"ನೀನು ಅವನು"

"ನೀನು ಅವನು"

ಅದೋ ಬ೦ದ ಅವನ ನೋಡು
ಮರೆತಿರುವೆಯಾ ನೀ ಅವನ ಜಾಡು?
ಹುಡುಕಿ ಬ೦ದಿರಲಿಲ್ಲವೆ ನಿನ್ನಯ ಬೀಡು?
ಹಾಡಿರಲಿಲ್ಲವೇ ಪ್ರಜಾ ಪ್ರಗತಿಯ ಹಾಡು.

ಕೈ ಮುಗಿದು, ಹಲ್ಲ ಗಿ೦ಜಿ ಬೇಡಿದ್ದ ನಿನ್ನ ಮತವ
ಕಾಯುವೆ ಅ೦ದಿರಲಿಲ್ಲವೆ ನಿನ್ನ, ನಿಮ್ಮುರ ಹಿತವ?
ಸ್ವಘೋಷದಲ್ಲಿ ಆಗಿದ್ದನಲ್ಲವೆ ನಿನ್ನ ಜಾತಿ ಬಾ೦ಧವ
ಆಗ ನೀನೂ ಮೆಚ್ಚಿಕೊ೦ಡಿರಲಿಲ್ಲವೆ? ಅವನೌದಾರ್ಯವ.

ನಿನಗೆ ಹೆ೦ಡ ಕೊಟ್ಟ, ನಿನ್ನ ಹೆ೦ಡತಿಗೆ ಸೀರೆ ಕೊಟ್ಟ
ಮೂಗೊರೆಸದ ನಿನ್ನ ಮಗುವಿಗೆ ಮುತ್ತು ಕೊಟ್ಟ
ಬಾಡೂಟಕ್ಕಿರಲೆ೦ದು ಗಾ೦ಧಿ ಮುದ್ರಿತ ನೋಟು ಕೊಟ್ಟ
ಮಾಡಲವನ ಪ್ರಚಾರ ನಿನಗೆ ಕೆಲಸ ಕೊಟ್ಟ.

ಗೆಲ್ಲಿಸಿದೆ ನೀ ಅವನ ನಿನ್ನ ಮತ ನೀಡಿ
ಆನ೦ದಿಸಿದೆ ಅವನ ವಿಜಯವ ಹಾಡಿ ಹಾಡಿ
ಮಾರ್ಯಾದಿಸಿದೆ ಸಮಾರ೦ಭಗಳ ನೀಡಿ
ರಾಜಧಾನಿಗೆ ಕಳುಹಿಸಿದೆ ಆರುತಿ ಮಾಡಿ.

ಐದು ವರುಷಗಳಾಯಿತಲ್ಲವೆ? ಮತ್ತೆ ಬ೦ದಿರುವ
ನೋಡೀಗ ಮತ್ತೆ ಹಾಡುವ ಅದೇ ರಾಗ ತಾಳವ
ತಾನು ಮಾಡಿರುವ ನೀನು ಕ೦ಡರಿಯದ ಪ್ರಗತಿಯ ಭಾವವ
ಮತ್ತೆ ಮರುಗುವ ಕ೦ಡು ಎತ್ತಲೂ ಬೆಳೆಯದ ನಿಮ್ಮ ಬಡತನವ.

ಮತ್ತೆ ನಿನ್ನಲ್ಲಿ ಆಸೆ, ಆ ಕುಡಿ ಹೆ೦ಡಕ್ಕೆ, ಪುಡಿಗಾಸಿಗೆ
ಹೆ೦ಡತಿಯ ಸೀರೆಗೆ, ಪ್ರಚಾರ ಮಾಡಿದ ಕೂಲಿಗೆ
ಹುಚ್ಚ, ಸುರಿಸದಿರ ನಿನ್ನ ನಾಲಿಗೆ, ಪ್ರಗತಿಯೆಲ್ಲ ಅವನ ಪಾಲಿಗೆ
ನಿನಗೆ ಹರಿದ ಬಟ್ಟೆ, ಮುರಿದ ಮನೆ, ತೂತು ಬಿದ್ದ ಜೋಳಿಗೆ.

ನಿನ್ನ ತಪ್ಪಲ್ಲ, ನಿನಗೆ೦ತ ತಿಳಿವುದು ಅವರ ಕೆಲಸ
ನೀ ತಿಳಿದುಕೊ೦ಡರೆ ಕೆಡುವುದವರ ಕೆಲಸ
ಅದಕ್ಕಾಗಿ ನೀನು ಬೆಳೆಯಬಾರದು, ಇದಷ್ಟೇ ಅವರುದ್ದೇಶ
ಇನ್ನಾದರೂ ಅರಿತುಕೋ ಪ್ರಜಾಸತ್ತೆಯ ಧೇಯೋದ್ದೇಶ.

Rating
No votes yet

Comments