ನೆನಪು

ನೆನಪು

ಹಾಯ್ ಅಣ್ಣಾ.... ಹೇಗಿದ್ದೀಯ ?

ಹಳೆಯ ನೆನಪುಗಳನ್ನ ಸವಿಯೋ ಮುನ್ನ..... ನಿನಗೆ ದೇವರು ನೀನು ಬಯಸಿದ್ದೆಲ್ಲಾ ಕೊಡ್ಲಿ ಅಂತ ಹಾರೈಸ್ತೀನಿ :) ಇವತ್ತು ಯಾಕೋ ಗೊತ್ತಿಲ್ಲ... ನಮ್ಮ ಬಾಲ್ಯದ ಕೆಲವು ಘಟನೆಗಳು ತುಂಬಾ ನೆನಪಾಗ್ತಾ ಇದೆ ಅಣ್ಣಾ....

ವಿ. ಸೂ: ಇಲ್ಲಿ ಕಾಡುವ ನೆನಪುಗಳಿಗೆ ಒಂದಕ್ಕೊಂದು ಸಂಬಂಧ ಇರುವುದಿಲ್ಲ... ಹಾಗೇನಾದರೂ ಇದ್ದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ ;)

ನಾನು ನಿನ್ನೊಡನೆ ಕಳೆದ ಬಾಲ್ಯ ಅಷ್ಟಾಗಿ ನನ್ನ ನೆನಪಿಗೇ ಬರ್ತಾ ಇಲ್ಲ ಮಾರಾಯ.... ಅದ್ ಯಾಕೋ ಗೊತ್ತಿಲ್ಲ..... ಬಹುಷಃ ನಾನು ನನ್ನ ಬಾಲ್ಯವನ್ನ ಅಪ್ಪಯ್ಯನ ಜೊತೆಯೇ ಹೆಚ್ಚಾಗಿ ಕಳೆದೆನೇನೋ...

ನನಗೆ ಅಪ್ಪನಜೊತೆ ಪೇಟೆ ಸುತ್ತಿದ್ದು, ಲುಡೋ ಆಡಿದ್ದು, ಚೌಕಾಬಾರ ಆಡಿದ್ದೇ ನೆನಪಾಗತ್ತೆ. ಮತ್ತೆ ನಿನ್ನೊಡನೆ ಕಳೆದ ಸಮಯಗಳಲ್ಲಿ ಕೆಲವೊಂದೇ ಆಚ್ಚಳಿಯದೇ ಉಳಿದುರುವುದು. ನನಗೆ ಸೈಕಲ್ ಕಲಿಸಿಕೊಟ್ಟದ್ದು, ಅದು ಬಿಟ್ಟರೆ ನಾನು ಮತ್ತೆ ನೀನು ಪಣಿಶೇಖರ್ ಮನೆಯಿಂದ ತಂದ ಅಕ್ವೇರಿಯಂ, ಮತ್ತೆ ಅದರಲ್ಲಿ ಮೀನು ಮರಿ ಹಾಕಿದಾಗ ಅದನ್ನ ಐಯೋಡೆಕ್ಸ್ !!! ಬಾಟಲಿನಲ್ಲಿ ಇಟ್ಟು ಅದು ಸತ್ತು ಹೋದದ್ದು, ಮತ್ತೆ ನಿನ್ನಿಂದ ನನಗೆ ಬೆಳೆದುಬಂದ ಗಿಡಗಳನ್ನು ಬೆಳೆಸುವ ಹವ್ಯಾಸ!!!! 

ನೆನಪಿದ್ಯಾ ಅಣ್ಣಾ.... ನಾವು ಆಗ ಹುಣಸೇ ಗಿಡಗಳನ್ನು ಐಯೋಡೆಕ್ಸ್ ಮತ್ತೆ ಸಿಕ್ಕ ಸಿಕ್ಕ ಸಣ್ಣ ಬಾಟಲಿಗಳಲ್ಲೆಲ್ಲಾ ಬೆಳೆಸುತ್ತಿದ್ದದ್ದು ? ನನಗೆ ಗಿಡಗಳಬಗ್ಗೆ ಪ್ರೀತಿ ಮೂಡಿಸಿದ್ದು ನೀನೇ :) ನಾವೆಲ್ಲಾ ಅಂದ್ರೆ ನಾನು, ನೀನು ಮತ್ತೆ ಅಕ್ಕ ಮಹಡಿಯಮೇಲೆ ಕಬ್ಬಿಣದ ಡ್ರಂ ಇಟ್ಟುಕೊಂಡು ಕ್ರಿಕೆಟ್ ಆಡ್ತಾ ಇದ್ದದ್ದು ನೆನ್ಪಿದ್ಯಾ ಅಣ್ಣಾ ? ಆಗಂತೂ ನೀನೇ ಅಂಪೈರ್.... ನಿನ್ನ ನಿರ್ಧಾರಕ್ಕೆ ನಾವು "ನೋ" ಅನ್ನೊಹಾಗೇ ಇರ್ಲಿಲ್ಲ. :)

ಆದರೆ ನನಗೆ ಜೀವನ ಅನ್ನೋದು ಅರ್ಥಾ ಆಗೋಕೆ ಶುರು ಆದಮೇಲೆ ನಡೆದ ಎಲ್ಲಾ ಘಟನೆಗಳು ನನ್ನ ಕಣ್ ಮುಂದೆನೇ ಇದೆ.... ಅಪ್ಪನ ಕಾರ್ಖಾನೆ ಮುಚ್ಚಿದಾಗ ನಮ್ಮ ಸಂಸಾರದ ದೋಣಿಯನ್ನ ಮುನ್ನಡೆಸುವ ಹೊಣೆ ಹೊತ್ಯಲ್ಲ.... ಆ ವಿಷಯಕ್ಕೆ ನಿನಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು. ನಿನ್ನ ಬಗ್ಗೆ ನನಗೆ ಬಹಳ ಅಭಿಮಾನವಿದೆ.

ಅಪ್ಪ ನಮ್ಮ ಓದು ಬರಹಕ್ಕೆಂದು ಸಾಲ ಮಾಡಿದ್ರೆ ನೀನು ನಿನ್ನ ಖರ್ಚನ್ನು ನೋಡಿಕೊಳ್ಳುವ ಸಲುವಾಗಿ ಮನೆಪಾಠ ಶುರುಮಾಡಿದ್ದೆ. ನಾನು ನಿನ್ನ ವಿಧ್ಯಾರ್ಥಿಬಳಗದಲ್ಲೊಬ್ಬ :) ಯಾವಾಗ ನೋಡಿದ್ರೂ ಮಹಡಿ ಮೇಲಿನ ರೂಮಿನಲ್ಲಿ ಬಾಗಿಲು ಹಾಕ್ಕೊಂಡು ಒಬ್ಬನೇ ಇರ್ತಾ ಇದ್ಯಲ್ಲ.... ಎಷ್ಟು ಶ್ರಮ ಪಟ್ಟಿರಬಹುದು ಅಂತ ಈಗ ಅರ್ಥ ಆಗತ್ತೆ :) ಆಗೆಲ್ಲಾ ನಿನ್ನ ಟ್ಯೂಷನ್ ಮಾಡೋದಕ್ಕೆ ಕೆಲವು ಕರಪತ್ರಗಳನ್ನ ಮುದ್ರಿಸಿದ್ದೆ.... ನೆನ್ಪಿದ್ಯಾ ??? ಅದನ್ನ ನಾನು ಮತ್ತೆ ನೀನು ಹರೀಶನ ಸಹಾಯದಿಂದ ಎಲ್ಲಾ ಪೇಪರ್ ಗಳ ಒಳಗೆ ಬೆಳ್ಳಂಬೆಳಿಗ್ಗೆ ಹೋಗಿ ಹಾಕಿ ಬಂದಿದ್ವಿ. ನಂತರ ನೀನು ಮತ್ತೊಬ್ಬ ಟ್ಯೂಷನ್ ಮಾಡೋ ಮೇಷ್ಟರ ಮನೆ ಹತ್ತಿರ ಹಂಚು ಅಂದಿದ್ದೆ..... ನಾನು ಹೋಗಿ ಕೆಲವರಿಗೆ ಹಂಚಿ ಮತ್ತೆ ಅದ್ಯಾರ್ ಹತ್ರನೋ ಬೈಸ್ಕೊಂಡು ಬಂದಿದ್ದೆ. ನಿನ್ನ ಆ ದಿನಗಳ ಶ್ರಮದ ಫಲವೇ ಇಂದು ನೀನು ಮೈಸೂರಿನಲ್ಲಿ "ಬೇರು" (ROOTS) ಬಿಡಲು ಕಾರಣ ಮತ್ತು ಆ ನಿನ್ನ ಎರೆಡಕ್ಷರದ ಹೆಸರು (GK) ಹಬ್ಬಲು ಕಾರಣ. ನಾನು ನನ್ನ ಜೀವನದಲ್ಲಿ ಎಡವಿದಲ್ಲೇಲ್ಲಾ ನನ್ನ ಹಿಂದೆಯೇ ನೀನಿದ್ದು ನನಗೆ ಪ್ರೂತ್ಸಾಹ ಕೊಟ್ಯಲ್ಲ.... ಅದೇ ನಾನು ಇಂದು ರಾಜಧಾನಿಯಲ್ಲಿ ನೆಲೆಸಲು ಕಾರಣ.

ನಾನು ಚಿಕ್ಕವನಾಗಿದ್ದಾಗ ನಿಜಕ್ಕೂ ನಿನ್ನ ಮೇಲೆ ಹೊಟ್ಟೆ ಕಿಚ್ಚು ಬರ್ತಾ ಇತ್ತು. ಅಮ್ಮ ಅಪ್ಪ ನಿನಗೆ ಮಾತ್ರ ಮೀಸಲಾಗಿ ಇಡ್ತಾ ಇದ್ದ ಕೆಲವು ವಸ್ತುಗಳು, ನಮಗೆ (ನಾನು ಮತ್ತೆ ನನ್ನ ಅಕ್ಕ) ಇಲ್ಲದೇ ನಿನಗೆ ಮಾತ್ರಾ ಓದಿಕೊಳ್ಳಲು ಇದ್ದ ಕೋಣೆ, ಟೆಬಲ್ಲು, ಎಲ್ಲವನ್ನ ನೋಡಿ ಅಪ್ಪ ಮತ್ತೆ ಅಮ್ಮ ಯಾಕೆ ಹೀಗೆ ತಾರತಮ್ಯ ಮಾಡ್ತಾರೆ ಅಂತ ಅನಿಸಿದ್ದು ಸುಳ್ಳಲ್ಲ. ಈ ವಿಷಯವಾಗಿ ನಾನು ಅಪ್ಪ ಮತ್ತೆ ಅಮ್ಮನೊಂದಿಗೆ ಕೆಲವೊಮ್ಮೆ ಕೇಳಿದ್ದೂ ಉಂಟು. "ಅವನು ಹಿರೀ ಮಗ... ನಿನ್ ಹಾಗಲ್ಲ ಸುಮ್ನಿರು.... " ಅಂತ ಬೈಸಿಕೊಂಡದ್ದೂ ಉಂಟು. ಅಪ್ಪ ಸೊಸೈಟಿಯಿಂದ ಅಕ್ಕಿ, ಗೋಧಿ ತಂದ್ರೆ ಅದನ್ನ ಆರಿಸೋ ಕೆಲಸಕ್ಕೂ ನಿನ್ನ ಕರೀತಾ ಇರ್ಲಿಲ್ಲ, ಅದೆಲ್ಲಾ ನಮ್ಮ ಪಾಲಿಗೇ ಮೀಸಲು. ಅಪ್ಪ, ಅಮ್ಮನಜೊತೆ ಅಕ್ಕಿ ಆರಿಸ್ತಾ ಇದ್ವಿ. ಮನೆಗೆ ಹಾಲು ತರ್ಬೇಕಾದ್ರೆ ಒಂದೋ ನಾನು ಇಲ್ಲ ಅಕ್ಕ ಹೋಗ್ತಾ ಇದ್ವಿ. ಮನೆಯಲ್ಲಿ ಬಟ್ಟೆ ಬರೆಗಳಿಂದ ಹಿಡಿದು ಎಲ್ಲದಕ್ಕೂ ನಿನಗೇ ಮೊದಲ ಪ್ರಾಶಸ್ತ್ಯ. ನೀನು ಬಿಟ್ಟದ್ದು ನಮಗೆ.... ಅದು ನೀನು ಸಣ್ಣ ಮಗುವಿದ್ದಾಗಿನಿಂದ ಇದ್ದೇ ಇತ್ತು. ಇಂದಿಗೂ ನಾವು ಸಣ್ಣ ಮಕ್ಕಳಾಗಿದ್ದಾಗಿನ ಚಿತ್ರಗಳಿಗಿಂತಾ ನಿನ್ನ ಚಿತ್ರಗಳೇ ಹೆಚ್ಚು ಇವೆ. ನಾಮಕರಣ, ಉಪನಯನ ಹೀಗೆ ಎಲ್ಲದರಲ್ಲೂ ನಾನು ಕಡೆಯ ಮಗ.... ಹಾಗಾಗಿ ಎಲ್ಲದರಲ್ಲೂ ಕಡೆಯವನೇ ಆದೆ. 

ಆದರೆ ಆ ಎಲ್ಲಾ ನೋವನ್ನ ಮೀರಿಸೋ ಹಾಗೆ ನೀನು ನಮ್ಮನ್ನ ನೋಡಿಕೊಂಡಿದ್ದೀಯ. ನಿನ್ನ ಮೇಲೆ ನನಗೆ ಹೆಚ್ಚು ಪ್ರೀತಿ ಮೂಡಿದ್ದು ನಾನು ಬೆಳೆದು ಹೈ ಸ್ಕೂಲಿಗೆ ಬಂದನಂತರವೇ ಇರಬೇಕು. ನೀನು ನನಗೆ ನಿನ್ನ ಬಿ.ಎಸ್.ಏ ಸೈಕಲ್ಲನ್ನು ಓಡಿಸಲು ಕಲಿಸಿದ್ಯಲ್ಲ.... ಆಮೇಲೆ ಒಮ್ಮೊಮ್ಮ ಅದನ್ನ ಬೇಕಾದ್ರೆ ತೊಗೊಂಡ್ ಹೋಗು ಅಂತಾ ಇದ್ಯಾಲ್ಲ... ಆಗಂತೂ ಎಷ್ಟು ಖುಷಿ ಆಗೋದು ಗೊತ್ತಾ ???? ಈಗಲೂ ನೀನು ಒಮ್ಮೊಮ್ಮೆ "ಪಲ್ಸರ್ ತೊಗೊಂಡ್ ಹೋಗು" ಅಂತ್ಯಲ್ಲಾ, ಅದೂ ಖುಷಿ ಕೊಡತ್ತೆ.
ನಿನ್ನ ಬಗ್ಗೆ ಹೇಳಲು ಪದಗಳು ಸಾಲೋದಿಲ್ಲ ಅಣ್ಣ.... ನನ್ಗೆ ನೀನಂದ್ರೆ ತುಂಬ ತುಂಬಾ ತುಂಬಾ ಇಷ್ಟ!!!

ನಾನು ಈಗಲೂ ನನ್ನ ಆಪ್ತರಲ್ಲಿ ನಿನ್ನ ಗುಣಗಾನ ಮಾಡದೇ ಇರುವುದಿಲ್ಲ, ಯಾಕೆಂದ್ರೆ ಒಂದು ಹಂತದಲ್ಲಿ ಜೀವನದ ಬಗ್ಗೆ ಬೇಸರಿಕೆ ಮೂಡಿದ್ದ ನನಗೆ ಅದರಲ್ಲಿ ಹೊಸ ಉತ್ಸಾಹ ತುಂಬಲು ನೀನು ಕಾರಣನಾದೆ. ಹೊಸ ಕನಸುಗಳನ್ನ ಕಟ್ಟಿಕೊಟ್ಟೆ.... ಅದನ್ನ ಸಾಕಾರಗೊಳಿಸಲು ನನ್ನ ಬೆನ್ನೆಲುಬಾದೆ.... ಮುಂಗೋಪಿಯಾಗಿದ್ದ ನನಗೆ ಜೀವನ ಎದುರಿಸುವ ಕಲೆಯನ್ನು ಹೇಳಿಕೊಟ್ಟೆ. ಸಮಾಧಾನದಿಂದ ಪರಿಸ್ಥಿತಿಯನ್ನ ಎದುರಿಸುವ ಪಾಠ ಹೇಳಿಕೊಟ್ಟೆ. ನಮ್ಮ ಮನೆಗೆ ನೀ ತಂದ ಆ ಪುಟ್ಟ ಹಳೆಯದಾದ ಗಣಕಯಂತ್ರದಿಂದ ನಾನು ಇಂದು ಐದಂಕಿಯ ಸಂಪಾದನೆಯಲ್ಲಿದ್ದೇನೆ. ನಿನ್ನ ಗೆಳೆಯರ ಬಳಗದಿಂದಲೇ ಅಣ್ಣ ನಾನು ಮೇಲೆ ಬಂದದ್ದು. ನಿನಗೆ ನೆನಪಿದ್ಯಾ ? ಅವತ್ತು ನಾವೆಲ್ಲಾ ಬೆಟ್ಟಕ್ಕೆ ಹೋಗಿ ನಮ್ಮ "ಜಿ.ಟಿ.ಆರ್" ನಲ್ಲಿ ತಿಂಡಿ ತಿಂದು ಹೊರಡುವಾಗ ನನಗೆ ಬೆಂಗಳೂರಿನ ಕೆಲಸದ ಬಗ್ಗೆ ಅಣ್ಣಯ್ಯ ಹೇಳಿದ್ದ. ಅಲ್ಲಿಂದ ಮನೆಗೆ ಬಂದಮೇಲೆ ನನ್ನ ಮನಸ್ಸು ಬಹಳ ಗೊಂದಲದಲ್ಲಿತ್ತು. ಬೆಂಗಳೂರಿಗ ಹೋಗುವುದೋ, ಬೇಡವೋ... ಹೋದರೆ ಎಲ್ಲಿ ಉಳಿಯುವುದು ? ಯಾರ ಮನೆ ? ಅವರೊಂದಿಗೆ ಹೇಗೆ ಹೊಂದಿಕೊಳ್ಳುವುದು ???? ಇನ್ನೂ ಸಾವಿರ ಪ್ರಶ್ನೆಗಳು.......... ಅದೆಲ್ಲಕ್ಕೂ ಉತ್ತರ ನೀನಾದೆ. "ಬೆಂಗ್ಗ್ಳೂರಲ್ಲಿ ಮನೆಮಾಡ್ಕೊ, ಆಗ ನಮಗೂ ಊರಿಂದ ಬಂದ್ರೆ ಉಳ್ಕೊಳ್ಳೋಕೆ ಒಂದು ಮನೆ ಇರತ್ತೆ" ಎಂದೆಲ್ಲಾ ಹೇಳಿ ಹುರಿದುಂಬಿಸಿದ್ದೆ. ಆ ನಿನ್ನ ಸ್ಪೂರ್ಥಿ ತುಂಬಿದ ಮಾತುಗಳೇ ನನ್ನ ಕಾಲಿನ ಮೇಲೆ ನಾನು ನಿಲ್ಲುವ ಹಾಗೆ ಮಾಡಿದೆ. ನಿನ್ನ ಸಹಾಯದಿಂದಲೇ ಖರೀದಿಸಿದ್ದ "ಟಿ.ವಿ.ಎಸ್-ಎಕ್ಸ್ ಎಲ್ ಸೂಪರ್" ಗಾಡಿಯಲ್ಲಿ ನಾನು ಮತ್ತು ನೀನು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆವು. ಆ ಕ್ಷಣಗಳನ್ನ ಎಂದಿಗೂ ನಾನು ಕಳೆದುಕೊಳ್ಳುವುದಿಲ್ಲ. ನೀನು ನನ್ನ ಮುದ್ದಿನ ಗುರು, ಮಾರ್ಗದರ್ಶಿ :) 

ಕಳೆದ ಕೆಲವು ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿ ನನ್ನ Ligament tear ಮಾಡಿಕೊಂಡಾಗ ನೀನು ಮತ್ತೆ ಅತ್ತಿಗೆ ನನ್ನ ನೋಡಿಕೊಂಡದ್ದನ್ನು ಮರೆಯೋದಿಕ್ಕೆ ಆಗೋದಿಲ್ಲ. ಪುಟಾಣಿ ವಿಸ್ಮಯ ಕೂಡಾ ನನ್ನ ಅಷ್ಟೇ ಕಾಳಜಿ ಇಂದ ನೋಡ್ಕೊಂಡ್ಳು. ಆ ಸಮಯದಲ್ಲಿ ಧೈರ್ಯಗೆಟ್ಟು ಕೂತಿದ್ದ ನನಗೆ ಧೈರ್ಯ ಹೇಳಿದವನು ನೀನು..... ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದವನು ನೀನು. ಏನಾದರೂ ಹೆದರದೇ ಮುನ್ನಡೆಯಬೇಕು ಅನ್ನೋದನ್ನ ಹೇಳಿದವನು ನೀನು.... :)

ಇನ್ನೂ ಬಹಳಷ್ಟು ವಿಚಾರಗಳು ನಿನ್ನೊಡನೆ ಮಾತನಾಡುವುದಿದೆ. ಆದರೆ ಸಧ್ಯಕ್ಕೆ ಬೇಡ :) ಮತ್ತೆ ಯಾವಾಗಲಾದರೂ ಕುಳಿತು ಮಾತನಾಡೋಣ :)

ಅಂತೂ ಇಂತೂ ನೋಡ್ತಾ ನೋಡ್ತಾ ಜೀವನದ ಅರ್ಧ ಆಯಸ್ಸು ಕಳದೇ ಹೋಯ್ತಲ್ಲಾ ? ನಾನು ನನ್ನ ಮೊದಲಿನ ಅಣ್ಣನ್ನ, ಆ ದಿನಗಳನ್ನ ತುಂಬಾ ಮಿಸ್ ಮಾಡ್ಕೊತಾ ಇದ್ದೀನಿ ಕಣೋ.... ಜೀವನ ಅಂದ್ ಮೇಲೆ ಎಲ್ಲಾರೂ ಸಮಯಕ್ಕೆ ತಕ್ಕ ಹಾಗೆ ಮತ್ತೆ ತಮಗೆ ತಕ್ಕ ಹಾಗೆ ಬದಲಾಗಲೇ ಬೇಕು ಅನ್ನೋ ಕಟು ಸತ್ಯ ತಿಳಿದೂ ನಾನು ನಿನ್ನಲ್ಲಿ ನನ್ನ ಮೊದಲಿನ ಅಣ್ಣನ್ನ ನೋಡೋಕೆ ಇಷ್ಟ ಪಡ್ತಾ ಇದೀನಿ.... ಆದರೂ ಒಳ ಮನಸ್ಸಿನಲ್ಲಿ ಪದೇ ಪದೇ ಒಂದು ಮಾತು ಮರುಕಳಿಸತ್ತೆ.... "ಬದಲಾವಣೆ ಜಗದ ನಿಯಮ" ಅಲ್ವಾ ??? :)

ಇಂತೀ ನಿನ್ನ ನಲ್ಮೆಯ... ಪ್ರೀತಿಯ.... ತಮ್ಮ.....

ಪ್ರಶಾಂತ ಜಿ ಉರಾಳ (ಪಚ್ಚು)

Rating
No votes yet

Comments

Submitted by ravindra n angadi Sat, 02/27/2016 - 11:55

ಕಥೆ ಓದುತ್ತಾ ಹೋದಂತೆ ನೀವು ಬರೆದ ವಿಶೇಷ ಸೂಚನೆಯ ಲಕ್ಷ್ಯಕ್ದೇ ಬರುವುದಿಲ್ಲ.
ಚೆನ್ನಾಗಿದೆ.
ಧನ್ಯವಾದಗಳು.

Submitted by kavinagaraj Sat, 02/27/2016 - 14:38

ಮನದುಂಬಿ ಬಂದಿತು. ಬಾಲ್ಯದ ನೆನಪುಗಳು ಸಿಹಿಯಾಗಿರುತ್ತವೆ. ಬೆಳೆದಂತೆ ಸಂಬಂಧಗಳಲ್ಲಿ ಸಡಿಲತೆ ಬರುತ್ತದೆ. ನೀವಂದಂತೆ ಕಾಲದ ಮಹಿಮೆ!