ನೀನು

ನೀನು

ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ

ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ

ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ

ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ

ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ

ದೂರವಾಗಿದ್ದುದರ ಇರವನ್ನು ತಿಳಿಯಿಸುತ್ತ
ಮಾಯೆಯನು ನೀಗಿಸುತ್ತ ನೀ ಪೊರೆದೆಯೈ

ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ

ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ
 

Rating
No votes yet

Comments