ನೆನಪಿನ ಬುತ್ತಿಯಿಂದ ಒಂದಷ್ಟು....-೧

ನೆನಪಿನ ಬುತ್ತಿಯಿಂದ ಒಂದಷ್ಟು....-೧

ಪಿಯಾನೋ "ಢಮ್" ಎಂದಾಗ!!
***************************

ಅಂದು ಶಾಲೆಗೆ ರಜಾ ದಿನ. ಐದನೇ ತರಗತಿಯಲ್ಲಿದ್ದೆ. ಅದೇಕೋ ನನಗೂ ನನ್ನ ತಂಗಿಗೂ ಸಮಯ ದೂಡುವುದೇ ಕಷ್ಟವೆನಿಸಿತ್ತು. ಅಮ್ಮನೋ ಬೆಳಗ್ಗೆಯೇ ಅಡುಗೆ ಕೆಲಸಗಳನ್ನೆಲ್ಲಾ ಮುಗಿಸಿ ಹೊಲಿಗೆ ಯಂತ್ರವೇ ಸರ್ವಸ್ವ! ಎನ್ನೋ ರೀತಿ ಕೂರುತ್ತಿದ್ದರು. ಈಗಲೂ ಅಷ್ಟೆಯೇ. :) .ಅಮ್ಮ ಹೆಸರಿಗೆ ಗೃಹಿಣಿ, ಹೊರ ಉದ್ಯೋಗಿಯಲ್ಲ, ಮನೆಯೇ ಆಗಿತ್ತು ಅವರ ಬಟ್ಟೆ ಹೊಲಿಯುವ ಮಳಿಗೆ!! :(
ಆದರೆ ಮನೆಯಲ್ಲಿ ಆ ಹೊಲಿಗೆ ಯಂತ್ರ ಅದರ ಶಬ್ದ ನನ್ನ ಹಾಗು ತಂಗಿಯ ಶತ್ರು :(. ಅಪ್ಪನೋ ಬೆಳಗ್ಗೆ ಅಂಗಡಿಗೆ ಹೋದರೆ ಮತ್ತೆ ಮಧ್ಯಾಹ್ನ ಊಟಕ್ಕೆ,ಪುನಃ ಅಂಗಡಿ ರಾತ್ರೆ ೮ರ ಹಾಗೆ ಮನೆಗೆ.. ಭಾನುವಾರ ಮಧ್ಯಾಹ್ನ ಮೇಲಷ್ಟೆ ಅಂಗಡಿಗೆ ರಜ.ಹಾಗಾಗಿ ಹೊರಾಂಗಣ ಆಟವೇನಿದ್ದರೂ ನಾನು ತಂಗಿ ಇಬ್ಬರೇ ಆಡುತಿದ್ದೆವು..ನನಗೂ ತಂಗಿಗೂ ಸುಮಾರು ಒಂದುವರೆ ವರುಷ ವ್ಯತ್ಯಾಸವಷ್ಟೆ!

ರಜೆ ಕೊಟ್ಟಿದ್ದು ಶನಿವಾರವಾಗಿತ್ತು. ಬೆಳಗ್ಗೆಯೇ ನಮಗಿಬ್ಬರಿಗೂ ಪುಸ್ತಕ ಹಿಡಿಯಲು ಮನಸ್ಸಿಲ್ಲ. ಆದರೂ ಹಿಡಿದು ಕುಳಿತಿದ್ದೆವು. ಇಲ್ಲವೆಂದಾದಲ್ಲಿ "ಓದಿ, ಓದಿ.."ಎನ್ನೋ ಸುಪ್ರಭಾತ ಪ್ರಾರಂಭವಾಗುತ್ತಿತ್ತು ಅಮ್ಮನಿಂದ. ಅಪ್ಪ ಮನೆಯಲ್ಲಿದ್ದಾರೆ ಅಂದ್ರೆ ಅಮ್ಮನ ಸುಪ್ರಭಾತ ನಡೆಯುತ್ತಿರಲಿಲ್ಲ. :). ಓದುತ್ತಾರೆ ಬಿಡು, ಎಂದು ಅಮ್ಮನಿಗೆ ತಿರುಗಿಸುತ್ತಿದ್ದರು.ಅಂದು ಇಬ್ಬರಿಗೂ ಬೇಜಾರವಾಗುತ್ತಿತ್ತು. ಅಮ್ಮನಲ್ಲಿ ಅಜ್ಜನ ಮನೆಗೆ ಹೋಗುವ ಎಂದರೆ.. ಹೊಲಿಗೆ ತುಂಬಾ ಇದೆ ಎನ್ನೋ ಉತ್ತರ :( !!! ಆಗ ನೆನಪಾಯಿತು ಬೀರುವಲ್ಲಿದ್ದ "ಪಿಯಾನೋ".

ಈ ನಮ್ಮ ಪಿಯಾನೋ ಬಗ್ಗೆ ಸ್ವಲ್ಪ ಹೇಳಲೇ ಬೇಕು. ಅದನ್ನು ನನ್ನ ಅಪ್ಪನಿಗೆ ಒಬ್ಬರು ದುಬ್ಯೈ ಇಂದ ಬಂದ ಮುಸ್ಲಿಂರೊಬ್ಬರು ಗಿರಾಕಿ ಸಿಕ್ಕಿದರೆ ಮಾರಿ ಬಿಡಿ ಇದನ್ನು ಎಂದು ಕೊಟ್ಟಿದ್ದರು. ಅಪ್ಪನೋ ಒಳ್ಳೆದಿದೆ ನಾನೆ ತೆಕ್ಕೊಳ್ತೇನೆ ನನ್ನ ಮಕ್ಕಳಿಗಾಯಿತೆಂದು ತೆಕ್ಕೊಂಡರಂತೆ. ಮನೆಗೆ ತಂದು ಅದನ್ನು ಬಾರಿಸಿ ತೋರಿಸಿದರು. ನಾವಿಬ್ಬರೋ ಹುಬ್ಬೇರಿಸುತ್ತ ಜಗತ್ತಲ್ಲಿ ಯಾರಲ್ಲೂ ಇಲ್ಲದ ವಸ್ತುವೊಂದು ನಮ್ಮ ಮನೆಯಲ್ಲಿದೆ ಎನ್ನೋ ರೀತಿ ನೋಡಿದೆವು. ಅಮೇಲಿಂದ ಯಾರೇ ನೆಂಟರು ಬರಲಿ ಅದನ್ನು ಮೆಲ್ಲ ಅಪ್ಪನಲ್ಲಿ ಬೀರುವಿಂದ ತೆಗೆದು ತೋರಿಸಲು ಹೇಳುತ್ತಿದ್ದೆವು.ಅದರಲ್ಲಿ ಬರುತ್ತಿದ್ದ ೧೦೦ರರಿಂದಲೂ ಮೇಲಿನ ಶಬ್ದಗಳು ಪುನಃ ಬಾರಿಸುವಂತೆ ಮಾಡುತ್ತಿದ್ದವು. ಅದರಲ್ಲಿದ್ದ demo ಗುಂಡಿ ಒತ್ತಿದಲ್ಲಿ ನಿರಂತರ ಸಂಗೀತ ಬರುತ್ತಿತ್ತು. ಅದರ ತಾಳಕೆ ನನ್ನದೂ ತಂಗಿದೂ ನೃತ್ಯ!!

ಆ ಬೀರುವಲ್ಲಿದ್ದ ಪಿಯಾನೋವನ್ನು ಹೇಗಾದರೂ ತೆಗೆಯಬೇಕಿತ್ತು. ಕೀ ಎಲ್ಲಿಟ್ಟಿರುತ್ತದೆಂಬ ಮಾಹಿತಿ ಎಲ್ಲ ನಮಗಿತ್ತು :)
ಅಂತೂ ಇಬ್ಬ್ರೂ ಸೇರಿ ಮೇಜು ತಂದಿಟ್ಟು, ಹತ್ತಿ, ಪಿಯಾನೋ ಹೊರತೆಗೆದದ್ದಾಯಿತು. ಅಪ್ಪ ಅದು ಬ್ಯಾಟರಿ ಹಾಕಿದಲ್ಲಿ ಮಾತ್ರ ಕೇಳುತ್ತದೆ ಎಂದೆಲ್ಲ ಹೇಳಿದ ನೆನಪು.
ಬ್ಯಾಟರಿಗಾಗಿ ಅದರ ಡಬ್ಬವೆಲ್ಲಾ ಹುಡುಕಿದೆವು ಸಿಗಲಿಲ್ಲ.ಆದರೆ ಅದರೊಳಗೊಂದು ಪ್ಲುಗ್ ವೈರು ಸಿಕ್ಕಿತು. ಇದರ ಬಗ್ಗೆನೂ ಅಪ್ಪ ಹೇಳಿದ್ದರು ಬ್ಯಾಟರಿ ಇಲ್ಲದಿದ್ದರೆ ಇದನ್ನು ಸಿಕ್ಕಿಸಿ ಕೇಳಬಹುದು ಎಂದು! ನಾವೋ ಪೋಕ್ರಿಗಳು.. ಇಡಿ ಪಿಯಾನೋ ತಿರಿಗಿಸಿ ನೋಡಿದೆವು .ಅಂತೂ ಚುಚ್ಚೋ ತೂತು ಕಾಣಿಸಿತು .ಇನ್ನೇನು ಸ್ವಿಚ್ ಬೋರ್ಡು ಗೆ ಸಿಕ್ಕಿಸಿ ಟಕ್ ಅಂತ ಸ್ವಿಚ್ ಹಾಕೋವಾಗ ಮನಸ್ಸಲ್ಲಿ ಏನೋ ಸಾಹಸ ಮಾಡಿದೆವು ಎನ್ನೋ ಹೆಮ್ಮೆ. ಅಪ್ಪನಿಂದ "ಗುಡ್" ಸಿಕ್ಕರು ಸಿಕ್ಬಹುದು ಎನ್ನೋ ಆಸೆ :)

ಆದರೆ ಹಾಗಾಗಲಿಲ್ಲ :(. ನಡೆದದ್ದೇ ಬೇರೆ! ಸ್ವಿಚ್ ಹಾಕಿದ ಕೂಡಲೆ ಪಿಯಾನೋ "ಢಮ್" ಎಂದು ಜೋರು ಶಬ್ದ ಮಾಡಿತು. ಹೆದರಿ ನಾನು ತಂಗಿಯೂ ಒಬ್ಬರನ್ನೊಬ್ಬರು ಗಟ್ಟಿ ಹಿಡಿದಿದ್ದೆವು.. ಅಮ್ಮ ಬೊಬ್ಬಿಡುತ್ತಾ ಒಳಗಿಂದ ಬಂದರು.ಅದೋ ಸುಟ್ಟ ವಾಸನೆ ಹೊರ ಬರುತ್ತಿತ್ತು :(.
ಅಪ್ಪನ ಕೈಯಿಂದ ಬೈಗುಳ ಗ್ಯಾರೆಂಟಿ ಎಂದು ಗೊತ್ತಾಯ್ತು.ಅಮ್ಮ ಚಾಡಿ ಹೇಳೇ ಹೇಳ್ತಾರೆ!! ಇನ್ನೇನು ಮಾಡೋರು ಮಾಡಿದ ತಪ್ಪಿಗೆ ಸಿಗುತ್ತಿತ್ತು ಅಮ್ಮನ ಸುಪ್ರಭಾತ. ಅಪ್ಪ ಬಂದ ಕೂಡಲೆ ನಾವೇ ನಡೆದ ವಿಷಯ ಹೇಳಿದೆವು.ಅಪ್ಪ ಸ್ವಲ್ಪ ಹೊತ್ತು ಮಾತಾಡಲಿಲ್ಲ. ಆಮೇಲೆ "ನಿಮ್ಮಿಬ್ಬರ ಜೀವ ಉಳಿಯಿತಲ್ಲ ಅದೇ ಸಂತೋಷ ಎಂದು ಸುಮ್ಮನಾದರು". ಅಪ್ಪ ಅದನ್ನು ಸರಿ ಮಾಡುತ್ತೀರಾ ಎಂದು ಮೊರೆಯಿಟ್ಟೆವು. ಅದರಲ್ಲೇನು ಉಳಿದಿಲ್ಲ ಮಕ್ಕಳೆ. ಹೊರ ಪೆಟ್ಟಿಗೆ ಮಾತ್ರ ಇದೆ! ಸ್ವಲ್ಪ ಮಾಹಿತಿ ತಿಳಿದು ಕೆಲಸ ಮಾಡ್ಬೇಕು.DC ge AC ಕೊಟ್ಟರೆ ಹೇಗೆ!!??? ಎಂದಾಗ ನಾವಿಬ್ಬರೂ ಪೆಚ್ಚು ಮೋರೆ ಹಾಕಿ ಒಬ್ಬರನ್ನೊಬ್ಬರು ನೋಡಿದೆವು!! :(

Rating
No votes yet

Comments