ನೀರಿನ ಮುಂದೆ ನಾವ್ಯಾರು?
ನಮ್ಮೂರು ಹರಿಹರ. ಒಂದ್ಸಲ ಹೀಗಾಯ್ತು. "ಮನ್ಯಾಗಿದ್ರ ನಿಂದು ಪಿರಿಪಿರಿ ಜಾಸ್ತಿ, ಅದಕ್ಕs ನದೀಗೆ ಹೋಗಿ ಒಂದು ಸ್ವಲುಪು ಹೊತ್ತು ಈಜಾಡಿ ಬಾ ನಡಿ" ಎಂದು
ನಮ್ಮಮ್ಮ ಕಳಿಸಿದ್ರು. ನಾನು ಕೆಲವು ಸ್ನೇಹಿತರೊಡಗೂಡಿ ತುಂಗಭದ್ರೆಯಲ್ಲಿ ಈಜಲು ಹೋದೆ. ಪಶ್ಚಿಮದಿಂದ ಪೂರ್ವಕ್ಕೆ ಹರಿದು, ಮತ್ತೆ ಉತ್ತರ
ವಾಹಿನಿಯಾಗುವ ಜಾಗೆಯಲ್ಲಿ ನಾವು ಸಾಮಾನ್ಯವಾಗಿ ಈಜಾಡುವುದು ರೂಢಿಯಲ್ಲಿತ್ತು. ಮಧ್ಯ ಒಂದು ಮೊನಚಾದ ತುದಿಯ ಬಂಡೆಯೊಂದು ಎದ್ದು ನಿಂತಿತ್ತು.
ಇದಕ್ಕೆ "ಶಿವ್ರಾತ್ರಿಬಂಡಿ" (ಶಿವರಾತ್ರಿ ಬಂಡೆ) ಎಂಬ ಹೆಸರು. ನದಿಯ ಬೇರೆಡೆಗೆ ಹೋಲಿಸಿದಲ್ಲಿ ಆ ಜಾಗದ ವಿಸ್ತಾರ ಕಮ್ಮಿ ಹೀಗಾಗಿ ನೀರಿನ ಸೆಳೆತ ಜಾಸ್ತಿ. ಸ್ವಲ್ಪ
ಮುಂದೆ ಹೋದರೆ ಇದ್ದಕ್ಕಿದ್ದಂತೆ ನದಿಯ ಪಾತ್ರ ವಿಶಾಲವಾಗುತ್ತದೆ, ಅಲ್ಲಿ ನೀರಿನ ವೇಗವೇನೋ ಕಮ್ಮಿ ಆದರೆ ಆಳ ಹಾಗು ಒಳಪ್ರವಾಹ ಅತ್ಯಂತ
ಅಪಾಯಕಾರಿ. ನಾವೆಲ್ಲ ಏನು ಮಾಡ್ತಾ ಇದ್ವಿ ಅಂದ್ರೆ ನದಿಯ ಈ ದಂಡೆಯ ಮೇಲೆ ಬಟ್ಟೆಗಳನ್ನಿಟ್ಟು ನದಿಯಲ್ಲಿ ಧುಮುಕಿ, ನದಿಯ ಸೆಳೆತದೊಂದಿಗೇ ಇನ್ನೊಂದು
ದಡಕ್ಕೆ ಈಜಿಕೊಂಡು ಹೋಗುತ್ತಿದ್ದೆವು. ಹೀಗೆ ಮಾಡುವಾಗ ಅಡ್ಡಡ್ಡವಾಗಿಯೇ ನದಿಯನ್ನು ದಾಟಲಾಗದು, ಪ್ರಾರಂಭಿಸಬೇಕಾದ ದಡದಲ್ಲಿ ಸಾಕಷ್ಟು ಮೇಲ್ಭಾಗಕ್ಕೆ
ಬಂದು ನೀರಿನಲ್ಲಿ ಧುಮುಕಿ, ಓರೆಯಾದ ದಿಕ್ಕಿನಲ್ಲಿ (diagonal) ಈಜುತ್ತ ಹೊರಟರೆ ಇನ್ನೊಂದು ದಡದಲ್ಲಿ ನಾವು ಸೇರಬೇಕಾದ ಜಾಗಕ್ಕೆ ಬರಬಹುದಾಗಿತ್ತು.
ಅದೇ ರೀತಿ ವಾಪಸ್ಸಾಗುವಾಗ ಈ ದಂಡೆಯ ಸಾಕಷ್ಟು ಮೇಲ್ಭಾಗಕ್ಕೆ ಬಂದು ನೀರಿನಲ್ಲಿಳಿದು, ನಮ್ಮ ತಲೆ ಮುಳುಗುವವರೆಗೂ ನೀರಿನಲ್ಲಿ ನಡೆಯುತ್ತ ಬಂದು,
ಯಾವಾಗ ನೀರಿನ ಆಳ ಹೆಚ್ಚಾಗುತ್ತಿತ್ತೋ ಅಲ್ಲಿಂದ ಕರಾರುವಕ್ಕಾದ ಲೆಕ್ಕಾಚಾರದ ಮೇಲೆ ಈಜಲುತೊಡಗಿ ನಮ್ಮ ಜಾಗಕ್ಕೆ ಸೇರಿಕೊಳ್ಳಬೇಕಿತ್ತು. ಈ
ಪ್ರಾರಂಭದ ಜಾಗದ ಆಯ್ಕೆ ಅಥವಾ ಈಜುವ ಲಯವೇನಾದರೂ ಅಂದಾಜು ತಪ್ಪಿತೋ ಅಷ್ಟೇ ಗತಿ. ಶಿವ್ರಾತ್ರಿಬಂಡಿಗೆ ಮೈ ಕೈ ತಾಕಿಸಿಕೊಂಡು
ಗಂಭೀರಗಾಯಗಳನ್ನು ಮಾಡಿಕೊಳ್ಳುವುದೋ ಅಥವಾ ಆಳದ ಪ್ರದೇಶಕ್ಕೆ ಹೋಗಿ ಸಿಲುಕಿಕೊಂಡು ಶಿವನ ಪಾದ ಸೇರುವುದೋ ಆಗುತ್ತಿತ್ತು. ಚೆನ್ನಾಗಿ
ನುರಿತವರಾಗಿದ್ದರೆ ನೀರಿನಲ್ಲಿಯೇ ಮುಳುಗಿ ಸಾಕಷ್ಟು ದೂರವನ್ನು ಈಜಿಕೊಂಡು ಅದು ಹೇಗೋ ಹೊರಗೆ ಬಂದು ಬಿಡುತ್ತಿದ್ದರು. ಆದರೆ ಇದಕ್ಕೆ ಧೈರ್ಯ
ಮಾತ್ರವಲ್ಲಿ ಸಾಕಷ್ಟು ದೈಹಿಕಬಲವೂ ಬೇಕು. ಇರಲಿ. ನಮ್ಮಮ್ಮನ ಹತ್ತಿರ ಬಯ್ಯಿಸಿಕೊಂಡು ನಾನು ನದಿಗೆ ಬಂದೆನಷ್ಟೆ. ಎಲ್ಲರೂ ಮೊದಲು ಈಜಿಕೊಂಡು
ಆಚೆಯ ದಡಕ್ಕೆ ಹೋದೆವು. ನಂತರ ನಂಗ್ಯಾಕೋ ಬೇಗ ಹೋಗೋಣ ಎನ್ನಿಸಿತು. ನಾನೊಬ್ಬನೆ ವಾಪಸ್ಸು ಹೊರಟೆ. ಅಂದು ನದಿಯಲ್ಲಿ ನೀರಿನ ಪ್ರಮಾಣವೂ
ತುಸು ಹೆಚ್ಚಿತ್ತು, ನನಗದರ ಬಗ್ಗೆ ಹೆಚ್ಚು ಗಮನಿಸಲು ಆಗಲಿಲ್ಲ. ಸಾಕಷ್ಟು ರೂಢಿಯಾದ ಸ್ಥಳವಾದರೂ ದುರ್ದೈವದಿಂದ ನಾನು ಅಂದಾಜು ತಪ್ಪಿಯೇ ಬಿಟ್ಟೆ. ಇನ್ನೂ
ಹದಿನೈದು ಹೆಜ್ಜೆಯಾದರೂ ಇಟ್ಟಿಲ್ಲ, ಆಗಲೇ ನನ್ನ ಮೂಗಿನವರೆಗೆ ನೀರು ಬಂದು ಬಿಟ್ಟಿತು, ನಾನು ಅವಿವೇಕದಿಂದ ಈಜಲು ತೊಡಗಿದೆ. ಲಯ ಸಿಗುತ್ತಲೇ ಇಲ್ಲ!.
ನೋಡು ನೋಡುತ್ತಲೇ ನಾವು ಬಟ್ಟೆಯನ್ನಿಟ್ಟಿದ್ದ ಜಾಗವೂ ನನ್ನಿಂದ ದೂರವಾಯಿತು, ಎಡಗಡೆಗೆ ನೋಡುತ್ತಿದ್ದೇನೆ, ಶಿವ್ರಾತ್ರಿಬಂಡಿ ಕ್ಷಣಕ್ಷಣಕ್ಕೂ ಸಮೀಪಿಸುತ್ತಿದೆ.
...... (ಅರೆre ಯಾಕೋ ಕೈ ಸಿಕ್ಕಾಪಟ್ಟೆ ನೋಯ್ತಾ ಇದೆ, ಉಳಿದದ್ದನ್ನು ಟೈಮಾದಾಗ ಬರೀತಿನಿ)
Comments
ಅಯ್ಯೋ