ನಿಮ್ಮ ಸ್ನೇಹಿತನ ಮಾತನ್ನು ಹೃದಯಪೂರ್ವಕ ಆಲಿಸುತ್ತೀರೋ?
ನಮಗೆ ಮುಖ್ಯ ಅನ್ನಿಸಿದ್ದು ಬೇರೆಯವರಿಗೆ ಮುಖ್ಯವಾಗಿ ಅನ್ನಿಸಬೇಕಾಗಿಲ್ಲ. ನೀವು ಎಷ್ಟೇ ಸಮಾನ ಮಾನಸಿಕರು ಎಂದರೂ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಒಂದು ಮಾನಸಿಕತೆ, ನನ್ನದು ಎಂಬ ಒಂದು ಪ್ರತ್ಯೇಕ ಭಾವನೆ ಇದ್ದೇ ಇರುತ್ತದೆ. ನೀವು ಎಷ್ಟೇ ಮುಖ್ಯವಿಷಯವನ್ನು ನಿಮ್ಮ ಸಮಾನ ಮಾನಸಿಕ ಸ್ನೇಹಿತರಲ್ಲಿ ಹಂಚಿಕೊಳ್ಳಬೇಕೆಂದು ಕೊಂಡರೂ ನಿಮಗೆ ತಿಳಿದಿರಬೇಕು...ಅವರಲ್ಲಿಯೂ ನಿಮಗೆ ಹೇಳಿಕೊಳ್ಳುವುದು ಇರುತ್ತದೆಂದು. ನಿಮಗೆ ಈ ಅನುಭವ ಹಲವು ಭಾರಿ ಆಗಿರಬಹುದು. ನನಗಂತೂ ಆಗುತ್ತಲೇ ಇರುತ್ತದೆ. ಆದರೂ ಬಹಳ ಆತ್ಮೀಯ ಮಿತ್ರರು ಬಂದಾಗ ಇಂತಾ ಹಳೆಯ ಅನುಭವಗಳು ಮರೆತು ಮತ್ತೆ ಅದೇ ಅನುಭವಕ್ಕೆ ಎಡೆಮಾಡಿಕೊಂಡಿರುವ ಹಲವಾರು ಉಧಾಹರಣೆಗಳಿವೆ. ಆದರೂ ತಪ್ಪು ಪುನರಾವರ್ತನೆ ಆಗುತ್ತಲೇ ಇರುತ್ತದೆ. ಈ ಅನುಭವದಿಂದ ಹಲವು ವೇಳೆ ನಾನು ಅಂದುಕೊಳ್ಳುವೆ" ಒಳ್ಳೆಯದಾಗಲೀ ಕೆಟ್ಟದಾಗಲೀ ನಾನಾಗಿಯೇ ಹಂಚಿಕೊಳ್ಳಬಾರದೆಂದು. ಇತ್ತೀಚೆಗೆ ನನ್ನ ಮಿತ್ರರಿಗೇ ಮೊದಲ ಅವಕಾಶ ಕೊಟ್ಟುಬಿಡುವುದು ಎಂದು ತೀರ್ಮಾನಿಸಿರುವೆ.
ಎಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಅವರವರದೇ ಹೆಚ್ಚಾಗಿರುತ್ತದೆ, ಎಂದರೆ ನೀವು ನಿಮ್ಮ ಒಂದು ಸದ್ವಿಚಾರಕ್ಕಾಗಿ ನಿಮ್ಮ ದುಡಿಮೆಯ ಅರ್ಧ ಭಾಗವನ್ನೇ ದಾನ ಮಾಡಿ, ನಿಮ್ಮದೂ ಅಂತಾ ಏನೂ ಇಲ್ಲದಂತಾಗಿ ಬಿಡಿ, ಚಿಂತೆ ಯಿಲ್ಲ. ಆದರೆ ಅದನ್ನು ನಿಮ್ಮ ತುಂಬಾ ಆತ್ಮೀಯರಲ್ಲೂ ಹಂಚಿಕೊಳ್ಳಲು ಪ್ರಯತ್ನ ಮಾಡ ಬೇಡಿ , ಕಾರಣ ತಾನು ಮಾಡಿದ ಯಾವುದೋ ಒಂದು ಒಳ್ಳೆಯ ಕೆಲಸವನ್ನು ನಿಮಗೆ ಹೇಳುವ ಅವನು ಕಾತುರನಾಗಿರುತ್ತಾನೆ, ನಿಮ್ಮ ವಿಷಯವನ್ನು ಕೇಳುವ ಪರಿಸ್ಥಿತಿಯಲ್ಲಿ ಅವನಿರುವುದಿಲ್ಲ. ನಿಮ್ಮ ಮಾತು ಮುಗಿಯಬೇಕೆಂದೇನೂ ಇಲ್ಲ, ಮಾತಿಗೆ ಅಲ್ಪವಿರಾಮ ಹಾಕಬೇಕೆಂದೂ ಕಾಯುವುದಿಲ್ಲ, ಅಷ್ಟರೊಳಗೆ ತನ್ನ ಮಹಾತ್ಮೆಯನ್ನು ನಿಮ್ಮ ಸ್ನೇಹಿತ ಆರಂಭಿಸಿಬಿಡುತ್ತಾನೆ. ಬಹುಷ: ಈ ಎಲ್ಲಾ ಅನುಭವ ಕಂಡೇ ಪೂರ್ವಜರು ಹೇಳಿದರು" ಬಲಗೈಲಿ ದಾನ ಮಾಡಿದ್ದು ಎಡಗೈಗೂ ಗೊತ್ತಾಗಬಾರದೆಂದು" ಗೊತ್ತಾದರೇನು ಆಕಾಶ ಕಳಚಿ ಬೀಳುವುದಿಲ್ಲ, ಆದರೆ ನಿಮ್ಮ ಜೀವ ಮಾನವೆಲ್ಲಾ ದುಡಿದಿದ್ದನ್ನು ನೀವು ಐದು ನಿಮಿಷದಲ್ಲಿ ಯಾವುದೋ ಸತ್ಕಾರ್ಯಕ್ಕಾಗಿ ದಾನ ಮಾಡಿದ್ದರೂ ಅಷ್ಟರ ಮಟ್ಟಿಗೆ ಜನರ ಮೆಚ್ಚುಗೆ ಸಿಗುತ್ತದೆಂದೇನೂ ಇಲ್ಲ. ನೀವು ನಿರೀಕ್ಷೆ ಮಾಡಿದರೆ ಮೂರ್ಖರಾಗುವುದು ಶತ ಸಿದ್ಧ. ಹೀಗೂ ಮಾತು ಕೇಳಬಹುದು" ಯಾರಿಗೆ ಮೋಸ ಮಾಡಿ ಸಂಪಾದಿಸಿದ್ದನೋ, ಹೀಗೆ ಪಾಪ ಕಳೆದುಕೊಳ್ಳುವ ಕೆಲಸ ಮಾಡಿರಬಹುದು!!! ಹಾ........ಎಲ್ಲರಿಗೂ ಹೀಗೆಯೇ ಅನುಭವ ಆಗಬೇಕೆಂದೇನೂ ಇಲ್ಲ. ಕೆಲವರು ಪುಣ್ಯಾತ್ಮರಿರುತ್ತಾರೆ...ತಾವು ಒಂದು ವಾರದಿಂದ ಉಪವಾಸವಿದ್ದರೂ ಒಂದು ಹೊತ್ತು ಉಪವಾಸವಿದ್ದವನ ಕಷ್ಟ ವಿಚಾರಿಸುವ ಪುಣ್ಯಾತ್ಮರು. ಇಂತವರಿಂದಲೇ ನಮ್ಮ ದೇಶ ಇನ್ನೂ "ಧರ್ಮ" ಉಳಿದಿದೆ.