ನಿರಾಶ್ರಿತ ತಾಯಿ ಮತ್ತು ಮಗು

ನಿರಾಶ್ರಿತ ತಾಯಿ ಮತ್ತು ಮಗು

ನಿರಾಶ್ರಿತ ತಾಯಿ ಮತ್ತು ಮಗು 

ಮಡೋನಾ ಮತ್ತು ಮಗುವಿನ ಯಾವೊಂದು ಕಲೆಯೂ
ನಿಲುಕದಂತ ಚಿತ್ರವೊಂದರಲ್ಲಿ
ಕೆಲವೇ ಕ್ಷಣಗಳಲ್ಲಿ ಮರೆಯಬೇಕಿರುವ ತನ್ನ
ಕಂದನ ಕುರಿತ ತಾಯಿಯೊಬ್ಬಳ ವಾತ್ಸಲ್ಯ.

ಬೇಧಿಯಿಂದ ಬಳಲುವ ಕುಂಡೆತೊಳೆಯದ ಮಕ್ಕಳ ವಾಸನೆ
ಗಾಳಿ ತುಂಬಿತ್ತು;
ತಮ್ಮ ನಿತ್ರಾಣ ಪಕ್ಕೆಲುಬು, ಬತ್ತಿದ ಅಂಡು,
ಕಂಗಾಲು ಹೊಟ್ಟೆಯ ಹೊತ್ತು ಎತ್ತಲಾರದ ಹೆಜ್ಜೆ
ಇಡುತ್ತ ಸಾಗಿದ್ದರು.
ಅಲ್ಲಿಯ ಹೆಚ್ಚುಪಾಲು ತಾಯಂದಿರು
ಭರವಸೆ ತೊರೆದು ಮಕ್ಕಳಾರೈಕೆ ಬಿಟ್ಟಿದ್ದರೂ,
ಇವಳಲ್ಲ. ಹಲ್ಲುಗಳ ನಡುವೆ ಒಂದು ಪ್ರೇತನಗೆಯಿತ್ತು,
ಕಣ್ಣಲ್ಲಿ ತಾಯಿಹೆಮ್ಮೆಯ ಪ್ರೇತಕಳೆ,
ಮಗನ ತಲೆಮೇಲೆ ಅಳಿದುಳಿದ, ಧೂಳು ಮೆತ್ತಿದ ಕೂದಲು
ಬಾಚುತ್ತ - ಕಣ್ಣಲ್ಲೇ ನಗುತ್ತ - ಬೈತಲೆ ತೆಗೆದು ಒಪ್ಪಮಾಡುತ್ತ...

ಇನ್ನಾವುದೋ ದಿನದ ಜೀವನದಲ್ಲಿ
ಇದೊಂದು ಅವನ ಬೆಳಗಿನ ತಿಂಡಿಯಂತೆ ಶಾಲೆಯ ಮುಂಚಿನ
ಸಾಧಾರಣ ದೈನಂದಿನ ಕ್ರಿಯೆಯಾಗಬಹುದಿತ್ತು.
ಈಗವಳು,
ಚಿಕ್ಕ ಗೋರಿಯ ಮೇಲೆ ಹೂ ಸುರಿದಂತೆ
ಇಲ್ಲಿ ತೊಡಗಿಕೊಂಡಿದ್ದಳು.

-------- ಚಿನುವಾ ಅಚೀಬೆ
 (Refugee Mother and Child)

Rating
No votes yet