ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 1)
ಶಂತನು ಒಬ್ಬ ಕಡು ಸ್ಟ್ರೀ ವ್ಯಾಮೋಹಿ
ಆತನ ಬದುಕಲಿ
ಬಂದು ಹೋದವು ಅಸಂಖ್ಯ ಹೆ್ಣ್ಣುಗಳು
ಆದರೂ ತಣಿದಿಲ್ಲ ಕಾಮ
ಮತ್ತೊಬ್ಬಳನು ನೋಡಿದ ಮೋಹಿಸಿದ
ಆಕೆ ಬೇರಾರೂ ಅಲ್ಲ ಗಂಗೆ !
ಕೆರಳಿದ ಕಾಮ ಬಿಂದುವಾಗುದ್ಭವಿಸಿ
ದೇಹವಿಡಿ ವ್ಯಾಪಿಸಿ ಬಿಟ್ಟಿದೆ
ಆಕೆಯಿಲ್ಲದೆ ಬದುಕದ ಸ್ಥಿತಿ ಆತನದು
ನಿರ್ಲಜ್ಜನ ಕೋರಿಕೆ
ನೀನಿಲ್ಲದೆ ಬದುಕಿಲ್ಲ ನನಗೆ !
ತುಟಿಯಂಚಿನಲಿ ಕೊಂಕು ನಗೆ
ತಂದುಕೊಂಡ ಗಂಗೆ
ಯೋಚಿಸಿದಳು ಮನದೊಳಗೆ ಎಷ್ಟು ಹೆಣ್ಣುಗಳಿಗೆ
ಈ ಮಾತು ಹೇಳಿದ್ದಾನೋ ಏನೋ
ಆಕೆಯ ಮಾದಕ ನಗೆಗೆ
ಪೂರ್ಣ ಶರಣಾಗತ ಆ ತೀವ್ರ ವ್ಯಾಮೋಹಿ
ಮತ್ತೆ ಆತನ ಪ್ರಲಾಪ
ನೀಡು ಪ್ರೇಮ ಭಿಕ್ಷೆ ನಾ ನಿನ್ನ ದಾಸ
ಕೋರಿಕೆಗೆ ಕರಗದ ಗಂಗೆ ಉತ್ತರಿಸಿದಳು
ನಾ ಯಾರ ಅಂಕೆಗೂ ಒಳ ಪಡುವವಳಲ್ಲ
ನನ್ನಿಷ್ಟದ ಬದುಕು ನನ್ನದು
ಕಾಮಾತುರನಿಗೆ ಎಲ್ಲಿದೆ ಲಜ್ಜೆ ? ಆತನಿಗೆ
ಸಾಂಗತ್ಯಕ್ಕೊಂದು ಹೆಣ್ಣು ಬೇಕು ಅಷ್ಟೆ
ಎಲ್ಲ ಷರತ್ತುಗಳಿಗೂ ವಿವೇಚನಾತೀತ ಒಪ್ಪಿಗೆ
ಹೆಣ್ಣು ದಕ್ಕಿತು ಕಾಮ ತಣಿಯಲಿಲ್ಲ
ಮತ್ತದೆ ಯಾಂತ್ರಿಕ ಬದುಕು ಪ್ರೇಮವಿಲ್ಲದ
ಕಾಮಕ್ಕೊಂದು ಅರ್ಥವಿದೆಯೆ?
ಮಕ್ಕಳಾದವು ಅವರ ಸಾಂಗತ್ಯಕ್ಕೆ
ಆದರೆ ಎಲ್ಲವುಗಳ ಜಲ ಸಮಾಧಿ
ಕೇಳಬೇಕೆಂದರೂ ಕೇಳಲಾಗದ ಸ್ಥಿತಿ
ಕೇಳಿದರೆ ಒಪ್ಪಂದದ ಉಲ್ಲಂಘನೆ ಎಂದಾಳು
ಹೃದಯ ಶೂನ್ಯ ಹೆಣ್ಣು
ಬಿಮ್ಮನಸೆ ಗಂಗೆಗೆ ಮುದ್ದಾದ ಗಂಡು ಮಗು
ಮತ್ತೆ ನಿರ್ಭಾವುಕಳಾಗಿ ನಡೆದಳು
ನದಿಯೆಡೆಗೆ ಎಂದಿನಂತೆ ಮಗುವನರ್ಪಿಸಲು
ತಡೆಯಲಾಗದೆ ಶಂತನು ಕೇಳಿದನಾಕೆಯನು
ಏನಿದು ನಿನ್ನ ಹುಚ್ಚಾಟ ಯಾಕೆ ಹೀಗೆ
ಮಕ್ಕಳ ಬಲಿ ಮಮತೆಯಿಲ್ಲವೆ ನಿನಗೆ ?
ಉತ್ತರಿಸಿದಳಾಕೆ ನಿನ್ನ ಈ ವರ್ತನೆ ನಮ್ಮ
ಒಪ್ಪಂದಕ್ಕೆ ವಿರುದ್ಧ ತಡೆಯದಿರು ನನ್ನ
ಗಂಗೆಯ ಆಕ್ಷೇಪ
ಅಪರೂಪದ ಗಂಡು ಮಗು ವಂಶೋದ್ಧಾಕರ
ಇದೊಂದನು ಬಿಡು ನನಗೆ ಕೋರಿಕೆಗೆ
ಕರಗದ ಗಂಗೆ ಮಗುವನಾತನ ಕೈಗಿತ್ತು
ತೆರಳಿದಳು ಮೂಲ ನೆಲೆಗೆ
ಮತ್ತೆ ಕೂಗಿ ಕರೆದನಾತ ಮರಳಿ ಬಾ!
ನೀನಿಲ್ಲದೆ ನಮ್ಮ ಬದುಕಿಲ್ಲ ಮಗನೆಡೆಗೆ ದಿಟ್ಟಿಸಿದ
ಪಿಳಿ ಪಿಳಿ ಕಣ್ಬಿಡುತ್ತ
ತಂದೆಯನೆ ದಿಟ್ಟಿಸಿದ ಗಾಂಗೇಯ
ಸ್ವಗತದಲಿ ಹೇಳಿಕೊಂಡನಾತ ನೋಡಲಿ ಆಕೆ
ತಾಯಿಯ ಕೊರತೆ ಕಾಣದಂತೆ ಬೆಳೆಸುವೆ ನಿನ್ನ
ಗತಿಸಿತು ಕಾಲ ಎದೆಯುದ್ದ ಬೆಳೆದು ನಿಂತ
ಮಗ ದೇವವ್ರತ ಪ್ರಾಪ್ತ ವಯಸ್ಕನಾದ
ಎಲ್ಲ ತಂದೆಯರಂತೆ ಆತನೂ ಯೋಚಿಸಿದ
ಮಗನಿಗೊಂದು ಬದುಕು ಕಟ್ಟಿ ಕೊಡಬೇಕು
ಅದು ಒಮ್ಮೊಮ್ಮೆ ಮನದಲುದ್ಭವಿಸುವ
ಚಂಚಲ ಭಾವ ಆದರೂ ಮತ್ತೆ ಮತ್ತೆ
ಹೆಡೆಯೆತ್ತುವ ಕಾಮ ಮರುಕಳಿಸುವ ಆಶೆ
ಸಾಂಗತ್ಯಕ್ಕೊಂದು ಹೆಣ್ಣು ಬೇಕೆಂಬಾಶೆ
(ಮುಂದುವರಿದುದು)
ಚಿತ್ರ ಕೃಪೆ ; ಅಂತರ್ಜಾಲ
Comments
ಉ: ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 1)
ಪಾಟೀಲರೆ ನಮಸ್ಕಾರ. ನಿಷ್ಕಾಮ ಕರ್ಮಿ ಭೀಷ್ಮನ ಕಾವ್ಯ-ಕಥಾನಕ ಹೊರಹೊಮ್ಮಿದ ಆರಂಭಿಕ ಭಾಗ ಕಥಾನಕದ ಸಾರವನ್ನು ಚೆನ್ನಾಗಿ ಹಿಡಿದಿಟ್ಟಿದೆ. ಮುಂದಿನ ಭಾಗ ಬರಲಿ :-)
In reply to ಉ: ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 1) by nageshamysore
ಉ: ನಿಷ್ಕಾಮ ಕರ್ಮಿ ಭೀಷ್ಮ – (ಭಾಗ 1)
ನಾಗೇಶ ಮೈಸೂರುರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಶನಿವಾರ ಸಂಪದಕ್ಕೆ ಬಂದಿದ್ದೆ ಇದರ ಎರಡನೆಯ ಭಾಗವನ್ನು ಹಾಕಿರುವೆ ಇದಕ್ಕೆ ಪ್ರತಿಕ್ರಿಯೆ ಹಾಕ ಬೇಕೆನ್ನುವಸ್ಟರಲ್ವಿ ವಿದ್ಯುತ್ ನಿಲುಗಡೆಗೊಂದು ಪ್ತರಿಕ್ರಿಯಿಸಲಾಗಲಿಲ್ಲ, ಇಂದು ಪ್ರತಿಕ್ರಿಯಿಸುತ್ತಿದ್ದೇನೆ ವಿಳಂಬಕ್ಕೆ ಕ್ಷಮೆಯಿರಲಿ ಧನ್ಯವಾದಗಳು.