ನೀವೇನ್ ಹೇಳ್ತಿರಾ?? ಮರುಮದುವೆಯ ಕಥೆ

ನೀವೇನ್ ಹೇಳ್ತಿರಾ?? ಮರುಮದುವೆಯ ಕಥೆ

 ಮರುಮದುವೆ


ಮತ್ತೊಂದು ದೊಡ್ಡ ಅಲೆ ಬಂದು ಕಾಲಿಗೆ ಬಡಿಯಿತು. ದೂರದ ಶೂನ್ಯದಲ್ಲಿದ್ದ ದೃಷ್ಟಿಯನ್ನು ತೆಗೆದು ತನ್ನ ಕಾಲುಗಳತ್ತ ದಿಟ್ಟಿಸಿದ ಮುರಳಿ . ನೀರಿನ ಅಲೆ ಮರಳಿನ ಜೊತೆ ಸಣ್ಣ ಸಣ್ಣ ಶಂಕು ಕಪ್ಪೆ ಚಿಪ್ಪನ್ನು ಹೊತ್ತು ತಂದು ಕಾಲ ಮೇಲೆ ಸುರಿದಿತ್ತು.ಇಷ್ಟು ಬೇಗ ಬೀಚಿಗೆ ಬಂದು ಕುಳಿತುಕೊಳ್ಳುವರು ಕಡಿಮೆಯೆ ಹಾಗಾಗಿ ಜನ ಸ್ವಲ್ಪ ವಿರಳವಾಗಿದ್ದರು. ರಜಾ ದಿನ ಬಂತೆಂದರೆ ಸಮುದ್ರ ದಡದಲ್ಲಿ ಬಂದು ಕುಳಿತುಕೊಳ್ಳುವುದು ಇವನಿಗೆ ಚನ್ನೈಗೆ ಬಂದಾಗಿನಿಂದ ಬಂದ ಅಭ್ಯಾಸ. ಈ ದಿನ ಗೋಪಿನಾಥರ ಮನೆಗೆ ಊಟಕ್ಕೆ ಹೋಗಬೇಕೆಂದು ಪುನಃ ನೆನಪಿಗೆ ಬಂದಿತು. ಏಕೊ ಮನಸ್ಸು ಹಿಂಜರಿಯುತ್ತಿತ್ತು. ತಾನು ಯಾವುದೊ ಸಂಕೋಚಕ್ಕೆ ಸಿಕ್ಕಿ ಇವರ ಪ್ರಸ್ತಾಪಕ್ಕೆ ಒಪ್ಪಿಕೊಂಡೆನಾ ಅಂತ ಅನುಮಾನ ಅವನು ಕಾಡುತ್ತಿದೆ. ಸ್ವಷ್ಟವಾಗಿ ತಿಳಿದಿದೆ ತಾನು ಅವರಮನೆಗೆ ಹೋಗುತ್ತಿರುವುದು ಕೇವಲ ಊಟಕ್ಕೆ ಮಾತ್ರವಲ್ಲ ಅವರ ಅಣ್ಣನ ಮಗಳು ವಾಣಿ ಎಂಬಾಕೆಯನ್ನು ನೋಡಲು ಎಂದು.


     ಮುರಳಿ ಚೆನ್ನೈಗೆ ಬಂದು ನಾಲ್ಕನೇ ವರ್ಷಕ್ಕೆ ಹತ್ತಿರವಾಗುತ್ತಿದೆ. ಕೇಂದ್ರ ಸರ್ಕಾರದ ಗಣಿವಿಜ್ಙಾನ ಇಲಾಖೆಯಲ್ಲಿ ಅದಿಕಾರಿಯಾಗಿದ್ದವನು ಬೆಂಗಳೂರಿನಿಂದ ಇಲ್ಲಿಗೆ ಸ್ವಂತ ಕೋರಿಕೆಯ ಮೇಲೆಯೆ ವರ್ಗಾವಣೆಯನ್ನು ಬಯಸಿ ಇಲ್ಲಿ ಬಂದು ಒಂಟಿಯಾಗೆ ನೆಲೆಸಿದ್ದಾನೆ. ಬೆಸಂತ್ ನಗರದ ಅಪಾರ್ಟ್ ಮೆಂಟಿನಲ್ಲಿ ವಾಸ. ತಾನು ಕೆಲಸಮಾಡುವ ಕಛೇರಿ ನಡೆದು ಹೋಗುವಷ್ಟು ಹತ್ತಿರ. ಮೆಸನಲ್ಲಿ ಊಟ. ರಜಾದಿನಗಳಲ್ಲಿ ಬೇಕೆಂದಾಗಲೆಲ್ಲ ಬರುವಷ್ಟು ಹತ್ತಿರದಲ್ಲಿ ಸಮುದ್ರ. ಎಲ್ಲವು ಅನುಕೂಲವಾಗಿಯೆ ಇದೆ ಆದರು ಒಂಟಿ ಜೀವನ. ಒಂಟಿಯಾದರು ಅವನು ನಿಜಕ್ಕು ಅವನು ಅವಿವಾಹಿತನೇನು ಅಲ್ಲ. ಕಾನೂನುಬದ್ದವಾಗಿ ಪತ್ನಿಯಿಂದ ದೂರವಾಗಿರುವ ವಿವಾಹ ವಿಚ್ಚೇದಿತ. ಮೊದಲು ಅವನನ್ನು ತೀವ್ರವಾಗಿ ಕಾಡುತ್ತಿದ್ದ ಯೋಚನೆಗಳು, ಒಂಟಿತನ ಈಗ ಮೊದಲಿನಷ್ಟಿಲ್ಲ . ಸ್ವಲ್ಪ ಬೇಗ ಅನ್ನುವಂತೆ ಅವನಿಗೆ ಇಪ್ಪತ್ತನಾಲ್ಕನೆ ವರ್ಷಕ್ಕೆ ಅವನಿಗೆ ಮದುವೆಯಾಯಿತು. ಅವನ ತಾಯಿ ಮೆಚ್ಚಿ ಮೆಚ್ಚಿ ತಂದ ಸೊಸೆ ಲಕ್ಷ್ಮಿ, ತಾಯಿ ಅವಳನ್ನು ಮಹಾಲಕ್ಷ್ಮೀ ಎಂದೆ ಕರೆಯುತ್ತಿದ್ದಳು. ಮೊದಲೆಲ್ಲ ಸುಂದರವಾಗಿದ್ದ ಅವರ ಸಂಸಾರ ನಂತರ ಏಕೊ ದಿಕ್ಕು ತಪ್ಪಿದ ನೌಕೆಯಾಯಿತು. ಅವನಿಗೆ ತಾಯಿಯ ಹೊರತು ಬೇರೆ ಯಾರು ಆದಾರವಿಲ್ಲ ಅನ್ನುವದನ್ನು ಅರಿತು ಸಹ ಪತ್ನಿಯಾದ ಲಕ್ಷ್ಮೀ , ತನ್ನ ಅತ್ತೆಯನ್ನು ನಿರ್ಲಕ್ಷಿಸಿದಳು ಚಿಕ್ಕವಯಸ್ಸಿನಿಂದ ಟಿ.ವಿ.ಗಳಲ್ಲಿ ದಾರವಾಹಿಗಳನ್ನು ನೋಡುತ್ತ ಬೆಳೆದ ಪರಿಣಾಮವೋ ಎಂಬಂತೆ ಅತ್ತೆ ಎಂದರೆ ತನ್ನ ಶತ್ರುವಿನಂತೆ ಗುರುತಿಸಿಕೊಂಡಳು. ಅದರ ಪರಿಣಾಮ ಇವರಿಬ್ಬರ ಜೀವನದ ಮೇಲಾಯಿತು. ಗಂಡ ಹೆಂಡತಿಯರ ನಡುವೆ ಬಿರಕು ಹೆಚ್ಚುತ್ತಾ ಹೋಯಿತು. ಇವರಿಬ್ಬರ ನಡುವಿನ ಗೋಡೆಗೆ ನಾನು ಕಾರಣವಾಗುತ್ತಿದ್ದೇನೆ ಅನ್ನುವ ಕೊರಗು ಸೂಕ್ಷ್ಮ ಮನಸಿನ ಮುರಳಿಯ ತಾಯಿ ಸಾವಿತ್ರಿಯನ್ನು ಬಾದಿಸುತ್ತಿತ್ತು. ಲಕ್ಷ್ಮೀ ಪದೇ ಪದೇ ತನ್ನ ತವರು ಮನೆಗೆ ಹೋಗುವುದು. ನಂತರ ಮುರಳಿ ತಾಯಿಯ ಬಲವಂತಕ್ಕೆ ಹೋಗಿ ಕರೆದುಕೊಂಡು ಬರುವುದು ಸಾಮಾನ್ಯವಾಯಿತು. ಲಕ್ಷ್ಮೀಯ ಮನೆಯವರು ಮಗಳ ತಪ್ಪನ್ನು ಗ್ರಹಿಸಿ ಬುದ್ದಿ ಹೇಳುವ ಬದಲು, ಸಾವಿತ್ರಿಯನ್ನು ಗುರಿಯಾಗಿಸಿ ಮಾತುಗಳನ್ನಾಡುವಾಗ ಮುರಳಿಗೆ ಹಿಂಸೆ. ಕಡೆಗೆ ಲಕ್ಷ್ಮೀ ತಾನು ಗಂಡನೊಂದಿಗೆ ಮಾತ್ರ ಇರುವನೆಂದು , ಅತ್ತೆ ಯನ್ನು ಬೇರೆ ಮನೆ ಮಾಡಿ ಇಡಬೇಕೆಂದು ಇಲ್ಲದಿದ್ದರೆ ವಿಚ್ಚೇದನ ಕೊಡುವೆನೆಂದು ಹಟ ಹಿಡಿದಾಗ ಮಾತ್ರ ಮುರಳಿ ಸಹನೆ ಕಳೆದುಕೊಂಡ, ಅದು ಸಾದ್ಯವೇ ಇಲ್ಲವೆಂದು ತಾನು ಬೇಕೆಂದರೆ ವಿಚ್ಚೇದನಕ್ಕೆ ಸಿದ್ದವೆಂದು ನಿಂತುಬಿಟ್ಟ. ತಾಯಿಯ ಮಾತನ್ನು ಕೇಳಲಿಲ್ಲ. ಮುರಳಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ಲಕ್ಷ್ಮೀ ತನ್ನ ಅತ್ತೆಯನ್ನು ನಿಂದಿಸಿ ಅವಳಿಂದಾಗಿಗೆ ತನ್ನ ಸಂಸಾರ ಹಾಳಾಯಿತೆಂದು ಹೇಳಿಹೋದಮೇಲೆ ಅದನ್ನು ಸಾಕಷ್ಟು ಆಳವಾಗಿಯೆ ಮನಸ್ಸಿಗೆ ತೆಗೆದುಕೊಂಡರು ಸಾವಿತ್ರಿ. ಮರುದಿನ ರಾತ್ರಿ ಮಲಗಿದ್ದ ಆಕೆ ನಿದ್ದೆಯಲ್ಲಿಯೆ ಹೃದಯ ನಿಂತು ಮರಣ ಹೊಂದಿದರು. ತನ್ನ ತಾಯಿಯ ಸಾವಿಗೆ ಪತ್ನಿಯೆ ಕಾರಣವೆಂದು ಮುರಳಿಯ ಮನದಲ್ಲಿ ಉಳಿದುಹೋಯಿತು ಹೀಗಾಗಿ ಕೋರ್ಟನಲ್ಲಿದ ವಿಚ್ಚೇದನದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಯುವಂತೆ ಕೋರಿ ಅವಳಿಂದ ವಿಚ್ಚೇದನವನ್ನು ಪಡೆದ. ಏಕೋ ಬೆಂಗಳೂರು ಬೇಸರವೆನಿಸಿ ಚೆನ್ನೈಗೆ ವರ್ಗಾವಣೆ ಪಡೆದು ಇಲ್ಲಿ ಬಂದು ನೆಲೆಸಿದ. ಆಫೀಸಿನಲ್ಲಿ ಯಾರ ಜೊತೆಗು ಬೆರೆಯಾದೆ ಒಂಟಿಯಾಗಿ ಉಳಿದ ಅವನಿಗೆ ಗೋಪಿನಾಥರ ಪರಿಚಯ ಆಕಸ್ಮಿಕ. ಅಂಗಡಿಯಲ್ಲಿ ಕನ್ನಡ ಹುಡುಕುತ್ತಿದ್ದ ಮುರಳಿಗೆ ಗೋಪಿನಾಥರು ಪರಿಚಯವಾದರು ಅವನಿಗೆ ಅಗಾಗ್ಯೆ ಕನ್ನಡ ಪುಸ್ತಕ ಒದಗಿಸುತ್ತಿದ್ದ ಅವರು ವಯಸ್ಸಿನಲ್ಲಿ ಅವನಿಗಿಂತ ತುಂಬಾ ಹಿರಿಯರಾದರು ಸಹ ಆತ್ಮೀಯರಾದರು. ಇವನ ಫ್ಲಾಟ್ ಗೆ ಬಂದು ಹೋಗುವಷ್ಟು ಆತ್ಮಿಯತೆ ಬೆಳೆಯಿತು. ಮುರಳಿಯಾದರೊ ಅವರು ತನ್ನ ಮನೆಯ ಹತ್ತಿರವಿದ್ದರು ಅವರ ಮನೆಗೆ ಎಂದು ಹೋಗಿರಲಿಲ್ಲ. ಹೀಗಿರುವಾಗ ಒಮ್ಮೆ ಮಾತಿನ ಸಂದರ್ಪದಲ್ಲಿ ಮುರಳಿ ತನ್ನ ಜೀವನದ ಘಟನೆಗಳನ್ನು ಅವರಿಗೆ ತಿಳಿಸಬೇಕಾಯಿತು. ನಂತರ ಅವರ ವರಸೆ ಬದಲಾಯಿತು. ಹೇಗೂ ಇವನು ಇನ್ನು ಮುವತ್ತರ ಯುವಕ, ಗೋಪಿನಾಥರ ಮನೆಯಲ್ಲಿ ಅವರ ತಮ್ಮನ ಮಗಳೊಬ್ಬಳಿದ್ದಳು, ಅವಳೆ ವಾಣಿ, ಅವಳದು ಸುಮಾರಾಗಿ ಇದೆ ಕಥೆ ಮದುವೆಯಾದ ಎರಡು ವರ್ಷದಲ್ಲಿ ಗಂಡನ ನಿರ್ಲಕ್ಷವನ್ನು ಅತ್ತೆಯ ಕಾಟವನ್ನು ತಾಳಲಾರದೆ ಅವನಿಂದ ವಿಚ್ಚೇದನವನ್ನು ಪಡೆದಳು, ನಂತರ ಪ್ರವಾಸ ಹೋಗಿದ್ದ ತಂದೆ ತಾಯಿಗಳನ್ನು ಅಪಘಾತದಲ್ಲಿ ಕಳೆದುಕೊಂಡಳು. ಅಣ್ಣನ ಜೊತೆಯಲ್ಲಿ ಹೆಚ್ಚು ದಿನ ಇರಲಾರದೆ ಈಗ ಮದರಾಸಿನ ಚಿಕ್ಕಪ್ಪನ ಆಶ್ರಯದಲ್ಲಿದ್ದಾಳೆ. ಮಕ್ಕಳಿಲ್ಲದ ಗೋಪಿನಾಥ ದಂಪತಿಗಳು ಅವಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಸಹ ಅವಳಿಗೆ ಮತ್ತೊಂದು ಮದುವೆ ಮಾಡಿ ಅವಳ ಜೀವನವನ್ನು ನೇರಗೊಳಿಸಬೇಕೆಂದು ಅವರ ಆಲೋಚನೆ. ಅವಳ ವಿಷಯವನ್ನೆಲ ತಿಳಿಸಿದ ಗೋಪಿನಾಥರು ಮುರಳಿಯನ್ನು ತಮ್ಮ ಮನೆಗೆ ಬಂದು ಅವಳನ್ನೊಮ್ಮೆ ನೋಡಬೇಕೆಂದು ಬಲವಂತ ಮಾಡುತ್ತಿದ್ದಾರೆ. ಅವರ ಸತ್ತ ಬಲವಂತದಿಂದ ತನ್ನ ಮನ ಬದಲಿಸಿದ ಮುರಳಿ ಅವರ ಮನೆಗೆ ಹೋಗಿ ಅವರ ತಮ್ಮನ ಮಗಳು ವಾಣಿಯನ್ನು ನೋಡುವನೆಂದು ಒಪ್ಪಿಕೊಂಡಿದ್ದ, ಹಾಗಾಗಿ ಈ ದಿನ ಅವನಿಗೆ ಅವರ ಮನೆಗೆ ಊಟಕ್ಕೆ ಹೋಗುವದಿತ್ತು.


     ಸಮಯ ಹನ್ನೊಂದು ದಾಟಿತ್ತು ಚೆನ್ನೈನ ಬಿಸಿಲು ಸಹಿಸುವುದು ಕಷ್ಟವೆ, ನಿದಾನವಾಗಿ ಎದ್ದು ಹೊರಟ ಮುರಳಿ. ಕಾರನ್ನು ಓಡಿಸುತ್ತ ಪುನಃ ತನ್ನ ಮನೆಯ ಹತ್ತಿರವೆ ಬಂದು ಅವರ ಮನೆಯತ್ತ ತಿರುಗಿಸಿದ. ಈ ಜಾಗವೆಲ್ಲ ಅವನಿಗೆ ಪರಿಚಿತವೆ ಅವರ ವಿಳಾಸ ಹಿಡಿಯುವುದು ಏನು ಕಷ್ಟವಲ್ಲ. ಸ್ವಲ್ಪ ಒಂಟಿತನದ ಹಿಂಜರಿಕೆಯ ನಡುವೆಯು ಅವನಿಗೆ ಈ ವಾಣಿಯ ಬಗ್ಗೆ ಕುತೂಹಲವು ಇದ್ದಿತ್ತು. ಬೆಂಗಳೂರಿನವಳೆ ಅಂತ ಗೋಪಿನಾಥರು ತಿಳಿಸಿದ ನೆನಪು. ಗೋಪಿನಾಥರು ಮನೆಯ ಹೊರಗಿನ ಕಾಂಪೊಂಡಿನಲ್ಲೆ ನಿಂತಿದ್ದರು. ಇವನನ್ನು ಕಂಡು ದೂರದಿಂದಲ್ಲೆ ಕೈ ಆಡಿಸುತ್ತ ಗಮನ ಸೆಳೆದರು. ಇವನು ಕಾರನ್ನು ನಿಲ್ಲಿಸಿ ಲಾಕ್ ಮಾಡಿ ಅವರ ಮನೆಯೊಳಗೆ ನಡೆದ. ಇವನನ್ನು ಬನ್ನಿ ಅಂತ ಕರೆದೋಯ್ದ ಅವರು ಹಾಲಿನಲ್ಲಿ ಸೋಫದ ಮೇಲೆ ಕೂಡಿಸಿ, ಫ್ಯಾನ್ ಹಾಕಲ ಅಂತೆಲ್ಲ ಉಪಚಾರ ಮಾಡುವಲ್ಲಿ ಒಳಗಿನಿಂದ ಅವರ ಪತ್ನಿಯು ಬಂದು ಕೈಮುಗಿದರು. ಇವನನ್ನು ಕಂಡು ಅವರ ಮುಖದಲ್ಲಿಯು ತೃಪ್ತಿಯ ಭಾವ. ಉಭಯಕುಶಲೋಪರಿಯೆಲ್ಲ ಆದ ನಂತರ ಗೋಪಿನಾಥರು ತಮ್ಮ ಪತ್ನಿಗೆ ವಾಣಿಯನ್ನು ಕರೆತರುವಂತೆ ತಿಳಿಸಿದರು, ಒಳಗೆ ಹೋದ ಆಕೆ ನಗುತ್ತ ಈಚೆ ಬಂದಾಗ ಅವರ ಹಿಂದೆ ತಲೆ ತಗ್ಗಿಸಿ ವಾಣಿಯು ತಣ್ಣನೆಯ ಪಾನಿಯದ ಲೋಟಗಳನ್ನು ಹಿಡಿದು ಬಂದಳು. ಅವಳತ್ತ ನೋಡಿದ ಮುರುಳಿ , ಅರೆ ! ಇದೇನು ಆಶ್ಚರ್ಯ ! ಇವಳು ವಾಣಿಯ ? ಅವನಿಗೆ ನಂಬಲಾಗುತ್ತಿಲ್ಲ ಈಕೆ ತನ್ನ ಪತ್ನಿಯಾಗಿದ್ದು, ತನ್ನಿಂದ ವಿಚ್ಚೇದನ ಪಡೆದು ದೂರವಾದ ಮಹಾಲಕ್ಷ್ಮಿಯಲ್ಲವೆ?. ಅವನಿಗೆ ನೆನಪಿಗೆ ಬಂದಿತು ಮದುವೆಗೆ ಮುಂಚೆಯ ಆಕೆಯ ಹೆಸರು ವಾಣಿಲಕ್ಷ್ಮಿ ಎಂದೆ, ತನ್ನ ತಾಯಿ ಅವಳನ್ನು ಲಕ್ಷ್ಮೀ ಎಂದು ಕರೆಯುತ್ತಿದ್ದರು ತನಗೂ ಸಹ ಅದೇ ಅಭ್ಯಾಸ. ಅವಳು ಸದಾ ಹೇಳುತ್ತಿದ್ದ , ವಿದೇಶಿ ಪ್ರವಾಸಕ್ಕೆ ಹೋಗಿದ್ದ ಕಾರಣಕ್ಕೆ ತಮ್ಮ ಮದುವೆ ಬರದಿದ್ದ ಮದರಾಸಿನ ಚಿಕ್ಕಪ್ಪ ಈ ಗೋಪಿನಾಥರೆ. ಅನೀರೀಕ್ಶಿತ ಸಂಧರ್ಪದಿಂದ ಮುರಳಿಗೆ ಏನು ತೋಚದೆ ಅವಕ್ಕಾಗಿ ಕುಳಿತುಬಿಟ್ಟ. ಒಳಗಿನಿಂದ ಬಂದ ವಾಣಿಲಕ್ಷ್ಮಿಯು ಇವನನ್ನು ನೋಡುತ್ತಲೆ ಮುಂದೆ ಹೇಗೆ ವರ್ತಿಸುವದೆಂದು ತಿಳಿಯದಲೆ ಕಂಗಾಲಾಗಿ ನಿಂತಳು ಅವಳ ಮುಖದಲ್ಲಿ ಅಘಾತ ಸ್ವಷ್ಟವಾಗಿಯೆ ಕಾಣುತ್ತಿತ್ತು.


 =================================================


ಸೂಚನೆ : ಸಂಪದಿಗರೆ ಹಾಗು ಓದುಗರೆ ಈ ಕಥೆಯನ್ನು ಈಗ ಹೇಗೆ ಮುಗಿಸಲಿ ಅಂತ ಗೊಂದಲ ಈಗ ನನ್ನನ್ನು ಕಾಡುತ್ತಿದೆ. ನನ್ನ ಮನಸಿನಲ್ಲಿ ಇವರಿಬ್ಬರು ಪುನಃ ಮದುವೆಯಾದರೆ ಚೆನ್ನ ಅಂತ ಅಭಿಪ್ರಾಯ ನೀವು ಏನು ಹೇಳ್ತೀರಿ?

Rating
No votes yet

Comments