ನೆನಪುಗಳು...

ನೆನಪುಗಳು...

ಪಕ್ಕದ ನದಿಯ ನೀರಿನಲೆಗಳಲಿ ತೇಲಿ ಬ೦ದಿದೆ ಗಾಳಿ...
ಎ೦ದಿನ೦ತೇ ಇ೦ದೂ ಅವಳ ನೆನಪು...
ನದಿಯ ರಭಸ, ಅದರೆಡೆಗೆ ಅವನ ನೆಟ್ಟ ನೋಟ,
ಅವಳಿಲ್ಲ, ಅವಳ ನೆನಪು ಮಾತ್ರ...
ಅವನ ಬಾಳೀಗ ಬಿಡಿಸಲಾಗದ ಒಗಟು...


ಹರಿಯುತ್ತಿದೆ ನದಿ ಸ್ವಚ್ಛ೦ದ
ಆದಿ ಮೂಲವ ಮರೆತು - ಸತತ ಹರಿವ ಹೆಣ್ಣವಳು...
ಮನೆ ಮರೆತು, ದಾರಿ ತಪ್ಪಿ, ದಿಕ್ಕು ಕೆಟ್ಟು,
ನೆಲೆ ಕಾಣದ ನೆನಪಿಗೆ ಗುರಿ ತೋರಿದ ಕಣ್ಣವಳು...


ಆ ಗಾಮಿನಿಗೆ ತಿಳಿದಿದೆ ಎಲ್ಲ,
ನೆನಪ ನೆಲೆ ತನ್ನಲೆಯಲ್ಲ, ಅದು ಅವನ ಮನಸ್ಸು...
ನದಿಯ ರಭಸಕ್ಕೆ ಕಣ್ಕೊಟ್ಟರೂ,
ಅವನ ಎದೆಯಲ್ಲಿ ಅವಳ ನೆನಪಿಗೆ ಭದ್ರ ನೆಲೆ, ಅವಳದೇ ಕನಸು...


ನದಿಯಾಳ ಬಹಳ, ಸೆಳೆತವೂ ತೀವ್ರ,
ಕೊಚ್ಚಿ ಕರೆದೊಯ್ವ ರಭಸ - ನದಿಯ ಹರಿವ ಗುಣ...
ಆದರೆ ನೆಟ್ಟ ನೋಟದ ಅಲೆಯಾಸರೆಯಲ್ಲಿ ನೆನಪು ನಿರಾಳ,
ಅಲೆಯಪ್ಪುಗೆಯ ಅಭಯ, ಅವನೊಳಗೆ ಅದರ ತಾಣ...


ನದಿಗೆ ಸಾಗರ ಸೇರುವ ಗುರಿ, ದೂರವಿದೆ ದಾರಿ.
ನೆನಪುಗಳ ಹೊತ್ತು ಹರಿವಲೆಗೆ ಸಾಧನೆಯ ಸಾರ್ಥಕತೆ...
ಅಲೆಗಳಲ್ಲಿ ಹುಟ್ಟಿದ ಅವಳ ನೆನಪು ಅವನೆದೆಯನ್ನಾವರಿಸಿ ಕಣ್ಣೆವೆಯಲ್ಲಿದ್ದರೂ,
ಅವಳಿಲ್ಲದೆ ಅವನಲ್ಲಿ ಭಾವ ಶೂನ್ಯತೆ....

Rating
No votes yet

Comments