'ನಿರ್ಣಯ' (ಕಥೆ) ಭಾಗ 2

'ನಿರ್ಣಯ' (ಕಥೆ) ಭಾಗ 2

                   
     ಆಗ ನನಗಿನ್ನು ಚಿಕ್ಕ ವಯಸ್ಸು, ನಮ್ಮ ತಾತ ಅಸ್ತಮಾ ಕಾಯಿಲೆಯಿಂದ ತೀರಿ ಕೊಂಡರು. ಆ ವೇಳೆಗಾಗಲೆ ನಮ್ಮ ದೊಡ್ಡಪ್ಚಪ ಮನೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದ್ದರು. ಗದ್ದೆ ತೋಟಗಳಲ್ಲಿ ದುಡಿಯಲು ತಂದೆ ಮನೆಯಲ್ಲಿ ಯ ಕತ್ತೆ ಚಾಕರಿಗೆ ಅಮ್ಮ ಸಣ್ಣಪುಟ್ಟ ಕೆಲಸಗಳಿಗೆ ನಾನು. ಅಜ್ಜಿ ಇವೆಲ್ಲಕ್ಕೂ ಮೌನ ಪ್ರೇಕ್ಷಕಿ. ದೊಡ್ಡಮ್ಮನ ವರ್ತನೆ ಒಮ್ಮೊಮ್ಮೆ ಅವಳಿಗೂ ಜಿಗುಪ್ಸೆ ತರಿಸುತ್ತಿತ್ತು. ಈಗ ದೊಡ್ಡಮ್ಮ ಅಜ್ಜಿಯನ್ನು ಯಾವ ಲೆಖ್ಖಕ್ಕೂ ಇಟ್ಟಿರಲಿಲ್ಲ. ತಾತ ಬದುಕಿದಾಗ ಇದ್ದಿರಬಹುದಾದ ಅಲ್ಪ ಸ್ವಲ್ಪ ಗೌರವವೂ ಈಗ ಹೊರಟು ಹೋಗಿತ್ತು. ದೊಡ್ಡಪ್ಪ ದೊಡ್ಡಮ್ಮಳ ಕೈಗೊಂಬೆ ಸೋದರತ್ತೆಯರ ಮದುವೆಯ ನಿಮಿತ್ತ ಮಾಡಿದ ಸಾಲ ಬೆಳೆದು ನಿಂತಿತ್ತು. ದೊಡ್ಡಪ್ಪ ಪಾಲು ಮಾಡಿಕೊಂಡು ಬೇರೆ ಹೋಗಲು ಯೋಚಿಸುತ್ತಿರುವರೆಂಬ ಗಾಳಿ ವರ್ತಮಾನ ಊರಲೆಲ್ಲ ಹರಡಿತ್ತು. ಅಪ್ಪ ಇದಕ್ಕೆ ಯಾವ ಪ್ರತಿಕ್ರಿಯೆ ಯನ್ನೂ ತೋರಿರಲಿಲ್ಲ.ಈ ವಿಷಯ ತಿಳಿದ ಅಜ್ಜಿ ತುಂಬಾ ನೊಂದು ಕೊಂಡಳು. ತಾತನ ಸಾವಿನಿಂದ ಮೊದಲೆ ಜರ್ಜರಿತ ಗೊಂಡ ಆಕೆ ಈ ವಿಷಯ ತಿಳಿದು ಭೂಮಿಗಿಳಿದು ಹೋದಳು, ನಂತರ ಕೆಲವೇ ದಿನಗಳಲ್ಲಿ ಮರಣ ಹೊಂದಿದಳು.
 
     ಅಜ್ಜಿಯ ಅವಸಾನದೊಂದಿಗೆ ಒಂದಾಗಿದ್ದ ಕುಟುಂಬ ಎರಡಾಯಿತು. ಪರಿಣಾಮ ಒಳ್ಳ್ಳೊಳ್ಳೆಯ ಗದ್ದೆ ತೋಟಗಳು ದೊಡ್ಡಪ್ಪನ ಕೈ ಸೇರಿದವು. ಕುಟುಂಬದ ಸಾಲ ಮಾತ್ರ ಸರಿಯಗಿ ಅರ್ಧಪಾಲು ತಂದೆಯ ಪಾಲಿಗೆ ಬಂತು. ಅಪ್ಪ ಮನೆತನದ ಗೌರವವೆಂಬ ಒಣ ಅಭಿಮಾನಕ್ಕೆ ಕಟ್ಟು ಬಿದ್ದು ಕೋರ್ಟ ಕಟ್ಟೆ ಹತ್ತಲಿಲ್ಲ. ಅಮ್ಮ ಇದಾವದಕ್ಕೂ ತಂದೆಯನ್ನು ಆಕ್ಷೇಪಿಸಲಿಲ್ಲ. ಆಗಲೆ ನಾವು ತೋಡುಬೈಲಿನಲ್ಲಿರುವ ಈ ಮನೆಗೆ ಬಂದದ್ದು. ಇಲ್ಲಿ ಅಮ್ಮನಿಗೆ ಕಿತ್ತುತಿನ್ನುವ ಬಡತನ ಮೈಮುರಿ ದುಡಿತವಿದ್ದರೂ ಯಾರೂ ಅವಳಿಗೆ ಮಾನಸಿಕವಾಗಿ ಕಿರುಕುಳ ಕೊಡುವವರು ಇರಲಿಲ್ಲ, ಕಾರಣ ಇಲ್ಲಿ ಅವಳಿಗೆ ಒಂದು ರೀತಿಯ ಮಾನಿಸಕ ನೆಮ್ಮದಿ ದೊರೆಯಿತೆಂದೆ ಹೇಳಬೇಕು. ನಮ್ಮನ್ನು ಈ ಸ್ಥಿತಿಗೆ ತರಲು ಅಪ್ಪ ಅಮ್ಮ ತುಂಬಾ ಕಷ್ಟ ಪಟ್ಟರು. ಬಂದು ಬಳಗದವರಿದ ಕೇಳ ಬಾರದ್ದನ್ನೆಲ್ಲ ಕೇಳಿ ಅವಮಾನ ಮಾಡಿಸಿ ಕೊಂಡಿದ್ದರು. ಆ ದಿನಗಳನ್ನು ನೆನೆದರೆ ಈಗಲೂ ಮನಸು ವಿಷಣ್ಣವಾಗುತ್ತದೆ.
 
     ಆ ಕಾರ್ಪಣ್ಯದ ದಿನಗಳು ಅಸಹಾಯಕ ಪರಿಸ್ಥಿತಿಗಳ ನನಗೆ ಈಗಲೂ ಬಹಳ ಜಿಗುಪ್ಸೆ ಇದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಪ್ರಥಮ ಶ್ರೇಣಿಯಲ್ಲಿಯೆ ಉತ್ತೀರ್ಣನಾಗಿದ್ದೆ. ಎಲ್ಲರಂತೆ ನನಗೂ ಕಾಲೇಜು ಸೇರಬೇಕು ತುಂಬಾ ಓದಬೇಕು ಉತ್ತಮ ಉದ್ಯೋಗ ಸಂಪಾದಿಸಿ ಕುಟುಂಬಕ್ಕೆ ಸಹಾಯ ಮಾಡಬೇಕು ಏನೆಲ್ಲ ಕನಸಿನ ಗೋಪುರಗಳವು? ಸಹಜ ವಯೋಮಾನದ ಅವ್ಯಕ್ತ ಕನಸುಗಳವು, ಅವು ನನಸಾದವೆ ಬಹುಶಃ ಇಲ್ಲವೆಂದೆ ಹೇಳಬೇಕು. ಕಾಲೇಜು ವಿದ್ಯಾಭ್ಯಾಸ ಮಾಡಿಸುವಷ್ಟು ಅನುಕೂಲ ನನ್ನ ತಂದಗಿದೆಯೆ ಎನ್ನುವ ವಿಚಾರ ನಾನು ಮಾಡಿರಲಿಲ್ಲ. ಅಮ್ಮನ ಮುಂದೆ ಈ ವಿಚಾರವಾಗಿ ಮಾತನಾಡಿ ತಂದೆಯ ಹತ್ತಿರ ರಾಯಭಾರ ಮಾಡಲು ಹೇಳಿದ್ದೆ. ಅವರು ಈ ವಿಷಯದಲ್ಲಿ ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿದ್ದರು. ಅವರೊಡನೆ ಈ ವಿಷಯವಾಗಿ ಮತನಾಡಲು ಅವರ ಶ್ರೀಮದ್ಗಾಂಭಿರ್ಯ ಅಡ್ಡ ಬರುತ್ತಿತ್ತು. ಹೀಗಾಗಿ ನನಗೆ ತಂದೆಗಿಂತ ತಾಯಿಯೊಡನೆಯೆ ಸಲುಗೆ ಜಾಸ್ತಿ. ಕಾಲೇಜು ಸೇರಲಾರದ ನನ್ನ ಅಸಹಾಯಕ ಪರಿಸ್ಥಿತಿ ನೆನೆದು ನನಗೆ ನಿಜಕ್ಕೂ ಖೇದ ವೆನಿಸಿತ್ತು.
 
     ಹೈಸ್ಕೂಲಿಗೆ ಮಾರ್ಕ್ಸಕಾರ್ಡ ತರಲು ಹೋದಾಗ ಹೆಡ್ ಮಾಸ್ಟರ್ ನಿಂಗಣ್ಣನವರು ನನ್ನನ್ನು ಕುರಿತು
 
     ' ಮುಕುಂದ ಯಾವ ಕಾಲೇಜಿಗೆ ಸೇರಬೇಕೆಂದು ಮಾಡಿರುವಿ ಎಂದಿದ್ದರು ' ಅದಕ್ಕೆ ನಾನು ಅವರಿಗೆ
 
     ' ಇಲ್ಲ ಸರ್ ನನಗೆ ಆ ಅದೃಷ್ಟವಿಲ್ಲ ' ಎಂದು ಉತ್ತರಿಸಿದ್ದೆ. ಅದಕ್ಕೆ ಅವರು
 
     ' ಅಷ್ಟು ನಿರಾಶೆ ಪಡುವ ಅಗತ್ಯವಿಲ್ಲ, ನಾನು ನಿನ್ನ ತಂದೆಯವರ ಮನ ಒಲಿಸುವೆ,, ಉತ್ತಮ ದರ್ಜೆಯಲ್ಲಿಯೇ ಪಾಸಾಗಿದ್ದೀಯ, ನಿನಗೆ ಯಾವುದಾದರೂ ಸ್ಕಾಲರ್ಶಿಪ್ ದೊರೆಯುವುದು ಕಷ್ಟವಲ್ಲ ' ಎಂದಿದ್ದರು.
 
    ಹೀಗೆಯೆ ಯಾವುದೊಂದೂ ಬದಲಾವಣೆ ಇಲ್ಲದೆ ಎಂಟ್ಹತ್ತು ದಿಗಳು ಉರುಳಿ ಹೋಗಿದ್ದವು. ಹೆಡ್ ಮಾಸ್ಟ್ರರ ರಾಯಭಾರ ಫಲಿಸಲಿಲ್ಲವೆಂದು ತಿಳಿದು ಕಾಲೇಜು ಸೇರುವ ಆಸೆ ಕೈ ಬಿಟ್ಟಿದ್ದೆ. ಹೀಗೆಯೆ ಯಾಂತ್ರಿಕವಾಗಿ ದಿನಗಳು ಉರುಳಿ ಹೋಗುತ್ತಿದ್ದವು. ಇಂತಹ ಸಂಧರ್ಭದಲ್ಲಿ ತಂದೆ ನನ್ನನ್ನು ಕಾಲೇಜಿಗೆ ಸೇರಿಸಲು ಪ್ರಯತ್ನಿಸುತ್ತಿರುವ ವಿಷಯ ನನ್ನ ಕಿವಿಗೆ ಬಿದ್ದು ಮನಸು ಗರಿಗೆದರಿ ನಲಿದಿತ್ತು. ಕುತೂಹಲ ತಡೆಯಲಾರದೆ ಅಮ್ಮನನ್ನು ವಿಚಾರಿಸಿ ವಿಷಯವನ್ನು ಖಾತ್ರಿ ಪಡಿಸಿ ಕಂಡಿದ್ದೆ. ಕಾಲೇಜು ಸೇರುವ ಉತ್ಕಟತೆ ಜಾಸ್ತಿಯಾಗಿ ಆ ದಿನಕ್ಕಾಗಿ ಆಸಕ್ತಿಯಿಂದ ಕಾಯುತ್ತಿದ್ದೆ, ಅವು ಹಸಿವೆಯಾಗದ ನಿದ್ರೆ ಬರದ ಒಂದು ತರಹದ ಆತಂಕ ಮತ್ತು ತಲ್ಲಣದ ದಿನಗಳು.
 
     ಕಾಲೇಜು ಸೇರಲು ಪಟ್ಟಣಕ್ಕೆ ತೆರಳುವ ದಿನವಂತೂ ನನ್ನ ಸಂಭ್ರಮ ಹೇಳತೀರದು. ತಂದೆ ನನ್ನನ್ನು ತನ್ನ ತಂಗಿಯ ಮನೆಯಲ್ಲಿ ಬಿಡುವ ಯೋಚನೆ ಮಾಡಿದ್ದಾರೆಂಬ ವಿಷಯ ತಿಳಿದು ಒಂದು ತರಹದ ನಿರಾಶೆ ನನ್ನನ್ನು ಆವರಿಸಿತು. ನಾನು ಅವರಲ್ಲಿರಲು ಒಲ್ಲೆನೆಂದು ತಕರಾರು ಮಾಡಿದ್ದೆ. ಅಮ್ಮ ಏನೇನೊ ಸಬೂಬು ಹೇಳಿ ನನ್ನ ಮನ ಒಲಿಸಿದರು. ಅಲ್ಲಿಗೆ ಹೋಗಿ ವಾಸಕ್ಕೆ ತೊಡಗಿದ ನನಗೆ ಅಲ್ಲಿಯ ವಾತಾವರಣಕ್ಕೆ ಹೊಂದಿ ಕೊಳ್ಳುವುದು ನನಗೆ ಕಷ್ಟ ವಾಯಿತು. ಹಾಗೂ ಹೀಗೂ ಒಂದಾರು ತಿಂಗಳು ಕಳೆದವು. ಕಾಲೇಜಿಗೆ ಸೇರಿಯಾಗಿದೆ ಅಲ್ಲಿ ಇರುವಂತಿಲ್ಲ ಬಿಡುವಂತಿಲ್ಲ. ಏನು ಮಾಡಬೇಕೆಂಬುದು ತಿಳಿಯದ ಹಾಗಾಗಿದ್ದ ದಿನಗಳವು. ಒಂದು ದಿನ ನಮ್ಮ ಹೈಸ್ಕೂಲ್ ಹೆಡ್ ಮಾಸ್ಟರ್ ನಿಂಗಪ್ಪ ರವರು ಸಿಕ್ಕಾಗ
 
     ' ಮುಕುಂದ ಕಾಲೇಜು ವಿದ್ಯಾಭ್ಯಾಸ ಹೇಗೆ ನಡೆದಿದೆಯೋ ' ಎಂದರು.
 
     ' ಸರ್ ಕಾಲೇಜಿನಲ್ಲಿ ಪಾಠಗಳು ಚೆನ್ನಾಗಿ ನಡೆದಿವೆ, ನನಗೆ ಕಾಲೇಜಿನ ಸಮಸ್ಯೆಯಿಲ್ಲ ಆದರೆ ವಾಸ್ತವ್ಯದ್ದೆ ಸಮಸ್ಯೆಯಾಗಿದೆ ' ಎಂದೆ.
 
     ' ನಿಮ್ಮ ಸಂಬಂಧಿಕರ ಮನೆಯಲ್ಲಿ ಅಲ್ಲವೇನೋ ನೀನು ಇರುವುದು ಮತ್ತ್ಯಾತರ ತೊಂದರೆ ' ಎಂದರು.
 
     ' ಆ ಮನೆಯಲ್ಲಿ ನನ್ನ ತಂದೆಯವರ ತಂಗಿಯದೆ ತೊಂದರೆ, ಬಹುಶಃ ನಾನು ಅವರಲ್ಲಿರುವುದು ಅವರಿಗೆ ಇಷ್ಚವಿಲ್ಲವೆಂದು ಕಾಣುತ್ತದೆ ' ಎಂದೆ.  ಅದಕ್ಕೆ ಅವರು
 
     ' ಮುಕುಂದ ಇಲ್ಲಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಮಗ ಹರಿ ಪಟ್ಟಣದಲ್ಲಿ ಬ್ಯಾಂಕ್ ಉದ್ಯೋಗದಲ್ಲಿದ್ದಾನೆ. ಆತನು ಒಬ್ಬನೆ ಒಂದು ರೂಮು ಮಾಡಿಕೊಂಡಿದ್ದು ಒಳ್ಳೆಯ ಹುಡುಗ ಅವನನ್ನು ವಿಚಾರಿಸುತ್ತೇನೆ. ಆತ ಒಪ್ಪಿದರೆ ನೀನು ಆತನ ರೂಮಿನಲ್ಲಿದ್ದು ಓದಬಹುದು ' ಎಂದರು. ಅದು ಒಳ್ಳೆಯ ಸಲಹೆ ಎಂದು ತಲೆ ಅಲ್ಲಾಡಿಸಿದೆ. ಆ ಹರಿ ನನಗೂ ಪರಿಚಿತನೆ. ಆತ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಹೊರಬಿದ್ದಾಗ ನಾನು ಆ ಹೈಸ್ಕೂಲ್ ಸೇರಿದ್ದೆ. ನಂತರ ಕ್ರಿಸ್ಮಸ್ ರಜೆಯಿದ್ದ ಕಾರಣ ಊರಿಗೆ ಬಂದಿದ್ದೆ. ಸಾಯಂಕಾಲ ರೇಲ್ವೆ ಸ್ಟೇಶನ್ ಕಡೆಗೆ ಹೋದಾಗ ಅಲ್ಲಿ ಕಲ್ಲು ಬೆಂಚ್ ಒಂದರ ಮೇಲೆ ಕುಳಿತಿದ್ದ ನಿಂಗಪ್ಪ ಹೆಡ್ ಮಾಸ್ತರರು ನನ್ನನ್ನು
 
     ' ಮುಕುಂದ ಬಾ ಇಲ್ಲಿ ' ಎಂದು ಕರೆದರು. ಅವರೆದುರು ಹೋಗಿ ನಿಂತೆ.
 
     ' ಕುಳಿತು ಕೋ ' ಎಂದರು. ಸುಮ್ಮನೆ ನಿಂತೆ ಅವರೆ ಕೈಹಿಡಿದೆಳೆದು ತಮ್ಮ ಪಕ್ಕ ಕೂಡಿಸಿಕೊಂಡು ಮಾತಿಗೆ ತೊಡಸಗಿದರು.
 
     ' ನೋಡು ಮುಕುಂದ ನಾನು ಹರಿ ಆತನ ತಂದೆ ಯೊಟ್ಟಿಗೆ ನಿನ್ನ ವಿಷಯ ಕುರಿತು ಮಾತನಾಡಿದ್ದೇನೆ, ಅವರು ಉದಾರ ಮನಸಿನಿಂದ ಒಪ್ಪಿದ್ದಾರೆ. ನಿನ್ನ ತಂದೆಯವರಿಗೂ ವಿಷಯ ತಿಳಿಸಿದ್ದೇನೆ, ಅವರೂ ನಿನ್ನ ಪರಿಸ್ಥಿತಿಯನ್ನು ಅರ್ಥ ಮಾಡಿ ಕೊಂಡಿದ್ದಾರೆ ಮತ್ತು ನನ್ನ ಸಲಹೆಯನ್ನು ಒಪ್ಪಿದ್ದಾರೆ. ನೀನು ರಜೆಯ ನಂತರ ಹರಿಯೊಟ್ಟಿಗೆ ಆತನ ರೂಮಿನಲ್ಲಿದ್ದು ಕಾಲೇಜು ವಿದ್ಯಾಭ್ಯಾಸ ಮುಂದುವರಿಸು ಎಂದರು'. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದೆ. ತಂದೆ ಯವರೂ ಅನುಮತಿಸಿದರು. ರಜೆಯಿಂದ ಮರಳಿ ಹೋದವನು ಹರಿಯೊಟ್ಟಿಗೆ ಇರುವ ಇಂಗಿತವನ್ನು ನನ್ನ ಸೋದರತ್ತೆಗೆ ತಿಳಿಸಿದೆ. ಅವರೂ ಆಗಬಹುದು ಎಂದು ಚುಟುಕಾಗಿ ಉತ್ತರಿಸಿದರು. ಹರಿಯೊಟ್ಟಿಗೆ ಇದ್ದು ನನ್ನ ಕಾಲೇಜು ವಿದ್ಯಾಭ್ಯಾಸ ಮುಗಿಸಿದೆ. ಬಿ.ಎ. ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದೆ. ಹರಿ ನನಗೆ ಮಾರ್ಗದರ್ಶನ ನೀಡಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನಲ್ಲಿ ಕೆಲಸ ದೊರಕಿಸಿ ಕೊಟ್ಟು ಉಪಕರಿಸಿದ. ಅಂತಹ ವರು ಸಿಗುವುದು ಕಷ್ಟ, ಆತ ಈಗಲೂ ನನ್ನ ವಿಶ್ವಾಸಾರ್ಹ ಹಿರಿಯ ಸ್ನೇಹಿತ.
     ಈಗೊಂದು ಸಮಸ್ಯೆ ನನ್ನನ್ನು ಕಾಡುತ್ತಿದೆ. ಕಷ್ಟದ ದಿನಗಳಲ್ಲಿ ನನ್ನನ್ನು ನಿಕೃಷ್ಟವಾಗಿ ನಡೆಸಿಕೊಂಡ ಆ ನನ್ನ ಅತ್ತೆ ಈಗ ತನ್ನ ಮಗಳನ್ನು ನನಗೆ ತಂದು ಕೊಳ್ಳುವಂತೆ ತಂದೆಯಲ್ಲಿ ಪ್ರಸ್ತಾಪ ಮಾಡಿದ್ದಾಳೆ. ಯಾಕೋ ನನಗೆ ಈ ಸಂಬಂಧ ಇಷ್ಟವಿಲ್ಲ. ಈ ನಕಾರಾತ್ಮಕ ಉತ್ತರವನ್ನು ಅಪ್ಪ ಅಮ್ಮನಿಗೆ ಹೇಗೆ ಹೇಳುವುದು? ಇದು ನನ್ನ ಸಮಸ್ಯೆ ಕೆಲ ದಿನಗಳಿಂದ ಕಾಡುತ್ತಿದೆ. ಈ ಮದುವೆ ಸಂಬಂಧ ಬೇಡವೆಂದು ಹೇಳಿಬಿಡಬೇಕೆಂದು ನಿರ್ಧರಿಸಿದೆ. ಮನ ಹಗುರಾಯಿತು, ಬಾಯಿಯಲ್ಲಿ ಟೂತ್ ಪೇಸ್ಟ್ ನೊರೆಯನ್ನು ಬಚ್ಚಲು ಮೋರೆಗೆ ಉಗಿದು, ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸಿ ಉಗಿದು, ಹಂಡೆಯಲ್ಲಿದ್ದ ಸುಖೋಷ್ಣ ನೀರನ್ನು ಮುಖಕ್ಕೆ ಹೊಯ್ದುಕೊಂಡೆ. ಕೊರೆವ ಚಳಿಯಲ್ಲಿ ಆ ಬಿಸಿ ನೀರಿನ ಸ್ಪರ್ಶ ಅಪ್ಯಾಯಮಾನವೆನಿಸಿತು. ಮುಖ ತೊಳೆದುಕೊಂಡು ಬಂದ ನನಗೆ ಅಮ್ಮ ಬಿಸಿ ಬಿಸಿಯಾದ ಹೊಗೆಯಾಡುವ ಕಾಫಿಯನ್ನು ಕೊಟ್ಟಳು.
 
     ' ಮುಕುಂದ ನಿನ್ನ ತಂದೆಗೆ ಏನು ಹೇಳುವುದೋ ' ಅಮ್ಮನನ ಪ್ರಶ್ನೆ ತೂರಿ ಬಂತು. ಅವಳಿಗೆ ಈ ಸಂಬಂಧ ಆದರೂ ಆಗಬಹುದು ಎಂದಿತ್ತೊ ಏನೊ. ಕಳೆದ ಕಾಲಮಾನ ಕಳೆದು ಹೋಯಿತು, ಈಗಿನದನ್ನು ನಾವು ನೋಡಬೇಕು, ಹಳೆಯ ವಿಷಯಗಳನ್ನು ಕೆದಕುತ್ತ ಹೋಗಬಾರದು ಎನ್ನುವುದು ಅವಳ ಧೋರಣೆ. ನನ್ನಿಂದ ಯಾವುದೆ ಉತ್ತರ ಬಾರದುದನ್ನು ಗಮನಿಸಿ
 
     ' ಈ ವಿಷಯದಲ್ಲಿ ನಮ್ಮದಾರದೂ ಏನೂ ಒತ್ತಾಯವಿಲ್ಲ ಇದು ನಿನ್ನ ಜೀವನದ ಪ್ರಶ್ನೆ ' ಎಂದಳು. ನಾನು ನಿರುತ್ತರ ನಾಗುತ್ತೇನೆ.
 
     ನನ್ನ ನಿರ್ಣಯ ಸಡಿಲಗೊಳ್ಳುತ್ತಿದೆಯೆ ? ನಾನು ಪ್ರಪಾತದಂಚಿಗೆ ಸಾಗುತ್ತಿರುವ ಅನುಭವವಾಗುತ್ತದೆ, ನನ್ನ ಅಂತರಾತ್ಮ ಜಾಗೃತಗೊಳ್ಳುತ್ತದೆ. ಅಪ್ಪ ಅಮ್ಮರ ಮುಲಾಜಿಗೆ ಒಪ್ಪಿಕೊಂಡರೆ ನನ್ನ ಮುಂದಿನ ದುರಂತವನ್ನು ನಾನೇ ತಂದು ಕೊಂಡಂತಾಗುತ್ತದೆ. ಅಜೀವ ಪರ್ಯಂತ ಹೊಂದಾಣಿಕೆಯ ಬದುಕು ನಾನು ಬದುಕ ಬೇಕಾಗುತ್ತದೆ. ಇದು ನನ್ನ ಅಂತರಾತ್ಮದ ಧ್ವನಿ, ಇದರ ಎಚ್ಚರಿಕೆಯನ್ನು ನಾನು ಮೀರಿದರೆ ಮುಂದಿನ ಆಗುಹೋಗುಗಳಿಗೆ ನಾನೆ ಹೊಣೆ ಯಾಗಬೇಕಾಗುತ್ತದೆ. ಒಂದು ಖಚಿತ ನಿರ್ಧಾರಕ್ಕೆ ನಾನು ಬಂದು
 
     ' ಅಮ್ಮ ನನಗೆ ಈ ಸಂಬಂಧ ಇಷ್ಟವಿಲ್ಲ , ಎಲ್ಲ ದೃಷ್ಟಿಕೋನ ಗಳಿಂದಲೂ ಈ ಬಗ್ಗೆ ಯೋಚಿಸಿದ್ದೇನೆ, ನನ್ನ ಮನಸು ಈ ಸಂಭಂಧವನ್ನು ಒಪ್ಪುತ್ತಿಲ್ಲ ಕ್ಷಮಿಸಿ ' ಎಂದೆ. ನನ್ನ ಉತ್ತರಕ್ಕೆ ಅಮ್ಮ ಮೌನಿಯಾಗುತ್ತಾಳೆ.
 
     ನಾನು ಸ್ನಾನಮುಗಿಸಿ ತಿಂಡಿ ತಿಂದು ಗದ್ದೆಯ ಕಡೆಗೆ ತೆರಳುತ್ತೇನೆ. ಅಪ್ಪ ಅಮ್ಮ ಅಷ್ಟು ಅಕ್ಷರಸ್ಥರಲ್ಲವಾದರೂ ಅವರ ಜೀವನದ ಬಗೆಗಿನ ಒಳನೋಟ, ಅದನ್ನು ಆಳವಾಗಿ ಗ್ರಹಿಸುವ ಕ್ರಮ, ಸೂಕ್ಷ್ಮನೋಟ ವ್ಯಕ್ತಿ ಸ್ವಾತಂತ್ರಕ್ಕೆ ಅವರು ಕೊಡುವ ಬೆಲೆಯನ್ನು ಕಂಡಾಗ ಅವರ ಬಗ್ಗೆ ನನ್ನಲ್ಲಿ ಒಂದು ಕ್ಷಣ ಹೆಮ್ಮೆಯ ಭಾವ ಮೂಡುತ್ತದೆ. ಪ್ರಶಾಂತ ವಾದ ಬೆಳಗಿನ ವಾತಾವರಣ, ಬೀಸುವ ಹಿತವಾದ ತಂಗಾಳಿ, ಸಾಲುಮರಗಳ ನೆರಳಲ್ಲಿಯ ಪಯಣ, ಹಕ್ಕಿಗಳ ಕಲರವ ಮನಕ್ಕೆ ಮುದ ನೀಡುತ್ತದೆ. ನಗರದ ಕೃತ್ರಿಮ ಜೀವನ ಕ್ರಮದಿಂದ ಮುದುಡಿದ ಮನ ಪ್ರಸನ್ನವಾಗುತ್ತದೆ.
 
     ಈ ಸಂಧರ್ಭದಲ್ಲಿ ಎಮರ್ಸನ್ ಹೇಳಿದ ' ಜನನಿಬಿಡ ನಗರಗಳು ನೂರೆಂಟು ಚಿಂತೆಗಳಿಂದ ಗೋಳು ಸುರಿಯುತ್ತವೆ., ನೆಮ್ಮದಿಯೂ ಉತ್ಸಾಹವೂ ಬೇಕೆನ್ನುವವರು ಪ್ರಕೃತಿಯನ್ನು ಮೊರೆ ಹೋಗಬೇಕು'  ಎಂಬ ನುಡಿ ಎಷ್ಟು ಸತ್ಯ ಎನಿಸುತ್ತದೆ. ಹಗುರವಾದ ಮನದಿಂದ ಸಿಳ್ಳೆ ಹಾಕುತ್ತ ಗದ್ದೆ ಬದುವಿನ ಮೇಲೆ ನಡೆಯಲು ಪ್ರಾರಂಬಿಸುತ್ತೇನೆ. 
 
                                                                                                                            ( ಮುಗಿಯಿತು )
 
 

Rating
No votes yet

Comments