ನಿನ್ನ ಸ್ಪರ್ಶ...... (ಕನಸಿಗೊಂದು ಅರ್ಥ?)
ನಿನ್ನ ಸ್ಪರ್ಶ...... (ಕನಸಿಗೊಂದು ಅರ್ಥ?)
ಆಗ ತಾನೇ ಹುಟ್ಟಿದ ಸೂರ್ಯನ ಕಿರಣಗಳು ನಿನ್ನ ಮುಂಗುರುಳ ಮುಟ್ಟಿ ಎಚ್ಚರಿಸುತ್ತದೆ. ನೀನು ಮುಗುಳುನಕ್ಕು ಆ ಸೂರ್ಯನ ಕಿರಣ ಬಿದ್ದು ಪ್ರಜ್ವಲಿಸುವ ನೆಲವ ನೋಡಿ ಏಳುತ್ತೀಯ. ಎದ್ದು ಸ್ವಚ್ಛ ಸ್ನಾನ ಮಾಡಿ ಹಣೆಗೆ ಕುಂಕುಮದ ಬೊಟ್ಟಿಡುತ್ತೀಯ. ಹೂ ಹಾಸಿನ ಮೇಲೆ ನಿನ್ನ ಪಾದಗಳು ನಡೆದಾಡುತ್ತದೆ. ಹೂಗಳು ನಿನ್ನ ನೋಡಿ ನಾಚಿ ಘಮಿಸುತ್ತವೆ. ``ಎಲ್ಲಿಯ ಚೆಲುವು ನಿನ್ನದು?'' ಎಂದು ತಲೆತಗ್ಗಿಸುತ್ತದೆ. ಮತ್ತೆ ಮುನ್ನಡೆಯುತ್ತೀಯ. ``ನಿಲ್ಲು''. ತಿರುಗಿ ನೋಡುತ್ತೀಯ. ``ಮುಳ್ಳುಗಳು ಚುಚ್ಚಿ ನಿನ್ನ ಪಾದ ಸ್ಪರ್ಶ ನಿಂತುಹೋದೀತು. ನಿಧಾನ ನಡೆ'' ಎಚ್ಚರಿಸುತ್ತದೆ ಆಕಾಶವಾಣಿ.
ಎಲ್ಲಿಂದಲೋ ``ಸುಂಯ್'' ಎಂದು ಬೀಸುವ ಗಾಳಿ ನಿನ್ನ ಮೈ ಸ್ಪರ್ಶಿಸಿ ಹೋಗುತ್ತದೆ. ಮತ್ತೆ ಮುಗುಳುನಗುತ್ತೀಯ. ನಿನ್ನ ಮುಂಗುರುಳು ಮೇಲೆತ್ತುತ್ತೀಯ. ನಿನ್ನ ಅಂದದ ಮೊಗ ನಾಚಿ ನೀರಾಗುತ್ತದೆ. ನೀರಲ್ಲಿ ಮೀನಾಗಿ ಓಡಾಡುತ್ತದೆ. ಈಜಾಡುತ್ತದೆ. ದಡಕ್ಕೆದ್ದು ಬಂದು ಗಾಳಿಯಾಗಿ ನನ್ನನ್ನು ಸ್ಪರ್ಶಿಸುತ್ತೀಯ. ಘಮಿಸುತ್ತಾ ಮಲ್ಲಿಗೆ ಮೊಗ್ಗಾಗಿ ಗಿಡದಲ್ಲಿ ಸೇರುತ್ತೀಯ. ಮೊಗ್ಗನ್ನು ಚಿವುಟಲು ಹಸುಕಂದನಿಗೂ ಮನಸ್ಸಾಗದು. ಹೂವಾಗಿ ಅರಳಿ ನೆಲಕ್ಕುರುಳುತ್ತೀಯ. ನಿನ್ನನ್ನು ಎತ್ತಿಕೊಳ್ಳಲು ಬರುತ್ತೇನೆ. ಹಕ್ಕಿಯಾಗಿ ಆಗಸಕ್ಕೆ ಹಾರುತ್ತೀಯ. ರೆಕ್ಕೆ ಬಡಿಯುತ್ತೀಯ. ಚಿಲಿಪಿಲಿ ಹಾಡಿ ನನ್ನನ್ನು ನೋಡುತ್ತೀಯ.
ಹಾಡಿಹಾಡಿ ಹಾರಿಹಾರಿ ಮಾವಿನ ಮರದಿ ಕೂರುತ್ತೀಯ. ಮರ ನಿನಗೆ ಸಿಹಿ ಹಣ್ಣು ಕೊಡುತ್ತದೆ. ತಿಂದು ಮತ್ತಷ್ಟು ಸಿಹಿಯಾಗುತ್ತೀಯ. ಇರುವೆಗಳು ಮುತ್ತಲು ಬರುತ್ತವೆ. ಗಾಳಿ ``ಭರ್ರನೆ'' ಬೀಸಿ ಇರುವೆಗಳು ಬೀಳುತ್ತವೆ ಅಪ್ಪಳಿಸಿ ನೆಲಕೆ. ಮತ್ತೆ ಹಾರುತ್ತೀಯ. ಹಾರಿ ಹಾರಿ ಮೋಡದಲ್ಲಿ ಲೀನವಾಗುತ್ತೀಯ. ಮಳೆಯಾಗಿ ಹನಿಯುತ್ತೀಯ. ಪ್ರಪಂಚಕ್ಕೆ ತಂಪು ನೀಡುತ್ತೀಯ. ಹನಿದು ಭೂಮಿಯಲ್ಲಿ ಕರಗುತ್ತೀಯ.
ಸಂಜೆಗತ್ತಲು ಕವಿಯುವ ಹೊತ್ತು....
ತಣ್ಣನೆಯ ಗಾಳಿಯೊಳಗೆ ಮತೆ ಒಂದಾಗಿದ್ದೀಯ. ಪೂರಾ ಕತ್ತಲು ಕವಿದೇಬಿಟ್ಟಿದೆ. ಗಾಳಿಯು, ಹಾಗೇ ತೇಲಿ ತೇಲಿ ನಿನ್ನನ್ನು ಕರೆದೊಯ್ದಿದೆ ಮೇಲಕ್ಕೆ. ಅಲ್ಲಿಂದ ಪೂರ್ಣಚಂದಿರ ನಿನ್ನನ್ನು ಕರೆದೊಯ್ದಿದ್ದಾನೆ. ಅವನ ಜೊತೆ ಕಿಲಕಿಲನೆ ನಗುತ್ತೀಯ. ಅವನ ಜತೆಗಿರುವ ಕೋಟಿ ತಾರೆಗಲೊಂದಿಗೆ ನೀನೂ ಸಹ ಒಂದಾಗಿದ್ದೀಯ. ಎಲ್ಲರ ಕಣ್ಣಿಗೂ ಖುಷಿ ನೀಡುತ್ತೀಯ. ಪುಟ್ಟ ಮಕ್ಕಳ ಕೈಲಿ ``ಹೊಳೆಯುವ ಹೊಳೆಯುವ ನಕ್ಷತ್ರವೋ.....'' ಹಾಡಿಸುತ್ತೀಯ.
ನನ್ನೆರಡೂ ತೋಳುಗಳನ್ನು ಚಾಚಿ ನಿನ್ನ ಬಳಿ ಬರುತ್ತೇನೆ. ನೀನು ನನ್ನೆದೆಯ ಬಾಂದಳದಿ ಕರಗುತ್ತೀಯ. ಕರಗಿ ತುಟಿಗೊಂದು ಮುತ್ತು ನೀಡುತ್ತೀಯ. ಆಗ....
ನಾನೂ ಮುಗುಳುನಗುತ್ತೇನೆ. ನನ್ನ ಮೇಲೆ ಮಳೆಹನಿಯಾಗಿ ಬೀಳುತ್ತೀಯ. ಕಣ್ಗಳೆರದನ್ನೂ ಮೆಲ್ಲನೆ ತೆರೆಯುತ್ತೇನೆ. ಮುಖ ಮುಚ್ಚಿಕೊಂಡು ನಾಚುತ್ತೀಯ. ಹಾಗೇ ಕರಗಿ ಕನಸಾಗಿ ಬಿಡುತ್ತೀಯ. ಬೆಳಗಾಗುತ್ತದೆ, ಇರುಳಾಗುತ್ತದೆ. ಮತ್ತೆ ಅದೇ ಕನಸಲ್ಲೇ ಕಾಣುತ್ತೀಯ. ಮುಚ್ಚಿದ ಕಂಗಳ ತೆರೆಯಲು ಬಿಡದೆ ಕಾಡುತ್ತೀಯ. ಕನಸಾಗೇ ಬೀಳುತ್ತೀಯ.
ಶ್ರೀಚಂದ್ರ
೨೨-೦೨-೨೦೦೬