ನಿಮೀಲನ

ನಿಮೀಲನ

ಮುಕ್ಕಾಲು ಮುಚ್ಚಿವೆ ಕಾಲು ತೆರೆದಿವೆ
ಬೆಳಗಾನೆದ್ದ ಕನ್ನಡಿಯಲ್ಲಿನ ಕಣ್ಣುಗಳು
ಸ್ವಲ್ಪ ಮುಂಚೆ ಇದ್ದದ್ದು ನೆನಪೋ - ಕನಸೋ ?
ಅವಕ್ಕೇನು ಧಾಡಿ...!! ಬಚ್ಚಲಲ್ಲಿ ಬಿದ್ದಿರುವ
ಸೋಪಿನ ತುಂಡುಗಳು, ಶ್ಯಾಂಪು ಸ್ಯಾಷೆಗಳು,
ಬೆಂಡಾಗಿರುವ ಬ್ರಶ್ಶ್ಯುಗಳು.

ಸಿಂಕಿನಲ್ಲಿ ಬಿದ್ದಿರುವ ಪಾತ್ರೆಗಳು ಒಣಗಿವೆ
ಮತ್ಸರ, ಸಿಟ್ಟು, ಅಸಹನೆ ಜೀವರಕ್ತವಿಲ್ಲದೆ
ಅಲ್ಲೇ ಗೋಡೆಯ ಸೀಳಿನಲ್ಲಿ,
ಜಿರಲೆಗಳಿಗೆ ಹೊಂಚು ಹಾಕಿರುವ ಹಲ್ಲಿ
ಲೊಚಗುಡುತ್ತಿದೆ
ನನ್ನ ಬದಲು.

ಅಲ್ಲಲ್ಲಿ ಬಿದ್ದಿರುವ ಬಟ್ಟೆಗಳು, ಟವಲು, ಬೆಡ್-ಶೀಟು,
ದಿಂಬಿನ ಕವರು, ಒಗೆದು ಎಷ್ಟು ದಿನವಾಯಿತೋ..!!
ಮೂಲೆಯಲ್ಲಿರುವ ಎರಡು ಜೊತೆ ಸಾಕ್ಸು,
ಥೂ...... ನಾರುತ್ತಿವೆ
ಇನ್ನಿಲ್ಲದ ಭಾವಗಳು, ಕನಸುಗಳು
ಕಂಡ ಕಣ್ಣುಗಳು
ಮುಕ್ಕಾಲು ಮುಚ್ಚಿವೆ ಕಾಲು ತೆರೆದಿವೆ.

ಮೂರಡಿಯಗಲದ ಹಾಸಿಗೆಯಲೇ
ಹೊರಳಾಡುತ್ತಿರುವವನ ಮನಸಲ್ಲಿ
ಯಾಕೋ.?
ಏನೋ.?
ತಾಕಲಾಟ ತಿಣುಕಾಟ
ಸೊಳ್ಳೆಪರದೆಯಳೆದು ಮಡಚಿಕೊಳ್ಳಲು ಸೋಮಾರಿತನವೇನಲ್ಲ
ಬದುಕಲಿ ಒಂದೆರಡು,
ಆವಾಗಾವಾಗ ಗುಯ್ಯುಗುಡುತಿರಲಿ
ಎಂಬ ಸಣ್ಣ ತಿಕ್ಕಲು.

Rating
No votes yet

Comments