ನಿನ್ನ ಹೆಸರ ಕರೆವುದು.....
ಸಂಜೆಯ ಗೋಧುಳಿಯಲಿ
ಕೆಂಬಣ್ಣದ ರಶ್ಮಿಯ ಮಸುಕಿನಲಿ
ನೀ ಹೇಳದೆ ಉಳಿಸಿ ಹೋದ
ಮಾತುಗಳು ಮನದಲಿ ಹೆಪ್ಪುಗಟ್ಟಿ
ಆಳದಲಿ ಮಡುಗಟ್ಟಿದ ನಿನ್ನೊಲವ
ಭಾವಗಳು ಕೆದಕಿ ಎದೆಯ ಕೊಳವ
ನೋವಿನಲೆಗಳಲೆಳುವ ಕಲರವವು
ಕರೆವುದು ನಿನ್ನ ಹೆಸರ ಮತ್ತೆ ಮತ್ತೆ.
ನೀ ಬೆನ್ನ ತಿರುಗಿ ನಡೆದ ಹಾದಿಯ
ಮೇಲಣ ಹೆಜ್ಜೆಯ ಗುರುತಿಗೆ
ಮಾತ್ರ ತಿಳಿವುಂಟು ಮತ್ತೆ ಕೇಳದು
ಈ ಹೆಜ್ಜೆ ಸಪ್ಪಳ:
ಈ ಕಂಗಳಿಗೆ ಅದಾವ ಸುಳ್ಳು ಮೋಹವೋ
ನಾ ಅರಿಯೇ,ನೀ ಸಾಗಿದ ಹಾದಿಯ
ಮೇಲೆ ಹರವಿ ಕಣ್ಣೋಟವ ಕಾಯುತಿಹುದು
ಅಲುಗಿಸದೆ ರೆಪ್ಪೆಯ.
ನಿನ್ನೊಡನೆ ಆಲಿಸಿದ ಮಧುರಗೀತೆಯ
ಆ ಆಲಾಪ ಅಣಕಿಸುವುದು ಏಕಾಂಗಿಯ ಇಂದು.
ನಡುರಾತ್ರಿಯ ನೀರವ ಮೌನದಲಿ
ಅಡರುವುದು ಮನದ ತುಂಬೆಲ್ಲ ನಿನ್ನ ನೆನಪು;
ನೀ ದೂರಾದರು ಆಸೆ, ಮನವಕೊರೆವ
ನಿನ್ನ ನೆನಪು ಮಾಡಲಿ ಆರದ ಗಾಯವ
ಎದೆಯಲಿ,ಜಗವ ಮರೆವೆನು ಆ ನೋವಿನಲಿ
ಮಾತು ಮರೆತ ಗೆಳತಿ!!!
ಎಚ್.ಎನ್.ಈಶಕುಮಾರ್
Rating