' ನಿರ್ಣಯ ' (ಕಥೆ) ಭಾಗ 1
ಬೆಳಗಿನ ತಣ್ಣನೆಯ ಗಾಳಿ ಹಿತವಾಗಿ ಕಿಟಕಿಯ ಸಂದುಗಳಿಂದ ಸುಳಿದು ಬರುತ್ತಿದೆ. ಹಕ್ಕಿಗಳ ಚಿಲಿಪಿಲಿ ಬೆಳಕಿಂಡಿಯ ಗಾಜಿನಲ್ಲಿ ಮಂದವಾಗಿ ಬೆಳ್ಳಗೆ ಬೆಳಕಿಗೆ ತೆರೆದು ಕೊಳ್ಳುತ್ತಿರುವ ಆಕಾಶ, ದೇವರ ಮನೆಯಲ್ಲಿ ಅಮ್ಮನ ಸುಪ್ರಭಾತದ ಹಾಡು ಎಲ್ಲವೂ ಬೆಳಕು ಹರಿಯುತ್ತಿದೆ ಎನ್ನುವುದರ ಸೂಚಕಗಳು. ಅಮ್ಮ ದೇವರಮನೆಯಲ್ಲಿ ಗೂಡಿಸಿ ರಂಗೋಲಿ ಹಾಕುತ್ತಿದ್ದಾಳೆ. ಅದು ಅವಳ ನಿತ್ಯದ ಪ್ರಾರಂಭಿಕ ಕಾಯಕ.
' ಮುಕುಂದ ಬೆಳಗಾಯಿತು ಏಳೋ' ಎಂದು ಅಮ್ಮ ಕೂಗಿದಳು.
ಇದು ದಿನಂಪ್ರತಿ ಅಮ್ಮ ಹೊರಗೆ ಅಂಗಳ ಗೂಡಿಸಿ ರಂಗೋಲಿ ಇಡಲು ಹೋಗುವ ಮುನ್ನ ನಿತ್ಯ ಕೂಗುವ ಪರಿಪಾಠ. ಐದು ಗಂಟೆಗೆ ಎಚ್ಚರವಾದರೂ ಹಾಸಿಗೆಯ ಮೇಲೆ ಅತ್ತಿತ್ತ ಹೊರಳಾಡುತ್ತ ಅಮ್ಮ ಕೂಗಿದ ನಂತರ ಎದ್ದರಾಯಿತು ಎಂಬ ಸೋಮಾರಿತನ. ಇದು ನನ್ನ ದೈನಂದಿನ ಪ್ರಕ್ರಿಯೆ.
' ಹ್ಞೂ ' ಎಂದು ಉತ್ತರಿಸಿ ಮತ್ತೆ ಮಗ್ಗಲು ಬದಲಿಸಿದೆ
ತಲೆತುಂಬ ಎಂಥವೋ ಕೆಲಸಕ್ಕೆ ಬಾರದೆ ಯೋಚನೆಗಳು. ತಲೆ ಗೆದ್ದಲು ಹಿಡಿದ ಮರದಂತೆ ಟೊಳ್ಳಾಗಿ ಹೋಗಿದೆ. ತುಂಬಾ ದಿನಗಳಿಂದ ಯಾವದೊಂದು ನಿರ್ಣಯಕ್ಕೆ ಬಾರದೆ ಬರಿ ತೊಳಲಾಟದಲ್ಲಿಯೆ ಮುಳುಗಿ ಹೋಗಿದ್ದೇನೆ. ಒಮ್ಮೊಮ್ಮೆ ಈ ತಾಯಿ ತಂದೆ ಅಣ್ಣ ತಮ್ಮ ಬಂಧು ಬಾಂಧವರೆಂಬ ಯಾವ ವ್ಯಾಮೋಹವೂ ಬೇಡ, ಇದೆಲ್ಲವನ್ನು ಕಿತ್ತೆಸೆದು ಎಲ್ಲಿಗಾದರೂ ಗುರುತು ಪರಿಚಯ ವಿಲ್ಲದೆಡೆ ಹೋಗಿ ಬಿಡಬೇಕು. ಅಲ್ಲಿ ನನ್ನನ್ನು ಇವನು ಇಂಥವನು ಎಂದು ಯಾರೂ ಗುರುತಿಸ ಬಾರದು.. ಜನರು ನನ್ನನ್ನ್ನು ಒಬ್ಬ ಅಪರಿಚಿತನಂತೆ ಪರಿಗಣಿಸ ಬೇಕು. ಈ ಉಸಿರುಗಟ್ಟಿಸುವ ವಾತಾವರಣದಿಂದ ಆದಷ್ಟು ಬೇಗನೆ ಪಲಾಯನ ಹೇಳಬೇಕು, ಅಂದರಾದರೂ ನೆಮ್ಮದಿ ದೊರೆಯುವುದೋ ಎಂದು ನೋಡಬೇಕು. ಚಂಚಲ ಮನಸ್ಥಿತಿಯವರ ಮನೋಗತಿಯೆ ಹೀಗೆಂದು ಕಾಣುತ್ತದೆ. ಜೀವನದುದ್ದಕ್ಕೂ ಈ ತೊಳಲಾಟದಲ್ಲಿಯೆ ಜೀವನ ಕ್ರಮಿಸಿ ಬಿಡಬೇಕಾದ ಅನಿವಾರ್ಯತೆ ಇದು ಎಂಬ ವಿಚಾರ ಮನ ತಾಗಿದಾಗ ಬ ಹಳ ಜಿಗುಪ್ಸೆಯಾಯಿತು. ಮತ್ತೊಮ್ಮೆ ಮಗ್ಗಲು ಬದಲಿಸಿ ಕಣ್ಮುಚ್ಚಿದೆ.
ಗೋಪಿ ಏನೋ ತಕರಾರು ಮಾಡುತ್ತಿರುವನೆಂದು ಕಾಣುತ್ತದೆ. ಅಡುಗೆ ಮನೆಯಿಂದ ಅಮ್ಮನ ಗದರಿಕೆ ಕೇಳಿ ಬರುತ್ತಿದೆ. ಇತ್ತೀಚೆಗೆ ಆತ ತುಂಬಾ ಹೆಚ್ಚಿ ಕೊಂಡಿದ್ದಾನೆ, ಹಿರಿಯರೆನ್ನುವ ಗೌರವವೆ ಇಲ್ಲ. ಒಂದೊಂದು ಸಲ ಆತನನ್ನು ಗದರಿಸಿ ನೀನು ಈ ರೀತಿ ವರ್ತಿಸುವುದು ಸರಿಯಲ್ಲವೆಂದು ಹೇಳಬೇಕೆನಿಸುತ್ತದೆ. ಅಮ್ಮನೂ ಅದನ್ನೆ ಹೇಳುತ್ತಾಳೆ ನೀನಾದರೂ ನಾಲ್ಕು ಬುದ್ಧಿಯ ಮಾತುಗಳನ್ನು ಹೇಳು, ನಾವೆಂದರೆ ಅವನಿಗೆ ಲೆಖ್ಖಕ್ಕೆ ಇಲ್ಲ ಎಂದು. ' ಈ ಸಲ ಇವನನ್ನು ನಿನ್ನ ಜೊತೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಕಾಲೇಜಿಗಾದರೂ ಸೇರಿಸು, ಇಲ್ಲಿದ್ದು ಅವನು ಮಾಡೆಸುವುದಾದರೂ ಏನು ? ಜಮೀನಿನ ಉಸ್ತುವಾರಿಯನ್ನು ನೋಡಿ ಕೊಳ್ಳಲು ನಿನ್ನ ತಂದೆಯಿಲ್ಲವೆ ? ಇವನಿಗೇಕೆ ಈ ಇಲ್ಲದ ಉಸಾಬರಿ, ಓದುವ ವಯಸ್ಸಿನಲ್ಲಿ ಓದುವುದನ್ನು ಬಿಟ್ಟು ' ಎಂದಳು.
' ಅಮ್ಮ ಅವನಿಗೆ ಓದು ಬೇಡವಾದಲ್ಲಿ ನಾನು ನೀನು ಏನು ಮಾಡಲು ಸಾಧ್ಯ ? ಜಮೀನಿನ ಉಸ್ತುವಾರಿ ನೋಡಿಕೊಂಡು ಇಲ್ಲಿಯೆ ಇರುವುದಾದರೆ ಇರಲಿ, ಪದವೀಧರನಾಗಿ ಗುಲಾಮಗಿರಿಯ ನೌಕರಿ ಮಾಡುವುದಕ್ಕಿಂತ ಇದೇ ಮೇಲು. ನಾಳೆ ನಿವೃತ್ತಿಯ ನಂತರ ಜೀವನೋಪಾಯಕ್ಕಾಗಿ ಪರದಾಡಬೇಕಿಲ್ಲ. ಈ ವ್ಯವಸಾಯದಲ್ಲಿ ಸಿಗುವ ನೆಮ್ಮದಿ ಆ ತಾಬೇದಾರಿಯಲ್ಲಿ ಎಲ್ಲಿ ಸಿಗಬೇಕು ' ಎಂದು ಉತ್ತರಿಸಿದ್ದೆ. ,
' ಏನೋಪ್ಪ ನೀನೂ ಹೀಗೆಯೆ ಹೇಳುತ್ತೀಯಾ, ನಿನ್ನ ತಂದೆ ಅದನ್ನು ನೆಚ್ಚಿಕೊಂಡು ಅನುಭವಿಸುತ್ತಿರುವುದನ್ನು ನಾವು ನೋಡುತ್ತಿಲ್ಲವೆ ? ನೀನೂ ಅವನ ಪರವಾಗಿ ಮಾತನಾಡಿದರೆ ನಾನು ಏನು ಹೇಳಲಿ ಎಂದು ಗೊಣಗಿದಳು. ಆಕೆಯ ಗೋಣಗುವಿಕೆ ನನಗೆ ಹಿಂಸೆಯೆನಿಸುತ್ತಿತ್ತು. .
*
ಅಮ್ಮನ ಸ್ವಭಾವವೆ ಹೀಗೆ, ಆಕೆ ತನ್ನ ಮನಸ್ಸಿಗಾದ ನೋವನ್ನಾಗಲಿ ದುಃಖವನ್ನಾಗಲಿ ಇನ್ನೊಬ್ಬರೆದುರು ಹೇಳಿಕೊಂಡವಳಲ್ಲ. ಯಾರಿಗೂ ಬಿರುಸು ಮಾತನಾಡಿದವಳಲ್ಲ. ಅವಳೊಬ್ಬ ಉದಾತ್ತ ಮಾನವತಾವಾದಿ. ಅವಳ ಜೀವನ ಹುಟ್ಟಿನಿಂದ ಕೊನೆಯ ತನಕ ಬರಿ ಕಷ್ಟಗಳ ಸಂಕೋಲೆಯೆಯಲ್ಲಿ ಅವಳ ಜೀವನ ಸಾಗಿ ಬಂತು. ಹುಟ್ಟಿದ ಮನೆಯಲ್ಲಿ ಮಲತಾಯಿಯ ಚಿತ್ರ ಹಿಂಸೆಯಾದರೆ, ಈ ಮನೆ ತುಂಬಿದ ನಂತರವೂ ಇಲ್ಲಿ ಅವಳಿಗೆ ಕಷ್ಟದ ಸರಮಾಲೆಗಳೆ ಕಾದು ನಿಂತಿದ್ದವು. ಇಲ್ಲಿ ಅವಳಿಗೆ ಅತ್ತೆ ಭಾವ ಅತ್ತಿಗೆ ನಾದಿನಿ ವಾರಗಿತ್ತಿಯರ ಕಾಟ. ಬೆಳಗಿನಿಂದ ಮಧ್ಯ ರಾತ್ರಿಯ ವರೆಗೂ ಕತ್ತೆ ಚಾಕರಿ. ದೊಡ್ಡಮ್ಮ ಅಜ್ಜಿಯ ಅಣ್ಣನ ಮಗಳು ಮೇಲಾಗಿ ಸಾಕಷ್ಟು ವರದಕ್ಷಣೆಯನ್ನು ಹೇರಳವಾಗಿ ತಂದವಳು. ಈ ನೆಂಟಸ್ಥಿಕೆಯನ್ನು ಕುದುರಿಸದವಳು ಅಜ್ಜಿ. ನನ್ನ ಅಮ್ಮನ ವಿಷಯಕ್ಕೆ ಬರುವುದಾದರೆ ಈ ಸಂಬಂಧವನ್ನು ಕುದುರಿಸಿದವರು ಅಜ್ಜ. ನಮ್ಮ ತಾತ ತಮ್ಮ ಬಾಲ್ಯ ಸ್ನೇಹಿತನ ಮಗಳು ತಸನ್ನ ತವರು ಮನೆ ಯಲ್ಲಿ ಪಡುತ್ತಿದ್ದ ಬವಣೆಯನ್ನು ನೋಡಲಾರದೆ ಸ್ನೇಹಿತನ ಕನ್ಯಾಸೆರೆ ಬಿಡಿಸಲು ಮುಂದಾದದ್ದು. ಈ ವಿಚಾರ ಅಜ್ಜಿಗೆ ತಿಳಿದು ಅವಳು ದೊಡ್ಡ ರಾದ್ಧಾಂತವನ್ನೆ ಮಾಡಿದಳಂತೆ. ಆದರೆ ತಾತ ಇದಕ್ಕೆ ಜಗ್ಗದೆ ಅಮ್ಮನನ್ನು ತಮ್ಮ ಮನೆಯ ಸೊಸೆಯಾಗಿ ಮನೆತುಂಬಿಸಿ ಕೊಂಡರಂತೆ. ಕಾರಣ ತಾತನ ಮೇಲಿನ ಅಸಮಾಧಾನವನ್ನು ಅಜ್ಜಿ ಅಮ್ಮನ ಮೇಲೆ ತೀರಿಸಿ ಕೊಳ್ಳಲು ಪ್ರಾರಂಭಿಸಿದಳು. ಮನೆಯಲ್ಲಿ ನಡೆಯುವ ಪ್ರತಿಯೊಂದು ತಪ್ಪಿಗೂ ಅಮ್ಮನೆ ಹೊಣೆ.
ಇನ್ನು ತಂದೆಯ ಸೋದರಿಯರು, ಅವರು ಎಷ್ಟೆ ಮಾಡಲಿ ಅಜ್ಜಿಯ ಮುದ್ದಿನ ಮಕ್ಕಳು, ಇಂದಿಲ್ಲ ನಾಳೆ ಮದುವೆಯಾಗಿ ಬೇರೆ ಮನೆಗೆ ಹೊರಟು ಹೋಗುವವರು. ಅಲ್ಲಿ ಅವರವರ ಸಂಸಾರದ ಜವಾಬ್ದಾರಿ ಅವರಿಗೆ ಇದ್ದೇ ಇರುತ್ತದೆ. ಇಲ್ಲಿ ಇರುವಷ್ಟು ದಿನ ಅರಾಮವಾಗಿ ಹಾಯಾಗಿ ಇರಲಿ ಎನ್ನುವುದು ಅಜ್ಜಿಯ ಧೋರಣೆ. ತಾತನ ಮಾತು ಲೆಖ್ಖಕ್ಕೆ ಇರಲಿಲ್ಲ. ತಂದೆಯಂತೂ ಎಲ್ಲದಕ್ಕೂ ಮೂಕ ಪ್ರೇಕ್ಷಕ, ಹೀಗಾಗಿ ದಬ್ಬಾಳಿಕೆಗೆ ಬಲಿಪಶುವಾದದ್ದು ಅಮ್ಮ. ಈ ಕಷ್ಟ ಕಾರ್ಪಣ್ಯ ಮಾನಸಿಕ ಚಿತ್ರ ಹಿಂಸೆಗಳಿಂದ ತನ್ನ ಸಹೆನೆಯನ್ನು ಕಳೆದು ಕೊಳ್ಳದೆ ತಾಳ್ಮೆಯೇ ಮೈವೆತ್ತಿ ಬಂದಂತೆ ಪುಟಕ್ಕಿಟ್ಟ ಚಿನ್ನದಂತೆ ತನ್ನ ವ್ಯಕ್ತಿತ್ವವನ್ನು ಬೆಳೆಸಿ ಕೊಂಡವಳು. ಇದನ್ನು ಅವಳು ಎಂದೂ ತಾನಾಗಿಯೆ ಬಾಯ್ಬಿಟ್ಟು ಹೇಳಿದವಳಲ್ಲ. ಇದಿಷ್ಟು ನಮಗೆ ತಿಳಿದದ್ದು ಅವರಿವರ ಬಾಯಿಯಿಂದ. ಹೀಗಾಗಿ ನನಗೆ ಅಮ್ಮನನ್ನು ಕಂಡರೆ ಅಪಾರ ಗೌರವ. ಅವಳು ನಮಗೆಲ್ಲ ಆದರ್ಶ. ಅವಳಿಗೆ ಒಂದು ಕೊಂಕು ಮಾತನಾಡಿದವರನ್ನು ಅವಳ ಮನ ನೋಯಿಸಿ ದವರನ್ನು ನಾನೆಂದಿಗೂ ಕ್ಷಮಿಸಲಾರೆ.
ಇದೇ ಕಾರಣಕ್ಕಾಗಿಯೆ ನಾನು ನಿನ್ನೆಯ ದಿನ ಶಾಂತಾ ಅತ್ತೆಯ ಮಗಳನ್ನು ನನಗೆ ತಂದು ಕೊಳ್ಳುವ ವಿಷಯ ವನ್ನು ಅಮ್ಮ ತಿಳಿಸಿದಾಗ ನಾನು ಅಮ್ಮನ ಮೇಲೆ ರೇಗಾಡಿದ್ದು. ಈ ಸಂಬಂಧಕ್ಕೆ ಗೋಪಿಯದೂ ಪ್ರತಿರೋಧ. ತಂದೆಯವರದೋ ಅಮ್ಮನ ವಿಚಾರಕ್ಕೆ ಮೌನ ಸಮ್ಮತಿ. ಆದರೆ ನನಗೆರ ಈ ಶಾಂತಾ ಅತ್ತೆಯನ್ನು ನೆನೆದರೇ ಮೈಯುರಿ. ಇಷ್ಟು ದಿನ ಇಲ್ಲದ ಈ ಬಾಂಧವ್ಯ ಒಮ್ಮಿಂದೊಮ್ಮೆಗೆ ಹೇಗೆ ನೆನಪಿಗೆ ಬಂತು. ಗೋಪಿ ಹೇಳುವ ಹಾಗೆ ಹೆಚ್ಚು ಖರ್ಚು ವೆಚ್ಚಗಳಿಲ್ಲದೆ ತನ್ನ ಮಗಳ ಮದುವೆಯನ್ನು ಮಾಡಿ ಕೈ ತೊಳೆದು ಕೊಳ್ಳುವ ಅತಿ ಜಾಣತನ. ಒಂದೊಂದು ಸಲ ಈ ಗೋಪಿಯ ತರ್ಕ ಸರಣಿ ನನಗೆ ಮೆಚ್ಚುಗೆಯಗುತ್ತದೆ. ಹೆಚ್ಚು ಓದಿದವನಲ್ಲವಾದರೂ ಆತನ ನೈಜ ವೈಚಾರಿಕತೆಯ ಬಗೆಗೆ ಅಭಿಮಾನವೆನಿಸುತ್ತದೆ. ನಾವಿಬ್ಬರೂ ಒಂದೆ ತಾಯಿಯ ಗರ್ಭದಲ್ಲಿ ಜನಿಸಿದರೂ ಸಮಾನ ಪ್ರೀತಿ ವಾತ್ಸಲ್ಯಗಳ ವಾತಾವರಣದಲ್ಲಿ ಬೆಳೆದರೂ ನಾನು ಅವನಂತೆ ಮನಕ್ಕೆ ಸರಿ ಕಂಡದ್ದನ್ನು ಆಡಲು ಏಕೆ ಹಿಂಜರಿಯುತ್ತೇನೆ. ಬಹುಶಃ ಅದು ನನ್ನ ಮಾನಸಿಕ ದೌರ್ಬಲ್ಯವೆಂದು ನನ್ನ ಭಾವನೆ.
*
' ಮುಕುಂದ ಮುಕುಂದ ಎನ್ನುತ್ತ ಗೋಪಿ ನನ್ನ ರೂಮಿನೊಳಕ್ಕೆ ಬಂದವನು ಅಮ್ಮ ಆಗಿನಿಂದಲೆ ಕರೆಯು ತ್ತಿದ್ಧಾಳೆ, ಏಕೆ ಹುಷಾರಿಲ್ಲವೆ ? ಗಂಟೆ ಎಂಟಾದರೂ ಇನ್ನೂ ಮಲಗಿರುವಿ ' ಎಂದು ಕೇಳಿದ.
' ಏನೂ ಇಲ್ಲ ಸುಮ್ಮನೆ ಹೀಗೆಯೆ ವಿರಾಮವಾಗಿ ಮಲಗಿ ಕೊಂಡಿದ್ದೆ ' ಎಂದು ಉತ್ತರಿಸಿ ಹಾಸಿಗೆಯಿಂದ
ಮೇಲಕ್ಕೆ ಎದ್ದೆ. ಗೋಪಿ ಕೋಣೆಯಿಂದ ಹೊರಕ್ಕೆ ಸರಿದು ಹೋದ. ಇನ್ನು ಮಲಗಿಕೊಂಡಿರುವುದು ಸಾಧ್ಯವಿಲ್ಲವೆನಿಸಿ ಎದ್ದು ಹಾಸಿಗೆ ಮಡಿಚಿಟ್ಟು ಟವಲ್ನ್ನು ಹೆಗಲಿಗೇರಿಸಿ ಪೇಸ್ಟ್ ಮತ್ತು ಬ್ರಶ್ಗಳೊಡನೆ ಬಚ್ಚಲು ಕೋಣೆಯೆಡೆಗೆ ಸಾಗಿದೆ, ಗಂಟೆ ಎಂಟಾದರೂ ಮೈ ಕೊರೆಯುವ ಚಳಿ ಮೈಯಲ್ಲಿ ನಡುಕವನ್ನು ಹುಟ್ಟಿಸುವಂತಿತ್ತು. ಚಳಿಯ ಬಾಧೆಯಿಂದ ತಪ್ಪಿಸಿ ಕೊಳ್ಳಲು ನೀರೊಲೆಯ ಮುಂದೆ ಕುಳಿತು ಹಲ್ಲುಜ್ಜಲು ಪ್ರಾರಂಭಿಸಿದೆ ವಿಚಾರಗಳು ಮನದ ಮೇಲೆ ಲಗ್ಗೆಯಿಡಲು ಪ್ರಾರಂಭಿಸಿದವು. ಅಮ್ಮನಿಗೆ ಕೊನೆಯ ನಿರ್ಣಯ ತಿಳಿಸಲು ಇಂದೇ ಕೊನೆಯ ಗಡುವು. ಯಾವದೊಂದೂ ನಿರ್ಣಯಕ್ಕೆ ಬರದೆ ತೊಳಲಾಡುವಂತಾಯಿತು. ಕಟ್ಟಿಗೆಗಳನ್ನು ಒಲೆಯೊಳಕ್ಕೆ ದೂಡಿ ಊದು ಗೊಳಿವೆಯಿಂದ ಊದಿ ಉರಿ ಹೊತ್ತಿಸಿದೆ. ಒಮ್ಮಲೆ ಕಟ್ಟಿಗೆಗಳಿಂದ ಪಟಪಟನೆ ಸಿಡಿದ ಕಿಡಿಗಳಿಗೆ ಅಂಜಿ ಹಿಂದೆ ಸರಿದೆ. ಹಾಗೆಯೆ ಯೋಚನೆಯ ಕಿಡಿಗಳು ಹೊತ್ತಿಕೊಂಡು ಮನಸ್ಸು ಹಿಂದಿನ ವಿಚಾರಗಳನ್ನು ಮೆಲುಕು ಹಾಕ ತೊಡಗಿತು.
( ಮುಂದುವರಿದಿದೆ )
Rating
Comments
ಉ: ' ನಿರ್ಣಯ ' (ಕಥೆ_ ಭಾಗ 1):ನಮ್ಮವ ನಮ್ಮವ ....!!
In reply to ಉ: ' ನಿರ್ಣಯ ' (ಕಥೆ_ ಭಾಗ 1):ನಮ್ಮವ ನಮ್ಮವ ....!! by venkatb83
ಉ: ' ನಿರ್ಣಯ ' (ಕಥೆ_ ಭಾಗ 1):ನಮ್ಮವ ನಮ್ಮವ ....!!
ಉ: ' ನಿರ್ಣಯ ' (ಕಥೆ_ ಭಾಗ 1)
In reply to ಉ: ' ನಿರ್ಣಯ ' (ಕಥೆ_ ಭಾಗ 1) by RAMAMOHANA
ಉ: ' ನಿರ್ಣಯ ' (ಕಥೆ_ ಭಾಗ 1)
ಉ: ' ನಿರ್ಣಯ ' (ಕಥೆ_ ಭಾಗ 1)
In reply to ಉ: ' ನಿರ್ಣಯ ' (ಕಥೆ_ ಭಾಗ 1) by swara kamath
ಉ: ' ನಿರ್ಣಯ ' (ಕಥೆ_ ಭಾಗ 1)