ನೀ ಬರೆದ ಕಾದಂಬರಿ

ನೀ ಬರೆದ ಕಾದಂಬರಿ

ನೀ ಬರೆದ ಕಾದಂಬರಿ ಹಾಡುವಾ ಬಯಕೆಯು
ಕಿವಿಗೊಟ್ಟು ಕೇಳುವೆಯಾ ಹಕ್ಕಿಮರಿಯೇ
ನೂರು ಚುಕ್ಕಿಗಳ ನಡುವೆ ನಗುವ ಚಂದಿರ ಮೊಗವ
ಮನದೊಳಿರಿಸಿ ಹಾಡಿರುವೆ ಕೇಳು ಸಿರಿಯೇ

ದಿಕ್ಕು ದಿಕ್ಕುಗಳ ದಾಟಿ ಹಾರಿಬಂದೆವು ನಾವು
ಸೇರಿದೆವು ತಂಪಾದ ತಂಗುದಾಣ
ಬೆರೆಯದಾ ಅರಿಯದಾ ನೂರು ಮೊಗಗಳ ನಡುವೆ
ಹಬ್ಬದ ಹೋಳಿಗೆ ಬಡಿಸಿದ್ದು ನಿನ್ನ ನಗುವ ಹೂರಣ

ಹಾರಿಬಂದ ದಾರಿಯಲ್ಲ ಮರೆತೇಹೋಯ್ತು
ಮುಂದಿನ ಹಾದಿಯಲ್ಲ ಮಸುಕಾಗಿ ಹೋಯ್ತು
ನಿನ್ನ ನಗುವ ಪ್ರಭೆಯೊಳಗೆ ಕಣ್ಣು ಮಂಜಾಗಿ ಹೋಯ್ತು
ನಿನ್ನ ಹೆಸರ ಜಪವೇ ದಿನಚರಿಯಾಯ್ತು

ನಿಜ ನನ್ನ ಕಣ್ಣು ನಿಜವಾಗಿಯೂ ಮಂಜಾಗಿತ್ತು
ಇದು ಬರಿ ತಂಗುದಾಣ ಅನ್ನೊ ಸತ್ಯ ಮರೆಮಾಚಿತ್ತು
ನಿನ್ನ ನಿಜ ದಿಶೆಯ ತಿಳಿದರೂ ಮನ
ಒಪ್ಪದೇ ಹಟ ಹಿಡಿವ ಮಗುವಾಗಿತ್ತು
ಒಪ್ಪದೇ ಹಟ ಹಿಡಿವ ಮಗುವಾಗಿತ್ತು

ಜೊತೆಗೆ ಹಾರುವ ಕನಸು , ಜೊತೆಗೆ ಹಾಡುವ ಮನಸು
ಜಗವ ಮರೆತು ಕಾಮನ ಬಿಲ್ಲೇರಿ ಕುಣಿದಾ ಕನಸಿನಾ ಸೊಗಸು
ಎಲ್ಲೆಯಿರದಾಗಿತ್ತು ಜಿಗಿವ ಭಾವಗಳಿಗೆ
ನೈಜತೆಯ ಅರಿವು ಮರೆಯಾಗಿತ್ತು ಕಣ್ಣುಗಳಿಗೆ

ನಿನ್ನ ನೀನಾಗಿ, ಮನಬಿಚ್ಚಿ ಹಾರುವಾ ಹಕ್ಕಿಯಾಗಿ
ಗೆಳೆತನದ ಉಯ್ಯಾಲೆಯೊಳು ಮೈಮರೆವ ಮಗುವಾಗಿ
ಕಂಡು ಆನಂದಿಸಿದ, ಅನುಸರಿಸಿದ ಘಳಿಗೆಗಳು ಬಲು ಕಡಿಮೆ
ನನಗೆ ತಿಳಿಯದೇ ಇದನೆಲ್ಲ ಮರೆಮಾಚಿದ್ದು ಅಂತರಾಳದಿ
ಬೇರು ಬಿಟ್ಟಿದ್ದ ಕುರುಡು ಒಲುಮೆ

ಕಾದಂಬರಿಗಳ ಅಂತ್ಯ ಸುಖಕರ
ಕಾದಂಬರಿಗಳ ಅಂತ್ಯ ಧುಖಃಕರ
ಇವೆರಡರ ನಡುವೆ ಅಂತ್ಯ ಕಂಡ ನನ್ನ ಒಲವಿನ ಕಾದಂಬರಿ
ಭವಿಷ್ಯದ ನಮ್ಮಿಬ್ಬರ ಗೆಳೆತನಕ್ಕೆ ಪುಷ್ಟಿಕರ

ಈ ಖುಶಿಯೇ ನನ್ನ ಮುಂದಿನ ಕನಸುಗಳ
ಗರಿಗೆದರಿದೆ ಗೆಳತೀ
ನೀ ಹಾರು, ನಿನ್ನ ಗುರಿಸೇರು
ಗಗನದೆಲ್ಲಡೆ ಹೊಮ್ಮಲೀ ನಿನ್ನ ಕೀರ್ತಿ
ಗಗನದೆಲ್ಲಡೆ ಹೊಮ್ಮಲೀ ನಿನ್ನ ಕೀರ್ತಿ

ಶ್ರೀನಿವಾಸ ಮಹೇಂದ್ರಕರ್

Rating
No votes yet