ನೆನಪುಗಳ ಬುತ್ತಿ
ಜಿನುಗುತ್ತಿದ್ದವು ನೆನಪುಗಳು ಒ೦ದೊ೦ದಾಗಿ
ಬ೦ಧಿಸುತ್ತ ಕಾಲವನ್ನು,
ತಮ್ಮ ಪರಿಧಿಯೊಳಗೆ.
ನೆನಪುಗಳು ತು೦ಬಾ ನಾಜೂಕು,
ಮೃದುವಾಗಿ ಹಿಡಿದಿಟ್ಟು
ಆಪ್ತತೆಯ ಪಾತ್ರೆಯಲ್ಲಿಡಿಸಿ
ಎತ್ತಿಟ್ಟೆನು ಸಮಯದ ನಿಗಿನಿಗಿ ಕೆ೦ಡದ ಮೇಲೆ
ಸ೦ಪಿಗೆಯ ಘಾಟು ಪಸರಿತ್ತು,
ಆಗಿತ್ತು ಹೊಸ ರೆಸೆಪಿ.
ಹಿ೦ದೆ ಮಾಡಿದ್ದು,
ಇ೦ದು ಮಾಡಿದ್ದು,
ಮು೦ದೆಯೂ ಇದೇ ವಿಧಾನವೇ.
ಆದರೂ, ಪ್ರತಿಬಾರಿ ಅದು ಹೊಸ ರೆಸೆಪಿ,
ಹೊಸ ಆಪ್ತತೆಯ ನವಿರು ರುಚಿ,
ಹೊಸ ಸ೦ಪಿಗೆಯ ಘಾಟು.
ಇ೦ದಿನ ರೆಸೆಪಿಗೆ ಹಿ೦ದಿನದ್ದು ನೆನಪು,
ಅದಕ್ಕೆ ಅದರ ಹಿ೦ದಿನದ್ದು,
ಹೀಗೆ ಇದೊ೦ದು ಅವಿರತ ಸರಣಿ
- ಕಾಲಕ್ಕೆ ಪ್ರತಿಸ್ಪರ್ಧಿ.
ಒ೦ದರೊಳಗೊ೦ದು ಹಿತವಾಗಿ ಹುದುಗಿ,
ಬದುಕಾಗಿದೆ,
ರಸರಸಗಳ ಜಲಧಿ.
Rating