ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ

ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ

ನೀರು: ಜೀವಜಲ, ಜೀವನಾಧಾರ, ಅದಕ್ಕಿಂತ ಮಿಗಿಲಾಗಿ ಒಂದು ಅನಿವಾರ್ಯತೆ
ಡಾ.ಎಸ್. ಕೆ. ನಟರಾಜ್ , ಕಡಾಕೊಳ್ಳ
ನೀರನ್ನು ಹಲವು ಬಣ್ಣದ ಮಾತುಗಳಲ್ಲಿ ಹೋಗಳಿದ್ದಾಗಿದೆ, ಅದಕ್ಕೆ ಹಲವು ಉಪಮೆಗಳನ್ನು ನೀಡಿದ್ದಾಗಿದೆ. ನೀರು ಜೀವಜಲ, ಜೀವಸೃಷ್ಟಿಯ ಮೂಲ, ಜೀವನಾಧಾರ ಹೀಗೆ ಸಾಗುತ್ತೆ ಪಟ್ಟಿ. ಆದರೆ, ಇವೆಲ್ಲಕ್ಕಿಂತ ಮಿಗಿಲಾಗಿ ಇಂದು ನಮಗೆ ನೀರು ಮತ್ತು ನೀರಿನ ಸಂರಕ್ಷಣೆ ಸಂಭಂದಿಸಿದ ವಿಷಯಗಳನ್ನು ತಿಳಿದುಕೊಳ್ಳುವುದು, ಒಂದು ಅನಿವಾರ್ಯತೆಯ ಪಟ್ಟಿಯಲ್ಲಿನ ಪ್ರಮುಖ ಕಾರ್ಯಕ್ರಮವಾಗಿ ನೋಡಬೇಕಾಗಿದೆ. ಬರುವ ದಿನಗಳಲ್ಲಿ ನಾವು ನಮ್ಮ ಕ್ಷಣದ, ದಿನದ ಹಾಗು ವರ್ಷದ ಆಧ್ಯಾತ ಪಟ್ಟಿಯಲ್ಲಿ ನೀರನ್ನು ಮೊದಲ ಸ್ಥಾನದಲ್ಲಿ ಚರ್ಚಿಸಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ವೈಜ್ಞಾನಿಕವಾಗಿ ಎನ್ನನ್ನೇ ಸೃಷ್ಟಿಸಿದರೂ ನೀರನ್ನು ಮಾತ್ರ ನಾವು ಸೃಷ್ಟಿಸಲಾರೆವು, ಸೃಷ್ಟಿಸಿದರೂ ಅದೇ ಆತ್ಮವಿಶ್ವಾಸದಲ್ಲಿ ಅದನ್ನು ನಮಗಾಗಿ ಉಪಯೋಗಿಸಲಾರೆವು. ನಮಗೆನಿದ್ದರು ಇಂದು ಪ್ರಕೃತಿ ನೀಡಿದ ವರದಾನವನ್ನೇ ಶೇಕರಿಸಿ, ಸಂರಕ್ಷಿಸಿ, ಸದುಪಯೋಗಪಡಿಸಿಕೊಂಡು ಅದರ ಪುನರ್ಬಳಕೆಯ ಹೊಸ ಮಾರ್ಗಗಳನ್ನು ಅಭಿವೃಧಿಪಡಿಸಿ ನಿತ್ಯದ ಜೀವನಾಧರವನ್ನು ಗೌರವಿಸುವ ಅನಿವಾರ್ಯತೆಯಲ್ಲಿದ್ದೇವೆ.
ಈ ಬರಹದ ಉದ್ದೇಶಗಳನ್ನು ಭಾಗಗಳಾಗಿ ಇಲ್ಲಿಡಲು ಪ್ರಯತ್ನಿಸುತ್ತೇನೆ. ನೀರಿನ ವೈಜ್ಞಾನಿಕ ಮಹತ್ವ, ರಸಾಯನಿಕ ಹೊಂದಾಣಿಕೆ ಹಾಗು ಗುಣಲಕ್ಷಣಗಳು, ನೀರಿನ ವಿವಿಧ ರೂಪಗಳು, ಅದರ ಬಳಕೆ, ನೀರಿನ ಜೀವನ ಚಕ್ರ, ಮಾಲಿನ್ಯ, ಪುನರ್ಬಳಕೆಯ ಪ್ರಸ್ತುತ ವಿಧಾನಗಳು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ನೀರಿನ ಮೇಲಿನ ಸಂಶೋಧನೆಗಳ ಪರಿಚಯಗಳನ್ನು ಈ ಅರ್ಥಪೂರ್ಣ ವೇದಿಕೆಯಲ್ಲಿ ನಾಡಿನವರೊಂದಿಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಇದು.
ಜಲಮೂಲಗಳ ಬಳಕೆ, ಸಂರಕ್ಷಣೆ, ಸುರಕ್ಷತೆಯ ಅರಿವು ಮೂಡಿಸಲು ಇಂದು ಹಲವು ಸಂಸ್ಥೆಗಳು ವಿಶ್ವದಾದ್ಯಂತ ಶ್ರಮಿಸುತ್ತಿವೆ. ವಿಶ್ವಸಂಸ್ಥೆಯು, ಜಲಮೂಲಗಳ ಸಂರಕ್ಷಣೆ ಹಾಗು ಪರಿಶುಧ ನೀರಿನ ಬಗೆಗಿನ ಅರಿವುಮೂಡಿಸಲು ಒಂದು ದಶಕದ ಅವಧಿಯ ವಿವಿಧ ಯೋಜನೆಗಳನ್ನು ರೂಪಿಸಲು ಡಿಸೆಂಬರ್ ೨೦೦೩ ರ ವಿಶ್ವಸಂಸ್ಥೆಯ ಸಾಮನ್ಯ ಸಭೆಯಲ್ಲಿ ಒಂದು ನಿಲುವಳಿಯನ್ನು ಮಂಡಿಸಲಾಗಿದೆ. ಇದರ ಅನ್ವಯ ೨೦೦೫-೨೦೧೫ ರ ಅವಧಿಯನ್ನು "ಜೀವಜಲದ ಅಂತರಾಷ್ಟ್ರೀಯ ದಶಕ" ಎಂದು ಘೋಷಿಸಿರುವುದು ತಿಳಿದ ವಿಚಾರ. ಇದರ ಅಧಿಕೃತ ಅವಧಿಯ ಉದ್ಘಾಟನೆಯೊಂದಿಗೆ ೨೨ನೆ ಮಾರ್ಚ್ ೨೦೦೫ ರಂದು, ಅಂದಿನ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಕೋಫಿ ಅನ್ನಾನ್ ವಿಶ್ವಸಂಸ್ಥೆಯ ಜಲಸಂರಕ್ಷಣೆ (ಯು.ಏನ್-ವಾಟರ್) ವಿಭಾಗದ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಜಲಸಂರಕ್ಷಣೆ ಮತ್ತು ಈ ವಿಷಯದ ಬಗ್ಗೆ ಕಾರ್ಯನಿರ್ವಹಿಸುವ ವಿವಿಧ ಸಂಸ್ಥೆಗಳು, ವಿಭಾಗಗಳು, ಸಂಶೋಧನಾ ಕಾರ್ಯಕ್ರಮಗಳು, ಸಂಪನ್ಮೂಲ ವ್ಯಕ್ತಿಗಳು-ಸಂಘಟನೆಗಳನ್ನು ಒಂದಕ್ಕೊಂದು ಜೋಡಿಸುವ ಅಭೂತಪೂರ್ವ ಕಾರ್ಯವು ಆರಂಭಗೊಂಡಿದೆ. ಇವೆಲ್ಲದರ ಮೂಲ ಒಂದೇ ಉದ್ದೇಶ; ಜಲ, ಜಲಮೂಲಗಳ ಅವುಗಗಳ ಸುರಕ್ಷಿತ ಬಳಕೆ, ಮಾಲಿನ್ಯ ತಡೆಗಟ್ಟುವಿಕೆ ಅದಕ್ಕಿಂತ ಹೆಚ್ಚಾಗಿ ಪುನರ್ಬಳಕೆಯ ವೈಜ್ಞಾನಿಕ ವಿಧಾನಗಳನ್ನು ಅಭಿವೃಧಿಪಡಿಸುವುದಾಗಿದೆ.
ನೀರಿಲ್ಲದೆ ಯಾವ ಜೀವಿಯೂ ಬದುಕಲಾರದು ಎಂಬುದು ಎಲ್ಲರಿಗು ತಿಳಿದ ವಿಚಾರ. ಪ್ರತಿಯೊಂದು ಜೀವಿಯು ತನ್ನ ದೇಹದಲ್ಲಿ ಶೇಕಡಾ ೬೫ ರಿಂದ ೮೫ ಪ್ರತಿಶತ ಭಾಗ ನೀರಿನಂಶ ದಿಂದ ಮಾಡಲ್ಪತ್ತಿರುವುದು ಅಚ್ಚರಿಪಡಬೇಕಾದ ಸತ್ಯ. ಇದು ಬೇರೆ ಬೇರೆ ಜೀವಸೆಲೆಯಲ್ಲಿ ಬೇರೆ ಬೇರೆ ಪ್ರಮಾಣದಲ್ಲಿದೆ. ನೀರಿನಂಶ ನಮ್ಮ ದೇಹ ರಚನೆಯಲ್ಲಿಯೂ ವಿವಿಧ ಪ್ರತಿಶತಗಳಲ್ಲಿದೆ. ಮಾನವನ ಎಲುಬು ಮತ್ತು ಅದಕ್ಕೆ ಸಂಭಂದಿಸಿದ ಅಂಗಾಂಶಗಳು ಶೇ. ೨೦ ಭಾಗ ನೀರನ್ನು ಹೊಂದಿದ್ದರೆ, ಮೆದುಳು ಅದಕ್ಕೆ ಸಂಭಂದಿಸಿದ ಅಂಗಗಳಲ್ಲಿ ಇದರ ನೀರಿನ ಪ್ರಮಾಣ ಶೇ. ೮೫ ರಷ್ಟು. ದೇಹದಲ್ಲಿ ನಡೆಯುವ ಆಗಾಧ ಪ್ರಮಾಣದ ಜೀವರಸಾಯನಿಕ ಕ್ರಿಯೆಗಳಿಗೆ ನೀರು ಅತಿ ಅವಶ್ಯಕ ಮಾಧ್ಯಮ. ಸಸ್ಯಗಳಲ್ಲಿ ನಡೆಯುವ ದ್ಯುತಿಸಂಸ್ಲೇಷಣೆ ಕ್ರಿಯೆಗೂ ಸಹ ನೀವು ಒಂದು ಕಚ್ಚಾವಸ್ತು/ಸಹಮಾದ್ಯಮ ಕೂಡ. ನೀರು ಇಷ್ಟೊಂದು ನಮ್ಮ/ಜೀವಿಗಳ/ಸಸ್ಯಗಳ ದೇಹದಲ್ಲಿ ಬೆರೆತು ಹೋಗಿ ಪ್ರತಿಯೊಂದು ಕ್ರಿಯೇಯಲ್ಲಿಯೂ ಒಂದು ಮಾಧ್ಯಮವಾಗಿ ಪಾತ್ರನಿರ್ವಹಿಸುತ್ತಿರುವುದರ ರಹಸ್ಯವೇನು, ಅದರ ರಸಾಯನಿಕ ಹೊಂದಾಣಿಕೆಗಳ ಏನು ಎಂಬುದನ್ನು ತಿಳಿಯ ಹೊರಟರೆ ಕುತೂಹಲ ಹೆಚ್ಚುತ್ತದೆ.
ರಾಸಾಯನಿಕವಾಗಿ ನೀರು, ಒಂದು-ಆಮ್ಲಜನಕ ಹಾಗು ೨-ಜಲಜನಕ ಕಣಗಳನ್ನು ಒಳಗೊಂಡಿರುವ ಅತಿಸರಳ ರಾಸಾಯನಿಕ ವಸ್ತು. ಆದರೆ, ಇದು ದ್ವಿಮುಖ ಕ್ರಿಯಾಶೀಲತೆಯನ್ನು ಹೊಂದಿರುವ ಬಲಿಷ್ಟ ದ್ರಾವಣ. ಇದೆ ಗುಣ ಇದಕ್ಕೆ ತನ್ನಲ್ಲಿ ಹಲವು ರಸಾಯನಿಕ-ಜೀವರಸಾಯನಿಕ ಪ್ರಕ್ರಿಯೆಗಳಿಗೆ ಬೇಕಾದ ಲವಣಗಳನ್ನು ಕರಗಿಸಿಕೊಳ್ಳುವ ವಿಶೇಷತ ಗುಣಗಳನ್ನು ಕೊಟ್ಟಿದೆ. ಅತಿ ಚಿಕ್ಕ ಗಾತ್ರದ ಜಲಜನಕದ ಕಣಗಳ ಪ್ರಸ್ತುತತೆಯು ಕೂಡಾ ಅತಿಕಡಿಮೆ ತಾಪಮಾನಗಳಲ್ಲಿಯು ಸಹ ನೀರು ಬೇರೆ ವಸ್ತುಗಳೊಂದಿಗೆ ಮಿಲಿತಗೊಳ್ಳಲು ಸಹಕರಿಸುತ್ತದೆ. ನೀರಿಗೆ ತನ್ನನ್ನು ತಾನು ಆಮ್ಲ [H+,H3O+] - ಪ್ರತ್ಯಾಮ್ಲ ಗಳಾಗಿ [OH-] ಪರಿವರ್ತಿಸಿಕೊಳ್ಳುವ ವಿಶೇಷ ಗುಣವನ್ನು ಸಹ ತೋರ್ಪಡಿಸುತ್ತದೆ. ಇವೆಲ್ಲ ರಸಾಯನಿಕ ಗುಣಗಳು ನೀರಿಗೆ ಮತ್ತಷ್ಟು ವಿಭಿನ್ನವಾದ ಭೌತಿಕ ಗುಣ ರೂಪಗಳನ್ನು ನೀಡಿವೆ. ಸಧ್ಯಕ್ಕೆ ಭೂ-ಗ್ರಹದ ಮೇಲಷ್ಟೇ ಲಭ್ಯವಿರುವ ನೀರು, ವಿವಿಧ ತಾಪಮಾನ ಹಾಗು ಒತ್ತಡಗಳಲ್ಲಿ ಭುತಿಕವಾಗಿ ೩- ರೂಪಗಳಲ್ಲಿ ಅಸ್ತಿತ್ವದಲ್ಲಿ ಬಳಕೆಗೆ ಸಿಗುತ್ತವೆ. ಈ ಮೂರು ವಿಧಗಳೆಂದರೆ ಘನ (ಮಂಜುಗಡ್ಡೆ), ದ್ರವ ಹಾಗು ಆವಿಯ ರೂಪದಲ್ಲಿ.
ಶುದ್ದವಾದ ನೀರು ೦ ಡಿಗ್ರಿ ಸೆಲ್ಸಿಯಸ್ ಗೆ ಘನ ರೂಪ ಪಡೆದುಕೊಳ್ಳುತ್ತದೆ, ಕಾರಣ ನೀರಿರುವ ಪರಿಸರದ ಉಷ್ಣತೆಯು ೪ ಡಿಗ್ರೆ ಗೆ ಬಂದಾಗ ನೀರಿನಲ್ಲಿನ ಕಣಗಳು ಅತ್ಯಂತ ಹೆಚ್ಚು ಸಾಂದ್ರತೆಯ ಸ್ತಿತಿಗೆ ತಲುಪುತ್ತವೆ. ಇದೆ ಕಾರಣಕ್ಕಾಗಿ ಮಂಜುಗಡ್ಡೆ ನೀರಿನಲ್ಲಿ (ದ್ರವ) ತೇಲುತ್ತದೆ. ದ್ರವರೂಪದ ನೀರಿಗೆ ಹೆಚ್ಚೇ ಎನ್ನಬಹುದಾದ ಚಲನೆರಹಿತ ಗುಣಶೀಲತೆ, ಮಣ್ಣಿನಲಿ ತುಸು ಹೆಚ್ಚು ಹೊತ್ತು ತನ್ನನ್ನು ತಾನು ನಿಲ್ಲುವಂತೆ ಮಾಡುತ್ತದೆ. ಇದರಿಂದ ಅಪಾರ ಸಸ್ಯ ರಾಶಿ ಭೂಮಿಯ ಮೇಲೆ ಹಚ್ಚ ಹಸುರಾಗಿ ನಿಂತು ಜೀವಸಂಕುಲದ, ಪ್ರತಿಯೊಂದು ಜೀವಿಯ ನೈಸರ್ಗಿಕ ಜೀವನ ಚಕ್ರ ವನ್ನು ಬೆಸೆದು ಒಂದು ಸಂಪೂರ್ಣ ವ್ಯವಸ್ಥೆಯ ಅಡಿಯಲ್ಲಿ ಎಲ್ಲರೂ ಬದುಕುವಂತೆ ನೋಡಿಕೊಂಡಿದೆ, ಈ ಜೀವಜಲ.
ನೈಸರ್ಗಿಕವಾಗಿ ಆಗಾಧ ಪ್ರಮಾಣದಲ್ಲಿ ಸಿಗುವ ನೀರಿಗೆ, ಉಳಿದ ರಾಸಾಯನಿಕಗಳಿಗಿಂತ ಅಧಿಕ ಕುಡಿಯುವ ಬಿಂದುವಿದೆ. ಈ ಒಂದು ಭೌತಿಕ ಗುಣವನ್ನು ಅಧಿಕ ತಾಪಮಾನದಲ್ಲಿ ಉಪಯೋಗಿಸಿ ಅದನ್ನು ಉಪಯುಕ್ತ ಶಕ್ತಿಮೂಲವಾಗಿ ಬಳಸಲಾಗುತ್ತದೆ. ಉಳಿದವಕ್ಕಿಂತ ತುಸುಹೆಚ್ಚು ಎನ್ನಬಹುದಾದ ಪ್ರಮಾಣದಲ್ಲಿ ನೀರಿಗೆ ಉಷ್ಣತೆಯನ್ನು ಸರಬರಾಜು ಮಾಡಿದಾಗ ಮಾತ್ರ ನೀರು ದ್ರವ ರೂಪದಿಂದ - ಆವಿಯಾಗಿ, ಒಂದು ಶಕ್ತಿಮೂಲವಾಗಿ ಪರವರ್ತನೆಗೊಳ್ಳುತ್ತದೆ. ಇದನ್ನು ನಾವು ಹಲವು ದೈನಂದಿನ ಚಟುವಟಿಕೆಗಳಲ್ಲಿ ಉಪಯೋಗಿಸಬಹುದಾಗಿದೆ. ಮೊಟ್ಟಮೊದಲ ರೈಲು ಚಲಿಸುದ್ದು ನೀರಿನ ಆವಿಯ ಆಗಾಧ ಶಕ್ತಿಯಿಂದಲೇ. "ಉಗಿಬಂಡಿ" ಎಂದೇ ನಾವು ಸಂಭೋಧಿಸುವ ಮೊಟ್ಟಮೊದಲ ಬೃಹತ್ ಆಧುನಿಕ ಸಾರಿಗೆ ಆವಿಷ್ಕಾರಕ್ಕೆ ಈ "ನೀರೇ" ಸ್ಪೂರ್ತಿ ಮತ್ತು ಸಾಧನ. ನೀರು, ದ್ರವರೂಪದಲ್ಲಿಯೇ ಅತಿಹೆಚ್ಚು ಉಷ್ಣತೆಯನ್ನು ಹಿಡಿದಿಟ್ಟುಕೊಳ್ಳುವ ಹಾಗು ಇತರ ವಸ್ತುಗಳಿಗೆ ಉಷ್ಣತೆಯನ್ನು ಪರಿವರ್ತಿಸುವ ವಾಹಕ ಕೆಲಸ ಮಾಡುವುದರಿಂದ, ಭೌಗೋಳಿಕ ವಾತಾವರಣದಲ್ಲಿ ಹಲವಾರು ಪರಿವರ್ತನೆಗಳು ಘಟಿಸಲು ನೀರು ಒಂದು ವಿಶಿಷ್ಟ ಮಾಧ್ಯಮ ಕಾರ್ಯನಿರ್ವಹಿಸುತ್ತದೆ.

ಮತ್ತೆ ಸಿಗೋಣ ....ನಿಮ್ಮ ಡಾ.ಎಸ್. ಕೆ. ನಟರಾಜ್ , ಕಡಾಕೊಳ್ಳ

Rating
No votes yet