ನೆನಪಾದಳು ಶಾಕುಂತಲೆ ...
ಉಪಮೆಗಳ ನಿರ್ವಿವಾದ ಪ್ರಭು ಕಾಳಿದಾಸ. ಅದಕ್ಕೆ ’ಶಾಕುಂತಲೆ’, ’ಮೇಘದೂತ’ ಗಳಂತಹ ಮಹಾಕೃತಿಗಳು ಸಾಕ್ಷಿಯಾದರೆ, ರಂಗಶಂಕರದಲ್ಲಿ ಪ್ರದರ್ಶನಗೊಂಡ ’ನೆನಪಾದಳು ಶಾಕುಂತಲೆ’ ಅದರ ಸಾಕ್ಷಾತ್ಕಾರ.
ಸಂಭಾಷಣೆ, ಅನುವಾದ ಹಾಗು ನಿರ್ದೇಶನದ ಗೌರವ ಬನ್ನಂಜೆ ಗೋವಿಂದಾಚಾರ್ಯರಿಗೆ ಸಲ್ಲುತ್ತದೆ. ದುಶ್ಯಂತ, ಮಾಡವ್ಯ, ಶಾಕುಂತಲೆ ಹಾಗು ಆಕೆಯ ಸಖಿಯರು - ಇವರುಗಳ ಹಾವಭಾವ ಮತ್ತು ಕವನಭರಿತ, ಭಾವಸಹಿತ, ಅಪ್ಪಟ ಕನ್ನಡ ಸಂಭಾಷಣೆಗಳೇ ಇದರಲ್ಲಿ ಗಮನಿಸಬೇಕಾದ ಅಂಶಗಳು. ನಿಮ್ಮನ್ನು ಮನಸ್ಸೂರೆ ಮಾಡಿ ಸೆರೆಹಿಡಿದು ಕೂರಿಸುತ್ತವೆ. ಇನ್ನು ಹಿನ್ನೆಲೆಗಾಯನದಲ್ಲಿ ಮೂಡಿಬಂದಿರುವ ಕಾಳಿದಾಸನ ಆ ಸಾಲುಗಳು, ಅದರ ಉಪಮೆಗಳು ನಿಮ್ಮ ಮನಸ್ಸಿನ ಭಾರವನ್ನು ಕರಗಿಸಿಬಿಡುತ್ತವೆ.
ಮನುಷ್ಯನ ಮನಸ್ಸಿನ ಸ್ಥಿತಿಗತಿಗಳನ್ನು ಸೂಕ್ಷ್ಮಸಮೇತವಾಗಿ ಹೋಲಿಸುವುದಕ್ಕೆ ಕೊಂಚವೂ ಅಡೆತಡೆಯಿಲ್ಲದೆ ಎಡೆ ಮಾಡಿಕೊಡುವುದು ನಿಸರ್ಗದಲ್ಲಿ ನಡೆಯುವ ದಿನಚರಿ ಚಟುವಟಿಕೆಗಳು. ಇದೇ ಕಾರಣವೇನೋ ನಿಸರ್ಗವನ್ನು ಉಪಮೇಯವಾಗಿ ಹೆಚ್ಚಾಗಿ ಬಳಸುವುದು. ಉದಾಹರಣೆಗೆ, ನಾಟಕದ ಒಂದು ಸಂಭಾಷಣೆ ಹೀಗಿದೆ: (ಸಂಭಾಷಣೆಯೆಂದು ಕರೆಯಲು ಮನಸ್ಸೊಪ್ಪುತ್ತಿಲ್ಲ... ಕವನದ ಗುಟುಕು ಅನ್ನಿ)
ದುಶ್ಯಂತ: "ಮಿತ್ರ ಮಾಡವ್ಯ, ಶಾಕುಂತಲೆ ನೋಡಲು ಹೇಗಿರುವಳು ಎಂದು ತಿಳಿಯುವ ಹಂಬಲ ನಿನ್ನಲ್ಲಿಲ್ಲವೆ ?"
ಮಾಡವ್ಯ: "ನೆರೆಯಂತಿದ್ದ ಹಂಬಲ ನಿಮ್ಮ ಸ್ಥಿತಿ ನೋಡಿದ ಬಳಿಕ ನೊರೆಯಂತೆ ಕರಗಿತು"
ಹೀಗೆ ನಾಟಕದುದ್ದಕ್ಕೂ ವಿಧವಿಧವಾದ ಸಮಯೋಚಿತವಾದ ಉಪಮೆಗಳು ನಿಮ್ಮ ಮನಸ್ಸನ್ನು ಮುಟ್ಟುತ್ತವೆ.
ಋಷಿಗಳು, ಸಖಿಯರು ಶಾಕುಂತಲೆಯನ್ನು ಬೀಳ್ಕೊಡುವ ದೃಶ್ಯ ಹಾಗು ಶಾಕುಂತಲೆ ತಪೋವನವನ್ನು ಅಗಲಿ ಹೋಗುತ್ತಿರುವ ದೃಶ್ಯ ಬಹಳ ಸೊಗಸಾಗಿ ಮೂಡಿಬಂದಿವೆ.
ಒಟ್ಟಿನಲ್ಲಿ, ಕಾಳಿದಾಸನ ಶಾಕುಂತಲೆಯ ಬಗ್ಗೆ ಗೊತ್ತಿಲ್ಲದವರಿಗೆ ಈ ನಾಟಕ ಒಂದು ಒಳ್ಳೆಯ ಪರಿಚಯ ನೀಡುತ್ತದೆ. ಅಲ್ಲದೆ, ಎಲ್ಲರನ್ನೂ ಸೆಳೆಯುವ ಜೀವಂತ ವಸ್ತು ಆ ಸಾಲುಗಳಲ್ಲಿ, ಉಪಮೆಗಳಲ್ಲಿ (ಅ)ವ್ಯಕ್ತವಾಗಿರುವ ಸರಸ ಸಂತಸ -ವಿರಹ ಬೇಗೆ ಗಳು.
ಇದೇ ಭಾನುವಾರ, ೮ ನೇ ತಾರೀಖು ೭ಕ್ಕೆ ರಂಗಶಂಕರದಲ್ಲಿ ಮತ್ತೆ ಪ್ರದರ್ಶನಗೊಳ್ಳುತ್ತಿದೆ. ತಪ್ಪದೇ ನೋಡಿ.
Comments
Re: ನೆನಪಾದಳು ಶಾಕುಂತಲೆ ...
In reply to Re: ನೆನಪಾದಳು ಶಾಕುಂತಲೆ ... by manju mysooru
Re: ನೆನಪಾದಳು ಶಾಕುಂತಲೆ ...