ನಿಮ್ ವೋಟ್ ಯಾರ್ಗೆ?
ಕರ್ನಾಟಕದಲ್ಲಿ ಚುನಾವಣೆಯ ಜ್ವರ ಇಳಿದು, ಮತಗಣನೆಯ ಚಳಿ ಶುರುವಾಗಲಿದೆ. ಆಪ್ತ ಮಿತ್ರನೊಬ್ಬನಿಗೆ ಕುಶಲ ವಿಚಾರಿಸಲು ಫೋನಾಯಿಸಿದಾಗ ಊಟ ಈಗತಾನೆ ಆಯ್ತಪಾ, ವೋಟ್ ಹಾಕೋಕೆ ಹೋಗ್ಬೇಕು ಎಂದು ಚುನಾವಣೆಯ ಮೂಡ್ ಗೆ ತಂದ ಸಂಭಾಷಣೆಯನ್ನು. ಚಿಕ್ಕಂದಿನಿಂದಲೂ ನನಗೆ ರಾಜಕೀಯದ ಹುಚ್ಚು. ಅಪ್ಪ ಪಕ್ಕಾ ಕಾಂಗ್ರೆಸ್ಸಿಗರಾದರೆ ನಾನು ಜನತಾ ಪಕ್ಷ. ಆಗ ಇದ್ದಿದ್ದು ಒಂದೇ ಜನತಾ ಪಕ್ಷ. ಈಗ ಭಾರತೀಯ ಜನತಾ ಪಕ್ಷ, ಕರ್ನಾಟಕ ಜನತಾ ಪಕ್ಷ, 'ಸೆಕ್ಯೂಲರ್' ಜನತಾ ಪಕ್ಷ, ಬೈನಾಕ್ಯುಲರ್ ಜನತಾ ಪಕ್ಷ...ಹೀಗೆ ತರಾವರಿ ಪಕ್ಷಗಳು. ಜನರ ಸೇವೆ ಗಾಗಿಯೇ ತಮ್ಮ ಬಾಳನ್ನು ಮುಡಿಪಾಗಿಸಿಕೊಂಡ ಪಕ್ಷಗಳು.
ಚುನಾವಣೆಯ ಬಗ್ಗೆ ಮಾತನ್ನು ಮುಂದುವರೆಸಿದಾಗ ತಿಳಿಯಿತು ಇದು ನನ್ನ ಕಾಲದ ಚುನಾವಣೆಯಲ್ಲ, ಈಗಿನ ಚುನಾವಣೆ ಹೈ ಟೆಕ್ ಚುನಾವಣೆ, ಧ್ವನಿ ವರ್ಧಕ ಉಪಯೋಗಿಸುವಂತಿಲ್ಲವಂತೆ, ಭಿತ್ತಿ ಪತ್ರ ಅಂಟಿಸ ಬಾರದಂತೆ, ಮನಸ್ಸಿಗೆ ತೋಚಿದಂತೆ ಪಾಂಪ್ಲೆಟ್ ಮುದ್ರಿಸಬಾರದಂತೆ, ಮೆರವಣಿಗೆ ಕೂಡದಂತೆ, ಘೋಷಣೆ ಬೇಡವಂತೆ......ಥತ್ತೇರಿ, ಇದೆಂಥಾ ಚುನಾವಣೆ ಎಂದು ಅನ್ನಿಸಿತು. ನನ್ನ ಜಮಾನದ ಚುನಾವಣೆಯೇ ಚೆಂದ. ರಂಗು ರಂಗಿನ ಬ್ಯಾಡ್ಜು, ಅಭ್ಯರ್ಥಿಗಳಿಂದ ಊಟ, ತಿಂಡಿ ವ್ಯವಸ್ಥೆ, ಬೀರು ಬ್ರಾಂದಿ, ಪ್ರಾಸಬದ್ದ ಘೋಷಣೆಗಳು, ಜನತಾ ಪಕ್ಷ ಎತ್ತು ಭಿಕ್ಷ, ಕಾಂಗ್ರೆಸ್ ಪಕ್ಷ ಎತ್ತು ಭಿಕ್ಷ, ಭಾರತ್ ಮಾತಾ ಕೀ ಜೈ, ಎಂದು ಗಂಟಲು ಹರಿದು ಕೊಳ್ಳುವಂತೆ ಕೂಗುತ್ತಿದ್ದದ್ದು, ಅಯ್ಯೋ ಇದೆಲ್ಲಾ ಇಲ್ವೆ ಇಲ್ವಲ್ಲೋ ಎಂದಾಗ ಅವನು, ಅದೇನೂ ಇಲ್ಲ ಕಣೋ ಈಗ, ಹೆಣ ನೋಡಲು ಹೋಗೋ ಥರಾ ಮೌನವಾಗಿ ವೋಟಿಂಗ್ ಮೆಶೀನ್ ಹತ್ರ ನಿಂತು, ಯಾವುದಾದರೂ ಒಂದು ಬಟನ್ ಚುಚ್ಚಿ ಹೊರಬರೋದು ಅಷ್ಟೇ ಎಂದ. ಮೊದಲು ಮತಗಟ್ಟೆ ಬಳಿಯೂ ಕಾರ್ಯಕರ್ತರು. ದೂರದಿಂದ ಹಲ್ಲು ಗಿಂಜುತ್ತಾ, ಕೈಸನ್ನೆಯಿಂದ ತಮ್ಮ ಪಕ್ಷದ ಗುರುತನ್ನು ಜನರಿಗೆ ತೋರಿಸಿ ಎದುರು ಪಕ್ಷದವರ ಕೈಯಲ್ಲಿ ಉಗಿಸಿ ಕೊಂಡು ಹೆ ಹೇ ಎಂದು ಪೆಚ್ಚು ನಗು ನಗೋದು...
ಹೋಯ್ತಾ ಆ ಕಾಲ? ಮಾತಿನ ಮಧ್ಯೆ, ರಾಮನಗರದ ಹತ್ತಿರ ಮಚ್ಚು ತೋರಿಸಿ ವೋಟ್ ಮಾಡಲು ಒಂದು ಪಕ್ಷದವರು ಬೆದರಿಕೆ ಹಾಕುತ್ತಿರುವುದನ್ನು ಟೀವೀ ಲಿ ತೋರಿಸ್ತಾ ಇದ್ದಾರೆ ನೋಡು ಎಂದಾಗ, ಒಹ್, ಸಧ್ಯ ಈ ಸಂಸ್ಕಾರವನ್ನು ನಮ್ಮ ಜನ ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ ಎಂದು ಸಮಾಧಾನ ಪಡುತ್ತಾ ಮಿತ್ರನಿಗೆ ವಿದಾಯ ಹೇಳಿದೆ.
Comments
ಅಬ್ದುಲ ಸಾಹೆಬರೆ ನಮಸ್ಕಾರಗಳು
ಅಬ್ದುಲ ಸಾಹೆಬರೆ ನಮಸ್ಕಾರಗಳು ದೂರದ ಜಡ್ಡಾದಲ್ಲಿ ಕುಳಿತು ಚುನಾವಣೆಯ ಬಗ್ಗೆ ಚೆನ್ನಾಗಿಯೇನೋ ಬರೆದಿದ್ದಿರಿ, ಆದರೆ ಆಗಿನ ಕಾಲದ ಚುನಾವಣೆಯ ಬಗ್ಗೆ ಮಾತ್ರ ಬರೆದಿದ್ದಿರಿ, ಈಗ ನೀವು ಹೆಳಿದಂತೆ ಅಬ್ಬರದ ಪ್ರಚಾರಕ್ಕೆನೋ ಕಡಿವಾಣ ಹಾಕಿದ್ದಾರೆ, ಅದರೆ ಆಗಿನ ಚುನಾವಣೆಗಳನ್ನು ಸಾವಿರ ಲಕ್ಷಗಳಲ್ಲಿ ರೂಪಾಯಿಗಳಲ್ಲಿ ಮಾಡುತ್ತಿದ್ದರಂತೆ ಈ ಎನಿದ್ದರೂ ಕೋಟಿಗಳ ಲೆಕ್ಕದಲ್ಲಿ ಚುನಾವಣಾ ಅಯೋಗವೇನೋ ಸಾಕಷ್ಟು ಬದಲಾವಣೆ ತಂದಿರುವುದು ಸ್ವಾಗತರ್ಹ ಆದರೂ ಚುನಾಣೆ ಸದ್ದಿಲದೆ ನಡೆಯಿತು ಹಣದ ಮಳೆ ಹಾಗೂ ಹೆಂಡದ ಹೋಳೆಯಲ್ಲಿ ಅಬ್ಬಬ್ಬಾ ನೀವು ದೂರದಲ್ಲಿದ್ದು ಒಳ್ಳೆಯದನ್ನೆ ಮಾಡಿದಿರಿ ಏಕೆಂದರೆ ಅಂದಿನ ವ್ಯವಸ್ಥೆಯ ಚುನಾವಣೆಗೂ ಇಂದಿನ ಚುನಾವಣೆ ವ್ಯವಸ್ಥೆಗೂ ಅಜಾ-ಗಜಾಂತರ.
In reply to ಅಬ್ದುಲ ಸಾಹೆಬರೆ ನಮಸ್ಕಾರಗಳು by Amaresh patil
ಧನ್ಯವಾದಗಳು, ಅಮರೇಶ್.
ಧನ್ಯವಾದಗಳು, ಅಮರೇಶ್.
ಅಬ್ದುಲ್ಲಾ ಅವರೆ, ನಿಮ್ಮ ಲೇಖನ
ಅಬ್ದುಲ್ಲಾ ಅವರೆ, ನಿಮ್ಮ ಲೇಖನ ೧೯೭೨ರ ನನ್ನ ನೆನಪಿನ ಮೊದಲ ಮಹಾ ಚುನಾವಣೆ ಜ್ಞಾಪಿಸಿಕೊಳ್ಳುವಂತೆ ಮಾಡಿತು. ಆಗ ನಾನು ಚಿತ್ರದುರ್ಗದಲ್ಲಿ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆ. ಹುಡುಗರು, ಹೀಗೆ ಒಂದು ಪದ್ಯವನ್ನು ಕಟ್ಟಿ ಹಾಡುತ್ತಿದ್ದರು, ಅದೇನೆಂದರೆ ....ಕನ್ನಂಬಾಡಿ ಕಟ್ಟೆ ನೋಡು, ನಿಜಲಿಂಗಪ್ಪನ್ ಹೊಟ್ಟೆ ನೋಡು, ಇಂದ್ರಾ ಗಾಂಧಿ ಮೂಗು ನೋಡು, ಪಿಯರ್ ಸಾಬುನ್ನ ಗಡ್ಡಾ ನೋಡು. ನಿಮ್ಮ ಲೇಖನಕ್ಕೆ ಧನ್ಯವಾದಗಳು.
In reply to ಅಬ್ದುಲ್ಲಾ ಅವರೆ, ನಿಮ್ಮ ಲೇಖನ by makara
ಮೈಕಾಸುರನ ಹಾವಳಿ ಕಾಗದ ಪತ್ರ
ಮೈಕಾಸುರನ ಹಾವಳಿ ಕಾಗದ ಪತ್ರ ಹಾವಳಿ -ಇತ್ಯಾದಿ ಇಲ್ಲದ್ದು ಗೆದ್ದ ಮೇಲೆ ಪಟಾಕಿ ಹೊಡೆಯಬೇಡಿ ಎಂದದ್ದು ಆಯ್ತು ಮತ್ತು ಅದನ್ನು ನಾನು ಸ್ವಾಗತಿಸುವೆ ... ಜ .... ದಳ ಇನ್ನಸ್ಟು ದಳ ಆಗುವ ಸಂಭವ ಇದೆ ........!!
ಶುಭವಾಗಲಿ
\|/