ನೆನಪಿನ ಬುತ್ತಿಯಿಂದ..

ನೆನಪಿನ ಬುತ್ತಿಯಿಂದ..

ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ತಿಂಡಿ-ತಿನಿಸುಗಳನ್ನು ಹೆಚ್ಚಾಗಿ ತಿನ್ನಬಾರದೆಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ಅಲ್ಲಲ್ಲಿ ಮಾರಾಟಗೊಳ್ಳುತ್ತಿರುವ ಪಾನೀಪೂರಿ,ಮಸಾಲಪೂರಿ,ದಹಿಪೂರಿ, ಸೇವ್ ಪೂರಿ ಇಂತಹ ತಿಂಡಿಗಳನ್ನು ಹೆಚ್ಚಾಗಿ ಎಲ್ಲರೂ ಇಷ್ಟಪಡುವವರೆ. ಶಾಲಾ ಕಾಲೇಜು ಮಕ್ಕಳಿಗಂತೂ ಈ ತಿಂಡಿಗಳೆಂದರೆ ಪಂಚಪ್ರಾಣ. ತಮ್ಮ ಗೆಳೆಯರ ಜತೆ ಹರಟುತ್ತಾ ಇವುಗಳನ್ನು ತಿನ್ನುವುದೆಂದರೆ ಅದೇನೋ ಖುಷಿ. ತಮ್ಮ ತರಗತಿಯಲ್ಲಿ ನಡೆದ ವಿಷಯಗಳು, ಪರೀಕ್ಷೆಗಳ ವಿಚಾರಗಳು, ಗೆಳೆತನದ ವಿಚಾರಗಳು ಇವೆಲ್ಲಾ ಚರ್ಚಿತವಾಗುವುದು ಈ ಸಮಯದಲ್ಲೇ.

ನಮ್ಮ ಗೆಳೆಯರ ಗುಂಪೂ  ಇದಕ್ಕೆ ಹೊರತಾಗಿರಲಿಲ್ಲ ಅನ್ನಿ. ಕಾಲೇಜಿನ ಪಕ್ಕದಲ್ಲೇ ಇರುವ ಕೈಲಾಶ್ ಪಾನೀಪೂರಿ ಸ್ಟಾಲ್ ನಮ್ಮ ನೆಚ್ಚಿನ ತಾಣ. ವಾರದಲ್ಲಿ ಎರಡು ಬಾರಿಯಾದರೂ ಬಿಡುವು ಮಾಡಿಕೊಂಡು ಇಲ್ಲಿ ಜತೆಯಾಗುತ್ತಿದ್ದೆವು. ಅವರವರ ಆಯ್ಕೆಯ ತಿಂಡಿಗಳನ್ನು ಸಿದ್ಧಗೊಳಿಸಲು ಹೇಳಿ ಮಾತನಾಡುತ್ತಾ ಕುಳಿತಿರುತ್ತಿದ್ದೆವು. ಕೆಲವೊಮ್ಮೆ ಹುಟ್ಟುಹಬ್ಬದ ಪಾರ್ಟಿಗಳೂ ಇಲ್ಲೇ ನಡೆಯುತ್ತಿದ್ದ ವು. ಆ ಸಂದರ್ಭಗಳಲ್ಲಿ ಈ ತಿಂಡಿಗಳನ್ನು ತಿನ್ನುವ ಸ್ಪರ್ಧೆಯೂ ಇರುತ್ತಿತ್ತು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವರು ಅಂದಿನ ಖರ್ಚು ನೋಡಿಕೊಳ್ಳಬೇಕು. ಒಮ್ಮೆ ಸಹಪಾಠಿಯೊಬ್ಬ ಚಾಲೆಂಜ್ ಮಾಡಿ 20 ಪ್ಲೇಟ್ ತಿಂಡಿಯನ್ನು ಒಂದೇ ಸಲ ತಿಂದಿದ್ದ. ಹೀಗೆ ಅಲ್ಲಿ ನಮ್ಮದೇ ಪ್ರಪಂಚ ಸೃಷ್ಟಿಯಾಗುತ್ತಿತ್ತು. ಬೇರೆ ಅನೇಕ ಸ್ಟಾಲ್‌ಗಳು ಇದ್ದರೂ ಹೆಚ್ಚು  ಬೇಡಿಕೆಯಿರುತ್ತಿದ್ದುದು ಕೈಲಾಶ್  ಸ್ಟಾಲ್‌ಗೆ ಮಾತ್ರ. ಕಾರಣ ಅಲ್ಲಿನ ಸ್ವಚ್ಚತೆ ಹಾಗೂ ತಿಂಡಿಯ ರುಚಿ.

ಕಾಲೇಜಿನ ಸುಂದರ ನೆನಪಿನ ಬುತ್ತಿಯಲ್ಲಿ ಇದೂ ಒಂದು. ಇಂದು ಎಲ್ಲರೂ ಒಂದೊಂದು ಕಡೆ ಉದ್ಯೋಗದಲ್ಲಿದ್ದೇವೆ. ಬೆಂಗಳೂರಿನ ರಸ್ತೆ ಬದಿಗಳಲ್ಲಿ ಮಾರುತ್ತಿರುವ ಪಾನೀಪೂರಿಯಂತಹ ತಿಂಡಿಗಳನ್ನು ನೋಡಿ ನೆನಪಾಗಿ ತಿನ್ನಬೇಕು ಎಂದೆನಿಸಿದರೂ ಸುತ್ತಲಿನ ಕಸದ ರಾಶಿ, ಗಲೀಜು ನೋಡುವಾಗ ಸುಮ್ಮನಿರುವಂತಾಗುತ್ತದೆ.
ಒಮ್ಮೆ ನಾನು ಹಾಗೂ ಗೆಳತಿ ರೂಂ ಪಕ್ಕದಲ್ಲೇ ಇರುವ ಚಾಟ್ಸ್ ಸೆಂಟರ್ ನಲ್ಲಿ ಹೋಗಿ ಮಸಾಲಪೂರಿ ತಿಂದುಕೊಂಡು ಬರೋಣವೆಂದು ಹೊರಟೆವು. ಅಲ್ಲಿ ಸ್ವಚ್ಚತೆಯಿದ್ದರೂ ನಾವು ಕೈಲಾಶ್ ನಲ್ಲಿ ತಿನ್ನುತ್ತಿದ್ದ ಮಸಾಲಪೂರಿಯ ರುಚಿ ಇರಲಿಲ್ಲ. ಅರ್ಧ ಕಾಲಿಯಾಗುವ ಹೊತ್ತಿಗೆ ಸಾಕಾಗಿ ಹೋಗಿತ್ತು. ಫ್ರೆಶ್ ಜ್ಯೂಸ್ ಕುಡಿದು ಅದನ್ನು ಅಲ್ಲೇ ಬಿಟ್ಟು ದುಡ್ಡು ಕೊಟ್ಟು ಅಲ್ಲಿಂದ ಹೊರಟೆವು.

ದಾರಿಯಲ್ಲಿ ಮಾತನಾಡಿಕೊಂಡು ಬರುವಾಗ ಎಂಟುನೂರು ರೂಪಾಯಿ ಖರ್ಚು(ಬೆಂಗಳೂರಿನಿಂದ ಊರಿಗೆ ಹೋಗಲು 400ರೂ-ತಿರುಗಿ ಬರಲು 400ರೂ.ಚಾರ್ಜು)  ಮಾಡಿಕೊಂಡರೂ ಪರವಾಗಿಲ್ಲ ಒಮ್ಮೆ ನಮ್ಮ ಕಾಲೇಜಿನ ಪಕ್ಕದ ಕೈಲಾಶ್ ಗೆ ಹೋಗಿ ಗೆಳೆಯರೆಲ್ಲಾ ಒಟ್ಟಾಗಿ ಮಸಾಲಪೂರಿ,ಪಾನೀಪೂರಿ ತಿಂದುಕೊಂಡು ಬರೋಣವೆಂದು ನಿರ್ಧರಿಸಿದೆವು. ಆ ದಿನ ಯಾವಾಗ ಬರುವುದೋ ಕಾದು ನೋಡಬೇಕು.
 

Rating
No votes yet

Comments

Submitted by venkatb83 Tue, 12/11/2012 - 15:16

"ಮಸಾಲಪೂರಿ ತಿಂದುಕೊಂಡು ಬರೋಣವೆಂದು ಹೊರಟೆವು. ಅಲ್ಲಿ ಸ್ವಚ್ಚತೆಯಿದ್ದರೂ ನಾವು ಕೈಲಾಶ್ ನಲ್ಲಿ ತಿನ್ನುತ್ತಿದ್ದ ಮಸಾಲಪೂರಿಯ ರುಚಿ ಇರಲಿಲ್ಲ. ಅರ್ಧ ಕಾಲಿಯಾಗುವ ಹೊತ್ತಿಗೆ ಸಾಕಾಗಿ ಹೋಗಿತ್ತು. ಫ್ರೆಶ್ ಜ್ಯೂಸ್ ಕುಡಿದು ಅದನ್ನು ಅಲ್ಲೇ ಬಿಟ್ಟು ದುಡ್ಡು ಕೊಟ್ಟು ಅಲ್ಲಿಂದ ಹೊರಟೆವು."

ಮಮತಾ ಅವ್ರೆ ನೆನಪುಗಳೇ ಹಾಗೆ ಅದರಲ್ಲೂ ಈ ತರಹದ ಸವಿ ನೆನಪುಗಳು ..!!
ಈ ತರಹ ಅನುಭವ ನನಗೆ ಹಲವು ಬಾರಿ ಆಗಿದೆ..

ವರ್ಷದ ಹಿಂದೆ ಮುಂಬೈ ಅಥವಾ ಇನ್ನೆಲ್ಲೋ ಒಬ್ಬ ಪಾನಿ ಪೂರಿ ಅಂಗಡಿಯವ ಮಾಡಿದ ಮಹತ್ಕಾರ್ಯ ಫಲವಾಗಿ ರಸ್ತೆ ಬದಿಯ ಬಂಡಿಗಳ ಪಾನಿ ಮಸಾಲ ಪೂರಿಗೆ ತಾತ್ಕಲಿಕವಾಗಿ ವಿದಾಯ ಹೇಳಿದ ನನ್ನ ತರಹದ ಹಲವರು ಮತ್ತೆ ಬೀದಿ ಬದಿಯ ಪಾನಿ ಮಸಾಲ ಪೂರಿ ಅಂಗಡಿಗೆ ಮುಖ ಮಾಡಿರುವುದು ನಿಜ.!!

ಮೊನ್ನೆ ಮೊನ್ನೆ ಬೆಂಗಳೂರಿನ ಮಲೇಶ್ವರ(ಮಲ್ಲೇಶ್ವರಂ..!!)ದ ಅಡಿಗಾಸ್ -ಸಂಪಿಗೆಯಲ್ಲಿ 30ರುಪಯೀ ಮೇಲೆ ಕೊಟ್ಟು ತಿಂದ ಮಸಾಲ ಪೂರಿ ಮತ್ತು ಪಾನಿ ಏನೇನೂ ರುಚಿ ಅನಿಸದೆ ದುಡ್ಡು ವೆಸ್ಟ್ ಅನಿಸಿತ್ತು...
ನೀವ್ ಹೇಳಿದ್ದು ನಿಜ ಕೆಲವು ಟೇಸ್ಟ್ -ಕಾಪಿ ಮಾಡಕ್ಕಾಗಲ್ಲ ..!!
ರಾಜಸ್ಥಾನಿಗಳು-ಉತ್ತರ ಭಾರತದವರು ಪರಿಚಯಿಸಿದ ಈ ತಿಂಡಿ ಅದೆಸ್ತು ಫೇಮಸ್ ಆಯ್ತು ಅಂದ್ರೆ ಮೊದಲಿಗೆ ಹೀಗಳೆಯುತ್ತಿದ್ದ ಅದ್ನ ಕಂಡ್ರೆನೆ ಆಗದ ನಾ ಸಹ ಅದರ ಮೋಡಿಗೆ ಬಿದ್ದು ತಿನ್ನಲು ಶುರು ಮಾಡಿದೆ...!!
ಈಗಂತೂ ಬೆಳಗ್ಗೆಯಿಂದ ರಾತ್ರಿವೆರೆಗೆ ಜನ ಬೀದಿಯಲ್ಲಿ ಹೊಟೇಲುಗಳಲ್ಲಿ ಕುಳಿತು ನಿಂತು ತಿನ್ನುವರು.. ಕೆಲವು ಸ್ಥಳಗಳು ಏರಿಯ ದಲಿ ಈ ತರಹದ ತಿಂಡಿಗೆ ಹೆಸರು ಆದ ಹಲವು ಅಂಗಡಿಗಳಿದ್ದು ಜನ ವಯಸ್ಸಿನ ಬೇದವಿಲ್ಲದೆ ಮುಗಿ ಬೀಳುವರು ..ಆ ತರಹದ್ದರಲ್ಲಿ ನಾ ನೋಡಿದ 2 ಅಂಗಡಿ
1.ಬಸವೇಶ್ವರನಗರದ ಮಸಾಲ ಮಂಚ್
2. ಮಲ್ಲೇಶ್ವರಂ 8ನೆ ಕ್ರಾಸ್ನ ಬಸ್ ಸ್ಟಾಪ್ ಹಿಂದಿನ ಒಂದು ಅಂಗಡಿ (ಮೇಲೆ ಒಂದು ಸ್ವೀಟ್ ಅಂಗಡಿ ಇದೆ ಅದೂ ಹೌಸ್ಫುಲ್)..ಇನ್ನು ಹಲವು ಇವೆ..

ನಂಗೆ ಗೊತ್ತಿರುವ ಹಾಗೆ ಬೀದಿ ಬದಿಯ ಪಾಣಿ ಪೂರಿ ಅವರು ಕಡಿಮೆ ಎಂದರೂ ದಿನಕ್ಕೆ 5ರಿಂದ 10 ಸಾವಿರ ಗಳಿಸುವರು...!! ಯಾರಿಗುಂಟು ಯಾರಿಗಿಲ್ಲ!!
ನನ್ನ ನೆನಪುಗಳನ್ನು ಮರುಕಳಿಸಿದ ಬರಹ..

ಶುಭವಾಗಲಿ..