ನಿಜ ಅರ್ಥದ ಗಾಂಧೀವಾದಿ ಮುರಾರ್ಜಿ ದೇಸಾಯಿ

ನಿಜ ಅರ್ಥದ ಗಾಂಧೀವಾದಿ ಮುರಾರ್ಜಿ ದೇಸಾಯಿ

ಚಿತ್ರ

                       


     ನಾವು ಇಂದು ಇಪ್ಪತ್ತೊಂದನೆ ಶತಮಾನದ ಎರಡನೆ ದಶಕದಲ್ಲಿ ಬಂದು ನಿಂತಿದ್ದೇವೆ. ನಮಗೆ ಸಮರ್ಥ ಮಾರ್ಗದರ್ಶಕರಿಲ್ಲ ಆದರೆ ಉಪದೇಶ ನೀಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಆಚಾರ ವಿಚಾರಗಳಲ್ಲಿ ಹೊಂದಿಕೆ ಇರುವವರು ಬಹುತೇಕ ಯಾರೂ ಇಲ್ಲ. ಸ್ವಾತಂತ್ರ ಪೂರ್ವದಲ್ಲಿ ಕವಿ ಅಂಬಿಕಾ ತನಯದತ್ತರು ತಮ್ಮ ಒಂದು ಕವನದಲ್ಲಿ  ಮಕ್ಕಳಿವರೇನಮ್ಮ ಮೂವತ್ಮೂರು ಕೋಟಿ  ಎಂದು ಉದ್ಘರಿಸಿದ್ದರು. ಈಗ ಅದನ್ನೆ ಪರಿಷ್ಕರಿಸಿ ಮಕ್ಕಳಿವರೇನಮ್ಮ ನೂರಿಪ್ಪತ್ತು ಕೋಟಿ ಎಂದು ಹೇಳುವಂತಹ ಸ್ಥಿತಿ ಬಂದಿದೆ. ಇದರಲ್ಲಿಯಾದರೂ ನಾವು ಚೀನಿ ಯರಿಗೆ ಸಮಬಲ ಸ್ಪರ್ದೆಯವರು ಎಂದು ಹೆಮ್ಮೆ ಪಡಬಹುದು. ಸ್ವಾತಂತ್ರಪೂರ್ವ ನಾವು ನಮ್ಮ ಎಲ್ಲ ಕಷ್ಟ ಕಾರ್ಪಣ್ಯಗಳಿಗೆ ದೂರುತ್ತಿದ್ದುದು ಬ್ರಿಟೀಷ್ ಆಡಳಿತವನ್ನ. ಅವರ ಆಡಳಿತ ತೊಲಗಿ ಆರು ದಶಕಗಳೆ ಸಂದು ಹೋಗಿವೆ. ನಮ್ಮನ್ನೆ ನಾವು ಆಳಿಕೊಳ್ಳು ವಂತಹ ಜಗತ್ತಿನಲ್ಲೆ ಉತ್ತಮ ಮಾದರಿಯ 'ಪ್ರಜಾ ಪ್ರಭುತ್ವ' ವ್ಯವಸ್ಥೆ ಯನ್ನು ಹೊಂದಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿ ಸಾಧಿಸಿದ್ದೇವೆ ಆದರೂ ಸಹ ಹೇಳಿ ಕೊಳ್ಳುವಂತಹ ಜನ ಸಾಮಾನ್ಯರ ಬದುಕಿನಲ್ಲಿ ಬದಲಾವಣೆಗಳು ನಮ್ಮ ದೇಶದಲ್ಲಿ ಆಗಿಲ್ಲವೆಂದೇ ಹೇಳಬೇಕು. ಏರುತ್ತಿರುವ ಜನಸಂಖ್ಯೆ ನಿರುದ್ಯೋಗ, ಸೋಮಾರಿತನ, ಅಪನಂಬಿಕೆ, ಸ್ವಾರ್ಥ ಮತ್ತು ದ್ವೇಷಮಯ ವಾತಾವರಣದಲ್ಲಿ ನಾವಿಂದು ಬದುಕುತ್ತಿದ್ದೇವೆ, ಯುವ ಜನಾಂಗದ ಅನೇಕರಿಗೆ ನೈತಿಕ ಮೌಲ್ಯಗಳಿಲ್ಲ. ಗಾಂಧಿವಾದ ಗಾಂಧಿಯ ಜೊತೆಗೆ ಇತಿಹಾಸ ಸೇರಿದೆ. ಗಾಂಧಿ, ನೆಹರು, ಲಾಲಬಹದ್ದೂರ ಶಾಸ್ತ್ರೀ ಮತ್ತು ಗುಲ್ಜಾರಿಲಾಲ್ ನಂದಾರವರು ಹಾಗೂ ಅವರಂತಹವರು ಇತಿಹಾಸದ ಪುಟ ಸೇರಿದ್ದಾರೆ.. ಅವರುಗಳ ಬಗ್ಗೆ ನಮ್ಮ ಯುವ ಪೀಳಿಗೆಯ ಅನೇಕರಿಗೆ ಸಂಕ್ಷೀಪ್ತ ಮಾಹಿತಿಯೂ ಇಲ್ಲ.ಅವರ ಸಾಲಿಗೆ ಇನ್ನೊಂದು ಹೆಸರು ಸೇರಿಸ ಬಹುದು ಅದು ಮುರಾರ್ಜಿ ದೇಸಾಯಿ. ಅವರು ಸಂದುಹೋಗಿ ಸುಮಾರು ಇಪ್ಪತ್ತೇಳು ವರ್ಷಗಳೇ ಆಗಿವೆ. ಅವರ ಜನ್ಮ ದಿನದ ಈ ಶುಭ ಸಂದರ್ಭದಲ್ಲಿ ಅವರ ನೆನಪಿಗೋಸ್ಕರ ಈ ಪರಿಚಯಾತ್ಮಕ ಲೇಖನ.


     ಮುರಾರ್ಜಿ ದೇಸಾಯಿ ಯವರು ಗುಜರಾತ ರಾಜ್ಯದ ಸೂರತ ಜಿಲ್ಲೆಯ ಬರೇಲಿ ಗ್ರಾಮದ ಹತ್ತಿರದ ಬುಲ್ಸಾರ ನಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1896 ರ ಫೆಬ್ರುವರಿ 29 ರಂದು ಜನಿಸಿದರು. ಅವರ ತಂದೆ ರಣಛೋಡಜಿ ಯವರು ಭಾಠವನಗರದಲ್ಲಿ ಶಾಲಾ ಶಿಕ್ಷಕರಾದ್ದರು. ತಾಯಿ ವಜಿಯಾಬೇನ್ ಕಷ್ಟಪಟ್ಟು ಮೂರು ಅಕ್ಷರ ಕಲಿತವರಾಗಿದ್ದರು. ಮುರಾರ್ಜಿಯವರು ಹದಿನೈದು ವರ್ಷ ಪ್ರಾಯದವರಿರುವಾಗ ಗಜರಾಬೇನ್ ರವರೊಂದಿಗೆ ಅವರ ವಿವಾಹ ವಾಯಿತು. ಅದೇ ವರ್ಷ ಮುರಾರ್ಜಿಯವರ ತಂದೆ ಮೃತಪಟ್ಟರು. ಆಗ ತಾಯಿ ಮತ್ತು ಏಳುಜನ ಸೋದರ ಸೋದರಿಯರ ಜವಾಬ್ದಾರಿ ಪೂರ್ತಿಯಾಗಿ ಮುರಾರ್ಜಿಯವರ ಹೆಗಲಿಗೆ ಬಿತ್ತು. ಕುಟುಂಬ ನಿರ್ವಹಣೆ ಮಾಡಲು ಅವರಲ್ಲಿ ಯಾವುದೇ ಹಣವಾಗಲಿ ಆಸ್ತಿಯಗಲಿ ಅವರಿಗೆ ಇರಲಿಲ್ಲ. ಆ ಸಂಧರ್ಭ ದಲ್ಲಿ ಮುರಾರ್ಜಿ ಯವರಿಗೆ ಮಾಹೇಯಾನ ಹತ್ತು ರೂಪಾಯಿಗಳ ಶಿಷ್ಯವೇತನ ಅರ್ಹತೆಯ ಆಧಾರದ ಮೇಲೆ ಭಾವನಗರ ರಾಜ್ಯದಿಂದ ದೊರೆತು ಅವರು ಮುಂಬೈಯ ಗೋಕುಲದಾಸ ತೇಜಪಾಲ ಬೋರ್ಡಿಂಗ್ ಹೌಸ್ ಸೇರಿದರು. ಅಲ್ಲಿ ಊಟ ವಸತಿ ಪುಕ್ಕಟೆ ಇದ್ದು ತಮಗೆ ಬರುತ್ತಿದ್ದ ತಿಂಗಳ ಹತ್ತು ರೂಪಾಯಿಗಳ ಸ್ಕಾಲರ್ಶಿಪ್ ಹಣವನ್ನು ತನ್ನ ತಾಯಿಗೆ ಕುಟುಂಬ ನಿರ್ವಹಣೆಗೆ ಕಳಿಸುತ್ತಿದ್ದರು. ಅವರಿಗೆ ಹಣದ ಅವಶ್ಯಕತೆ ಬೀಳುತ್ತಿದ್ದುದು ಎಂದರೆ ರಜೆಗೆ ಮನೆಗೆ ಹೋಗುವ ಸಂಧರ್ಭದಲ್ಲಿ ರೇಲ್ವೆ ಟಿಕೆಟ್ ಮಾಡಿಸಲು ಮಾತ್ರ. ವರುಷಗಳು ಕಳೆದ ನಂತರ ಅವರು ತನಗೆ ಬೋರ್ಡಿಂಗ್ ಹೌಸ್ ವೆಚ್ಚ ಮಾಡಿದ ಹಣವನ್ನು ಸರಿಯಾಗಿ ಲೆಖ್ಖಹಾಕಿ ಚೆಕ್ ಮೂಲಕ ಹಿಂದಿರುಗಿಸಿದರು. ಇದು ಮುರಾರ್ಜಿಯವರಿಗಿರುವ ಹಣದ ಲೆಖ್ಖಾಚಾರ ಮತ್ತು ಯಾವುದೇ ರೀತಿಯ ಋಣಭಾರವನ್ನು ತಮ್ಮ ಮೇಲೆ ಇಟ್ಟು ಕೊಳ್ಳದ ನೈತಿಕ ಪ್ರಜ್ಞೆಯನ್ನು ತೋರಿಸುತ್ತದೆ.


     ಮುಜರಾರ್ಜಿಯವರು ಮೆಟ್ರಿಕ್ಯುಲೇಶನ್ ಪರೀಕ್ಷೆಯನ್ನು 1912 ನೇ ಸಾಲಿನಲ್ಲಿ ಮುಗಿಸಿ, ಮುಂಬೈಯ ವಿಲ್ಸನ್ ಕಾಲೇಜನ್ನು ಸೇರಿ ಪ್ರಥಮ ದರ್ಜೆಯಲ್ಲಿ ಪದವಿ ಪರೀಕ್ಷೆಯನ್ನು ಪಾಸು ಮಾಡಿದರು. ತಮ್ಮ ಕಾಲೇಜು ದಿನಗಳಲ್ಲಿ ಅವರು ಯುನಿವರ್ಸಿಟಿ ಆಫ್ ಟ್ರೇನಿಂಗ್ ಕಾಪ್ರ್ಸನಲ್ಲಿ ವ್ಹಾಯಿಸ್ರಾಯ್ ಕಮೀಶನ್ ಆಫೀಸರ್ ಆಗಿದ್ದರು.ಅವರು ತಮ್ಮ ಪದವಿಯ ನಂತರ 1918 ರಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಡೆಪ್ಯೂಟಿ ಕಲೆಕ್ಟರ್ ಹುದ್ದೆಗೆ ನೇಮಕಾತಿಯ ನಿರೀಕ್ಷೆ ಯಲ್ಲಿದ್ದಾಗ, 24 ವರ್ಷ ಪ್ರಾಯದ ಅವರನ್ನು ಸಂದರ್ಶಿಸಿಸಿದ ಅಧಿಕಾರಿ  ಒಂದು ವೇಳೆ ನೀವು ಆಯ್ಕೆಯಾಗದೆ ಹೋದರೆ ಖಿನ್ನರಾಗುತ್ತೀರಾ  ಎಂದು ಕೇಳಿದಾಗ ಮುರಾರ್ಜಿಯವರು ನಿರ್ಭೀತರಾಗಿ  ಯಾಕೆ ಖಿನ್ನನಾಗಲಿ ವಿಶಾಲ ಜಗತ್ತು ನನ್ನ ಮುಂದೆ ಇದೆ  ಎಂದು ಉತ್ತರಿಸಿದರಂತೆ. ಅವರಲ್ಲಿಯ ಸ್ವನಂಬಿಕೆ, ಆತ್ಮ ಗೌರವಗಳು ಅವರಿಗೆ ಮಾರ್ಗದರ್ಶನ ನೀಡಿ ಅವರನ್ನು ಜೀವನದಲ್ಲಿ ಮುನ್ನಡೆಸಿದವು. ಅವರು 1918ರಲ್ಲಿ ಬಾಂಬೆ ಪ್ರೊವಿನ್ಸಿಯಲ್ ಸಿವಿಲ್ ಸರ್ವೀಸ್ ಗೆ ಸೇರಿ ಹನ್ನೆರಡು ವರ್ಷಗಳ ಕಾಲ ವಿವಿಧ ರೀತಿಯಲ್ಲಿ ಕರ್ತವ್ಯವನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಿದರು.


     ಮಹತ್ಮಾ ಗಾಂಧಿಯವರು ಎಲ್ಲ ಸರ್ಕಾರಿ ನೌಕರರಿಗೆ ತಮ್ಮ ನೌಕರಿಗಳನ್ನು ತ್ಯಜಿಸಲು ಕರೆ ನೀಡಿದಾಗ, ಆ ಕರೆಗೆ ಓಗೊಟ್ಟ ಮುರಾರ್ಜಿಯವರು 1930 ನೇ ಸಾಲಿನಲ್ಲಿ ತಾವು ನಿರ್ವಹಿಸುತ್ತಿದ್ದ ಡೆಪ್ಯೂಟಿ ಕಲೆಕ್ಟರ್ ಹುದ್ದೆಗೆ ರಾಜಿನಾಮೆ ನೀಡಿ ' ಸಿವಿಲ್ ಡಿಸ್-ಓಬಿಡಿಯನ್ಸ್ ಮೂವ್ಹಮೆಂಟ ' ನಲ್ಲಿ ಸೇರಿಕೊಂಡರು. ಮುಂದೆ ನಾಲ್ಕು ವರ್ಷ ಗಳ ಅವಧಿಯಲ್ಲಿ ಸ್ವಾತಂತ್ರ ಚಳುವಳಿಯಲ್ಲಿ ಪಾಲ್ಗೊಂಡ ಕಾರಣಕ್ಕ್ಕಾಗಿ ಮೂರು ಬಾರಿ ಶಿಕ್ಷೆಯನ್ನು ಅನುಭವಿ ಸಿದರು.  ಮುರಾರ್ಜಿಯವರು ಗುಜರಾತ್ ಪ್ರದೇಶ ಕಾಗ್ರೆಸ್ ಕಮಿಟಿಯ ಸದಸ್ಯರಾಗಿ ಚುನಾಯಿತರಾಗಿ ಸದರಿ ಕಮಿಟಿಯ ಕಾರ್ಯದರ್ಶಿಯಾಗಿ ನೇಮಕ ಗೊಂಡರು. ಆ ಹುದ್ದೆಯಲ್ಲಿ 1931 ರಿಂದ 1937 ರ ವರೆಗೆ ಆರು ವರ್ಷಗಳ ಕಾಲ ಮತ್ತು 1939 ರಿಂದ 1946 ರ ವರೆಗೆ ಕಾರ್ಯ ನಿರ್ವಹಿಸಿದರು.


     1937 ರಲ್ಲಿ ಮುರಾರ್ಜಿಯವರು ಮುಂಬೈ ಲೆಜಿಸ್ಲೇಟಿವ್ಹ ಅಸೆಂಬ್ಲಿಗೆ ಆಯ್ಕೆಯಾಗಿ ಮೊದಲ ಕಾಂಗ್ರೆಸ್ ಸರ್ಕಾರದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಮಂತ್ರಿಯಗಿ 1937 ರಿಂದ 1939 ರವರಗೆ ಕಾರ್ಯ ನಿರ್ವಹಿಸಿದರು. ಅವರ ಮಂತ್ರಿ ಮಂಡಳ ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರಿಗೆ ನಿವೃತ್ತಿ ವೇತನ ಮಂಜೂರು ಮಾಡಲು ನಿರ್ಣಯ ಕೈಗೊಂಡಿತು. ಒಂದು ದಿನ ಮೊದಲೆ ಮುರಾರ್ಜಿಯವರು ತಮ್ಮ ವ್ಯಾಪ್ತಿಗೆ ಸಂಬಂಧ ಪಟ್ಟಂತೆ ನಿವೃತ್ತಿ ವೇತನ ಮಂಜೂರಾತಿ ಆಜ್ಞೆಗೆ ಸಹಿ ಮಾಡಿದರು. ನಂತರ ಅವರು 1939 ರಲ್ಲಿ ವೈಯಕ್ತಿಕವಾಗಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬಂಧಿಸಲ್ಪಟ್ಟು ಮೂರು ವರ್ಷಗಳ ಕಾಲ ಕಾರಾಗೃಹ ವಾಸವನ್ನು ಅನುಭವಿಸಿದರು.


     1946 ರಲ್ಲಿ ಮತ್ತೆ ಮುರಾರ್ಜಿಯವರು ಮುಂಬೈ ಲೆಜಿಸ್ಲೇಟಿವ್ಹ ಅಸೆಂಬ್ಲಿಗೆ ಆಯ್ಕೆಯಾಗಿ 1952 ರವರೆಗೆ ಗೃಹ ಮತ್ತು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದರು. 1952 ರ ಪ್ರಥಮ ಸಾರ್ವತ್ರಿಕ ಚುನವಣೆಯಲ್ಲಿ ಆಯ್ಕೆಯಾಗಿ ಮುಂಬೈ ರಾಜ್ಯದ ಮುಖ್ಯಮಂತ್ರಿಯಾಗಿ 1956 ರ ರಾಜ್ಯಗಳ ಮರುವಿಂಗಡಣಾ ಅವಧಿಯ ವರೆಗೆ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ಭೂಗಂದಾಯ ಆಡಳಿತದಲ್ಲಿ ಪೋಲೀಸು ಮತ್ತು ಜೈಲು ವ್ಯವಸ್ಥೆಯಲ್ಲಿ ಪರಿಷ್ಕರಣೆಯನ್ನು ತಂದರು. .ಭೂಮಿಯನ್ನು ಉಳುವವ ಮತ್ತು ಮಾಲಿಕ ಇಬ್ಬರಿಗೂ ಅನುಕೂಲ ವಾಗುವ ರೀತಿ ಯಲ್ಲಿ ಕಾನೂನು ತಿದ್ದುಪಡಿಯನ್ನು ಮಾಡಿದರು. ಭಾರತದ ಎಲ್ಲ ರಾಜ್ಯಗಳು ಈ ದಿಸೆಯಲ್ಲಿ ಏನೂ ಮಾಡದ ಮೊದಲೆ ತಮ್ಮ ಆಡಳಿತಾವಧಿಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದರು. ಮುಂಬೈ ರಾಜ್ಯದಲ್ಲಿ ಅವರ ಆಡಳಿತ ತನ್ನ ಕ್ರಿಯಾತ್ಮಕತೆ ಬಲ ಹಾಗೂ ಭಾವೈಕ್ಯತೆಗೆ ಒಳ್ಳೆಯ ಹೆಸರು ಪಡೆದಿತ್ತು. ಅವರು 1956 ರ ನವಂಬರ್ 1 ರಂದು ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಯಾಗಿ ಕೇಂದ್ರ ಸಂಪುಟವನ್ನು ಸೇರಿ 1958ರ ಮಾರ್ಚ 22 ರಂದು ಹಣಕಾಸು ಖಾತೆಯನ್ನು ಪಡೆದರು.


     ಮುರಾರ್ಜಿ ದೇಸಾಯಿಯವರು ' ಇಂಟರ್ ನ್ಯಾಶನಲ್ ಮೊನೀಟರಿ ಫಂಡ್ ' ಮತ್ತು ' ಇಂಟರ್ ನ್ಯಾಶನಲ್ ಬ್ಯಾಂಕ್ ಫಾರ್ ರೀಕಸ್ಸ್ಟ್ರಕ್ಶನ್ ಆಂಡ್ ಡೆವಲಪ್ಮೆಂಟ್ ' ಮಂಡಳಿಗಳ ಗವರ್ನರ್ ಆಗಿದ್ದರು. ವಾರ್ಷಿಕ ಸಭೆಗಳಲ್ಲಿ ಭಾರತೀಯ ನಿಯೋಗದ ನಾಯಕತ್ವವನ್ನು ವಹಿಸಿದ್ದರು, ಅದೇ ರೀತಿ ಕಾಮನ್ವೆಲ್ತ್ ವ್ಯಾಪಾರ ಮತ್ತು ಹಣಕಾಸು ಸಮಾವೇಶ 1960 ಮತ್ತು 1961 ರಲ್ಲಿ ಲಂಡನ್ನಲ್ಲಿ ನಡೆದಾಗ ಭಾರತ ಸರ್ಕಾರದ ಪರವಾಗಿ ಭಾಗವಹಿಸಿದ್ದರು. 1962 ರ ಜುಲೈನಲ್ಲಿ ಬ್ರಸೆಲ್ಸ್, ಬಾನ್, ಜಿನಿವಾ, ಪ್ಯಾರಿಸ್ ಮತ್ತು ರೋಮ್ ದೇಶಗಳಿಗೆ ಭೇಡಿ ನೀಡಿ ಭಾರತದ ಮೂರನೇ ಪಂಚವಾರ್ಷಿಕ ಯೋಜನೆಗೆ ವಿದೇಶಿ ಸಹಾಯವನ್ನು ಒಟ್ಟುಗೂಡಿಸಿದರು. ಅದರಂತೆ 1962 ರಲ್ಲಿ ಸಪ್ಟಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಅದೇ ಉದ್ದೇಶಕ್ಕಾಗಿ ವಾಷಿಂಗ್ಟನ್, ಓಟಾವಾ ಮತ್ತು ಟೋಕಿಯೊ ಗಳಿಗೆ ಭೇಟಿ ನೀಡಿದರು.


     ಮುರಾರ್ಜಿಯವರು 1962 ಮತ್ತು 1967 ರ ಸಾರ್ವತ್ರಿಕ ಚುನಾವಣೆಯಲ್ಲಿ ಸೂರತ ಮತಕ್ಷೇತ್ರದಿಂದ ಚುನಾಯಿತರಾಗಿ 1 962 ರಲ್ಲಿ ಕೇಂದ್ರದಲ್ಲಿ ಹಣಕಾಸು ಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದರು. ಆದರೆ 1963 ರಲ್ಲಿ ಕಾಮರಾಜ ಯೋಜನೆಯನ್ವಯ ಹಣಕಾಸು ಮಂತ್ರಿಸ್ತಾನಕ್ಕೆ ರಾಜಿನಾಮೆ ನೀಡಿ ಕೇಂದ್ರ ಸಚಿವ ಸಂಪುಟದಿಂದ ಹೊರಬಂದರು. 1966-67 ರಲ್ಲಿ ಆಡ್ಮಿನಿಸ್ಟ್ರೇಟಿವ್ ರಿಫಾರ್ಮ ಕಮೀಶನ್ನಿನ ಅಧ್ಯಕ್ಷರಾದರು. 1967 ರಲ್ಲಿ ಮುರಾರ್ಜಿಯವರು ಇಂದಿರಾ ಗಾಂಧಿಯವರ ಸಚಿವ ಸಂಪುಟಕ್ಕೆ ಉಪ ಪ್ರಧಾನಿಯಾಗಿ ಸೇರಿ ಹಣಕಾಸು ಖಾತೆ ಯನ್ನು ವಹಿಸಿಕೊಂಡರು. ಅವರು 1967 ರ ಅಗಸ್ಟ್ನಲ್ಲಿ ಜಪಾನ್ಗೆ ಸೌಹಾರ್ದಯುತ ಭೇಟಿ ನೀಡಿದರು. ಆ ವರ್ಷ ಸಪ್ಟಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ದೀರ್ಘ ಪ್ರವಾಸ ಕೈಗೊಂಡು ಲಂಡನ್, ಮಾಂಟ್ರಿಯಲ್, ವಾಷಿಂಗಟನ್, ರಿಯೋಡಿಜನೈರೊ, ಪೋರ್ಟ ಆಫ್ ಸ್ಪೇನ್, ಪ್ಯಾರಿಸ್ ಮತ್ತು ಬಾನ್ ಗಳಿಗೆ ಭೇಟಿ ನೀಡಿದರು. 1969 ರ ಜುಲೈನಲ್ಲಿ ಉಪಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದರು.
    
     ಜನತಾಪಕ್ಷ ಸ್ಥಾಪನೆಯಲ್ಲಿ ಮುರಾರ್ಜಿ ದೇಸಾಯಿಯವರು ಪ್ರಮುಖ ಪಾತ್ರ ನಿರ್ವಹಿಸಿದರು. 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷದ ಅವರು ಕೇಂದ್ರದಲ್ಲಿ ಪ್ರಥಮ ಕಾಂಗ್ರೆಸ್ರಹಿತ ಸರ್ಕಾರದ ಮೊದಲ ಪ್ರಧಾನಮಂತ್ರಿ ಯಾದರು. 1 979 ರಲ್ಲಿ ಜನತಾಪಕ್ಷ ಇಬ್ಭಾಗ ವಾದಾಗ ಪ್ರಧಾನಮಂತ್ರಿ ಹುದ್ದೆಗೆ ರಾಜಿ ನಾಮೆಯನ್ನು ನೀಡಿ ನಂತರ ಸಕ್ರಿಯ ರಾಜಕರಣದಿಂದ ನಿವೃತ್ತರಾದರು.


     ಅವರು ಸ್ವದೇಶಿ ಮಂತ್ರವನ್ನು ಮತ್ತು ರಾಷ್ಟ್ರೀಯ ಶಿಕ್ಷಣವನ್ನು ಪ್ರಬಲವಾಗಿ ನಂಬಿದವರಾಗಿದ್ದರು. ಅಹಮ್ಮದಾ ಬಾದ ಗುಜರಾತ ವಿದ್ಯಾಪೀಠ, ಲೋಕಭಾರತಿ ಮತ್ತು ಗುಜಾರಾತಿನ ಗ್ರಾಮೀಣ ವಿಶ್ವವಿದ್ಯಾಲಯ ಅದರಂತೆ ಹಲವರು ಸಾಂಸ್ಕೃತಿಕ ಧಾರ್ಮಿಕ ಸಾಮಾಜಿಕ ಮತ್ತು ಅಕಾಡೆಮಿಕ್ ಸಂಘಟನೆಗಳ ಜೊತೆಗೆ ನಿಕಟ ಸಂಬಂಧ ವಿರಿಸಿ ಕೊಂಡಿದ್ದರು. ಅವರ ರಾಷ್ಟ್ರೀಯ ನಾಯಕರೆಂಬ ಪ್ರಭಾವಳಿ ಅವರು ಸುಮಾರು ಐದು ದಶಕಗಳ ಕಾಲ ದೇಶಾಭಿಮಾನದಿಂದ ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಆಧರಿಸಿ ಬಂದಂತಹುದು. ಅವರ ಪೂರ್ತ ಜೀವನ ಆತ್ಮವಿಶ್ವಾಸ, ಧೈರ್ಯ, ನಿರ್ಭಯತನ ಮತ್ತು ಗಾಂಧಿತತ್ವಗಳನ್ನು ಆಧರಿಸಿ ರೂಪಗೊಂಡ ಜೀವನದ ದಾಖಲೆ ಯಾಗಿತ್ತು. ಮಾನವನ ಏಳಿಗೆಯ ಬಗ್ಗೆ ಅವರ ಕಳಕಳಿ ಪ್ರಶ್ನಾತೀತವಾಗಿತ್ತು. ಆದಾಗ್ಯೂ ಅವರ ಅಚಲನಿಷ್ಟೆ ಸತ್ಯ ಪರಿಪಾಲನೆಯ ಅವರ ಒಲವುಗಳು ಅಚಲವಾಗಿದ್ದವು. ಅವರ ವಿರೋಧಿಗಳೂ ಸಹ ಎಂದೂ ಅವರ ವಿಧೇಯತೆ ಯನ್ನು ಸಂಶಯದಿಂದ ಕಾಣಲಿಲ್ಲ.


     ಈ ನಿಜ ಅರ್ಥದ ಗಾಂಧಿವಾದಿ ಮುರಾರ್ಜಿ ದೇಸಾಯಿ ಜೀವನ ಪೂರ್ತಿಖಾದಿಯನ್ನೆ ಧರಿಸಿದರು.
ಆಸ್ತಿಕರಾಗಿದ್ದರೂ ಮಂತ್ರವಿಧಿಗಳನ್ನು ಬಲ್ಲವರಾಗಿರಲಿಲ್ಲ, ಸಸ್ಯಾಹಾರಿಯಾಗಿದ್ದರು. ನಿಸರ್ಗಾರಾಧಕ ರಾಗಿದ್ದರು.  ಸಿಗರೇಟು ಸೇದುತ್ತಿರಲಿಲ್ಲ, ಮಧ್ಯಪಾನ ಮಾಡುವವರಾಗಿರಲಿಲ್ಲ, ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಎಲ್ಲಿ ಮೂಲತತ್ವಗಳು ಅಡಕ ಗೊಂಡಿರುವವೋ ಅಲ್ಲಿ ಯವುದೇ ಕಾರಣಕ್ಕೋಸ್ಕರ ಅಗ್ಗೆದ ಜನಪ್ರಿಯತೆಗಾಗಿ ಯಾಗಲಿ ಸಿರಿ ಸಂಪತ್ತಿನ ಕಾರಣಕ್ಕಾಗಿಯಾಗಲಿ ಹೊಂದಾಣಿಕೆ ಮಾಡಿಕೊಳ್ಳ ಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.


     ಮುರಾರ್ಜಿ ದೇಸಾಯಿಯವರು ಭಾರತ ದೇಶಕ್ಕೆ ಸಲ್ಲಿಸಿದ ಎದ್ದು ಕಾಣುವಂತಹ ಸೇವೆಯನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ' ಭಾರತರತ್ನ ' ಕೊಟ್ಟು ಗೌರವಿಸಲಾಗಿದೆ. ಅದಕ್ಕೂ ಮೊದಲು ನಮ್ಮ ನೆರೆಯ ದೇಶ ಪಾಕಿಸ್ತಾನವೂ ಸಹ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಮುರಾರ್ಜಿಯ ವರಿಗೆ ನೀಡಿ ಗೌರವಿಸಿದ್ದು ಗಮನಾರ್ಹವಾದ ಸಂಗತಿ. 1995 ರ ಫೆಬ್ರುವರಿ ಕೊನೆಯಂದು ಮುರಾರ್ಜಿ ಯವರು 99 ವರ್ಷ ಪೂರೈಸಿ ನೂರನೆ ವರ್ಷಕ್ಕೆ ಕಾಲಿಟ್ಟಿದ್ದರು. ಆಗ ಸಂದರ್ಶಕರು ಅವರನ್ನು ದೇಶದ ಯುವ ಜನತೆಗೆ ತಮ್ಮ ಸಂದೇಶ ವೇನು ಎಂದು ಕೇಳಲಾಗಿ ಅವರು  ಯುವಕರು ನಿರ್ಭಯರಾಗಿರಬೇಕು, ಸತ್ಯನಿಷ್ಟ ಜೀವನವನ್ನು ನಡೆಸಬೇಕು, ನಮ್ರರಾಗಿರಬೇಕು, ದೇಶದ ಮೌಲ್ಯಗಳಿಗೆ ಧಕ್ಕೆತರುವಂತಹ ಯವುದನ್ನೂ ಅವರು ಮಾಡಬಾರದು, ಉನ್ನತಗುರಿ ಹೊಂದಿರಬೇಕು, ತಾಯ್ನಾಡಿಗೆ ಸಮರ್ಪಣಬಾವದಿಂದ ನಡೆದುಕೊಳ್ಳಬೇಕು  ಎಂದು ಹೇಳಿದ್ದರು. ಆಗ ಇಡೀ ದೇಶ ಅವರ ಶತಮಾನೋತ್ಸವ ವರ್ಷದ ಆಚರಣೆಯ ಸಂಭ್ರಮದಲ್ಲಿತ್ತು., ಆದರೆ ಅದು ನಡೆಯಲಿಲ್ಲ.


     ಅವರು 1995 ರ ಎಪ್ರಿಲ್ 10 ರಂದು ತಮ್ಮ ಇಹಲೋಕಯಾತ್ರೆಯನ್ನು ಮುಗಿಸಿದರು. ಅವರ ಉತ್ತಮ ತರಹದ ಗುಣಧರ್ಮಗಳು ಅವರನ್ನು ರಾಷ್ಟ್ರೀಯ ಅಗ್ರಪಂಕ್ತಿಯ ನಾಯಕರ ಪೈಕಿ ಒಬ್ಬರೆಂದು ಪರಿಗಣಿಸುವಂತೆ ಮಾಡಿವೆ. ಮುಂದಿನ ಪೀಳಿಗೆ ಅವರನ್ನು ಒಬ್ಬ ನಿಜವಾದ ಗಾಂಧೀವಾದಿ ಎಂದೂ, ಸ್ವಾತಂತ್ರ ಹೋರಾಟದ ಕಟ್ಟಾಳು ಎಂದೂ, ಸಮರ್ಥ ಆಡಳಿತಾಧಿಕಾರಿ ಎಂದೂ, ಅಲ್ಲದೆ ಒಬ್ಬ ಧೈರ್ಯಶಾಲಿ ಮೂಲ ತತ್ವಾಧಾರಿತ ಮನುಷ್ಚರೆಂದೂ ಪರಿಗಣಿಸುತ್ತದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಆಶೆಗಣ್ಣುಗಳಿಂದ ನೋಡುತ್ತಿರುವ ನಮ್ಮ ಯುವಜನತೆ ಅವರ ಜನ್ಮದಿನದ ಈ ಶುಭ ಮುಹೂರ್ತದಂದು ( ಫೆಬ್ರುವರಿ 29 ) ಮುರಾರ್ಜಿಯವರ ತತ್ವ ಧೋರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವಂತಾಗಲಿ, ಸಮರ್ಥ ಪ್ರಜೆಗಳಾಗಿ ದೇಶದ ಉನ್ನತಿಗೆ ಶ್ರಮಿಸುವಂತಾಗಲಿ. ಗಾಂಧಿ ಯುಗದ ಮೌಲ್ಯಗಳ ಪುನರುತ್ಥಾನ ವಾಗಲಿ.


    ಚಿತ್ರ ಕೃಪೆ: ಅಂತರ್ ಜಾಲ                                                                    *****
 

Rating
No votes yet

Comments