ನೆನಪಿನಾಳದಿಂದ 'ಚಟಾಕಿ'

ನೆನಪಿನಾಳದಿಂದ 'ಚಟಾಕಿ'

ಚಿತ್ರ

ಸಂಪದಿಗರೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು!

ನಾನು ಹೀಗೆ ಡಿಜಿಟಲ್ ಲೈಬ್ರರಿ ಒಫ್ ಇಂಡಿಯಾದ ಖಜಾನೆಯಲ್ಲಿ ಕನ್ನಡ ಪುಸ್ತಕ ಗಳ ಪಟ್ಟಿ ನೋಡುತ್ತಿದ್ದಾಗ ಶ್ರೀಯುತ ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯಮಾಲೆ ಎಂಬ ಪುಸ್ತಕ ಸಿಕ್ಕಿತು .ಓದಿ ಮುಗಿಸಿದಾಗ ನನಗಾದ ಸಂತೋಷ ಅಷ್ಟಿಸ್ಟಲ್ಲಾ.ಕಾರಣ ನಾನು ಪ್ರೈಮರಿ ಶಾಲೆಯಲ್ಲಿ ಕಲಿತ  ಅನೇಕ ಪದ್ಯ ಬಂಢಾರವೆ ಅದರಲ್ಲಿತ್ತು. ಅದರಲ್ಲಿ 'ಚಟಾಕಿ'ಎಂಬ ಪದ್ಯವನ್ನು ನಿಮಗಾಗಿ ಇಲ್ಲಿ ಹಾಗೆಯೆ ನಕಲುಮಾಡಿ ಬರೆದಿರುವೆ. ಇದನ್ನು ಬರದವರು ಶ್ರೀ  ಎಲ್.ಗುಂಡಪ್ಪನವರು.ಓದಿ ಆನಂದಿಸಿ.

                                        ಚಟಾಕಿ

ಅಪ್ಪನ ಜೇಬಿನ ದುಡ್ಡುಗಳೆಲ್ಲ

  ಚಟಪಟಗುಟ್ಟುತ ಸಿಡಿಯುವುವು.

ಒಪ್ಪದ ನೀತಿಯ ಮಾತುಗಳೆಲ್ಲ

  ತಟ್ಟನೆ ದಾರಿಯ ಹಿಡಿಯುವುವು,

ಬಗೆಬಗೆ ಬಣ್ಣದ ಹೂಗಳ ರೂಪದಿ

  ಹಾರುತ ಬುಸುಬುಸುಗುಟ್ಟುವುವು.

ಉರಿಯನು ಸುರಿಸುತ,ಮೊರೆಯುತ,ತಿರುಗುತ,

  ಸರಸರನೆಲ್ಲಡೆ ಹರಿಯುವುವು,

  ಸರುವರ ಕಿವಿಗಳ ಕೊರೆಯುವುವು,

  ಮೂಗಿನ ಸೆಲೆಗಳನೊಡೆಯುವುವು;

ಸಾರವ ತೊರೆಯುತ ಕಡೆಯಲಿ ಕಪ್ಪಗೆ

  ನೆಲದಲಿ ದೊಪ್ಪನೆ ಕೆಡೆಯುವುವು,

  ಅಜ್ಜನ ಮಡಿಯನು ತೊಡೆಯುವುವು,

  ಅಪ್ಪನ ಜೇಬುಗಳೊಡೆಯುವುವು,

      ಸಿಡಿಯುವುವು.

ಹರಿಯಿತು ಹರ್ಷದ ಹೊನಲೀ ದೇಶದಿ

  ಹಬ್ಬವು ಹತ್ತಿರ ಬರುತಿರಲು,

ಹೊರಲಾರದೆ ಸಾಹಸದಿ ಚಟಾಕಿಯ

  ಹೊರೆಗಳ ಮೆಲ್ಲನೆ ತರುತಿರಲು,

  ಸಿಡಿವ ಚಟಾಕಿಯ ತರುತಿರಲು.

ಹುಡುಗರು ನಲಿಯುತ ಕುಣಿಕುಣಿದಾಡುತ

  ಹಿಡಿದು ಚಟಾಕಿಯ ಸುಡುತಿಹರು.

ಸಿಡಿದು ಚಟಾಕಿಯು ಮೇಲಕೆ ಹಾರಲು

  ನಿಲ್ಲದೆ ಚಪ್ಪಳೆ ತಟ್ಟುವರು.

ಸಡಗರಗೊಳ್ಳುತ ದೂರದಿ ನೋಡುತ

  ಲಲನೆಯರೆಲ್ಲರು ನಗುತಿಹರು,

  ಸಿಡಿಯೆ ಚಟಾಕಿಯು ನಗುತಿಹರು.

ಮದ್ದಿನ ದೇವಿಯ ಮುದ್ದಿನ ಮಕ್ಕಳು

  ಗದ್ದಲಮಾಡುತ ಬರುತಿಹರು.

ಮುದ್ದಿನ ಮಕ್ಕಳ ನಿದ್ದೆಯನೋಡಿಸಿ

  ನಗಿಸುತ ಕುಣಿಸುತ ಬರುತಿಹರು.

ಚಟಪಟಗುಟ್ಟಿ ಚಟಾಕಿಯು ಮುಂಗಡೆ

  ಠೀವಿಯ ತೋರುತ ಬರುತಿರಲು,

ಪಟ್ಟಿಗೆ ಚಟ್ಟನೆ ಸಿಡಿವ ಪಟಾಸಿನ

  ಬಳಗವು ಹಿಂಬಾಲಿಸುತಿರಲು,

ಅರಳನು ಹುರಿಯುವ ಪರಿಯಲಿ ಮೊರೆಯುತ

  ಬಲು ಚಿನಕುರುಳಿಗಳೈತರಲು,

ಸರಸರ ಗರಗರ ಶಬ್ದದಿ ಮೊರೆಯುತ

  ತಿರುಗುವ ಬಾಣಗಳೈತರಲು,

ಬೆಳಕನು ಬೀರಿ ಮತಾಪಿನ ಸಾಲ್ಗಳು

  ಪಂಜನು ಹಿಡಿಯುತ ಬರುತಿರಲು,

ಹೊಳೆಯುವ ಹೂಗಳ ಮಳೆಯನು ಸುರಿಸುತ

  ಹೂವಿನ ಬಾಣಗಳೈತರಲು,

  ಒಡೆಯ ಚಟಾಕಿಯು ಬರುತಿರಲು,

  ಕಡು ಹಿತದಿಂದಲಿ ಬರುತಿರಲು;

ಹರಿಯಿತು ಹರ್ಷದ ಹೊನಲು ಚಟಾಕಿಯು

  ಮೊಳಗದು ಹತ್ತಿರ ಬರುತಿರಲು,

  ದೀಪಾವಳಿಯದು ಬರುತಿರಲು.

ಅಪ್ಪನ ಜೇಬಿನ ದುಡ್ಡುಗಳೆಲ್ಲ

  ಚಟಪಟಗುಟ್ಟುತ ಸಿಡಿಯುವುವು.

  ಹಾರುತ ಬುಸುಬುಸುಗಟ್ಟುವುವು.

  ಉರಿಯನು ಸುರಿಸುತ ಮೊರೆಯುವುವು.

ಒಪ್ಪದ ನೀತಿಯ ಮಾತುಗಳೆಲ್ಲ

  ತಟ್ಟನೆ ದಾರಿಯ ಹಿಡಿಯುವುವು.

         *********

 ಚಿತ್ರ ಕೃಪೆ :http://bit.ly/1wutxm5

Rating
No votes yet

Comments

Submitted by nageshamysore Thu, 10/23/2014 - 20:15

ಕಾಮತ್ ಸಾರ್, ನಿಮಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು..! ಎಲ್. ಗುಂಡಪ್ಪನವರ ಈ ಪದ್ಯವನ್ನು ಈ ಹಿಂದೆ ನೋಡಿದ ನೆನಪಿಲ್ಲ. ಆದರೆ ಈ ಸಂಧರ್ಭಕ್ಕೆ ಸೂಕ್ತವಾದ 'ಚಟಾಕಿ' ಆರಿಸಿಕೊಟ್ಟ ತಮಗೆ ಧನ್ಯವಾದಗಳು ಕೂಡ :-)

Submitted by swara kamath Mon, 10/27/2014 - 16:15

In reply to by nageshamysore

ನನಗೂ ಸಹ ಎಲ್ . ಗುಂಡಪ್ಪ ನವರ ಕೃತಿಗಳ ಪರಿಚಯ ಯಾವುದೂ ಇಲ್ಲ. ಜಿ.ಪಿ. ರಾಜರತ್ನಂ ಅವರು ಸಂಪಾದಿಸಿದ "ಕಂದನ ಕಾವ್ವಮಾಲೆ "ಯಲ್ಲಿ ಎಲ್. ಗುಂಡಪ್ಪ ಅವರು ಬರೆದ ಈ ಚಟಾಕಿ ಪದ್ಯ ಓದಿದೆ. ದೀಪಾವಳಿ ಹಬ್ಬಕ್ಕೆ ಸೂಕ್ತ ಎನಿಸಿ ಸಂಪದಕ್ಕೆ ಹಾಕಿದೆ.
ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು ನಾಗೇಶ ರೆ. ರಮೇಶ ಕಾಮತ್.

Submitted by H A Patil Sun, 10/26/2014 - 19:27

ರಮೇಶ ಕಾಮತರಿಗೆ ವಂದನೆಗಳು
ಸಂಪದದಲ್ಲಿ ತಮ್ಮ ಆಗಮನ ನಮಗೆ ಸಂತಸ ತಂದಿದೆ, ಬಹಳ ಸಮಯದ ನಂತರ ಮರಳಿದ್ದೀರಿ.ಎಲ್.ಗುಂಡಪ್ಪನವರ ಕವನ ಸಮಯೋಚಿತವಾಗಿದೆ. ಹಾಸನ ಜಿಲ್ಲೆಯವರಾದ ಎಲ್‍...ಗುಂಡಪ್ಪನವರು ಸ್ವಂತ ಸಾಹಿತ್ಯ ರಚನೆಯ ಜೊತೆಗೆ ಭಾಷಾಂತರ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದವರು. ತಮಿಳು ಸಂಸ್ಕೃತ ಮತ್ತು ಇಂಗ್ಲೀಷ್‍ ಕೃತಿಗಳನ್ನು ಕನ್ನಡಕ್ಕೆ ತಂದು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಕೆಲವನ್ನು ಹೆಸರಿಸುವುದಾದಲ್ಲಿ ಭಾಸನ ನಾಟಕ, ಪಂಚತಂತ್ರದ ಕಥೆಗಳು, ಲಿಯೋ ಟಾಲ್‍ಸ್ಟಾಯ್‍ನ ಕಥೆಗಳು. ಇವರ ಲೇಖನವೊಂದು ಈ ತಿಂಗಳ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಈ ಸಂಧರ್ಭದಲ್ಲೆ ನಿಮ್ಮ ಕವನ ನೋಡಿ ಅವರ ಕಾವ್ಯ ಶೈಲಿಯ ಪರಿಚಯ ನಮಗಾಯಿತು. ನಿಮ್ಮ ಬರವಣಿಗೆಯ ಕೃಷಿಯನ್ನು ಹೀಗೆಯೆ ಮುಂದು ವರಿಸಿತಡವಾಗಿ ನೀವೂ ಸೇರಿದಂತೆ ಎಲ್ಲ ಸಂಪದಿಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು.ಗುಂಡಪ್ಪ ನವರ ಕವನ ನಮಗೆ ನೀಡಿದ್ದಕ್ಕೆ ಧನ್ಯವಾದಗಳು.

Submitted by swara kamath Mon, 10/27/2014 - 16:34

In reply to by H A Patil

ಪಾಟೀಲರಿಗೆ ನಮಸ್ಕಾರಗಳು.
ನಾನಂತು ಇಲ್ಲೊಂದು ಅಲ್ಲೊಂದು ಪ್ರತಿಕ್ರಿಯೆಗಳನ್ನು ಬರೆಯುತ್ತಾ ಸಂಪದದಲ್ಲಿ ಸಕ್ರಿಯನಾಗಿರುವೆ. ನಿಮ್ಮ ಅನುಪಸ್ಥಿತಿ ಯಾಕೊ ಕಾಡುತ್ತಿತ್ತು.
ನಿಮ್ಮಲ್ಲಿ ಎಲ್ಲೊ ಲೇಖನ ಕವನಗಳನ್ನು ಬರೆಯುವ ಒರತೆ ಕ್ಷೀಣಿಸಿದೆಯೊ ಎನೋ ಎಂಬ ಅನುಮಾನ ಕಾಡುತ್ತಿದೆ.ದಯವಿಟ್ಟು ತಾವು ಬರೆಯಲು ಅನುವಾಗಿ.ತಮ್ಮ ಪ್ರತಿಕ್ರಿಯೆಯಲ್ಲಿ ಎಲ್.ಗುಂಡಪ್ಪ ನವರ ಕೃತಿಗಳ ಕಿರು ಪರಿಚಯ ಮಾಡಿರುವಿರಿ .....ಧನ್ಯವಾದಗಳು.