ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...(ಭಾಗ 2)

ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...(ಭಾಗ 2)

ಪ್ರೀತಿ ಎಂದರೇನು? ಜೀವನ ಎಂದರೇನು? ಎಂಬುದನ್ನು ಪದಗಳಲ್ಲಿ ಹಿಡಿದಿಡುವಷ್ಟೇ ಕಷ್ಟವಾದ ಕೆಲಸ ಪ್ರೀತಿ ಎಂದರೇನು ಎಂಬುದನ್ನು ವಿವರಿಸುವುದು. ಜೀವನವೇ ಪ್ರೀತಿ. ಪ್ರೀತಿಯೇ ಜೀವನ. ಅದಕ್ಕಾಗಿಯೇ ಹಿರಿಯರು "ಒಲವೇ ಜೀವನ ಸಾಕ್ಷಾತ್ಕಾರ" ಎಂದಿರುವುದು. ಪ್ರೀತಿಯ ಮೊದಲ ಪಾಠ ಎಂದರೆ ಪ್ರೀತಿಗಾಗಿ ಕೇಳದಿರುವುದು. ಬರೀ ನೀಡುವುದು. ನೀಡುವುದನ್ನು ಕಲಿತರೆ, ಪ್ರೀತಿಸುವುದನ್ನು ಕಲಿತಂತೆ. ಆದರೆ, ಈಗ ನಡೆಯುತ್ತಿರುವುದು ಅದಕ್ಕೆ ವಿರುದ್ಧ. ಅವರು ನೀಡುವಾಗಲೂ ಅದು ವಾಪಸ್ಸು ಬರುತ್ತದೆಯೋ ಇಲ್ಲವೋ ಎಂದು ಆಲೋಚಿಸಿಯೇ ನೀಡುತ್ತಾರೆ. ಅದಕ್ಕೆ ಅದು ಚೌಕಾಸಿಯಾಗಿರುವುದು. ಜನ ಪ್ರೀತಿಯನ್ನು ಹಂಚಿಕೊಳ್ಳುವುದಿಲ್ಲ. ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ಅವರು ಷರತ್ತಿನ ಮೇಲೆ ಹಂಚಿಕೊಳ್ಳುತ್ತಾರೆ. ಅವರು ತಾವು ನೀಡಿದ್ದು ತಮಗೆ ವಾಪಸ್ಸು ಬರುವುದೋ ಇಲ್ಲವೋ ಎಂದು ಕಾಯುತ್ತಾ ಕುಳಿತಿರುತ್ತಾರೆ.


ಮೂರ್ಖ ಜನ! ಪ್ರೀತಿಯ ಸಹಜ ಕಾರ್ಯ ಚಟುವಟಿಕೆಯನ್ನು ತಿಳಿದಿಲ್ಲ. ನೀವು ಸುಮ್ಮನೆ ಸುರಿಯಿರಿ, ಅದು ತಾನೇ ತಾನಾಗಿ ಬರುತ್ತದೆ. ನೀಡುವುದನ್ನು ಕಲಿತರೆ, ಪ್ರೀತಿಸುವುದನ್ನು ಕಲಿತಂತೆ ಒಬ್ಬ ಒಳ್ಳೆಯ ಪ್ರೇಮಿ ಯಾವಾಗಲೂ ಪ್ರೀತಿಯನ್ನು ಕೊಡುವುದಕ್ಕೆ ಸಿದ್ಧನಿರುತ್ತಾನೆ. ಅದು ವಾಪಸ್ಸಾಗುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ಖಂಡಿತ ಹಿಂದಿರುಗುತ್ತದೆ. ಏಕೆಂದರೆ, ಪ್ರಕೃತಿಯಿರುವುದೇ ಹಾಗೆ. ನೀವು ಬೆಟ್ಟ ಗುಡ್ಡಗಳು, ಕಣಿವೆಗಳೆಡೆ ಹೋಗಿ ಹಾಡಿ. ಅವು ನಿಮಗೆ ಪ್ರತಿಕ್ರಿಯಿಸುತ್ತವೆ. ನೀವು ಕಣಿವೆಗಳಲ್ಲಿ ಎಲ್ಲಾದರೂ ಪ್ರತಿಧ್ವನಿಯ ಕೇಂದ್ರವನ್ನು ಕಂಡಿದ್ದೀರಾ? ನೀವು ಕೂಗಿದರೆ ಅದು ಕೂಗುತ್ತದೆ. ಹಾಡಿದರೆ ಹಾಡುತ್ತದೆ. ಪ್ರತಿಯೊಂದು ಹೃದಯವೂ ಒಂದು ಕಣಿವೆಯೇ. ನೀವದಕ್ಕೆ ಪ್ರೀತಿಯನ್ನು ಸುರಿದರೆ, ಅದು ಪ್ರತಿಕ್ರಿಯಿಸುತ್ತದೆ. ಅದು ಬರುತ್ತಿಲ್ಲ ಎಂದರೆ, ಆತಂಕ ಪಡಬೇಕಾದುದಿಲ್ಲ. ಏಕೆಂದರೆ, ಒಬ್ಬ ನಿಜವಾದ ಪ್ರೇಮಿಗೆ ತಿಳಿದಿರುತ್ತದೆ ಪ್ರೀತಿ ಎಂದರೆ ಸಂತೋಷವಾಗಿರುವುದು ಎಂದು. ಅದು ಬಂದರೆ ಸಂತೋಷ. ಆಗ ಸಂತೋಷ ಹೆಚ್ಚುತ್ತದೆ. ಅದು ಎಂದೂ ಹಿಂದಿರುಗಿ ಬರಲಿಲ್ಲ ಎಂದರೆ, ಪ್ರೀತಿಯ ಆ ಕ್ರಿಯೆಯಲ್ಲಿಯೇ ನೀವು ಎಷ್ಟು ಸಂತೋಷವಾಗಿ, ಎಷ್ಟು ಅತ್ಯುತ್ಸಾಹದಿಂದ ಇರುತ್ತೀರೆಂದರೆ, ಆ ಪ್ರೀತಿ ಹಿಂದಿರುಗುವುದರ ಬಗ್ಗೆ ನೀವು ತಲೆಯೇ ಕೆಡಿಸಿಕೊಳ್ಳುವುದಿಲ್ಲ.


ಪ್ರೀತಿಸುವುದರಿಂದಲೇ ಪ್ರೀತಿಸಲು ಸಾಧ್ಯ ಪ್ರೀತಿ ತನ್ನದೇ ಆದ ಒಂದು ರೀತಿಯ ಜಟಿಲವಾದಂತಹ ಸಂತೋಷವನ್ನು ಹೊಂದಿದೆ. ನೀವು ಪ್ರೀತಿಸಿದಾಗಲೇ ಅದು ಸಂಭವಿಸಲು ಸಾಧ್ಯ. ಅದಕ್ಕಾಗಿ ಫಲಿತಾಂಶಕ್ಕಾಗಿ ಕಾಯುವ ಅಗತ್ಯವಿಲ್ಲ. ಪ್ರೀತಿಸಲು ಆರಂಭಿಸಿ. ಆಗಾಗ್ಗೆ, ಪ್ರೀತಿ ನಿಮ್ಮೆಡೆಗೆ ಬರುವುದನ್ನು ನೀವು ನೋಡಲಾರಂಭಿಸುತ್ತೀರಿ. ಯಾರೇ ಆಗಲಿ ಪ್ರೀತಿ ಎಂದರೇನು ಎಂಬುದನ್ನು ಕಂಡುಕೊಳ್ಳುವುದೇ ಪ್ರೀತಿಸುವುದರಿಂದ. ಈಜುತ್ತಾ ಈಜುತ್ತಾ ಈಜು ಕಲಿಯುವ ಹಾಗೆ, ಪ್ರೀತಿಸುವುದರಿಂದಲೇ ಪ್ರೀತಿಸಲು ಸಾಧ್ಯ. ಪ್ರೀತಿ ಎನ್ನುವುದು ತುಂಬಾ ಕಷ್ಟವಾದುದು. ಏಕೆಂದರೆ, ಅದು ಮತ್ತೊಬ್ಬ ವ್ಯಕ್ತಿಯೊಂದಿಗೆ ನರ್ತಿಸಿದ ಹಾಗೆ. ನಿಮ್ಮೊಂದಿಗೆ ನರ್ತಿಸುವ ವ್ಯಕ್ತಿಗೂ ನೃತ್ಯ ಎಂದರೇನು ಎಂಬುದು ತಿಳಿದಿರಬೇಕಾಗುತ್ತದೆ. ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವುದು, ನಿಜಕ್ಕೂ ಕಲೆಯೇ. ಇಬ್ಬರು ವ್ಯಕ್ತಿಗಳ ನಡುವೆ ಸಾಂಗತ್ಯ ಸೃಷ್ಟಿಸಬೇಕಾದರೆ...ಇಬ್ಬರು ವ್ಯಕ್ತಿಗಳೆಂದರೆ ಎರಡು ಬೇರೆ ಬೇರೆ ಪ್ರಪಂಚಗಳು. ಆ ಎರಡೂ ಪ್ರಪಂಚಗಳು ಹತ್ತಿರವಾದಾಗ, ಹೊಂದಿಕೊಳ್ಳಲು ನಿಮಗೆ ತಿಳಿಯದಿದ್ದಾಗ ಘರ್ಷಣೆಯಾಗಲೇಬೇಕು. ಪ್ರೀತಿ ಎನ್ನುವುದೇ ಸಾಂಗತ್ಯ(Harmony). ಸಂತೋಷ, ಆರೋಗ್ಯ, ಸಾಂಗತ್ಯ, ಎಲ್ಲವೂ ಪ್ರೀತಿಯಿಂದಲೇ ಹುಟ್ಟುತ್ತದೆ. ಅದಕ್ಕೇ ಹೇಳುವುದು ಪ್ರೀತಿಸಿ ಎಂದು. ಪ್ರೀತಿ ಹುಟ್ಟಿದಾಕ್ಷಣ ಮದುವೆಗೆ ಹಾರಿಬಿಡಬೇಡಿ.


ಮೊದಲು ಪ್ರೀತಿಸುವುದನ್ನು ಕಲಿಯಿರಿ. ಮೊದಲು ಒಳ್ಳೆಯ ಪ್ರೇಮಿಯಾಗಿ. ಆನಂತರ ಉಳಿದಿದ್ದು... ಪ್ರೀತಿಸುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಒಬ್ಬ ಭಿಕ್ಷುಕನ ಬಳಿ ಕೂಡ ನೀವು ಪ್ರೀತಿಯಿಂದ ಇರಲು ಸಾಧ್ಯ. ನೀವು ಯಾರಿಗಾದರೂ ಏನಾದರೂ ಕೊಡಲೇಬೇಕೆಂದೇನಿಲ್ಲ. ಕೇವಲ ಒಂದು ನಗುವನ್ನು ಬೀರಿ ಅಷ್ಟೆ ಸಾಕು. ಆ ಒಂದು ನಗುವೇ ನಿಮ್ಮ ಹೃದಯದ ಕದವನ್ನು ತರೆಯುತ್ತದೆ. ನಿಮ್ಮ ಹೃದಯವನ್ನು ಜೀವಂತವಾಗಿರಿಸುತ್ತದೆ. ನೀವು ನಿಮ್ಮ ಗೆಳತಿಯದೋ ಅಥವಾ ಅಪರಿಚಿತರದೋ ಕೈಯನ್ನು ಹಿಡಿಯಿರಿ. ನೀವು ಸರಿಯಾದ ವ್ಯಕ್ತಿ ಸಿಕ್ಕರೆ ಮಾತ್ರ ಪ್ರೀತಿಸುತ್ತೇನೆ ಎಂದು ಕಾದು ಕುಳಿತುಕೊಳ್ಳಬೇಡಿ. ಪ್ರೀತಿಸುತ್ತಾ ಹೋಗಿ. ನೀವು ಹೆಚ್ಚು ಹೆಚ್ಚು ಪ್ರೀತಿಸಿದಷ್ಟು ಸರಿಯಾದ ವ್ಯಕ್ತಿಯನ್ನು ಕಂಡುಕೊಳ್ಳುವ ಸಾಧ್ಯತೆಯಿರುತ್ತದೆ. ಏಕೆಂದರೆ, ನಿಮ್ಮ ಹೃದಯ ಅರಳಲಾರಂಭಿಸಿರುತ್ತದೆ. ಅರಳುತ್ತಿರುವ ಹೃದಯ ಹಲವು ದುಂಬಿಗಳನ್ನು, ಪ್ರೇಮಿಗಳನ್ನು ಸೆಳೆಯುತ್ತದೆ. ಸಂತಸದಿಂದಿರದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸೇರಿದಾಗ ಒಬ್ಬರಿಗೊಬ್ಬರು ಹೆಚ್ಚೆಚ್ಚು ಅಸಂತೋಷವನ್ನೇ ತಂದುಕೊಳ್ಳುತ್ತಾರೆ. ಪ್ರೀತಿ ಬೀಜವಾಗಿರಬಾರದು. ಅರಳುವ ಹೂವಾಗಿರಬೇಕು. ಪ್ರೀತಿ ಹಾಳಾಗುವುದು ಪ್ರೀತಿಸುವುದನ್ನು ತಿಳಿದಿರದ ಜನರಿಂದಾಗಿ. ಪ್ರೀತಿಯನ್ನು ಯಾವುದೂ ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ಅದು ನಿಜವಾಗಿಯೂ ಇದ್ದಲ್ಲಿ, ಅದು ಬೆಳೆಯುತ್ತಲೇ ಹೋಗುತ್ತದೆ. ನೀವು ಪ್ರೀತಿಯನ್ನು ಬೇರಾವುದಕ್ಕೋ ತಪ್ಪು ತಿಳಿಯಬಾರದಷ್ಟೆ. "ಪ್ರೀತಿ" ಎಂದರೆ, ನೀವು ಪ್ರೀತಿಸುವವರ "ಇರುವಿಕೆ"ಯಲ್ಲಿ ಇರುವುದು ಎಂದರ್ಥ. ಆ "ಇರುವಿಕೆ"ಯಲ್ಲಿಯೇ ನೀವು ತಕ್ಷಣವೇ ಸಂತಸಗೊಳ್ಳುತ್ತೀರಿ. ಒಬ್ಬರ ಇರುವಿಕೆಯೇ ನಿಮ್ಮ ಹೃದಯದಾಳದಲ್ಲಿರುವ ಯಾವುದನ್ನೋ ಪರಿಪೂರ್ಣವಾಗಿಸುತ್ತದೆ...ನಿಮ್ಮ ಹೃದಯದಲ್ಲಿ ಏನೋ ಹಾಡಲಾರಂಭಿಸುತ್ತದೆ... ನೀವು ಸಾಂಗತ್ಯದೆಡೆಗೆ ಸಾಗುತ್ತೀರಿ. ಇನ್ನೊಬ್ಬರ ಇರುವಿಕೆಯೇ ನಿಮ್ಮನ್ನು ಅವರೊಂದಿಗೆ ಇರುವಂತೆ ಮಾಡುತ್ತದೆ. ನೀವು ಹೆಚ್ಚು individual ಆಗುತ್ತೀರಿ, ಹೆಚ್ಚು ಕೇಂದ್ರೀಕೃತರಾಗುತ್ತೀರಿ, ಹೆಚ್ಚು grounded ಆಗುತ್ತೀರಿ. ಆಗ ಆದು ಪ್ರೀತಿ. ಪ್ರೀತಿಯ ಒಂದೇ ಒಂದು ಕ್ಷಣ ಪ್ರೀತಿಯ ಇಡೀ ಶಾಶ್ವತತೆಗೆ ಸಮ.


 


ಪ್ರೀತಿ ಎನ್ನುವುದು Passion ಅಲ್ಲ, Emotion ಅಲ್ಲ. ಪ್ರೀತಿ ಅನ್ನೋದು ಯಾರೋ ನಿಮ್ಮನ್ನು ಯಾವುದೋ ರೀತಿಯಲ್ಲಿ ಸಂಪೂರ್ಣವಾಗಿಸುವರೆನ್ನುವ ಒಂದು ತಿಳುವಳಿಕೆ. ಇನ್ನೊಬ್ಬರ ಇರುವಿಕೆ ನಿಮ್ಮ ಇರುವಿಕೆಯನ್ನು ಹೆಚ್ಚಿಸುತ್ತದೆ. ಪ್ರೀತಿ ಅನ್ನೋದು ನೀವು ನೀವಾಗಿರಲು ಸ್ವಾತಂತ್ರ್ಯವನ್ನು ನೀಡುತ್ತದೆ; ಅದು Possessiveness ಅಲ್ಲ. ಎಚ್ಚರದಿಂದಿರಿ. ಎಂದು ನೀವು ಆ ಒಂದು ಇರುವಿಕೆಯನ್ನು ಅನುಭವಿಸುತ್ತೀರೋ ಆ ಶುದ್ಧ ಇರುವಿಕೆಯನ್ನು ಅನುಭವಿಸುತ್ತೀರೋ ಆಗ ಏನೂ ಬೇಕಾಗುವುದಿಲ್ಲ. ಏನೇನೋ ಬೇಕಾಗುವುದಿಲ್ಲ. ನೀವು ಯಾರನ್ನೂ ಏನನ್ನೂ ಕೇಳುವುದಿಲ್ಲ. ಆ ಒಂದು ಇರುವಿಕೆಯೇ ನಿಮಗೆ ಎಲ್ಲ ಸಂತೋಷವನ್ನೂ ನೀಡುತ್ತದೆ. ನಿಮ್ಮೊಳಗೆ ಏನೋ ಒಂದು ಅರಳಲು ಆರಂಭಿಸುತ್ತದೆ. ಸಾವಿರಾರು ತಾವರೆಗಳು....ಆಗ ನೀವು ಪ್ರೀತಿಯಲ್ಲಿರುವಿರಿ, ಆಗ ನೀವು ವಾಸ್ತವ ಸೃಷ್ಟಿಸುವ ಎಲ್ಲಾ ಕಷ್ಟನಷ್ಟಗಳನ್ನು ಸಾಗಿ ಮುಂದೆ ಹೋಗುತ್ತೀರಿ. ಪ್ರೀತಿ ಅನಂತ, ಶಾಶ್ವತ. ಅದು ಇರುವಲ್ಲಿ ಬೆಳೆಯುತ್ತಾ, ಬೆಳೆಯುತ್ತಾ ಹೋಗುತ್ತದೆ. ಪ್ರೀತಿಗೆ ಆರಂಭ ಗೊತ್ತು. ಆದರೆ, ಅದಕ್ಕೆ ಅಂತ್ಯ ತಿಳಿದಿಲ್ಲ. ಪ್ರೀತಿ ಕೇವಲ ಸಂಬಂಧವಾಗದೆ ನಿಮ್ಮ ಇರುವಿಕೆಯ ಸ್ಥಿತಿಯಾಗುತ್ತದೋ ಅಂದು ಆ ತಾವರೆ ಅರಳುತ್ತದೆ. ಮಹಾಸುಗಂಧ ಪಸರಿಸುತ್ತದೆ. ಯಾವಾಗ ಪ್ರೀತಿ ಕೇವಲ ಒಂದು ಆಲೋಚನೆಯಾಗದೆ ನಿಮ್ಮ ಇರುವಿಕೆಯ ಸ್ಥಿತಿಯೇ ಆಗುತ್ತದೆಯೋ ಆಗ ಮಾತ್ರ ನೀವು ಅದರ ಸ್ವಾತಂತ್ರ್ಯವನ್ನು ತಿಳಿಯಲು ಸಾಧ್ಯ. ಆಗ ಪ್ರೀತಿ ಎನ್ನುವುದು ದೇವರು. ಅಂತಿಮ ಸತ್ಯವಾಗುತ್ತದೆ. ಯಾವಾಗ ಪ್ರೀತಿಗೆ ಯಾವುದೇ ಗುರಿ ಉದ್ದೇಶ ಇರುವುದಿಲ್ಲವೋ ಆಗ ಅದು ಯಾರೊಬ್ಬರಿಗೂ ಆಗಬಹುದಾದ ಒಂದು ಅದ್ಭುತವಾದ ಸಂಗತಿಯಾಗುತ್ತದೆ. ನೀವು ಅಂತಹ ಪ್ರೀತಿಯನ್ನು ಅನುಭವಿಸದೆ ಹೋದಲ್ಲಿ, ನೀವು ಜೀವನವನ್ನೇ ಅನುಭವಿಸಿಲ್ಲ ಎಂದರ್ಥ.


ಪ್ರೀತಿ ಎನ್ನುವುದು ಉಸಿರಾಟದ ಹಾಗಿರಬೇಕು. ಅದು ನಿಮ್ಮೊಳಗಿನ ಗುಣವಾಗಿರಬೇಕು - ನೀವು ಯಾರೊಂದಿಗೆ ಎಲ್ಲಿಯಾದರೂ ಇರಲಿ, ಅಥವಾ ನೀವು ಒಬ್ಬಂಟಿಯಾಗಿರಲಿ, ಪ್ರೀತಿ ಎನ್ನುವ ಪುಷ್ಪ ನಿಮ್ಮಲ್ಲಿ ಅರಳುತ್ತಲೇ ಇರುತ್ತದೆ. ಅದು ಯಾರೊಂದಿಗೊ ಪ್ರೀತಿಯಲ್ಲಿರುವುದು ಎನ್ನುವ ಪ್ರಶ್ನೆಯಲ್ಲ ಬದಲಿಗೆ, ಪ್ರೀತಿಯಾಗಿಯೇ ಇರುವ ಪ್ರಶ್ನೆ. ಜೀವನ ಎನ್ನುವುದೇ ಪ್ರೀತಿ ಅರಳುವುದಕ್ಕೆ ದೊರಕಿರುವ ಒಂದು ಅವಕಾಶ. ನೀವು ಜೀವಂತವಾಗಿದ್ದಲ್ಲಿ, ಆ ಅವಕಾಶ ನಿಮ್ಮ ಕಡೆ ಉಸಿರು ಇರುವವರೆಗೂ ಜೀವಂತವಾಗಿರುತ್ತದೆ. ನೀವು ಇಡೀ ಜೀವನವನ್ನು ಕಳೆದುಕೊಂಡಿರಬಹುದು. ಆದರೆ, ಒಂದು ಕಡೆಯ ಉಸಿರು, ಭೂಮಿಯ ಮೇಲಿನ ಕಡೆಯ ಕ್ಷಣ, ನೀವು ಪ್ರೀತಿ ಆಗಿದ್ದಲ್ಲಿ, ನೀವು ಏನನ್ನೂ ಕಳೆದುಕೊಂಡಿಲ್ಲ. ಏಕೆಂದರೆ, ಪ್ರೀತಿಯ ಒಂದೇ ಒಂದು ಕ್ಷಣ ಪ್ರೀತಿಯ ಇಡೀ ಶಾಶ್ವತತೆಗೆ ಸಮ. ಹೆಣ್ಣು ಗಂಡಿಗಿಂತ ಹೆಚ್ಚು ಪ್ರೀತಿಸಬಲ್ಲಳೇ? "ಗಂಡಿನ ಪ್ರೀತಿ ದೈಹಿಕ ಅವಶ್ಯಕತೆಯಷ್ಟೆ. ಆದರೆ, ಹೆಣ್ಣಿಗೆ ಹಾಗಲ್ಲ. ಆಕೆಯ ಪ್ರೀತಿ ಉನ್ನತವಾದುದು, ಮಹತ್ತಾದುದು, ಅದೊಂದು ಆಧ್ಯಾತ್ಮಿಕ ಅನುಭವ. ಅದಕ್ಕಾಗಿಯೇ ಆಕೆ ಒಂದು ಗಂಡನ್ನಷ್ಟೇ ಪ್ರೀತಿಸುತ್ತಾಳೆ. ಆದರೆ, ಗಂಡು ಹಾಗಲ್ಲ. ಗಂಡಿಗೆ ಜಗತ್ತಿನ ಎಲ್ಲಾ ಹೆಣ್ಣುಗಳು ಬೇಕೆನಿಸುತ್ತದೆ. ಆದರೂ, ಆತನಿಗೆ ತೃಪ್ತಿಯಿಲ್ಲ. ಆತನ ಅತೃಪ್ತಿ ಅನಂತ" ಎಂದು ಓಶೋ ಗಂಡು-ಹೆಣ್ಣಿನ ಪ್ರೀತಿಯ ಬಗ್ಗೆ ಹೇಳುತ್ತಾರೆ. ಹೆಣ್ಣಿಗೆ ಒಂದು ಪ್ರೀತಿಯೇ ಎಲ್ಲಾ ಸಂತೃಪ್ತಿಯನ್ನು, ಪರಿಪೂರ್ಣತೆಯನ್ನು ತಂದುಕೊಡಬಲ್ಲದು. ಏಕೆಂದರೆ, ಆಕೆ ಗಂಡಿನ ದೇಹವನ್ನು ನೋಡುವುದಿಲ್ಲ, ಅವಳು ಗಂಡಿನ ಒಳ ಗುಣಗಳನ್ನು ನೋಡುತ್ತಾಳೆ. ಸುಂದರವಾದ ದಷ್ಟಪುಷ್ಟವಾದ ದೇಹವನ್ನು ಹೊಂದಿದ ಗಂಡನ್ನು ನೋಡಿ ಆತನನ್ನೇ ಪ್ರೀತಿಸಲು ಹೋಗುವುದಿಲ್ಲ. ಅವಳು ಪ್ರೀತಿಸುವುದು ಚರಿಸ್ಮಾ ಇರುವಂತಹ ಗಂಡನ್ನು. ಬಣ್ಣಿಸಲಾಗದ, ಅತ್ಯಂತ ಆಕರ್ಷಕನಾದ- ಶೋಧಿಸುವಂತಹ ನಿಗೂಢತೆಯನ್ನುಳ್ಳ ಗಂಡನ್ನು. ಆಗಾದರೆ ತಾನು ಅವಳಿಗೆ ಹೇಗೆ ಕಾಣಬಹುದು? ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತು.


ಖಲೀಲ್ ಗಿಬ್ರಾನ್ "ಒಂದು ಛಾವಣಿಗೆ ಆಧಾರವಾಗಿರುವ ಎರಡು ಕಂಬಗಳ ಹಾಗೆ ಇರಿ. ಆದರೆ ಎಂದೂ ಇನ್ನೊಬ್ಬರ ಮೇಲೆ ಒಡೆತನ ಬೇಡ. ಅವರನ್ನು ಸ್ವತಂತ್ರವಾಗಿ ಬಿಡಿ. ಅದೇ ಛಾವಣಿಗೆ ಆಧಾರವಾಗಿರಿ. ಆ ಛಾವಣಿಯೇ ಪ್ರೀತಿ." ಯಾರಾದರೂ ಇಬ್ಬರು ವ್ಯಕ್ತಿಗಳು ಸೇರಿದರೆ, ಒಂದು ಹೊಸ ಪ್ರಪಂಚವೇ ಸೃಷ್ಟಿಯಾಗುತ್ತದೆ. ಅವರ ಆ ಸೇರುವಿಕೆಯಿಂದ ಈ ಮೊದಲು ಇರದಿದ್ದ, ಒಂದು ಹೊಸ ಸಂಗತಿ ಅಸ್ತಿತ್ವಕ್ಕೆ ಬರುತ್ತದೆ. ಆ ಒಂದು ಹೊಸ ಸಂಗತಿಯಿಂದ ಇಬ್ಬರೂ ವ್ಯಕ್ತಿಗಳು ಬದಲಾಗುತ್ತಾರೆ ಹಾಗೂ ರೂಪಾಂತರಗೊಳ್ಳುತ್ತಾರೆ. ಆರಂಭದಲ್ಲಿ ಕೇವಲ ಪರಿಧಿಗಳು ಸೇರುವುವು. ಆದರೆ ಸಂಬಂಧ ಆತ್ಮೀಯವಾಗುತ್ತಿದ್ದಂತೆ, ಹತ್ತಿರವಾಗುತ್ತಿದ್ದಂತೆ, ಆಳವಾಗುತ್ತಿದ್ದಂತೆ, ಆಗ, ಆಗಾಗ್ಗೆ ಕೇಂದ್ರಗಳು ಸೇರಲಾರಂಭಿಸುತ್ತವೆ. ಯಾವಾಗ ಕೇಂದ್ರಗಳು ಸೇರಲು ಆರಂಭಿಸುತ್ತವೋ ಆಗ ಅದೇ ಪ್ರೀತಿ. ಪ್ರೀತಿ ಎನ್ನುವುದು ಪ್ರತಿಕ್ಷಣದ ಹುಡುಕಾಟ ಪ್ರೀತಿ ತುಂಬಾ ಅಪರೂಪದ್ದು. ಒಬ್ಬ ವ್ಯಕ್ತಿಯನ್ನು ಆತನ ಕೇಂದ್ರದಲ್ಲಿ ಸೇರುವುದು ಒಂದು ಕ್ರಾಂತಿಯನ್ನು ಹಾದುಹೋದಂತೆ. ಏಕೆಂದರೆ, ನೀವು ಒಬ್ಬ ವ್ಯಕ್ತಿಯನ್ನು ಆತನ ಕೇಂದ್ರದಲ್ಲಿ ಸೇರಬೇಕು ಎಂದಿದ್ದರೆ, ನೀವು ಕೂಡ ಆ ವ್ಯಕ್ತಿಯನ್ನು ನಿಮ್ಮ ಕೇಂದ್ರಕ್ಕೆ ಬರಲು ಬಿಡಬೇಕಾಗುತ್ತದೆ. ಅದರಿಂದಾಗಿಯೇ ಪ್ರೀತಿ ಬೇರೆ ಪರಿಚಯ ಬೇರೆ ಎನ್ನುವುದನ್ನು ನಾವು ಮೊದಲು ಅರಿಯಬೇಕು.


ಪ್ರೀತಿಯಲ್ಲಿರುವವರಿಗೆ ಭಾಷೆಯೇ ಬೇಕಿಲ್ಲ. ಭಾಷೆಯ ಅಗತ್ಯವಿರುವುದು ಪ್ರೀತಿಸದವರಿಗಾಗಿ. ಪ್ರೇಮಿಗಳಿಗೆ ಮೌನದ ಭಾಷೆಯೊಂದೇ ಸಾಕು. ಏನೂ ಹೇಳದೆಯೇ ಎಲ್ಲವನ್ನೂ ಹೇಳಿಬಿಡುತ್ತಾರೆ. ಪ್ರೀತಿಯೇ ಸಹಜ ಧರ್ಮ. ಸ್ನೇಹ ಅನ್ನೋದು ಸಮಾನ ಜೀವಿಗಳು ಸಮಾಜ, ಸಂಸ್ಕೃತಿಯ ಬಂಧನಗಳಿಂದ ಸಂಪೂರ್ಣವಾಗಿ ಮುಕ್ತವಾಗಿ ತಮ್ಮ ನಿಜ ಪ್ರಕೃತಿಗೆ ಪ್ರಾಮಾಣಿಕರಾಗಿ ನಡೆಯುವವರ ನಡುವೆಯಷ್ಟೇ ಏರ್ಪಡಲು ಸಾಧ್ಯ. ಕೆಲವೊಂದು ಪ್ರೀತಿಯಿಂದ ಹುಟ್ಟುವುದಿಲ್ಲ. ಕರ್ತವ್ಯದಿಂದ ಹುಟ್ಟುತ್ತವೆ. ಸಂಬಂಧ ಆರ್ಥಿಕವಾಗಿರುವೆಡೆ ಯಾರೂ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ. ಒಂದು ಗಂಡು ಒಂದು ಹೆಣ್ಣು ಗೆಳೆಯರಾಗಿರಲು ಸಾಧ್ಯವೇ ಇಲ್ಲದಂತಹ ಸಮಾಜವನ್ನು ಮನುಷ್ಯ ಸೃಷ್ಟಿಸಿಕೊಂಡುಬಿಟ್ಟಿದ್ದಾನೆ. ನಾನು ಒಂದು ಹೆಣ್ಣನ್ನು ಪ್ರೀತಿಸುತ್ತೇನೆಂದರೆ, ಅವಳು ಒಂದು ದಿನ ಬೇರೆ ಇನ್ನಾರನ್ನೇ ಪ್ರೀತಿಸಿದರೂ ಅದು ನನಗೆ ಸಂತೋಷವೇ. ನಾನು ಅವಳನ್ನು ಪ್ರೀತಿಸುತ್ತೇನೆ. ಅವಳು ಸಂತೋಷವಾಗಿರುವುದನ್ನು ನಾನು ಬಯಸುತ್ತೇನೆ. ಅವಳು ಸಂತೋಷವಾಗಿರುವುದಕ್ಕೆ ನಾನು ಸಾಧ್ಯವಾದ ರೀತಿಯಲ್ಲಿ ಪ್ರಯತ್ನಿಸುತ್ತೇನೆ. ಅವಳು ನನಗಿಂತ ಹೆಚ್ಚಾಗಿ ಬೇರೆಯವರೊಂದಿಗೆ ಸಂತೋಷವಾಗಿರುತ್ತಾಳೆಂದರೆ, ಅದರಿಂದ ನನಗೆ ಯಾಕೆ ದುಃಖವಾಗಬೇಕು? ನೋವಾಗುವುದು ಅಹಂಗೆ. ಕಾರಣ, ನನಗಿಂತ ಉತ್ತಮನಾದವನನ್ನು ನನಗಿಂತ ಅವಳನ್ನು ಸಂತೋಷವಾಗಿರಿಸಬಲ್ಲವನನ್ನು ಅವಳು ಪ್ರೀತಿಸುತ್ತಿದ್ದಾಳಲ್ಲ ಎಂಬುದಕ್ಕೆ. ಅದೊಂದು ಸಣ್ಣ ಬದಲಾವಣೆಯಷ್ಟೆ.


ನೀವು ಒಬ್ಬರಿಗೊಬ್ಬರು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದಿರೆಂದರೆ, ನೀವು ನಿಮ್ಮ ಇಡೀ ಜೀವನ ಶಾಶ್ವತವಾಗಿ ಒಂದಾಗಿರಬಹುದು. ಏಕೆಂದರೆ, ಸ್ವಾತಂತ್ರ್ಯ ಎಂಬುದು ಜೀವನದ ಮಾನವ ಅತ್ಯುನ್ನತವಾದ ಮೌಲ್ಯ. ಪ್ರೀತಿ ದಾಸ್ಯವಲ್ಲ; ಅದು ಸ್ವಾತಂತ್ರ್ಯ ಪ್ರೀತಿಯನ್ನು ಬಲವಂತದಿಂದ ಪಡೆಯಬಾರದು, ಪ್ರೀತಿ ಒಂದು ಪ್ರಯತ್ನ ಕೂಡ ಆಗಬಾರದು. ಅದು ಮೊದಲನೆಯದಾಗಿ ಮನಸ್ಸಿನಲ್ಲಿಯೇ ಇರಬಾರದು. ಅದು ಘಟಿಸಿದಾಗ ಅದುವೇ ಸುಂದರ. ಅದು ಆಗುವಂತೆ ಮಾಡಿದಾಗ ಅದುವೇ ಕುರೂಪ. ಜೀವನದ ಕಷ್ಟಗಳನ್ನು ಪ್ರೀತಿಯಿಂದ ಮಾತ್ರವಷ್ಟೇ ಬಗೆಹರಿಸಬಹುದೇ ಹೊರತು, ಯಾವುದೇ ಹಿಂಸಾತ್ಮಕ ಮಾರ್ಗದಿಂದಲ್ಲ. ಮನುಷ್ಯ ಪ್ರಕೃತಿಯನ್ನು ಆಲಿಸಿದರೆ, ಆತನ ಎಲ್ಲಾ ಸಮಸ್ಯೆಗಳು ಕ್ಷಣದಲ್ಲಿಯೇ ಮಾಯವಾಗಿಬಿಡುತ್ತವೆ. ಆದರೆ, ಸಮಸ್ಯೆ ಇರುವದೇ ಇಲ್ಲಿ. ಜೈವಿಕವಾಗಿ, ಪುರುಷ(ಗಂಡು) ಪ್ರಕೃತಿ(ಹೆಣ್ಣಿ)ಗೂ, ಪ್ರಕೃತಿ ಪುರುಷನಿಗೂ ಆಕರ್ಷಿತರಾಗುತ್ತಾರೆ. ಆ ಆಕರ್ಷಣೆ ಯಾವಾಗಲೂ ಒಂದೇ ಆಗಿರುವುದಿಲ್ಲ. ಒಂದು ರೀತಿಯ ಸವಾಲಾಗಿರುವಂತಹದರೆಡೆಗೆ ನೀವು ಆಕರ್ಷಿತರಾಗುತ್ತೀರಿ. ಒಬ್ಬ ಸುಂದರ ಪುರುಷ ಸುಂದರ ಸ್ತ್ರೀಯನ್ನು ನೋಡಿದಾಗ, ಒಬ್ಬ ಸುಂದರ ಸ್ತ್ರೀ ಸುಂದರ ಪುರುಷನನ್ನು ನೋಡಿದಾಗ ಆಕರ್ಷಿತರಾಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ. ನಿಮ್ಮ ಹೃದಯದ ಬಡಿತ ಹೆಚ್ಚಾಗುತ್ತದೆ. ಆ ಕ್ಷಣದಲ್ಲಿ ಆ ಗಂಡಿಗೆ ಅಂತಹ ಹೆಣ್ಣಿನ ಜೊತೆ, ಆ ಹೆಣ್ಣಿಗೆ ಅಂತಹ ಗಂಡಿನ ಜೊತೆ ಜೀವಮಾನವಿಡೀ ಇರಬೇಕು ಎಂದೆನಿಸುವಷ್ಟು ಆಕರ್ಷಣೆ ತೀವ್ರವಾಗಿರುತ್ತದೆ. ಪ್ರೇಮಿಗಳು ಒಬ್ಬರನ್ನೊಬ್ಬರು ವಂಚಿಸುವುದಿಲ್ಲ. ಅವರು ಸತ್ಯವನ್ನೇ ನುಡಿಯುತ್ತಾರೆ. ಆದರೆ ಆ ಸತ್ಯ ಆ ಕ್ಷಣಕ್ಕಷ್ಟೇ ನಿಜವಾಗಿರುತ್ತದೆ. ನಾಳೆ ಅದೇ ಗಂಡಿಗೆ ಅದೇ ಹೆಣ್ಣು, ಅದೇ ಹೆಣ್ಣಿಗೆ ಅದೇ ಗಂಡು ಸುಂದರವಾಗಿ ಕಾಣದೇ ಹೋಗಬಹುದು. ಅಲ್ಲಿ ಬಿಚ್ಚಿಕೊಳ್ಳುತ್ತದೆ ಜೀವನದ ಕರಾಳ ಸತ್ಯ. ಯಾರೂ ಪ್ರೀತಿಯ ಬಲೆಯಲ್ಲಿ ಬೀಳಲಾರರು. ಎಲ್ಲರೂ ಇದೇ ತನಗೆ ಬೇಕಾಗಿರುವುದು ಎಂದು ಮೊದಲೇ ನಿರ್ಧರಿಸಿರುತ್ತಾರೆ.


ಎಷ್ಟೋ ಜನರನ್ನು ನೋಡಿರುವಂತಹ ವ್ಯಕ್ತಿ ಇಂಥದೇ ರೂಪ, ಇಂಥದೇ ಗುಣ ಇರುವವರು ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳುವವರು ತಿಳಿದಿರುತ್ತಾರೆ. ಯಾವಾಗಲೂ ನಿಮ್ಮನ್ನು ಮುಕ್ತವಾಗಿ, ಕೈಗೆಟಕುವ ಹಾಗಿರಿಸಿಕೊಳ್ಳಿ. ನೀವು ಯಾರೊಂದಿಗಾದರೂ ಇರಿ, ಆ ವ್ಯಕ್ತಿ ಸ್ಪಷ್ಟವಾಗಿ ತಿಳಿಯಲಿ ಇದು ನಮ್ಮ ನಡುವಿನ ಸ್ವಾತಂತ್ರ್ಯ. ಮದುವೆ ಪರವಾನಗಿ ಅಲ್ಲ. ಅಂತಹ ಸ್ವಾತಂತ್ರ್ಯವಿದ್ದೆಡೆ, ಭವಿಷ್ಯದೆಡೆಗೆ ಯಾವುದೇ ಭರವಸೆಗಳು ಇರದೆಡೆ ಮಾತ್ರ ಯಾರಾದರೂ ಸಂಧಿಸಲು ಸಾಧ್ಯ. ಏಕೆಂದರೆ ಭವಿಷ್ಯವನ್ನು ಕಂಡವರಾರು? ಇಬ್ಬರು ವ್ಯಕ್ತಿಗಳು ಇಂದು ಮನಪೂರ್ವಕವಾಗಿ, ಹೃದಯಪೂರ್ವಕವಾಗಿ ಜೊತೆಗಿದ್ದಾರೆಂದರೆ ಒಳ್ಳೆಯದು. ನಾಳೆ ಕೂಡ ಅವರು ಹಾಗೆಯೇ ಇರಬಯಸುತ್ತಾರೆಂದರೆ ಅದು ಕೂಡ ಒಳ್ಳೆಯದೇ. ಹಾಗಾಗಲಿಲ್ಲ ಎಂದರೆ, ಅದು ಅವರ ವೈಯುಕ್ತಿಕ ವಿಚಾರ. ಯಾರೂ ಕೂಡ ಅದರಲ್ಲಿ ತಲೆ ತೂರಿಸಬಾರದು. ಪ್ರೀತಿ ದಾಸ್ಯವಲ್ಲ; ಅದು ಸ್ವಾತಂತ್ರ್ಯ. ಜೀವನ ಎಷ್ಟು ಸರಳ, ಎಷ್ಟು ಸುಂದರ! ನೀವು ಯಾರನ್ನಾದರೂ ಪ್ರೀತಿಸುತ್ತೀರೆಂದರೆ, ಸ್ವಾತಂತ್ರ್ಯವೇ ನಿಮ್ಮನ್ನು ಕೂಡಿಸುವ ಕೊಂಡಿಯಾಗಿರಬೇಕು. ಜೀವನ ಎಷ್ಟು ಸರಳ, ಎಷ್ಟು ಸುಂದರ. ಇಲ್ಲದಿರುವುದು ಒಂದು ಮಾತ್ರ - ಅದೇ ಸ್ವಾತಂತ್ರ್ಯ. ಜೀವನ ಹರ್ಷಮಯವಾಗಿರಬೇಕು, rejoicing ಆಗಿರಬೇಕು. ಆಗ ಮಾತ್ರ ಗಂಡು ಹೆಣ್ಣಿನ ನಡುವೆ ಸ್ನೇಹ ಸಾಧ್ಯ. ನೀವು ನಿಮಗೆ ಗೊತ್ತಿದೆ ಎಂಬ ತೋರಿಕೆಯಿಂದ, ನಿಮಗೆ ಗೊತ್ತಿದೆ ಎಂಬ ನಂಬಿಕೆಯಿಂದ, ಕನಸು ಕಾಣುತ್ತೀರಿ. ಆದರೆ ನಿಮಗೆ ಏನೂ ಗೊತ್ತಿಲ್ಲ.


ಪ್ರೀತಿಯನ್ನು ಕಲಿಯಬೇಕು. ಅದು ಜಗತ್ತಿನಲ್ಲಿ ಇರುವ ಕಲೆಗಳಲ್ಲಿಯೇ ಅತ್ಯುನ್ನತವಾದುದು. ಹೌದು, ತಾನು ಕೂಡ ಇನ್ನೂ ಪ್ರೀತಿಸುವುದನ್ನು ಕಲಿಯಬೇಕಿದೆ. ತನ್ನೆಲ್ಲಾ ಪ್ರೀತಿಯನ್ನು ನೀಡಬೇಕಿದೆ ಎಂದು ಅವನು ಮನದಲ್ಲೇ ಅಂದುಕೊಂಡ. ಹೀಗೆ ಓಶೋ ದಿವ್ಯವಾಣಿ ತನ್ನ ಪ್ರೀತಿಗೆ ಬೆಳಕಾಗಿ ಬಂದುದನ್ನು ಕಂಡು ಹಿಗ್ಗಿದ. ತಾನು ತಿಳಿಯದೆಯೇ ಮಾಡಹೊರಟಿದ್ದ ಪ್ರಮಾದವನ್ನು ಬದಿಗೊತ್ತಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಬೇಡವೇ ಬೇಡ ಎಂದು ತೀರ್ಮಾನಿಸಿದ. ಏಕೆಂದರೆ, ಅಷ್ಟಕ್ಕೂ ತಾನು ಪ್ರೀತಿಸಿದವರು ಸುಖ ಶಾಂತಿ ನೆಮ್ಮದಿಯನ್ನು ಹೊಂದಿದರೆ ಸಾಕು ಎನ್ನುವುದೇ ತಾನೇ ನಿಜವಾದ ಪ್ರೀತಿ. ತನ್ನ ಜೀವನದ ರೀತಿ ನೀತಿಯೇ ಬೇರೆ. ಅಲ್ಲಿ ಅವಳಿಗೆ ಸುಖ ಸಿಗುತ್ತದೋ ಇಲ್ಲವೋ ಹೇಳಲಾರೆ!? ಅವಳನ್ನು ನೋಡಿದರೇ ತಿಳಿಯುತ್ತದೆ ಸುಖವೇ ಮೈವೆತ್ತಂತಿರುವ ಸಮೃದ್ಧಿಯ ಭಾವ ಅವಳಲ್ಲಿ ಇಡಿಯಾಗಿ ತುಂಬಿಕೊಂಡಿದೆ. ಅಷ್ಟಕ್ಕೂ ಅವಳಲ್ಲಿ ತನಗೆ ಪ್ರೀತಿ ಉಂಟಾಗಿನಿಂದ ತನ್ನ ಹೃದಯದಲ್ಲಿ ಉಂಟಾದ ಆ ಮಧುರ ಭಾವನೆಗೆ ಏನನ್ನಾದರೂ ಸರಿಗಟ್ಟಲಾದೀತೇ? ಅವಳ ಮುಖದ ಮೇಲಿನ ಆ ನಗು ಎಂದೂ ಮಾಸದಿರಲಿ ಎಂದು ಪ್ರಾರ್ಥಿಸುತ್ತ ಆ ನಗುವಿನಲ್ಲಿ ಪ್ರೀತಿಯ ಅನಂತತೆಯನ್ನು, ಸಾರ್ಥಕತೆಯನ್ನು, ಬೆಳಗನ್ನು ತನಗೆ ಭಾಗ್ಯವಿದ್ದಷ್ಟು ದಿನ ಪಡೆಯುತ್ತೇನೆ ಎಂದು ಖುಷಿಯಾಗಿ ಹಗುರಾದ. ಹಗುರಾಗಿ ಆ ಪ್ರೀತಿಯಲ್ಲಿ ತೇಲುತ್ತಾ ಹೋದ.... ಅವನು ಈಗಲೂ ಕಡೆಯದಾಗಿ ಅವಳಿಗೆ ಹೇಳಬೇಕೆಂದಿರುವುದು ಒಂದೇ ಒಂದು ಮಾತು - ನನ್ನ ಪ್ರೀತಿಯ ಹುಡುಗಿಯೇ “ನಿನ್ನ ಇಡೀ ವ್ಯಕ್ತಿತ್ವವೇ ನನ್ನ ನೆಮ್ಮದಿ...”

Rating
No votes yet

Comments