ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೬)
ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೬)
ಅಂದಿನ ವಿಚಾರಣೆ ಪ್ರಾರಂಭವಾದಂತೆ ,
“ಸರಿ ನಿಮ್ಮ ಮುಂದಿನ ಸಾಕ್ಷಿ ಯಾರು ಕರೆಸಿ” ಎಂದರು ನ್ಯಾಯಾದೀಶರು, ತಮ್ಮ ಮುಂದಿದ್ದ ದಸ್ತಾವೇಜುಗಳನ್ನು ನೋಡುತ್ತ
“ ಮುಂದಿನ ಸಾಕ್ಷಿಯಾಗಿ , ಲ್ಯಾಬ್ ಪರೀಕ್ಷಕರು, ಮೋಹನ ಮೂರ್ತಿಯವರು ಸ್ವಾಮಿ” ಎಂದರು ಸರ್ಕಾರದ ಪರ ವಕೀಲರು.
ಮೋಹನ ಮೂರ್ತಿಯವರನ್ನು ಕೋರ್ಟಿನ ವಿಧಿಯಂತೆ ಕರೆಯಲಾಯಿತು,
ನಂತರ ಸತ್ಯದ ಪ್ರಮಾಣವಚನ ಭೋದಿಸಲಾಯಿತು
“ನಿಮ್ಮ ಹೆಸರು ?” ಸರ್ಕಾರಿ ವಕೀಲರು ಕೇಳಿದರು
“ಸಾರ್ ನಾನು ಮೋಹನ ಮೂರ್ತಿ ಎಂದು, ಸರ್ಕಾರಿ ಲ್ಯಾಬ್ ನಲ್ಲಿ ಪರೀಕ್ಷಕನಾಗಿದ್ದೇನೆ”
“ಸರಿ ಈಗ ಹೇಳಿ, ಕಲ್ಲಿನ ಮೇಲಿದ್ದ ರಕ್ತದ ಕಲೆಯ ಬಗ್ಗೆ “
“ಸಾರ್ ಅದನ್ನು ಲ್ಯಾಬ್ ನಲ್ಲಿ ಪರೀಕ್ಷಿಸಿದೆ, ಕಲ್ಲಿಗೆ ಅಂಟಿರುವ ರಕ್ತ ಹಾಗು ಅನಂತರಾಮಯ್ಯನವರ ರಕ್ತ ಎರಡು ಒಂದೇನೆ ಆಗಿದೆ”
ಸರ್ಕಾರಿ ವಕೀಲರು ನುಡಿದರು
“ಸ್ವಾಮಿ ಅಷ್ಟೆ , ಈ ಸಾಕ್ಷಿಯಿಂದ ನಮಗೆ ಬೇಕಾದ ಉತ್ತರ ಸಿಕ್ಕಿದೆ”
ನ್ಯಾಯದೀಶರು , ಅರೋಪಿಯ ಪರ ವಕೀಲ ನರಸಿಂಹನತ್ತ ತಿರುಗಿದರು
“ನಿಮಗೆ ಏನಾದರು ಕೇಳುವದಿದೆಯಾ?”
ನರಸಿಂಹ ಎದ್ದು ನಿಂತು ನುಡಿದ
“ಇಲ್ಲ ಸ್ವಾಮಿ, ಇವರಲ್ಲಿ ಕೇಳುವ ಯಾವುದೇ ಪ್ರಶ್ನೆಯೂ ಇಲ್ಲ”
ನ್ಯಾಯದೀಶರು ಸರ್ಕಾರಿ ವಕೀಲರಿಗೆ ನುಡಿದರು,
“ಸರಿ ಹಾಗಿದ್ದರೆ, ನಿಮ್ಮ ಮುಂದಿನ ಸಾಕ್ಷೀ ಯಾರಿದ್ದಾರೆ ಇವರೆ ಕರೆಸಿ, ಯಾರು ಬರುವರು”
ವಕೀಲರು “ಸರ್ಕಾರಿ ಡಾಕ್ಟರ್ ಮುರಳಿಯವರು ಸ್ವಾಮಿ, ಶವದ ಪೋಸ್ಟ್ ಮಾರ್ಟಮ್ ಮಾಡಿದವರು”
ಕೋರ್ಟಿನ ವಿದಿಗಳೆಲ್ಲ ಮುಗಿದು ಸರ್ಕಾರಿ ಡಾಕ್ಟರ್ ಕಟಕಟೆಯಲ್ಲಿ ನಿಂತರು.
ವಕೀಲರು : “ನಿಮ್ಮ ಹೆಸರು”
ಡಾಕ್ಟರ್ : “ಮುರಳಿ ಎಂದು ನಾನು ಡಾಕ್ಟರ್ ಆಗಿದ್ದೇನೆ, ಪ್ರಸ್ತುತ ಈ ಕೇಸಿನಲ್ಲಿ ಶವಪರೀಕ್ಷೆ ಮಾಡಿದವನು ನಾನೆ “
ವಕೀಲರು : “ಈ ಕೊಲೆಯ ಕೇಸಿನ ಬಗ್ಗೆ ನೀವೇನು ಹೇಳುವಿರಿ”
ಡಾಕ್ಟರ್ : “ಸಾರ್ ಶವ ಪರೀಕ್ಷೆ ಮಾಡಿದ ಪ್ರಕಾರ, ಮೃತನಿಗೆ ತಲೆಯ ಹಿಂಬಾಗದಲ್ಲಿ ಬಿದ್ದ ಬಲವಾದ ಪೆಟ್ಟಿನಿಂದ ಸ್ಥಳದಲ್ಲಿಯೇ ಪ್ರಾಣ ಹೋಗಿದೆ”
ವಕೀಲರು : “ಈ ಕೊಲೆ ಯಾವ ಸಮಯದಲ್ಲಿ ನಡೆದಿರಬಹುದು ಎಂದು ನೀವು ಹೇಳುವಿರಿ”
ಡಾಕ್ಟರ್ : “ಶವದ ಪರೀಕ್ಷೆಯ ವಿವರಗಳಿಂದ ಹೇಳುವದಾದರೆ ಮಾರ್ಚಿ ೩ ರಂದು ರಾತ್ರಿ ಸುಮಾರು ಎಂಟರಿಂದ ಎಂಟು ಹದಿನೈದು ನಿಮಿಷದೊಳಗೆ ಪ್ರಾಣ ಹೋಗಿರಬಹುದು “
ಡಾಕ್ಟರ್ : “ತಲೆಗೆ ಹಿಂಬಾಗದಲ್ಲಿ ಬಿದ್ದ ಏಟಿನಿಂದ ಪ್ರಾಣ ಹೋಗಿರುವುದು ಎನ್ನುವಿರಿ, ಹಾಗಿದ್ದರೆ ಅದು ಹೇಗೆ ಆಗಿರಬಹುದು”
ಡಾಕ್ಟರ್ : “ಯಾವುದಾದರು ಗಟ್ಟಿಯಾದ, ಮತ್ತು ಸ್ವಲ್ಪ ಚೂಪಾದ ವಸ್ತುವಿನಿಂದ ತಲೆಗೆ ಬಲವಾಗಿ ಹೊಡೆದಾಗ ಅಘಾತಕ್ಕೆ ನಂತರದ ರಕ್ತಸ್ರಾವಕ್ಕೆ ಪ್ರಾಣಹೋಗಿರಬಹುದು”
ವಕೀಲರು “ಇಲ್ಲಿ ನೋಡಿ ಇಲ್ಲಿ ಚೂಪಾದ ಮತ್ತು ನೀವು ಹೇಳುವಂತೆ ಗಟ್ಟಿಯಾದ ವಸ್ತು ಎಂದರೆ ಕಲ್ಲು ಇದೆಯಲ್ಲ ಇದರಿಂದ ಹೊಡೆದು ಪ್ರಾಣ ಹೋಗಿರಬಹುದಲ್ಲವೆ ?”
“ಆಗಬಹುದು , ಇಂತಹ ವಸ್ತುವಿನಿಂದಲೂ ತಲೆಗೆ ಪೆಟ್ಟು ಬಿದ್ದರೆ ಪ್ರಾಣಹೋಗಿರಬಹುದು”
“ಸರಿ ಡಾಕ್ಟರೆ ವಂದನೆಗಳು ಎಂದ ಸರ್ಕಾರಿ ವಕೀಲರು
“ಸ್ವಾಮಿ , ಇದೇ ನಾನು ಹೇಳಲು ಬಯಸಿರುವುದು, ಸರ್ಕಾರಿ ಡಾಕ್ಟರ್ ಅಭಿಪ್ರಾಯದಂತೆ, ಗಟ್ಟಿಯಾದ ಚೂಪಾದ , ಅಂದರೆ ಈ ಕಲ್ಲಿನಿಂದ ತಲೆಯ ಹಿಂಬಾಗಕ್ಕೆ ಬಿದ್ದ ಹೊಡೆತದಿಂದ ಈ ಮರಣ ಸಂಭವಿಸಿದೆ “
“ಸರಿ “ ಎನ್ನುವಂತೆ ತಲೆ ಆಡಿಸಿದ ನ್ಯಾಯದೀಶರು, ನರಸಿಂಹನನ್ನು ಪ್ರಶ್ನಿಸಿದರು
“ನಿಮ್ಮ ಪ್ರಶ್ನೆಗಳೇನಾದರು ಇದೆಯ ನರಸಿಂಹರವರೆ, ಅನುಮಾನಗಳು”
“ಇದೇ ಸ್ವಾಮಿ ಒಂದೆರಡು ಸಣ್ಣ ಅನುಮಾನಗಳು ಅವರನ್ನು ಕೇಳಿಬಿಡುತ್ತೇನೆ”
ನರಸಿಂಹ ಎದ್ದು ನಿಂತು ಕಟಕಟೆಯ ಬಳಿ ಬಂದ
“ತಮ್ಮ ಹೆಸರು?” ನರಸಿಂಹ ಕೇಳಿದ
ನರಸಿಂಹನ ಎರಡೂ ಬದಿ ಇಳಿಬಿದ್ದ ಉದ್ದನೆಯ ಮೀಸೆಯನ್ನು ಆಸಕ್ತಿಯಿಂದ ನೋಡುತ್ತಿದ್ದ ಡಾಕ್ಟರ್ , ಬೆಚ್ಚಿಬಿದ್ದು ನುಡಿದರು
“ಮುರಳಿ ಎಂದು”
“ಡಾಕ್ಟರ್ ನಾನು ಅದೇ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳುವದಿಲ್ಲ, ಸಣ್ಣ ಒಂದೆರಡು ಅನುಮಾನಗಳು ಅಷ್ಟೆ “
“ಕೇಳಿ ಅದಕ್ಕೇನು ನನಗೆ ತಿಳಿದಿರುವದನ್ನೆ ತಿಳಿಸುತ್ತೇನೆ” ಎಂದರು ಡಾಕ್ಟರ್ ಮುರಳಿ
“ಡಾಕ್ಟರ್ , ಮೃತನಾಗಿರುವ ಅನಂತರಾಮಯ್ಯನವರ ಮೈಮೇಲೆ , ತಲೆಯ ಹಿಂಬಾಗದಲ್ಲಿ ಏಟು ಬಿದ್ದು ಪ್ರಾಣ ಹೋಗಿದೆ ಅನ್ನುವಿರಿ, ಅಂದರೆ ತಲೆಯ ಹಿಂಬಾಗದಲ್ಲಿ ಗಾಯ ಇದೆ ಅಂತಯಿತು, ತಲೆಯ ಹಿಂಬಾಗ ಬಿಟ್ಟು ದೇಹದ ಯಾವುದಾದರು ಬಾಗದ ಮೇಲೆ , ಮತ್ತೆಲ್ಲಾದರು ಗಾಯಗಳು, ಏಟು ಬಿದ್ದ ಗುರುತು, ಅಂತಹುದೇನದರು ಇದ್ದಿತಾ?”
ಡಾಕ್ಟರ್ ಉತ್ಸಾಹದಿಂದ ನುಡಿದರು
“ಹೌದು ಸಾರ್, ತಲೆಯ ಹಿಂಬಾಗದಲ್ಲಿ ಗಟ್ಟಿಯಾದ ವಸ್ತುವಿನಿಂದ ಬಿದ್ದ ಏಟು ಇದ್ದಿತ್ತು, ಹಾಗೆ ಬಲಗಾಲ ಮಂಡಿಯ ಮೇಲೆ, ಎಡಗಾಲ ಬೆರಳುಗಳ ಮೇಲೆ ತರಚಿದ , ಚರ್ಮ ಕಿತ್ತುಹೋದ ಗಾಯದ ಗುರುತಿದೆ, ಅದನ್ನು ನಾನು ಪೋಸ್ಟ್ ಮಾರ್ಟಮ್ ರಿಪೀರ್ಟಿನಲ್ಲು ದಾಖಲಿಸಿದ್ದೇನೆ”
ನರಸಿಂಹ ಕೊಂಚ ಆಶ್ಚರ್ಯದಲ್ಲಿಯೇ ನುಡಿದ
“ ನೋಡಿ ಪೋಲಿಸರು ತೆಗೆದಿರುವ ಪೋಟೊ ಹಾಗು ಹೇಳಿಕೆಗಳನ್ನು ಗಮನಿಸಿದರೆ, ಅನಂತರರಾಮಯ್ಯನವರ ದೇಹ ಮೇಲ್ಮುಖವಾಗಿ ಬಿದ್ದಿತ್ತು ಅನ್ನುತ್ತಾರೆ , ಹಾಗಿರುವಾಗ ಮಂಡಿಯ ಮೇಲೆ ಕಾಲಿನ ಮೇಲೆ ಗಾಯ ಹೇಗೆ ಆಗಿರಬಹುದು, ಅದೇ ಕಲ್ಲಿನಿಂದ ಜಜ್ಜಿದಾರೆಯೆ ?”
“ಇಲ್ಲ ಅದು ಜಜ್ಜಿದ ಗಾಯದ ಗುರುತ್ತಲ್ಲ, ಆಳವಾಗಿಲ್ಲ, ಕಾಲು ನೆಲದ ಮೇಲೆ ಬಿದ್ದು ಉಜ್ಜಿರುವುದು ಅಥವ ಯಾವುದೋ ವಸ್ತು ಕಾಲಿಗೆ ಅಪ್ಪಳಿಸಿರುವುದು ಇದರಿಂದ ಆಗಿರಬಹುದು”
“ಅಂದರೆ ಮೃತ ವ್ಯಕ್ತಿ ,ಸಾಯುವ ಮುಂಚೆ ನೆಲದ ಮೇಲಿ ಬಿದ್ದು ನೋವಿನಿಂದ ಒದ್ದಾಡುವಾಗ ಆಗಿರುವ ಸಾದ್ಯತೆ ಇದೆಯಾ?
ಅಥವ ಬಹಳ ಮುಂಚೆಯೇ ಯಾವಾಗಲೋ ಆಗಿರುವ ತರಚು ಗಾಯವಿರಬಹುದೇ ?”
“ಇಲ್ಲ ಹಾಗೆ ಆಗಿರಲಾರದು, ನನ್ನ ಪ್ರಕಾರ ಯಾವುದೋ ವಸ್ತುವಿಗೆ ಕಾಲು ಉಜ್ಜಿರುವದರಿಂದ ಆಗಿರಬೇಕು, ಅದೂ ಸಹ ಮರಣದ ಸಮಯದಲ್ಲಿಯೇ ಆಗಿರುವುದು ಅದು ಹಳೆಯ ಗಾಯವಾಗಿರಲು ಸಾದ್ಯವಲ್ಲ, ಸಣ್ಣಗೆ ರಕ್ತ ಸಹ ಮೆತ್ತಿಕೊಂಡಿತ್ತು , ಗಾಯ ಹಸಿಯಾಗಿತ್ತು”
“ಸರಿ ಡಾಕ್ಟರ್ ಕಡೆಯ ಪ್ರಶ್ನೆ, ತಲೆಯ ಹಿಂಬಾಗದಲ್ಲಿ ಆಗಿರುವ ಗಾಯ , ಕಲ್ಲಿನಿಂದ ಜಜ್ಜಿರುವುದು ಆಗಿರಬಹುದು ಅಥವ ತಲೆಯನ್ನು ಬಲವಾಗಿ ಕಲ್ಲಿಗೆ ಅಪ್ಪಳಿಸದಾಗಲು ಆಗಿರಬಹುದೇ ? “
ಡಾಕ್ಟರ್ ನಗುತ್ತ ಕೇಳಿದ
“ಅಂದರೆ ನೀವು ಹೇಳುವುದು ಮೃತವ್ಯಕ್ತಿ ತನ್ನ ತಲೆಯನ್ನು ಹಿಂದಕ್ಕೆ ಬಲವಾಗಿ ಹೊಡೆದು ಕೊಂಡ ಅಂತಲೇ ಸಾದ್ಯವಿಲ್ಲ. ಅಷ್ಟು ವೇಗವಾಗಿ ಅವರ ತಲೆಯನ್ನು ಅವರೆ ಹಿಂದಕ್ಕೆ ಹೊಡೆಯುವುದು ಸ್ವಲ್ಪ ಕಷ್ಟವೇ”
“ಸರಿ ಡಾಕ್ಟರ್ ನನ್ನ ಅನುಮಾನ ಪರಿಹರಿಸಿದ್ದಕ್ಕಾಗಿ ವಂದನೆಗಳು ನಿಮ್ಮಿಂದ ಕೆಲವು ಹೊಸ ವಿಷಯಗಳು ಸಿಕ್ಕಿದೆ, ಧನ್ಯವಾದ”
“ಸರಿ ಸಾರ್ ವಂದನೆಗಳು, ನನ್ನ ಕೆಲಸ ಮುಗಿಯಿತಲ್ಲವೆ” ಎಂದು ಕೇಳಿ ನ್ಯಾಯದೀಶರಿಗೆ ವಂದಿಸಿ ಕೆಳಗಿಳಿದರು ಕಟಕಟೆಯಿಂದ.
ಮುಂದಿನ ವಿಚಾರಣೆಯಲ್ಲಿ ಮತ್ತೊಬ್ಬ ಸಾಕ್ಷೀಯಾಗಿ ಮೃತ ಅನಂತರಾಮಯ್ಯನವರ ಪತ್ನಿ ರಾಜಮ್ಮ , ಆಕೆ ಬಂದು ವಿದಿಯಂತೆ ಪ್ರಮಾಣವಚನ ಸ್ವೀಕರಿಸಿ ನಿಂತರು ಕಟಕಟೆಯಲ್ಲಿ
“ನಿಮ್ಮ ಹೆಸರು “ ಸರ್ಕಾರಿ ವಕೀಲರು ಕೇಳಿದರು
“ರಾಜಮ್ಮ ಎಂದು ಸ್ವಾಮಿ”
“ಮೃತ ಅನಂತರಾಮಯ್ಯನವರು ನಿಮಗೆ ಏನಾಗಬೇಕು”
“ನನ್ನ ಪತಿ ಸ್ವಾಮಿ ಅವರು “
ಆಕೆ ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದಳು. ಸ್ವಲ್ಪ ಕಾಲ ಬಿಟ್ಟು ಕೇಳಿದರು ವಕೀಲರು
“ಇಲ್ಲಿ ನಿಂತಿರುವ ಈ ವ್ಯಕ್ತಿಯನ್ನು ಗುರಿತಿಸಬಲ್ಲಿರ?”
“ಗೊತ್ತು ಸ್ವಾಮಿ, ವೆಂಕಟೇಶಯ್ಯನವರು ಎಂದು, ನಮ್ಮವರ ಸ್ನೇಹಿತರು, ಅಗಾಗ್ಯೆ ಮನೆಗೆ ಬರುತ್ತಿದ್ದರು, ಕಡೇಗೆ ಇವರಿಂದಾಗಿ ಗಂಡನನ್ನು ಕಳೆದುಕೊಂಡೆ” ಅಕೆಯ ರೋಷದ ಉತ್ತರ,
“ಕೇಳಿದ ಪ್ರಶ್ನೆಗೆ ಮಾತ್ರ ಉತ್ತರ ಹೇಳಿದರೆ ಸಾಕಮ್ಮ, ಇವರು ನಿಮ್ಮ ಪತಿ ಅಂದರೆ ಅನಂತರಾಮಯ್ಯನವರು ಕೊಲೆಯಾದ ದಿನ ಮನೆಗೆ ಬಂದಿದ್ದರಾ” ವಕೀಲರು ಎಚ್ಚರಿಕೆಯಿಂದ ಕೇಳಿದರು,
“ಹೌದು ಬಂದಿದ್ದರು, ಸಂಜೆ ಮನೆಗೆ ಬಂದಿದ್ದರು, ಅವರು ಕೊಟ್ಟಿದ್ದ ಹಣ ಹಿಂದಕ್ಕೆ ಕೇಳಿದರು, ನಮ್ಮವರು ಹಣ ಎಲ್ಲ ಅನ್ನುವಾಗ ಜಗಳ ಪ್ರಾರಂಭವಾಯಿತು, ನೀನು ನನ್ನ ಸ್ನೇಹಕ್ಕೆ ಮೋಸ ಮಾಡಿದೆ ಅದು ಇದು ಅಂತ ಇವರು ಕೂಗಾಡಿದರು” ಎಂದರು ರಾಜಮ್ಮ.
“ಇವರಿಂದ ನಿಮ್ಮ ಪತಿ ಹಣ ಪಡೆದಿದ್ದರಾ? ಎಷ್ಟು” ವಕೀಲರು ಕೇಳಿದರು,
ರಾಜಮ್ಮ “ಹೌದು ಮನೆಕಟ್ಟಲು ಸಾಲ ಎಂದು ಪಡೇದಿದ್ದರು, ಐದು ಲಕ್ಷ”
ಸರ್ಕಾರಿವಕೀಲರು “ನಿಮ್ಮ ಪತಿ ಆ ಅಸಲನ್ನಾಗಲಿ ಬಡ್ಡಿಯನ್ನಾಗಲಿ ಕೊಟ್ಟಿದ್ದರಾ ಹಿಂದಕ್ಕೆ”
ರಾಜಮ್ಮ “ಇಲ್ಲ ಹಣ ಕೊಟ್ಟಿರಲಿಲ್ಲ , ಹಣಕ್ಕೆ ತೊಂದರೆ ಇತ್ತು, ಆದರೆ ನಿಧಾನಕ್ಕೆ ಕೊಡುವದಾಗಿ ತಿಳಿಸಿದರು”
ಸರ್ಕಾರಿವಕೀಲರು “ನಂತರ ಏನಾಯಿತು?”
ರಾಜಮ್ಮ “ಜಗಳವಾಡಿಕೊಂಡವರು ಮತ್ತೆ ತಣ್ಣಗಾದರು, ನಮ್ಮವರು ಕಣ್ಣೀರು ಹಾಕಿದರು, ಇವರು ಸಹಿತ, ಎದುರಿಗೆ ಸುಮ್ಮನಾದ ಹಾಗೆ ನಟಿಸಿದರು, ನಂತರ ಇವರು ಹೊರಟರು, ಇವರನ್ನು ಬಸ್ ಸ್ಟಾಂಡಿಗೆ ಬಿಟ್ಟು ಬರಲು ನನ್ನ ಗಂಡನೂ ಹೋದರು, ಏನಾಯಿತೂ ಗೊತ್ತಿಲ್ಲ, ಸ್ವಲ್ಪ ಕಾಲ ಕಳೆದಿತ್ತು, ನಾನು ಕಾಯುತ್ತ ಕುಳಿತಿದ್ದೆ, ಅಷ್ಟರಲ್ಲಿ , ನಮ್ಮ ಪಕ್ಕದ ಮನೆಯವರು ಬಂದು, ನಿಮ್ಮ ಯಜಮಾನರು ಬಸ್ ಸ್ಟಾಂಡಿನಲ್ಲಿ ಸತ್ತು ಬಿದ್ದಿದ್ದಾರೆ ಎಂದು ತಿಳಿಸಿದರು, ಅಲ್ಲಿ ಹೋಗಿ ನೋಡಿದರೆ, ನನ್ನ ಯಜಮಾನರು ಸತ್ತು ಬಿದ್ದಿದ್ದರು ತಲೆಯಿಂದ ರಕ್ತ ಹರಿದಿತ್ತು, ಅವರು ಬದುಕಿರಲಿಲ್ಲ”
“ಸರಿ ನೀವು ಅಲ್ಲಿ ಸುತ್ತಲು ಏನಾದರು ನೋಡಿದಿರಾ, ಹರಿತವಾದ ಆಯುದ , ಕಲ್ಲು ಅಥವ ಇನ್ನೇನಾದರು “ ವಕೀಲರು ಕೇಳಿದರು
“ಇಲ್ಲ ದುಃಖ ಹಾಗು ಗಾಭರಿಯಲ್ಲಿ ನಾನು ಏನನ್ನು ಗಮನಿಸಲಿಲ್ಲ, ಪೋಲಿಸರು ಬಂದರು , ಎಲ್ಲವನ್ನು ಕೇಳಿದರು, ನಂತರ , ನಮ್ಮ ಯಜಮಾನರ ಜೊತೆ ಹೊರಟ ವೆಂಕಟೇಶಯ್ಯನವರನ್ನು ಹುಡುಕಿದರು, ಅವರು ಕಾಣಲಿಲ್ಲ, ಅವರ ಮನೆಯ ವಿಳಾಸ ನನ್ನಿಂದ ಪಡೆದು ಅವರನ್ನು ಹುಡುಕಲು ಹೋದರು” ಆಕೆ ಉತ್ತರಿಸಿದರು
“ಸರಿಯಮ್ಮ, ನಿಮಗೆ ನಿಮ್ಮ ಯಜಮಾನರು ಹೇಗೆ ಸತ್ತಿದ್ದಾರೆ ಎಂದು ಗೊತ್ತಾಯಿತಾ” ವಕೀಲರು ಪ್ರಶ್ನಿಸಿದರು
“ಬೇರೆ ಹೇಗೆ ಸಾಯಲು ಸಾಧ್ಯ ಅಷ್ಟು ಆರೋಗ್ಯವಾಗಿದ್ದ ಅವರು ಇದ್ದಕ್ಕಿದ್ದಂತೆ ಸಾಯಬೇಕಾದರೆ ಅವರನ್ನು ಕೊಲೆ ಮಾಡರಲೇ ಬೇಕು, ಅವರ ತಲೆಯ ಹಿಂಬಾಗದಿಂದ ರಕ್ತ ಸುರಿಯುತ್ತಿತ್ತು, ಅವರ ಜೊತೆ ಹೋದ ಸ್ನೇಹಿತರು ಇವರು ಮಾಯ, ಅಂದರೆ ಮತ್ತೇನಾಗಿರಲು ಸಾದ್ಯ, ಬಸ್ ನಿಲ್ದಾಣದಲ್ಲಿ ಮತ್ತೆ ಜಗಳವಾಗಿದೆ, ಇವರು ಕಲ್ಲಿನಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ ಅದಕ್ಕಾಗಿ ಮನೆಯಿಂದ ಉಪಾಯವಾಗಿ ನಮ್ಮವರನ್ನು ಬಸ್ ನಿಲ್ದಾಣಾಕ್ಕೆ ಕರೆತಂದಿದ್ದಾರೆ , ನಾನು ಮೋಸಹೋದೆ ಸ್ವಾಮಿ ನ್ಯಾಯ ಕೊಡಿಸಿ”
ಸರ್ಕಾರಿ ವಕೀಲರು ನ್ಯಾಯಾದೀಶರತ್ತ ತಿರುಗಿ ,
“ನನ್ನ ಸಾಕ್ಷಿಯ ಹೇಳಿಕೆ ಮುಗಿಯಿತು ಸ್ವಾಮಿ “ ಎಂದರು.
ಯಥಾಪ್ರಕಾರ ನರಸಿಂಹ ಎದ್ದು ನಿಂತ ರಾಜಮ್ಮನನ್ನು ಪ್ರಶ್ನಿಸಲು, ನ್ಯಾಯದೀಶರ ಅಪ್ಪಣೆಯ ಮೇರೆಗೆ ಅವರನ್ನು ಪ್ರಸ್ನಿಸಿದ
“ನಿಮ್ಮ ಹೆಸರು”
“ರಾಜಮ್ಮ”
ನರಸಿಂಹ ಕೇಳಿದ
“ನಿಮ್ಮ ಪತಿ ಅನಂತರಾಮಯ್ಯನವರಿಗೂ ವೆಂಕಟೇಶಯ್ಯನವರಿಗೂ ಎಷ್ಟು ವರ್ಷಗಳ ಗೆಳೆತನ,
ರಾಜಮ್ಮ ಹೇಳಿದಳು,
ಸುಮಾರು ಇಪ್ಪತ್ತು ವರ್ಷಗಳಿಗೂ ಜಾಸ್ತಿ , ನಮ್ಮ ಮನೆಗು ಅವರ ಮನೆಗೂ ಓಡಾಟವಿದ್ದೆ ಇದೆ, ಹಳೆಯ ಗೆಳೆಯರು ಅವರು”
ನರಸಿಂಹ “ಅಂತಹ ಗೆಳೆಯರು , ಅವರಾಗಿರುವಾಗ ವೆಂಕಟೇಶಯ್ಯನವರು ನಿಮ್ಮ ಪತಿ ಅನಂತರಾಮಯ್ಯನವರನ್ನು ಕೊಲ್ಲಲು ಸಾದ್ಯವಿದೆಯ” ,
ಆಕೆ ಯೋಚಿಸುತ್ತ ಹೇಳಿದಳು
“ಹೇಗೆ ಹೇಳುವುದು ಹಣ ತಾಯಿ ಮಕ್ಕಳ ಸಂಬಂಧವನ್ನೆ ಕೆಡಿಸುವ ಈ ಕಾಲದಲ್ಲಿ , ಸಂದರ್ಭ ಹಾಗೆ ಕಾಣುವದಲ್ಲ”
ನರಸಿಂಹ
“ನಿಮ್ಮ ಯಜಮಾನರು ಐದು ಲಕ್ಷ ಹಣ ಪಡೆದಿದ್ದರು ಅನ್ನುವಿರಿ, ಹಿಂದೆ ಯಾವಗಲಾದರು ಆ ರೀತಿ ಹಣದ ವ್ಯವಹಾರ ಅವರಿಬ್ಬರ ನಡುವೆ ಇದ್ದೀತ?”
ಆಕೆ ದೃಡವಾಗಿ ಹೇಳಿದಳು,
“ಇಲ್ಲ , ಈಗ ನನ್ನ ಯಜಮಾನರು ಮನೆ ಕಟ್ಟಿಸುತ್ತ ಇದ್ದದ್ದರಿಂದ ಈ ರೀತಿ ಹಣ ಪಡೆಯುವ ಸಂದರ್ಭ ಬಂದಿತು”
“ಬಡ್ಡಿಗಾಗಿ ಪಡೆದಿರುವ ಹಣವೇ, ಬಡ್ಡಿ ಕೊಡುತ್ತಿದ್ದಾರಾ?” ನರಸಿಂಹ ಪ್ರಶ್ನೆಸಿದ , ಅದಕ್ಕೆ ರಾಜಮ್ಮ
“ಇಲ್ಲ ನನಗೆ ತಿಳಿದಿರುವಂತೆ ಬಡ್ಡಿ ಎಂದು ಹಣವನ್ನು ಪಡೆದಿಲ್ಲ, ಸುಮ್ಮನೆ ಹಾಗೆ ಕೈಗಡ ಎಂದು ಪಡೆದಿರುವುದು”
“ಹಾಗಿದ್ದಾಗ ಹಣಕ್ಕಾಗಿ ಕೊಲೆ ನಡೆದಿದೆ ಎಂದು ಹೇಗೆ ಹೇಳುವಿರಿ” ನರಸಿಂಹ ಮತ್ತೇ ಕೇಳಿದ,
“ಹೌದು ಹಣಕ್ಕಾಗಿ ಜಗಳವಾಯಿತು, ಅದು ನನ್ನ ಎದುರಿಗೆ ನಡೆಯಿತು, ನಂತರ ಆ ರೋಷದಲ್ಲಿ ಕೊಲೆ ಮಾಡಿದ್ದಾರೆ” ರಾಜಮ್ಮ ಉದ್ವೇಗದಲ್ಲಿಯೇ ಹೇಳಿದಳು,
“ಅಂದರೆ ಕೊಲೆಯಾಗುವದನ್ನು ನೀವು ಎದುರಿಗೆ ನೋಡಿದಿರ?” ನರಸಿಂಹ ಪ್ರಸ್ನಿಸಿದ, ಆಕೆ
“ಇಲ್ಲ ನಾನು ನೋಡಿಲ್ಲ, ಕೊನೆಯ ಬಾರಿ ಅವರಿಬ್ಬರು ಜೊತೆಗೆ ಹೋದದ್ದು ಮಾತ್ರ ನಾನು ನೋಡಿದ್ದೇನೆ”
“ಮತ್ತೆ ವೆಂಕಟೇಶಯ್ಯನವರೆ ಕೊಲೆ ಮಾಡಿದ್ದಾರೆ ಎಂದು ಹೇಗೆ ನಂಬುವಿರಿ” ನರಸಿಂಹನ ಕುತೂಹಲ,
“ಅವರಿಬ್ಬರ ನಡುವೆ ಹೊರಡುವ ಮೊದಲು ಜಗಳವಾಯಿತು, ಬಸ್ ಸ್ಟಾಂಡಿನಲ್ಲಿ ಅವರ ಕೊಲೆಯಾಗಿತ್ತು, ಕಲ್ಲಿನಿಂದ ಜಜ್ಜಿ ಕೊಲೆಯಾಗಿತ್ತು, ನಂತರ ಅವರು ಆ ಜಾಗದಿಂದ ಹೊರಟು ಹೋಗಿದ್ದರು, ಪೋಲಿಸರು ಅವರನ್ನು ಹುಡುಕಿ ತಂದಿದ್ದಾರೆ ಅನ್ನುವಾಗ ಅವರೇ ಕೊಲೆ ಮಾಡಿದ್ದಾರೆ ಅನ್ನುವದಕ್ಕೆ ಮತ್ತಿನೇನು ಸಾಕ್ಷಿ ಬೇಕು”
“ಅಂದರೆ ನೀವು ಈ ಸಂದರ್ಭದಿಂದ ಅನಂತರಾಮಯ್ಯನವರ ಕೊಲೆ ವೆಂಕಟೇಶಯ್ಯ ಮಾಡಿದ್ದಾರೆ ಅನ್ನುತ್ತಿದ್ದೀರಿ ಹೊರತು, ನೀವು ಎದುರಿಗೆ ನೋಡಲಿಲ್ಲ ಅಲ್ಲವೆ” ನರಸಿಂಹ ಆಕೆಯ ಮಾತು ಕೇಳುತ್ತ ಪ್ರಸ್ನಿಸಿದ,
“ನಿಜ, ನಾನು ಎದುರಿಗೆ ಕೊಲೆಯನ್ನು ನೋಡಲಿಲ್ಲ” ರಾಜಮ್ಮ ನಿಧಾನವಾಗಿ ಹೇಳಿದಳು.
ನರಸಿಂಹ ನ್ಯಾಯದೀಶರತ್ತ ತಿರುಗಿ ಹೇಳಿದ
“ಸ್ವಾಮಿ ಅಷ್ಟೆ ನಾನು ಹೇಳುವುದು ಇಲ್ಲಿ ವೆಂಕಟೇಶಯ್ಯನವರೆ ಅನಂತರಾಮಯ್ಯನವರ ಕೊಲೆಮಾಡಿರುವದನ್ನು ಯಾರು ನೇರವಾಗಿ ನೋಡಿಲ್ಲ. ಅಂತಹ ಸಾಕ್ಷಿಗಳು ಇಲ್ಲಿ ಯಾರು ಇಲ್ಲ ಅಂತ ತಮ್ಮ ಗಮನಕ್ಕೆ ತರುತ್ತಿದ್ದೇನೆ”
ನ್ಯಾಯಾದೀಶರು ತಲೆ ಆಡಿಸಿದರು.
ಮುಂದುವರೆಯುವುದು
ಇಲ್ಲಿಯವರೆಗೂ ನಡೆದ ಘಟನೆಗಳನ್ನು ಒಟ್ಟಾಗಿ ಓದಲು ಸರಣಿ ಶೀರ್ಷಿಕೆಯ ಕೆಳಗಿರುವ 'ನೀಳ್ಗತೆ : ಸನ್ನಿವೀಶದ ಸುಳಿಯಲ್ಲಿ ' ಒತ್ತಿರಿ
Comments
ಉ: ನೀಳ್ಗತೆ : ಸನ್ನಿವೇಶದ ಸುಳಿಯಲ್ಲಿ (ಬಾಗ - ೬)
5 ಮತ್ತು 6 ರ ಕಂತುಗಳನ್ನು ಓದಿದೆ. ಪ್ರತಿಕ್ರಿಯೆ ಮುಂದಿನ ಕಂತಿಗೆ ಮುಂದೂಡಲಾಗಿದೆ.