ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!
ಹಿಂದೆಲ್ಲ ಸಂಜೆ ಹೊತ್ತು ಆ ದಿನದ ಕೆಲಸ, ಚಾ ಕಾಫಿ ಮುಗಿದದ್ದೇ ಯಾವತ್ತಿನಂತೆ ಪುಟ್ಟುಭಟ್ಟರ ಅಂಗಡಿ ಮುಂಗಟ್ಟಿನ ಬೆಂಚುಗಳ ಮೇಲೆ ಕೂತು, ನೆಲಗಡಲೆ ತಿನ್ನುತ್ತಲೋ ಪೇಪರು ಓದುತ್ತಲೋ ಇಂದಿರಮ್ಮನ ಆಡಳಿತದಿಂದ ಹಿಡಿದು ಕಲ್ಲರಬೈಲಿನ ಸಂಕಪ್ಪನ ಕೊನೇ ಮಗಳು ಯಾರೊಂದಿಗೋ ಓಡಿಹೋದದ್ದರ ವರೆಗೆ ನಾಲ್ಕಾರು ಮಂದಿ ಹಿರಿಯರು ಸೇರಿ ಅದೂ ಇದೂ ಮಾತನಾಡುವುದಿತ್ತು. ಮಕ್ಕಳಾಗಿದ್ದ ನಮಗೆ ಆಗ ಅದೆಲ್ಲ ಅರ್ಥವಾಗದಿದ್ದರೂ ಈಗ ಅದರಲ್ಲಿದ್ದ ಒಂದು ಸುಖ ಕಾಡುತ್ತದೆ. ನಗರದ ನಡುವೆ ಬದುಕುತ್ತಿರುವವರಿಗೆ ಇಂಥ ಸುಖ ಇಲ್ಲ.
ಕತ್ತಲಾಗುವುದರೊಳಗೆ ಗೂಡು ಸೇರಿಕೊಂಡರೆ ಪ್ರಪಂಚ ತೆರೆದುಕೊಳ್ಳುವುದು ಟೀವಿ ಸ್ಕ್ರೀನ್ನಲ್ಲೇ. ಯಾರೋ ಕುಳಿತು ಚರ್ಚಿಸುವುದನ್ನು, ಮೈಕ್ಗೆ ಎದುರು ಸಿಕ್ಕಿದವರು ಹೇಳುತ್ತಿರುವುದನ್ನು, ಎಳೆ ಪ್ರಾಯದ, ನೋಡಲು ಮಾಡರ್ನ್ ಆಗಿರುವ ಆಂಕರ್ಗೆ ಅನಿಸಿದ್ದನ್ನು ಕೇಳುತ್ತ ಹೊತ್ತು ಕಳೆಯುವುದಷ್ಟೇ. ನಿಮಗನಿಸಿದ್ದನ್ನು ಯಾರ ಬಳಿ ಹೇಳುವುದು? ಹೇಳಿದರೆ ಕೇಳುವುದಕ್ಕಾದರೂ ಯಾರಿಗೆ ಪುರುಸೊತ್ತಿದೆ? ಅಷ್ಟಕ್ಕೂ ನೀವು ಹೇಳಬೇಕೆಂದುಕೊಂಡಿದ್ದನ್ನೆಲ್ಲ ಅಲ್ಲಿ ಯಾರ್ಯಾರೋ ಅರೆಬರೆಯಾಗಿ ಹೇಳಿಬಿಟ್ಟಿದ್ದಾರೆಂದೂ ಅನಿಸುತ್ತಿರುತ್ತದಲ್ಲ!
ಪತ್ರಗಳೂ ಬರುವುದಿಲ್ಲ ಈಗ. ನಮ್ಮ ನಿಮ್ಮಲ್ಲಿ ಮಾತೂ ಕಡಿಮೆ. ಹೆಚ್ಚು ಮಾತನಾಡುವುದು, ಸ್ನೇಹ, ಪರಿಚಯ ಎಂದೆಲ್ಲ ಹೊರಡುವುದೇನಿದ್ದರೂ ಎಲ್ಲೈಸಿ ಏಜೆಂಟರ, ಸೇಲ್ಸ್ ಮ್ಯಾನ್ಗಳ ಶೈಲಿ ಎನಿಸುತ್ತದೆ. ಹಾಗಾಗಿ ಪರಿಚಯವಿಲ್ಲದವರ ಮುಗುಳ್ನಗೆಯನ್ನೂ ಅನುಮಾನದಿಂದಲೇ ಎದುರಿಸುತ್ತ ಎಲ್ಲಿ ನಮ್ಮ ತುಟಿಯೂ ಸಮಯಕ್ಕೆ ಮೊದಲೇ ಬಿರಿಯುವುದೋ ಎಂದು ಆತಂಕಗೊಳ್ಳುತ್ತೇವೆ.
ಆದರೂ ನಾವು ಕೆಲವರು ಈಮೇಲುಗಳಲ್ಲಿ, ಪತ್ರಗಳಲ್ಲಿ ಸಂವಾದ ನಡೆಸುವುದನ್ನು ಬಿಟ್ಟಿಲ್ಲ. ನಮ್ಮನ್ನು ಬೆಳೆಸುವಂತಿದ್ದರೆ ಜಗಳವಾಡುವ ಹುಮ್ಮಸ್ಸು ಕಳೆದುಕೊಂಡಿಲ್ಲ. ಇದೆಲ್ಲ ನಮ್ಮನ್ನು ಇನ್ನಷ್ಟು ಬೆಸೆಯುವುದನ್ನು ಕಂಡು ಅಚ್ಚರಿಗೊಂಡು ಇಲ್ಲಿ ಈಗ ಹೀಗೆ, ನಿಮ್ಮೆದುರು....
ಬಹಳ ಹಿಂದೆ ಹೊಸಹಳ್ಳಿ ದಾಳೇಗೌಡರು ಒಂದು ಪ್ರಶ್ನೆ ಕೇಳಿದ್ದರು. ನಿಮ್ಮ ಪ್ರಕಾರ ಧರ್ಮ ಎಂದರೆ ಏನು? ವಿದ್ಯಾರ್ಥಿ ಧರ್ಮ, ಶಿಕ್ಷಕನ ಧರ್ಮ, ಗೃಹಿಣಿಯ ಧರ್ಮ, ಮನೆಯ ಯಜಮಾನನ ಧರ್ಮ, ಒಬ್ಬ ಮಠಾಧಿಪತಿಯ ಧರ್ಮ ಎಂದೆಲ್ಲ ಬರೆದಿದ್ದೆ. ಕಳೆದ ವರ್ಷ ಬ್ರಹ್ಮಾವರದಲ್ಲಿ ಒಂದು ವಿಚಾರಗೋಷ್ಠಿ ನಡೆಯಿತು. ಜಾಗತೀಕರಣ ಮತ್ತು ಕಲೆ, ಸಂಸ್ಕೃತಿ, ಶಿಕ್ಷಣ. ಅಲ್ಲಿ ಪದವಿ ತರಗತಿಯಲ್ಲಿ ಕಲಿಯುತ್ತಿರುವ ಒಬ್ಬಳು ವಿದ್ಯಾರ್ಥಿನಿ ಎದ್ದು ನಿಂತು ಒಂದು ಪ್ರಶ್ನೆ ಕೇಳಿದಳು. "ಸರ್, ನೀವೆಲ್ಲ ಹಿಂದೂ ಧರ್ಮ ಹಿಂದೂ ಧರ್ಮ ಎನ್ನುತ್ತೀರಲ್ಲ, ಅದಕ್ಕೂ ಈ ಸಂಘ ಪರಿವಾರದವರು ಹೇಳುವ ಹಿಂದೂ ಧರ್ಮಕ್ಕೂ ಇರುವ ವ್ಯತ್ಯಾಸ ಏನು ಸರ್, ನನಗೆ ಈ ಬಗ್ಗೆ ಗೊಂದಲವಿದೆ, ಯಾರಾದರೂ ಉತ್ತರಿಸುತ್ತೀರಾ " ಎಂದು ಕೇಳಿದಳು. ನೀವು ಉತ್ತರಿಸಿ.
ಈಚೆಗೆ ಮಿತ್ರರೊಬ್ಬರು ಈ ಕತೆಯನ್ನು ನನಗೆ ನೆನಪಿಸಿದರು. ಉಪನಿಷತ್ತಿನ ಒಂದು ಕತೆ. ಉದ್ಧಾಲಕ ಎಂಬ ಒಬ್ಬ ಮುನಿ. ಒಮ್ಮೆ ಆತನ ಆಶ್ರಮಕ್ಕೆ ಒಬ್ಬ ಅತಿಥಿ ಬರುತ್ತಾನೆ. ಉದ್ಧಾಲಕ ಮತ್ತು ಆತನ ಪತ್ನಿ ಅತಿಥಿಯನ್ನು ಸಹಜವಾಗಿಯೇ ಚೆನ್ನಾಗಿ ಆದರಿಸುತ್ತಾರೆ, ಉಪಚರಿಸುತ್ತಾರೆ. ರಾತ್ರಿಯಾಗುತ್ತದೆ, ಅತಿಥಿಗೆ ಹಾಸುಗೆಯೂ ತಯಾರಾಗುತ್ತದೆ. ಮಾತ್ರವಲ್ಲ, ಉದ್ಧಾಲಕನ ಪತ್ನಿ ಅತಿಥಿಯನ್ನು ಎಲ್ಲ ರೀತಿಯಲ್ಲೂ ಸಂತುಷ್ಟಗೊಳಿಸುವುದಕ್ಕಾಗಿ ತಯಾರಾಗುತ್ತಾಳೆ. ಆಗ ಅವರ ಮಗ ಶ್ವೇತಕೇತು ಇದನ್ನು ವಿರೋಧಿಸುತ್ತಾನೆ. ತನ್ನ ತಂದೆಯ ವಿರುದ್ಧವೇ ಬಂಡೇಳುತ್ತಾನೆ. ಆಗ ಉದ್ಧಾಲಕ ಹೇಳುತ್ತಾನೆ, "ಮಗನೇ, ಇದು ನಮ್ಮ ಧರ್ಮ. ನಾವಿದನ್ನು ಪರಂಪರಾನುಗತವಾಗಿ ನಡೆಸಿಕೊಂಡು ಬಂದಿದ್ದೇವೆ ಮತ್ತು ಇದು ನಮ್ಮ ಕಾಲದ ಮೌಲ್ಯವಾಗಿದೆ. ನಿನ್ನ ಕಾಲದ ಮೌಲ್ಯಗಳು ಬೇರೆ. ಹಾಗಾಗಿ ನಿನ್ನ ಧರ್ಮ ಬೇರೆ. ನೀನು ಅದನ್ನೇ ಆಚರಿಸು. ಆದರೆ ನಮಗೆ ನಮ್ಮ ಧರ್ಮವನ್ನು ಆಚರಿಸಲು ಬಿಡು. ನಾವು ನಿನಗೆ ನಿನ್ನ ಧರ್ಮವನ್ನು ಬಿಡು ಎಂದಿದ್ದುಂಟೇ? ಹಾಗೆಯೇ ನೀನು ನಮಗೆ ನಮ್ಮ ಧರ್ಮವನ್ನು ನಡೆಸಲು ಬಿಡು"
ಈಗ ನಿಮ್ಮ ಮಾತು, ಕಾದಿರುತ್ತೇನೆ.
Comments
ಉ: ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!
In reply to ಉ: ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ! by shreekant.mishrikoti
ಉ: ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!
ಉ: ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ!