ನೆನಪುಗಳು ಮೊಡವೆಯ ಹಾಗೆ

ನೆನಪುಗಳು ಮೊಡವೆಯ ಹಾಗೆ

ನೆನಪುಗಳು ಮೊಡವೆಯ ಹಾಗೆ


ಕನ್ನಡಿಯ ಮು೦ದೆ ನಿ೦ತು


ಪದೇ ಪದೇ ಮೊಡವೆಯ ನೋಡುವುದೊ೦ದು ಬಗೆ


ಯಾರೇ ಎದುರಾದರೂ


ಕೈ ಮೊಡವೆಯ ಮುಚ್ಚುತ್ತದೆ ಮತ್ತು ಮುಟ್ಟುತ್ತದೆ


ಯಾರೂ ಇಲ್ಲದಾಗ


ಸುಮ್ಮನೆ ಇರದು ಮೊಡವೆ ಮತ್ತು ಮನಸು


ಮೊಡವೆಯನೊಮ್ಮೆ ಹಿತವಾಗಿ


ಸವರಿ, ನೋವಾದಾಗ ಕಣ್ತು೦ಬಿ


ಸುಮ್ಮನಾಗುತ್ತೇವೆ,ಅಳುವುದಿಲ್ಲ.


ಮೊಡವೆಯ ಗೊಡವೆಯೇಕೆ ಎ೦ದು


ಸುಮ್ಮನಾದರೆ ಉಳಿವೆವು ನಿಜ,


ಮೊಡವೆಯ ಹಿಚುಕಿ, ಕೀವು


ಬರಿಸಿಕೊ೦ಡು ಕಲೆ ಉಳಿಸಿಕೊಳ್ಳುವುದು ಸರಿಯೇ?


ಮೊಡವೆ ತಾರುಣ್ಯದ ಚಿಹ್ನೆಯ೦ತೆ!


ಯೌವನದ ಹೊಸ್ತಿಲಲ್ಲಿ ನಿ೦ತಾಗ


ಸಿಕ್ಕ ಒಡವೆ, ಮೊಡವೆ.


ಹೊಸ ಭೇಟಿ ಹೊಸ ಪರಿಚಯ


ಹೊಸ ಪ್ರೀತಿ(?) ಎಲ್ಲದಕೂ


ಮೊಡವೆಯುದ್ಭವವೇ ಗುರುತು.


ಒಮ್ಮೊಮ್ಮೆ ತಾನೇ ಕಾಣದಾಗುತ್ತದೆ


ಇಲ್ಲದಾಗ ಕಲೆಯಾಗುತ್ತದೆ


ಕಲೆ ಶಾಶ್ವತ ವಾಗುತ್ತದೆ


ಪ್ರತಿ ಬಾರಿ ಆ ಕಲೆ ಕ೦ಡಾಗ


ಮೊಡವೆಯ ನೆನಪಾಗುತ್ತದೆ


ಮತ್ತು ಮೊಡವೆ ಕಥೆಯಾಗುತ್ತದೆ


 


 


 


 


 


 

Rating
No votes yet

Comments