ನಿನ್ನ ನೋಡದೆ.....(ಪ್ರೇಮಗೀತೆ)
ನಿನ್ನ ನೋಡದೆ
ಮಾತು ಆಡದೆ
ಮನಸು ನೊಂದಿದೆ
ಗೆಳತಿ, ಮನಸು ನೊಂದಿದೆ
ಸಂಜೆ ಉಷೆಯ ಕಿರಣಗಳಲ್ಲಿ
ನಿನ್ನ ಜೊತೆ ನಾ ನಡೆಯಲು ಇಲ್ಲ
ಒಲಿದು ಸುರಿವಾ, ಜಡಿಮಳೆಯಲ್ಲಿ
ನಿನ್ನ ಜೊತೆ ನಾ ಬರಲು ಇಲ್ಲ
ನೀಕರೆದಲ್ಲಿಗೆಲ್ಲ, ಕರೆದಾಗಲೆಲ್ಲ
ನಿನ್ನೊಡನೆ ನಾನು ಬರಲಾಗಲಿಲ್ಲ
ನೀನಲಿದಾಗಲೆಲ್ಲ, ನೊಂದಾಗಲೆಲ್ಲ
ನಿನ್ನೊಡನೆ ನಾನು ಇರಲಾಗಲಿಲ್ಲ.
ನಿನ್ನೆದೆಯ ಒಲವ ಹಾಡುಗಳನ್ನೆಲ್ಲಾ
ಕೋಗಿಲೆಯ ದನಿಯಿಂದ ನೀನು ಹಾಡಿದಾಗಲೆಲ್ಲ
ಹಾಡಕೇಳಿಸಿಕೊಂಡೆನೇ ಹೊರತು
ಹಾಡೊಳಡಗಿದ್ದ ಇಂಪಿಗೆ ಕಿವಿಗೊಡದಿದ್ದೆನಲ್ಲ.
ನಿನ್ನೆಲ್ಲಾ ಕನಸುಗಳನು ಬೊಗಸೆ ಕಂಗಳಲಿಟ್ಟು
ನನ್ನ ನೀನು ಎದುರುಗೊಂಡಾಗಲೆಲ್ಲ
ಹೊಳೆವ ಕಂಗಳ ನಾನು ಕಂಡೆನೇ ಹೊರತು
ಅದರೊಳಗಿದ್ದ ಕನಸ ಕಾಣಲೇ ಇಲ್ಲ
ನನ್ನಕಂಡಾಗಲೆಲ್ಲ ನರ್ತನಗೈಯ್ಯುತ್ತಿದ್ದ
ನಿನ್ನ ಮುಂಗುರುಳ ಕುಡಿಗಳಿಗೆ
ಸಿಹಿ ಮುತ್ತುಗಳ ಕಾಣಿಕೆಯ
ನಾನೆಂದೂ ನೀಡಲು ಇಲ್ಲ
ಮಳೆಬಂದ ಇರುಳಿನಲಿ ತೊಯ್ದು
ನೀನು ನಡು-ನಡುಗುತ್ತಿದ್ದಾಗ
ಅಪ್ಪುಗೆಯ ಬಿಸಿಯನ್ನು
ನಾನು ನೀಡಲುಇಲ್ಲ
ಇಂದೇಕು ಮಿಡಿಯುತಿದೆ ಮನ
ತುಡಿಯುತಿದೆ ಜೀವ
ನಿನ್ನ ಕಾಣಲು, ಮಾತನಾಡಲು
ನಿನ್ನ ಕಣ್ಣ ಮಿಂಚಿನಲ್ಲಿ
ಬರುವ ನಾಳೆಗಳನು ಕಾಣಲು
ನಿನ್ನ ಹೆಜ್ಜೆ ಗುರುತುಗಳಲ್ಲಿ
ನಮ್ಮ ಮುಂದಿನ ಬದುಕ ಕಾಣಲು
ನಿನ್ನ ನೋಡದೆ
ಮಾತು ಆಡದೆ
ಮನಸು ನೊಂದಿದೆ
ಗೆಳತಿ, ಮನಸು ನೊಂದಿದೆ
— ಜಯಪ್ರಕಾಶ. ನೇ ಶಿವಕವಿ
Comments
ಉ: ನಿನ್ನ ನೋಡದೆ.....(ಪ್ರೇಮಗೀತೆ)