕೋಶದ ಒಂದು ಕತೆ ನನ್ನ ಮನವನ್ನು ತಟ್ಟಿತು ; ಹಂಚಿಕೊಳ್ಳಬೇಕೆನಿಸಿತು,ಸಂಗ್ರಹಿಸಿ ಬರೆದಿದ್ದೇನೆ)
Comments
ಉ: ನಾವೆಲ್ಲ ತಂತಿ ಕಂಬಗಳು.- ಓದಿದ ಒಂದು ಕಥೆ
ಉ: ನಾವೆಲ್ಲ ತಂತಿ ಕಂಬಗಳು.- ಓದಿದ ಒಂದು ಕಥೆ