ನೆನಪಿನಾಳದಿಂದ - ೨೩: ಎಸ್.ಎಸ್.ಎಲ್.ಸಿ. ಫಲಿತಾಂಶದ ದಿನ !

Submitted by manju787 on Mon, 05/12/2014 - 14:55

ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ೧೯೮೦ ರಿಂದ ೧೯೮೪ ರವರೆಗೆ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸ ನಡೆದಿತ್ತು.  ಅಪ್ಪನ ಹೋಟೆಲ್ಲಿನ ಕೆಲಸದ ಒತ್ತಡ ತಾಳಲಾರದೆ, ಅಪ್ಪನ ಹೊಡೆತಗಳಿಂದ ನೊಂದು ಇದೇ ಅವಧಿಯಲ್ಲಿ ಮೂರು ಬಾರಿ ಮನೆ ಬಿಟ್ಟು ಹೋಗಿದ್ದೆ.  ಹಾಗೆ ಓಡಿ ಹೋದವನನ್ನು ಹುಡುಕಿಕೊಂಡು ಬಂದು ಅಪ್ಪ ಮತ್ತೆ ಶಾಲೆಗೆ ಸೇರಿಸುತ್ತಿದ್ದರು.  ಆಗ ಎಲ್ಲ ಉಪಾಧ್ಯಾಯರಿಗೂ ನನ್ನ ತುಂಟಾಟ, ಮುಂಗೋಪಗಳ ಬಗ್ಗೆ ದೂರು ಹೇಳುತ್ತಿದ್ದರು.  ಅಪ್ಪನ ದೂರುಗಳಿಂದ ಉತ್ತೇಜಿತರಾಗಿ ನನ್ನನ್ನು ಹೊಡೆಯದ ಉಪಾಧ್ಯಾಯರೇ ಆ ಶಾಲೆಯಲ್ಲಿರಲಿಲ್ಲ!  ಅಪ್ಪನ ಬೈಗುಳ, ದೂರುಗಳು, ಉಪಾಧ್ಯಾಯರ ಹೊಡೆತಗಳು ನನ್ನನ್ನು ಮಾನಸಿಕವಾಗಿ ಇನ್ನಷ್ಟು ಮೊಂಡನನ್ನಾಗಿ ಮಾಡಿ, ಯಾವುದಕ್ಕಾದರೂ ಸರಿಯೇ. ಒಂದು ಕೈ ನೋಡಿಯೇ ಬಿಡೋಣ ಅನ್ನುವ ಒರಟನನ್ನಾಗಿಸಿದ್ದಂತೂ ನಿಜ!! ಅವರಲ್ಲೆಲ್ಲಾ ತುಮಕೂರಿನಿಂದ ಬರುತ್ತಿದ್ದ ಜಿ.ಕೆ.ಗುಂಡಣ್ಣ ಮತ್ತು ಬಯಾಲಜಿ ಪದ್ಮಣ್ಣನವರು ಮಾತ್ರ ನನ್ನ ಬಗ್ಗೆ ವಿಶೇಷ ಅಕ್ಕರೆ ತೋರಿಸಿ ಚೆನ್ನಾಗಿ ಓದುವಂತೆ ಪ್ರೋತ್ಸಾಹಿಸುತ್ತಿದ್ದರು.

ಶಾಲೆಯಲ್ಲಿ ಎಲ್ಲರಿಗೂ ನಾನೊಬ್ಬ "ಓಡಿ ಹೋಗುವ ಅಂಜುಬುರುಕ"ನಾಗಿ ಬಿಟ್ಟಿದ್ದೆ.  ಕೊನೆಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬಂದೇ ಬಿಟ್ಟಿತು.  ಆಗ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಜಿ.ಮಹಲಿಂಗಯ್ಯನವರು ಆ ಬಾರಿಯ ಫಲಿತಾಂಶವನ್ನು ಉತ್ತಮಗೊಳಿಸಲು ಶಾಲೆಯಲ್ಲಿಯೇ ಪ್ರತಿದಿನ ಸಂಜೆ ೬ ರಿಂದ ೯ ಘಂಟೆಯವರೆಗೆ "ವಿಶೇಷ ತರಗತಿ" ಗಳನ್ನು ಆಯೋಜಿಸಿದ್ದರು.  ಕಷ್ಟಪಟ್ಟು ಓದಿ, ಎಲ್ಲ ವಿಷಯಗಳನ್ನು ಚೆನ್ನಾಗಿ ಮನನ ಮಾಡಿಕೊಂಡು ನಾನು ಅಂತಿಮ ಕದನಕ್ಕೆ ಅಣಿಯಾಗಿದ್ದೆ.  ನನ್ನ ಆತ್ಮವಿಶ್ವಾಸದ ಪ್ರತೀಕವೆಂಬಂತೆ ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿಯೂ ನನಗೆ ಬರಬಹುದಾಗಿದ್ದ ಅಂದಾಜು ಅಂಕಗಳನ್ನು, ಪ್ರತಿಯೊಂದು ಪ್ರಶ್ನೆಯ ಮುಂದೆಯೂ, ನಮೂದಿಸಿ, ಕೊನೆಗೆ ಅವನ್ನೆಲ್ಲ ಒಟ್ಟುಗೂಡಿಸಿ, ೬೦೦ರಲ್ಲಿ ಸುಮಾರು ೩೮೭  ಅಂಕಗಳು, ಅಂದರೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತೇನೆಂದು  ನಾನು ನಂಬಿದ್ದೆ, ನನ್ನ ಬೆನ್ನನ್ನು ನಾನೇ ತಟ್ಟಿಕೊಂಡು ಖ್ಹುಷಿಪಟ್ಟಿದ್ದೆ!  ಸಿಕ್ಕ ಸಿಕ್ಕವರಿಗೆಲ್ಲಾ ನಾನು ಪ್ರಥಮದರ್ಜೆಯಲ್ಲಿಯೇ ಪಾಸಾಗುತ್ತೇನೆಂದು ದೌಲು ಕೊಚ್ಚಿಕೊಳ್ಳುತ್ತಿದ್ದೆ.

ಆದರೆ ವಿಧಿ ಬಿಡಬೇಕಲ್ಲ!  ಆ ಖುಷಿ ಜಾಸ್ತಿ ದಿನ ಉಳಿಯಲೇ ಇಲ್ಲ!  ಅಪ್ಪ ನಡೆಸುತ್ತಿದ್ದ ಹೋಟೆಲ್ಲಿನಲ್ಲಿ ಕೆಲವು ಉಪಾಧ್ಯಾಯರು ಸಾಲದ ಲೆಕ್ಕ ಬರೆಸಿ ಊಟ, ತಿಂಡಿ ಮಾಡುತ್ತಿದ್ದರು.  ಸಂಬಳ ಬಂದಾಗ ಬಾಕಿ ಲೆಕ್ಕ ಚುಕ್ತಾ ಮಾಡುತ್ತಿದ್ದರು.  ಅವರು ಉಪಾಧ್ಯಾಯರು ಎನ್ನುವುದಕ್ಕೋ ಅಥವಾ ತಿಂಗಳಿಗೊಮ್ಮೆ ಒಟ್ಟಾಗಿ ಜಾಸ್ತಿ ಹಣ ಕೊಡುತ್ತಾರೆಂಬ ಕಾರಣಕ್ಕೋ, ಒಟ್ಟಾರೆ ಅಪ್ಪನಿಂದ ಅವರಿಗೆ ವಿಶೇಷ ಮರ್ಯಾದೆ ಸಿಗುತ್ತಿತ್ತು.  ಅವರಲ್ಲಿ ಒಬ್ಬ ಮಹಾನ್ ಉಪಾಧ್ಯಾಯರು "ನಿಮ್ಮ ಮಗನ ನಂಬರ್ ಕೊಡಿ, ನಾನು ಎಸ್.ಎಸ್.ಎಲ್.ಸಿ. ಉತ್ತರ ಪರೀಕ್ಷೆಗಳ ಮೌಲ್ಯಮಾಪನಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದೇನೆ, ಸಾಧ್ಯವಾದರೆ ಹೆಚ್ಚು ಅಂಕ ಬರುವಂತೆ ಮಾಡುತ್ತೇನೆ" ಎಂದು ಅಪ್ಪನ ಕಿವಿ ಊದಿದ್ದರು.  ಅದನ್ನು ನಂಬಿದ ಅಪ್ಪ ನನಗೆ ನಂಬರ್ ಕೊಡುವಂತೆ ಕೇಳಿದಾಗ ನಾನು ಉರಿದು ಬಿದ್ದಿದ್ದೆ.  "ಅವರೇನು ನನಗೆ ಹೆಚ್ಚು ಅಂಕ ಬರುವಂತೆ ಮಾಡುವುದು?  ಏನೂ ಬೇಕಾಗಿಲ್ಲ, ನಾನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೇನೆ.  ಪ್ರಥಮದರ್ಜೆಯಲ್ಲಿಯೇ ಪಾಸಾಗುತ್ತೇನೆ, ನಾನು ನಂಬರ್ ಕೊಡುವುದಿಲ್ಲ" ಎಂದು ಅಪ್ಪನ ಬಳಿ ವಾದಿಸಿದ್ದೆ.  ಇದರಿಂದ ಕೆರಳಿ ಕೆಂಡಾಮಂಡಲವಾದ ಅಪ್ಪ, ಹೋಟೆಲ್ಲಿನಲ್ಲಿದ್ದ ಗಿರಾಕಿಗಳ ಮುಂದೆಯೇ ನನ್ನನ್ನು ಹಿಡಿದು ಬಾಯಿಗೆ ಬಂದಂತೆ ಬೈದು ಹಿಗ್ಗಾಮುಗ್ಗಾ ಧಳಿಸಿದ್ದರು.ಕೊನೆಗೂ ಅವರಿಗೆ ನಂಬರ್ ಕೊಡದೆ ಹಾಲ್ ಟಿಕೆಟ್ಟನ್ನು ಅವರ ಮುಂದೆಯೇ ಹರಿದು ಬಿಸಾಕಿದ್ದೆ!  ಅಷ್ಟರ ಮಟ್ಟಿನ ಭಂಡಧೈರ್ಯ ನನ್ನಲ್ಲಿ ಬರಲು ಅದೇ ಅಪ್ಪನೇ ಕಾರಣರಾಗಿದ್ದರು.

ಕಣ್ಣೀರಿಡುತ್ತಾ ಮನೆಗೆ ಬಂದು ಅಮ್ಮನಿಗೆ ಆಗಿದ್ದನ್ನು ಹೇಳಿದರೆ "ನೀವು ಅಪ್ಪ ಮಕ್ಕಳದ್ದು ಯಾವಾಗಲೂ ಇದ್ದದ್ದೇ, ನೀನು ಮೊಂಡ, ಅವರು ಮುಂಗೋಪಿ, ನಿಮ್ಮಿಬ್ಬರ ಮಧ್ಯೆ ನಾನೇನು ಮಾಡಲಿ ಹೇಳು?  ನಂಬರ್ ಕೇಳಿದಾಗ ನೀನು ಸುಮ್ಮನೆ ಕೊಟ್ಟು ಬಿಡಬೇಕಿತ್ತು" ಅಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.  ನನ್ನ ನೋವಿಗೆ ಸಮಾಧಾನ ಸಿಗದೇ ಬೇಸರವಾಗಿ,ಬ್ಯಾಗಿನಲ್ಲಿ ಒಂದೆರಡು ಬಟ್ಟೆಗಳನ್ನು ತುರುಕಿಕೊಂಡು ಬೆನ್ನ ಮೇಲೆ ಹಾಕಿಕೊಂಡು, ನಾನು ಪೇಪರ್ ಹಾಕಿ ಬರುತ್ತೇನೆ ಎಂದು ಅಮ್ಮನಿಗೆ ಹೇಳಿ ಸೈಕಲ್ ಹತ್ತಿದೆ.  ಆಗ ನಾನು ತಿಪಟೂರಿನಲ್ಲಿ ನನ್ನ ಖರ್ಚಿನ ಪುಡಿಗಾಸಿಗಾಗಿ ಉದಯವಾಣಿ ಪೇಪರ್ ವಿತರಣೆ ಮಾಡುತ್ತಿದ್ದೆ. ಅಪ್ಪನನ್ನು ಇನ್ನು ಮುಂದೆ ಯಾವುದಕ್ಕೂ ಕಾಸು ಕೇಳಬಾರದೆಂಬ ಛಲವೇ ನನ್ನನ್ನು ಪೇಪರ್ ಹಂಚಲು ಪ್ರೇರೇಪಿಸಿತ್ತು.  ಹಾಗೆ ಸೈಕಲ್ ಹತ್ತಿ ಬಂದವನು ನಮ್ಮ ಶಾಲೆಯ ಹತ್ತಿರ ಬಂದು ಸ್ವಲ್ಪ ಹೊತ್ತು ನಾನು ಓದಿದ ಆ ಶಾಲೆಯನ್ನೇ ನೋಡುತ್ತಾ ಕುಳಿತಿದ್ದವನು ಅದೇನೋ ನಿರ್ಧಾರಕ್ಕೆ ಬಂದು ಹಾಲ್ಕುರಿಕೆ ರಸ್ತೆಯಲ್ಲಿ ಸೈಕಲ್ ತುಳಿಯುತ್ತಾ ಹೊಸದುರ್ಗದ ಕಡೆಗೆ ಹೊರಟೆ.  ನನ್ನ ಚಿಕ್ಕ ಅಕ್ಕ ಆಗ ದಾವಣಗೆರೆಯ ಬಳಿಯ ಹೊಸದುರ್ಗ ರೋಡಿನಲ್ಲಿದ್ದಳು.  ಭಾವ ಎಂಥದೋ ವ್ಯಾಪಾರ ಮಾಡುತ್ತಿದ್ದ, ಅವರಿಗೊಬ್ಬ ಪುಟ್ಟ ಮಗ.  ಫಲಿತಾಂಶ ಬರುವ ತನಕ ಅಲ್ಲಿದ್ದು, ನಂತರ ಅಂಕಪಟ್ಟಿ ತೆಗೆದುಕೊಂಡು ಎಲ್ಲಾದರೂ ಹೋಗಿ ಕೆಲಸ ಮಾಡಿಕೊಂಡು ಬದುಕೋಣವೆಂದು ನನ್ನ ಮನಸ್ಸು ಲೆಕ್ಕಾಚಾರ ಹಾಕಿತ್ತು. 

ಹಾಗೆ ಸೈಕಲ್ ತುಳಿದುಕೊಂಡು ಮುಸ್ಸಂಜೆಯ ಹೊತ್ತಿಗೆ ಹೊಸದುರ್ಗ ರೋಡಿಗೆ ಬಂದವನನ್ನು ನೋಡಿ ಅಕ್ಕ-ಭಾವ ಬೆಚ್ಚಿ ಬಿದ್ದಿದ್ದರು. ಇದೇನೋ ಹೀಗೆ ಎಂದವಳಿಗೆ ನಡೆದಿದ್ದೆಲ್ಲವನ್ನು ವಿವರಿಸಿ, ಯಾವುದೇ ಕಾರಣಕ್ಕೂ ನಾನು ಇಲ್ಲಿರುವುದನ್ನು ಅಪ್ಪನಿಗೆ ಹೇಳದಂತೆ ಅವಳಿಂದ ಮಾತು ತೆಗೆದುಕೊಂಡೆ.  ಆಕಸ್ಮಾತ್ ಹೇಳಿದರೆ ಇಲ್ಲಿಂದಲೂ ಓಡಿ ಹೋಗುವುದಾಗಿ ಬೆದರಿಸಿದ್ದೆ.  ನನ್ನ ಬುದ್ಧಿಯ ಅರಿವಿದ್ದ ಅಕ್ಕ ಆಯಿತು ಎಂದು ಮರು ಮಾತಿಲ್ಲದೆ ಒಪ್ಪಿಕೊಂಡಿದ್ದಳು.  ಆದರೆ ಅಲ್ಲಿ ಅಪ್ಪ ಹಿಂದೆ ಮೂರು ಬಾರಿ ನಾನು ಓಡಿ ಹೋದಾಗಲೂ ನನ್ನನ್ನು ಹುಡುಕಲು ಒದ್ದಾಡಿದ್ದನ್ನು ಕಂಡಿದ್ದ ಅಕ್ಕ ನನಗೆ ಗೊತ್ತಿಲ್ಲದಂತೆ ಸೇಟು ಅಂಗಡಿಗೆ ಹೋಗಿ ಅಲ್ಲಿಂದ ತಿಪಟೂರಿನ ಜನರಲ್ ಆಸ್ಪತ್ರೆಗೆ ಫೋನ್ ಮಾಡಿ ಅಲ್ಲಿದ್ದ ಜವಾನನೊಬ್ಬನಿಗೆ ವಿಷಯ ತಿಳಿಸಿ, ದಾದಿಯಾಗಿದ್ದ ಅಮ್ಮನಿಗೆ ತಿಳಿಸುವಂತೆ ವಿನಂತಿಸಿದ್ದಳು.  ಅವನು ತಕ್ಷಣ ನಮ್ಮ ಮನಗೆ ಹೋಗಿ ನಾನು ಅಕ್ಕನ ಮನೆಯಲ್ಲಿರುವ ವಿಷಯ ತಿಳಿಸಿದ್ದ.  ಮರುದಿನವೇ ಬಿಜಯವಾಯಿತು ಅಪ್ಪನ ಸವಾರಿ ಹೊಸದುರ್ಗ ರೋಡಿಗೆ!  ಬರುತ್ತಿದ್ದಂತೆಯೇ ಬೈಗುಳಗಳ ಮಳೆಯನ್ನೇ ಸುರಿಸುತ್ತಾ ಬಂದಿದ್ದರು!  ಸಾಕಾಗುವಷ್ಟು ಬೈದ ನಂತರ ನನಗೆ ಅವರೇ ಕೊಡಿಸಿದ್ದ ಸೈಕಲ್ಲನ್ನು ವಾಪಸ್ ತೆಗೆದುಕೊಂಡು ಹೋದರು!  ಹೋಗುವಾಗ ಅಕ್ಕನಿಗೆ " ಈ ಬೋಳಿಮಗ ದುಡಿದು ತಂದರೆ ಊಟ ಹಾಕು, ಇಲ್ಲದೆ ಇದ್ರೆ ಉಗಿದು ಆಚೆಗೋಡಿಸು" ಎಂದೂ ಹೇಳಿ ಹೋಗಿದ್ದರು!!

ಭಾವನ ಜೊತೆಯಲ್ಲಿಯೇ ಅವರ ವ್ಯಾಪಾರದಲ್ಲಿ ಸಹಾಯ ಮಾಡುತ್ತಾ ಫಲಿತಾಂಶ ಬರುವವರೆಗೂ ಕಾಲ ಕಳೆದೆ.  ನನಗಂತೂ ಒಂದೊಂದು ದಿನವೂ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು!  ಹಗಲುರಾತ್ರಿಯೆಲ್ಲಾ  ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಪಾಸಾದಂತೆ, ಚೆನ್ನಾಗಿ ಓದಿ ಯಾವುದೋ ಉನ್ನತ ಕೆಲಸಕ್ಕೆ ಸೇರಿದಂತೆ ಕನಸು ಕಾಣುತ್ತಿದ್ದೆ!  ಅದೇ ಕನಸಿನ ಗುಂಗಿನಲ್ಲಿ ಭಾವನ ಸೈಕಲ್ಲಿನಲ್ಲಿ ಅಂಗಡಿಯ ಕಡೆಗೆ ಹೋಗುತ್ತಿದ್ದವನು ಒಮ್ಮೆ ವೇಗವಾಗಿ ಬಂದ ವಿಜಯ ಬಸ್ಸಿನ ಶಬ್ಧಕ್ಕೆ ಬೆದರಿ ಕೆಳಗೆ ಬಿದ್ದು ಮೈ ಕೈಗೆಲ್ಲಾ ಗಾಯವನ್ನು ಮಾಡಿಕೊಂಡಿದ್ದೆ.  ರಸ್ತೆಯ ಎಡಬದಿಗೆ ಬೀಳುವ ಬದಲು ಬಲಬದಿಗೇನಾದರೂ ಬಿದ್ದಿದ್ದರೆ ಬಸ್ಸಿನ ಚಕ್ರದಡಿಗೆ ಸಿಕ್ಕಿ ಅಂದೇ ನನ್ನ ಕೊನೆಯಾಗುತ್ತಿತ್ತು!

ಕೊನೆಗೂ ಆ ದಿನ ಬಂದೇ ಬಿಟ್ಟಿತು!  ೧೯೮೪ರ ಮೇ ೧೫, ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಿ, ಬೆಳಗ್ಗಿನ ಬಸ್ಸಿಗೆ ತಿಪಟೂರಿಗೆ ಹೊರಟು ಬಿಟ್ಟೆ.  ಹಾಗೆ ಹೊರಟವನನ್ನು ಕಣ್ತುಂಬಾ ಕಂಬನಿ ತುಂಬಿಕೊಂಡು ಕಳುಹಿಸಿ ಕೊಟ್ಟಿದ್ದಳು ನನ್ನ ಚಿಕ್ಕಕ್ಕ.  "ಫಲಿತಾಂಶ ಏನೇ ಆಗಿರಲಿ, ಇಲ್ಲಿಗೇ ವಾಪಾಸ್ ಬಾರೋ, ಎಲ್ಲಿಗೂ ಹೋಗಬೇಡ, ನೀನು ಏನೇ ಓದುವುದಿದ್ದರೂ ದಾವಣಗೆರೆಯಲ್ಲಿ ಕಾಲೇಜಿಗೆ ಸೇರಿಸುತ್ತೇವೆ, ಯಾವುದಕ್ಕೂ ಯೋಚನೆ ಮಾಡಬೇಡ" ಅಂದಿದ್ದಳು.  ನನ್ನ ಮನಸ್ಸಿನ ವೇಗಕ್ಕೆ ತಕ್ಕಂತೆ ಓಡಲಾಗದ  ಬಸ್ಸಿಗೆ ಹಿಡಿ ಶಾಪ ಹಾಕುತ್ತಾ ಬೆಂಕಿಯ ಮೇಲೆ ಕುಳಿತಂತೆ ಒದ್ದಾಡುತ್ತಿದ್ದೆ.  ಕೊನೆಗೂ ಬಸುರಿಯ ಹೊಟ್ಟೆಯಂತೆ ಜನರಿಂದ ಉಬ್ಬಿಕೊಂಡಿದ್ದ ಆ ದರಿದ್ರ ಬಸ್ಸು ತಿಪಟೂರಿಗೆ ಬಂದಾಗ ಮಧ್ಯಾಹ್ನ ಎರಡು ಘಂಟೆಯಾಗಿತ್ತು.

ಬಸ್ ಇಳಿದವನು ಸೀದಾ ಶಾಲೆಯ ಕಡೆಗೆ ಓಡಿದೆ.  ಶಾಲೆ ಹತ್ತಿರ ಬರುತ್ತಿದ್ದಂತೆ ನನ್ನಲ್ಲಿದ್ದ ಭರವಸೆಯೆಲ್ಲಾ ಬತ್ತಿ ಹೋದಂತಾಗಿ ಅದೇನೋ ಆತಂಕ ಶುರುವಾಗಿತ್ತು .  ಸಣ್ಣಗೆ ಬೆವರುತ್ತಾ, ಕಂಪಿಸುವ ಹೃದಯದೊಡನೆ, ನಡುಗುತ್ತಿದ್ದ ಕಾಲುಗಳನ್ನು ಬಲವಂತವಾಗಿ ಎಳೆದುಕೊಂಡು, ನನಗೆ ನಾನೇ ಧೈರ್ಯ ಹೇಳಿಕೊಳ್ಳುತ್ತಾ ನಿಧಾನವಾಗಿ ಫಲಿತಾಂಶದ ಪಟ್ಟಿ ಹಾಕಿದ್ದ ಫಲಕದೆಡೆಗೆ ನಡೆದೆ.  ಅದಾಗಲೇ ಬೆಳಿಗ್ಗೆಯೇ ಎಲ್ಲರೂ ಬಂದು ಫಲಿತಾಂಶ ನೋಡಿಕೊಂಡು ಹೋಗಿದ್ದುದರಿಂದ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಅಲ್ಲಿದ್ದರು. ಫಲಿತಾಂಶದ ಪಟ್ಟಿಯಲ್ಲಿ ಕೆಳಗಿನಿಂದ ನನ್ನ ನಂಬರ್ ಹುಡುಕಲಾರಂಭಿಸಿದೆ.  ಜಸ್ಟ್ ಪಾಸ್ ಆದವರ ಪಟ್ಟಿಯಲ್ಲಿ ನನ್ನ ನಂಬರ್ ಇರಲಿಲ್ಲ, ದ್ವಿತೀಯ ದರ್ಜೆಯಲ್ಲಿಯೂ ಇಲ್ಲ, ಮೇಲಕ್ಕೆ ಬಂದರೆ ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಒಟ್ಟು ೧೫ ಜನರಲ್ಲಿ ೭ನೆಯದು ನನ್ನ ನಂಬರ್ ಆಗಿತ್ತು!  ನಂಬಲಾಗದೆ ಮತ್ತೊಮ್ಮೆ, ಮಗದೊಮ್ಮೆ ಆ ನಂಬರ್ ಓದಿ ಧೃಡಪಡಿಸಿಕೊಂಡೆ !  ಹೌದು, ಅದು ನನ್ನದೇ ಆಗಿತ್ತು, ನನ್ನ ಭರವಸೆ, ಆತ್ಮವಿಶ್ವಾಸ, ನಂಬಿಕೆ ಎಲ್ಲವೂ ನಿಜವಾಗಿತ್ತು!  ನನ್ನ ಜೀವನದ ಬಹು ಮುಖ್ಯವಾದ ಮೊದಲನೆಯ ಪರೀಕ್ಷೆಯನ್ನು ನಾನು ಪ್ರಥಮದರ್ಜೆಯಲ್ಲಿಯೇ ಪಾಸು ಮಾಡಿದ್ದೆ.

ಆಗ ಅಲ್ಲಿಗೆ ಬಂದ ಗುಂಡಣ್ಣ ಮಾಸ್ತರು "ಲೇ ಮಂಜಾ, ಯಾಕೋ ಬೆಳಿಗ್ಗೆಯಿಂದ ಬಂದಿಲ್ಲ, ದಿನಾ ಶಾಲೆಗೆ ಲೇಟಾಗಿ ಬಂದಂಗೆ, ಫಲಿತಾಂಶ ನೋಡೋದಿಕ್ಕೂ ಲೇಟಾಗಿ ಬಂದಿದ್ದೀಯಲ್ಲೋ, ನೋಡಿದೆಯಾ, ನೀನು ಯಾವಾಗಲೂ ಹೇಳ್ತಾ ಇದ್ದಂಗೆ ಪ್ರಥಮ ಶ್ರೇಣಿಯಲ್ಲೇ ಪಾಸಾಗಿದೀಯಾ, ವೆರಿ ಗುಡ್, ಮುಂದೆ ಏನು ಮಾಡ್ಬೇಕೂಂತಿದೀಯಾ" ಅಂದವರಿಗೆ ಏನು ಹೇಳಬೇಕೋ ತಿಳಿಯದಂತಾಗಿ ಸುಮ್ಮನೆ ನಿಂತಿದ್ದೆ.  ನನ್ನ ಹೆಗಲ ಮೇಲೆ ಕೈ ಹಾಕಿ ಅತ್ಮೀಯವಾಗಿ ಅಪ್ಪಿಕೊಂಡ ಅವರು ನನ್ನನ್ನು ಮುಖ್ಯೋಪಾಧ್ಯಾಯರ ಕೊಠಡಿಗೆ ಕರೆದುಕೊಂಡು ಹೋದರು.  ಶ್ರೀ ಮಹಲಿಂಗಯ್ಯನವರು, "ಏನೋ ಲಂಬೂ, ನೀನು ಅಷ್ಟೊಂದು ಸಿನಿಮಾಗಳನ್ನು ನೋಡಿ, ಶಾಲೆಗೆ ಚಕ್ಕರ್ ಹಾಕಿ ತರಲೆ ಕೆಲಸ ಮಾಡಿದ್ರೂ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿರೋದು ನನಗೆ ತುಂಬಾ ಖುಷಿಯಾಗಿದೆ ಕಣೋ, ಮುಂದೆ ಚೆನ್ನಾಗಿ ಓದಿ ಬುದ್ಧಿವಂತನಾಗು" ಎಂದು ಹಾರೈಸಿ ನನ್ನ ಅಂಕಪಟ್ಟಿಯನ್ನು ಕೈಗಿತ್ತರು.  ೬೦೦ ಅಂಕಗಳಿಗೆ ಒಟ್ಟು ೩೭೫ ಅಂಕಗಳನ್ನು ಪಡೆದಿದ್ದೆ, ನಾನು ಪ್ರಶ್ನೆಪತ್ರಿಕೆಗಳಲ್ಲಿ ಬರೆದಿಟ್ಟು ಎಲ್ಲರ ಮುಂದು ದೌಲು ಹೊಡೆಯುತ್ತಿದ್ದುದು ೩೮೭ ಅಂಕಗಳು ಸಿಗುತ್ತವೆಂದು, ಅದಕ್ಕಿಂತ ಕೇವಲ ೧೨ ಅಂಕಗಳು ಮಾತ್ರ ಕಡಿಮೆ ಬಂದಿದ್ದವು!  ಸಂತೋಷದಿಂದ ನನ್ನ ಗಂಟಲುಬ್ಬಿ ಬಂದು ಕಣ್ಣಾಲಿಗಳು ತುಂಬಿ ಹೋಗಿದ್ದವು.  ಎಲ್ಲ ಉಪಾಧ್ಯಾಯರಿಗೂ ವಂದಿಸಿ ಅಲ್ಲಿಂದ ಹೊರಬಂದವನು ಸೀದಾ ಅಪ್ಪನ ಹೋಟೆಲ್ ಬಳಿಗೆ ಬಂದೆ.  ವ್ಯಾಪಾರದಲ್ಲಿ ನಿರತರಾಗಿದ್ದ ಅಪ್ಪ ನನ್ನನ್ನು ನೋಡಿಯೂ ನೋಡದಂತೆ ನಟಿಸುತ್ತಿದ್ದರು.  ಮೂಲ ಅಂಕಪಟ್ಟಿಯನ್ನು ಅಪ್ಪನ ಕೈಗೆ ಕೊಟ್ಟರೆ ಹರಿದು ಬಿಸಾಡಬಹುದೆನ್ನುವ ಭಯದಲ್ಲಿ ಒಂದು ಜೆರಾಕ್ಸ್ ಮಾಡಿಸಿಕೊಂಡು ಬಂದಿದ್ದ ಪ್ರತಿಯನ್ನು ಸೀದಾ ಅಪ್ಪನ ಕೈಗಿತ್ತೆ!  

"ಅಂದು ನಾನು ಹೇಳಿದರೆ ನೀನು ನಂಬಲಿಲ್ಲ, ನೋಡು ಇಂದು ನಾನು ಪ್ರಥಮದರ್ಜೆಯಲ್ಲಿಯೇ ಪಾಸ್ ಮಾಡಿದ್ದೇನೆ" ಎಂದವನನ್ನು ಆಪಾದಮಸ್ತಕವಾಗಿ ಒಮ್ಮೆ ನೋಡಿದ ಅಪ್ಪ, ಮತ್ತೊಮ್ಮೆ ನನ್ನ ಅಂಕಪಟ್ಟಿಯನ್ನು ನೋಡಿ ಒಮ್ಮೆಲೇ ಭಾವುಕರಾಗಿ ಬಿಟ್ಟಿದ್ದರು!  ನಿನ್ನ ಮಾತು ಕೇಳಲಿಲ್ಲ ಕಣೋ, ತಪ್ಪು ಮಾಡಿಬಿಟ್ಟೆ! ಎಂದು ನನ್ನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದರು.  ಅಲ್ಲೇ ಇದ್ದ ಸಕ್ಕರೆ ಡಬ್ಬದಿಂದ ಒಂದು ಹಿಡಿ ಸಕ್ಕರೆ ತೆಗೆದು ಬಾಯಿಗೆ ಹಾಕಿ ಸಂಭ್ರಮಿಸಿದ್ದರು.  ಹೋಗು, ಮನೆಗೆ ಹೋಗಿ ನಿಮ್ಮ ಅಮ್ಮನಿಗೆ ತೋರಿಸು, ಅವಳಿಗೂ ಖುಷಿಯಾಗುತ್ತದೆ ಅಂದಿದ್ದರು.  ಅಲ್ಲಿಂದ ಸೀದಾ ಮನೆಗೆ ಹೋದವನು ಅಮ್ಮನಿಗೆ ಅಂಕಪಟ್ಟಿ ತೋರಿಸಿ ಕಾಲಿಗೆ ಬಿದ್ದಿದ್ದೆ!  ನಾನು ಪ್ರಥಮದರ್ಜೆಯಲ್ಲಿ ಪಾಸಾದ ಖುಷಿಗೋ, ಅಥವಾ ನಾನು ಅನುಭವಿಸಿದ ತೊಂದರೆಗಳನ್ನು ನೆನೆದೋ, ಆ ನನ್ನ ತಾಯಿಯ ಕಣ್ತುಂಬಾ ನೀರು ಧಾರೆಯಾಗಿ ಹರಿದು ಹೋಗಿತ್ತು!  "ದೇವರು ನಿನಗೆ ಒಳ್ಳೆಯದು ಮಾಡಲಪ್ಪಾ, ಚೆನ್ನಾಗಿ ಓದಿ ಮುಂದೆ ಒಳ್ಳೆಯವನಾಗಿ ಬದುಕು" ಎಂದು ಗದ್ಗದಿತಳಾಗಿ ತಲೆಯ ಮೇಲೆ ಕೈಯಿಟ್ಟು ಮನಃಪೂರ್ವಕ ಹರಸಿದ್ದಳಂದು ಆ ನನ್ನಮ್ಮ!  ಅಂದು ನಾನು ಅಂದುಕೊಂಡಿದ್ದನ್ನು ಸಾಧಿಸುವ ಶಕ್ತಿ ಕೊಟ್ಟ ಆ ದೇವರು, ಮುಂದೆ  ನನ್ನನ್ನು ಅಪ್ಪ ಅಮ್ಮನೊಟ್ಟಿಗೆ ಇದ್ದು ಓದುವ ಭಾಗ್ಯವನ್ನು ಮಾತ್ರ ಕರುಣಿಸಿರಲಿಲ್ಲ!  ಆ ಕಥೆ ಮುಂದಿನ ಭಾಗದಲ್ಲಿ ----

Rating
No votes yet

Comments

partha1059

Mon, 05/12/2014 - 20:13

ನಿಮ್ಮ‌ ಬರಹದಲ್ಲಿನ‌ ಸಹಜತೆ ಯಾವಾಗಲು ಬರಹವನ್ನು ಓದಿಸಿಕೊಂಡು ಹೋಗುವಂತೆ ಮಾಡುತ್ತದೆ !
ಹಾಗೆ ಜೀವನದ‌ ಅನುಭವಗಳು ಸಹ‌ ನಮ್ಮನ್ನು ಸೆಳೆಯುತ್ತವೆ

ಧನ್ಯವಾದಗಳು ಪಾರ್ಥರೆ, ಮೊನ್ನೆ ಎಸ್.ಎಸ್.ಎಲ್.ಸಿ. ಫಲಿತಾಂಶಗಳು ಬಂದಾಗ‌ ಹಾಗೇ ಮನಸ್ಸು ಹಿಂದಕ್ಕೋಡಿದಾಗ‌ ಮೂಡಿ ಬಂದ‌ ಬಾಹವಿದು.

kavinagaraj

Wed, 05/14/2014 - 19:44

ಮಂಜು, ನಿಮ್ಮ ಗಡಸುತನದ ಕಾರಣವನ್ನು ನೀವೇ ವಿಶ್ಲೇಷಿಸಿಕೊಂಡಿರುವುದು ಅಭಿನಂದನೀಯ. ನೀವು ಈಗ ದೊಡ್ಡವರಾಗಿದ್ದೀರಿ, ಪರವಾಗಿಲ್ಲ. ಆದರೆ ಎಳಸುತನದಲ್ಲಿ ದುಡುಕಿ ಜೀವನಪಥವನ್ನೇ ಬದಲಿಸಿಕೊಂಡ ಹಲವರನ್ನು ಕಂಡಿದ್ದೇವೆ. ಸುಖಾಂತ್ಯವಾದದ್ದು, ಹೇಳಿದಂತೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದದ್ದು ಮೆಚ್ಚುವಂತಹದು.

ಧನ್ಯವಾದಗಳು ಹಿರಿಯರೆ, ನಮ್ಮ‌ ಸುತ್ತಲಿನ‌ ವಾತಾವರಣವೇ ನಮ್ಮನ್ನು ಗಡಸು ಅಥವಾ ಎಳಸು ಆಗುವಂತೆ ಮಾಡುತ್ತದೆನ್ನುವುದಕ್ಕೆ ನನ್ನ‌ ಜೀವನದಲ್ಲಿ ನಡೆದ‌ ಹಲವಾರು ಘಟನೆಗಳು ಸಾಕ್ಶ್ಹಿಯಾಗಿವೆ.