ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ......

ನೀರಿಲ್ಲದ ನದಿಯೊಂದಕ್ಕೆ ಹಾರಲು ಹೋಗಿ......

ಹಾಯ್ ಅವಾಂತರೇಶ,
ಅಪ್ಪಾ, ಅಮ್ಮ ನನ್ನನ್ನು ಸುಳಿದು ಬಿಟ್ಟು ವರ್ಷಗಳೇ ಕಳೆದಿವೆ. ಇನ್ನೂ ನನ್ನ ಪಾಲಿಗೆ ಉಳಿದಿರುವವನು ನೀನೊಬ್ಬನೇ. ನೀನೆ ನನ್ನನ್ನು ಆ ಪರಿ ಬೈಯ್ಯುತ್ತಿರುವಾಗ ನಾನು ಬದುಕಿಯೂ ಅರ್ಥವಿಲ್ಲ ಅಂತಾ ನಿನ್ನ ಕಾಗದದ ಓದಿದ ಮೇಲೆ ನಾನು ನಿರ್ಧಾರ ಮಾಡಿದೆ. ಆ ಕುರಿತು ಸುದೀರ್ಘವಾಗಿ ಚಿಂತಿಸಿದೆ. ನಿನ್ನ ಬಿಟ್ಟು ನಾನು ಬದುಕಬಹುದಾ? ಅಂತಾ ಆಲೋಚಿಸಿದೆ. ಆಮೇಲೆ ಅಂತಿಮವಾಗಿ ಸಾಯಲೇ ಬೇಕು ಅಂತಾ ತುಂಗೆಯ ತೀರಕ್ಕೆ ಹೋದೆ. ಈ ಹಾಳು ಬಿಸಿಲಿಗೆ ತುಂಗೆ ಬತ್ತಿ ಬರಡಾಗಿದ್ದಳು. ತುಂಗೆಯ ಒಡಲಲ್ಲಿ ನೀರೆ ಇರಲಿಲ್ಲ. ಆದ್ರೂ ನಾನು ತುಂಗೆಗೆ ಹಾರಿಯೇ ಸಾಯೋದು ಅಂತಾ ನಿನ್ನ ಪತ್ರ ಓದಿದ ಮರುಕ್ಷಣವೇ ನಿರ್ಧರಿಸಿ ಆಗಿತ್ತು. ಹಾಗಾಗಿ ನೀರಿಲ್ಲದ ನದಿಗೆ ಕಣ್ಣು ಮುಚ್ಚಿ ಹಾರಿಯೇ ಬಿಟ್ಟೆ ಮಾರಾಯ!
ಮತ್ತೆ ನೀನಿನ್ನು ಸಾಯಲಿಲ್ಲವಾ ಅಂತಾ ನನ್ನನ್ನು ಶಪಿಸುತ್ತಾ ನಿನ್ನಷ್ಟಕ್ಕೆ ನೀನೆ ಗೊಣಗಿಕೊಳ್ಳುತ್ತಿರುತ್ತೀಯಾ ಅಂತಾ ನಂಗೆ ಗೊತ್ತು ಕಣೋ ಚಿನ್ನುಮರಿ! ಆಮೇಲಿನ ಕಥೆ ಹೇಳ್ತಿನಿ ಕೇಳು. ನಾನು ಕಣ್ಣುಮುಚ್ಚಿ ತುಂಗೆಗೆ ಹಾರಿದ್ನಾ, ಅಯ್ಯೋ ಎಂತ ಮರುಳಿ ನಾನು ಯಕಶ್ಚಿತ ಹುಡುಗನೊಬ್ಬ ಬೈದ ಅಂತಾ ನನ್ನ ಬದುಕನ್ನ ಬಲಿಕೊಡ್ತಾ ಇದೀನಲ್ಲಾ ಅಂತಾ ಅನ್ನಿಸತೊಡಗಿತು ನಂಗೆ. ಆದ್ರೆ ಪ್ರಯೋಜನ ಏನು ಹೇಳು? ಅಷ್ಟೊತ್ತಿಗಾಗಲೇ ನಾನು ನದಿಗೆ ಜಿಗಿದು ಆಗಿತು. ನನ್ನ ಪುಣ್ಯವೋ ನಿನ್ನ ಪಾಪವೋ ಗೊತ್ತಿಲ್ಲ ತುಂಗೆ ನನ್ನ ಜೀವವನ್ನು ತೆಗೆದುಕೊಳ್ಳಲು ಬಿಲ್‌ಕುಲ್ ಒಪ್ಪಲಿಲ್ಲ! ನದಿಗೆ ಹಾರಿದ್ದು ಅನ್ನೋದು ನಂಗೊಂದುಸಾರಿ ಈಜುಕೊಳಕ್ಕೆ ಹಾರಿದ ಹಾಗೆ ಆಯಿತು ಅಷ್ಟೆ! ಕೈಕಾಲೆಲ್ಲಾ ಕಲ್ಲಿಗೆ ತಾಗಿ ಕೆತ್ತಿಹೊಯಿತು. ರಕ್ತ ಒತ್ತರಿಸಿ ಬಂತು. ಅಷ್ಟೊತ್ತಿಗೆ ನಮ್ಮಪ್ಪ ಜೋಯ್ಸ್‌ಂಗೆ ಯಾರೋ ನಿಮ್ಮ ಮಗಳು ತುಂಗೆ ಹಾರಿದಾಳೆ ಅಂತಾ ಸುದ್ದಿ ಕೊಟ್ಟರಂತೆ!
ಜೋಯ್ಸ್ ಓಡೋಡಿ ಬಂದವನೆ ಏ ಪುಣ್ಯಾತ್‌ಗಿತ್ತಿ ನೀನಿನ್ನು ಸಾಯಲಿಲ್ಲವೇನೆ ಮಾರಯಿತಿ ಅಂದ! ದನ ಎಳೆದುಕೊಂಡು ಹೋಗೋ ಹಾಗೆ ನನ್ನನ್ನು ದರದರನೆ ಎಳೆದುಕೊಂಡು ಹೋದ ಮನೆವರೆಗೂ. ಇವೆಲ್ಲಾ ಆಗಿದ್ದು ನಿನ್ನಿಂದಲೆ ತಲೆಹರಟೆ.
ಆಮೇಲೆ ಅಮ್ಮ ಅದೇನೇನೋ ಸೊಪ್ಪು ಸದೆಯ ರಸವನ್ನೆಲ್ಲಾ ಹಿಂಡಿ ನನ್ನ ಗಾಯದ ಮೇಲೆ ಸುರಿದಳು ವಟವಟ ಅಂತಾ ನನ್ನ ಬೈಯ್ಯುತ್ತಾ! ನಂಗೆ ಆವಾಗ ಎಷ್ಟು ಉರಿಯಾಯಿತು ಗೊತ್ತಾ? ನಾನು ಆವಾಗ ನಿನಗೆ ಹಾಕಿದ ಶಾಪ ಇದೆಯಲ್ವಾ? ಏಳು ಜನ್ಮ ಕಳೆದರೂ ಹೋಗೋದಿಲ್ಲ ಬಿಡು. ಅಲ್ವೆ ಸಾಯೋವಂತದ್ದು ನಿನಗೆ ಏನಾಗಿತ್ತೆ? ನಾ ಆವತ್ತೆ ಅವ್ರ ಹತ್ರಾ ಬಡಿದುಕೊಂಡೆ ಹೆಣ್ಣುಮಗಳನ್ನು ಕಾಲೇಜಿಗೆ ಕಳುಹಿಸಬೇಡಿ ವಯಸ್ಸಿಗೆ ಬಂದಿದಾಳೆ ಬೇಗ ಮದ್ವೆ ಮಾಡಿಬಿಡಿ ಅಂತಾ. ಈಗ ನೋಡು ಅವಾಂತರಾನ. ನೀನೆನಾದ್ರೂ ಸತ್ತಿದ್ದರೆ ನಮ್ಮ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿತ್ತು ಅಂತಾ ಶುರುಹಚ್ಚಿಕೊಂಡರು ನೋಡು ಪ್ರವಚನನಾ......ಎಲ್ಲಾ ಆಗಿದ್ದು ನಿನ್ನಿಂದಲೆ ಮೂರುಕಾಸಿನವನೇ....
ಇಲ್ಲ ಅಮ್ಮ ನಾನು ಸಾಯಬೇಕು ಅಂತಾ ಹೋಗಿದ್ದಲ್ಲಾ, ಈಜು ಕಲಿಯಬೇಕು ಅಂತಾ ಆಸೆಯಾಯಿತು ನೀರಿಲದ ತುಂಗೆ ನೋಡಿ ಅದ್ಕೆ ಹಾರಿದೆ....ಅಂತೆಲ್ಲಾ ಕಥೆ ಹೇಳಿ ತೆರೆದಿದ್ದ ಅಮ್ಮನ ಬಾಯಿ ಮುಚ್ಚಿಸುವಾಗ ಸಾಕುಸಾಕಾಗಿ ಹೋಯಿತು ಮಾರಾಯ. ಅಮ್ಮನ ಬಾಯಿ ಮುಚ್ಚಿಸೋದಕ್ಕಿಂತ ನಿನ್ನ ಜೊತೆ ಜಗಳವಾಡೋದೆ ಎಷ್ಟೋ ಲೇಸು ಕಣೋ. ಅಮ್ಮನದ್ದು ನಿಂತಿತು ಅನ್ನೋವಾಗ ಅಪ್ಪನದ್ದೂ ಶುರುವಾಯಿತು ಮಗಳು ಕಲಿತು ಜಾಣೆಯಾಗಲೀ ಅಂತಾ ಕಾಲೇಜಿಗೆ ಕಳುಹಿಸಿದರೆ ಇವಳು ಈಜೋದು, ಕೆದುಕೋದು ಅಂತಾ ಬರೀ ಬೇಡದೇ ಇರೋದನ್ನೇ ಕಲಿತು ಬಂದಿದಾಳೆ. ಈ ವರ್ಷ ಶ್ರಾವಣಕ್ಕೆ ಹೇಗಾದ್ರೂ ಮಾಡಿ ಇವಳನ್ನ ದಾಟಿಸಿಬಿಡಬೇಕು......ಗೊತ್ತಲ್ಲ ನಿಂಗೆ ಜೋಯ್ಸರ ಪುರಾಣ ಹೇಗಿರತ್ತೆ ಅಂತಾ.
ನಿನ್ನಜ್ಜಿ ಇನ್ನೊದ್ಸಾರಿ ನಮ್ಮ ಮನೆ ಕಡೆ ಕಾಲಿಡು ನೀನು ಇವತ್ತಿಗೆ ನನ್ನ ನಿನ್ನ ಸಂಬಂಧ ಕಳೆಯಿತು ಅಂತಾ ನಿಂಗೆ ನೇರವಾಗಿ ಹೇಳಿ ಬಿಡಬೇಕು ಅನ್ನಿಸ್ತು ಆ ಘಟನೆಯಾದ ಬಳಿಕ. ಆದ್ರೂ ಯಾಕೋ ನಿನಗೆ ಹಾಗೆ ಹೇಳಲು ಮನಸೇ ಬರ್ತಾ ಇಲ್ಲ ಮಾರಾಯ. ಎಷ್ಟಂದ್ರೂ ನೀನು ನನ್ನವ ಅಂತಾ ಅನ್ನಿಸ್ತಾ ಇದೆ!
ಇಂತಿ
ಪುಟ್ಟಿ

Rating
No votes yet