ನಿನ್ನ ಮೊಗ

ನಿನ್ನ ಮೊಗ

ಹುಣ್ಣಿಮೆಯ ಚಂದಿರನು  ಈ ನಿನ್ನ ಮೊಗವನ್ನು
ಹೋಲದೇ ಹೋಯ್ತೆಂದು ಆ ಬೊಮ್ಮನು
ಮತ್ತೊಮ್ಮೆ  ಮಾಡಿನೋಡುವೆನೆಂದು ಯೋಚಿಸುತ
ಪೂರ್ಣ ಚಂದ್ರಮನನ್ನು ಮುರಿದಿಟ್ಟನು

ಪ್ರಾಕೃತ ಮೂಲ (ಗಾಹಾ ಸತ್ತಸಯಿ, ೩:೭) 

ತುಹ ಮುಹಸಾರಿಚ್ಛಂ ಣ ಲಹಇ ತ್ತಿ ಸಂಪುಣ್ಣಮಂಡಲೋ ವಿಹಿಣಾ |
ಅಣ್ಣಮಅಂ ವ ಘಡಇಉಂ ಪುಣೋ ವಿ ಖಂಡಿಜ್ಜಇ ಮಿಅಂಕೋ ||

ನಿರ್ಣಯಸಾಗರ ಆವೃತ್ತಿಯ ಸಂಸ್ಕೃತಾನುವಾದ:

ತವಮುಖಸಾದೃಶ್ಯಂ ನ ಲಭತ ಇತಿ ಸಂಪೂರ್ಣಮಂಡಲೋ ವಿಧಿನಾ
ಅನ್ಯಮಯಮಿವ ಘಟಯಿತುಂ ಪುನರಪಿ ಖಂಡ್ಯತೇ ಮೃಗಾಂಕಃ ||

-ಹಂಸಾನಂದಿ

ಕೊ: ಸಾಮಾನ್ಯವಾಗಿ  ಮುಖವನ್ನು ಚಂದಿರನಿಗೆ ಹೋಲಿಸುವುದು ಭಾರತೀಯ ಭಾಷೆಗಳಲ್ಲಿ ಕಂಡುಬರುವ ಉಪಮೆ. ಆದರೆ ಇಲ್ಲಿ ವ್ಯತಿರೇಕವಾಗಿ ಚಂದಿರನನ್ನೇ ನಾಯಕಿಯ ಮುಖಕ್ಕೆ ಹೋಲಿಸಿರುವುದನ್ನು ಕಾಣಬಹುದು.

ಕೊ.ಕೊ: ಬ್ರಹ್ಮನು, ಈ ಪದ್ಯದ ವಸ್ತುವಾದ ಹೆಣ್ಣಿನ ಮೊಗಕ್ಕೆ ಸಾಟಿಯಾಗುವಂತೆ ಚಂದಿರನನ್ನು ಮಾಡಲು ಯತ್ನಿಸುತ್ತಾನೆ. ಆದರೂ ಅದು ಸಾಧ್ಯವಾಗುವುದಿಲ್ಲ, ಹಾಗಾಗಿ ಹುಣ್ಣಿಮೆಯ ಚಂದ್ರನ ಮುಖವನ್ನು ಕ್ಷಯಿಸಿ, ಮತ್ತೆ ಹೊಸದಾಗಿ ಮಾಡಲು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ ಅನ್ನುವ ಭಾವಾರ್ಥ. ಚಂದಿರನು ಪ್ರತಿ ತಿಂಗಳು ತಿಂಗಳೂ ಹೆಚ್ಚುವುದನ್ನು, ಕ್ಷಯಿಸುವುದನ್ನೂ ಕವಿ ಚಮತ್ಕಾರಿಕವಾಗಿ ಇಲ್ಲಿ ಬಳಸಿಕೊಂಡಿದ್ದಾನೆ.

ಕೊ.ಕೊ.ಕೊ: ಅನುವಾದವು ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ, ಪ್ರಾಸವನ್ನಿಟ್ಟಿಲ್ಲ. ಅನುವಾದದಲ್ಲಿ ಕೆಲವು ಸಲಹೆಗಳನ್ನು ನೀಡಿದ ಮಿತ್ರ, ಅಷ್ಟಾವಧಾನಿ  ಗಣೇಶಭಟ್ಟ ಕೊಪ್ಪಲತೋಟ ಅವರಿಗೆ ನಾನು ಆಭಾರಿ.

Rating
No votes yet

Comments