ನೆಬ್ಬೂರರಿಗೆ ಪದ್ಯ ಸಮ್ಮಾನ

ನೆಬ್ಬೂರರಿಗೆ ಪದ್ಯ ಸಮ್ಮಾನ

ಚಿತ್ರ

 

ನೆಬ್ಬೂರರಿಗೆ ಪದ್ಯ ಸಮ್ಮಾನ 

 

ಯಕ್ಷಗಾನದ ಮಧುರ ಸಂಗೀತ ಮೋಡಿಯೋ 

ಳುಕ್ಕಿ ಸಂಭ್ರಮ ಎದೆಯ ರಸಭಾವ ಚಿಮ್ಮಿತೋ 

ಮಿಕ್ಕು ಮಾತುಗಳಳಿದು ಗಾನಾಬ್ಧಿಯೊಳು ಮುಳುಗಿ ತೇಲಾಡಿದಂತಾದುದೋ 

ಸೊಕ್ಕ ಪಿಕ ಮಾಮರದ ಚಿಗುರುಂಡು ಉಲಿಯಿತೋ 

ಚೊಕ್ಕ ಪಂಚಮ ಕೇಳಿ ಕೇಳಿಯಲಿ ನಲಿಯಿತೋ 

ಬೆಕ್ಕಸದಿ ಬೆರಗಾದುದೆಮ್ಮೆದೆಯು ನೆಬ್ಬೂರು ನಾದಸಿರಿಗೀ ತೆರದೊಳು ।।1||

ವರನಟರ ರಂಗದಲಿ ಮೆರೆಸಿರುವ ಮೆರೆದಾಟ

ಕೆರೆಮನೆಯ ಒಡನಾಟ ಶಂಭು ಮಹಬಲರಾಟ 

ದೊರೆಯಾಗಿ ರಸಿಕರೆದೆಗೆರೆದು ಗಾನದ ಬಗೆಯ ತೋರಿ ಹಲವಾರು ಮಾಟ ।।

ಹಿರಿತನವ  ದೊರಕಿಸಿದ ಹಿರಿಗಲೆಯ ಹಿರಿಯಾತ

ರರಸಿದರೆ ನೆಬ್ಬೂರು ಭಾಗವತರೆಂಬಂತ 

ಅರಿವಿಂದಲೀಯುವೀ ಸಮ್ಮಾನ ತಮಗಿದೋ ಮಾಡುತಿದೆ ಅಭಿಮಾನಿ ಕೂಟ ।।೨।।

ಹೆಮ್ಮೆ ಎನಿಸಿತು ನಿಮ್ಮ ಸಾಧನೆಗಳನುಭವದಿ

ಹೊಮ್ಮಿ ಪಸರಿಸಿ ನಾಡ ತುಂಬೆಲ್ಲ ಸಂಭ್ರಮಿಸಿ

ರಮ್ಯವೆನಿಸಿರೆ ಕಂಡು ಪ್ರಾರ್ಥಿಪೆವು ಕೈಮುಗಿದು ಗೌರವದಿ ಸಂಮಾನಿಸಿ ।।

ನಿಮ್ಮ ಆಯುಷ್ಯ ಸಿರಿ ವೃದ್ಧಿಸುತ್ತಿರುತಿರಲಿ

ನೆಮ್ಮದಿಯ ಜೀವನವು ನಿಮ್ಮದೆನಿಸುತ್ತಿರಲಿ 

 ಎಂಬುದೀ  ಹಾರೈಕೆ ಭಗವಂತ ಮನ್ನಿಸುತ ಚೆಂದದಲಿ ತಾ ಹರಸಲಿ ।।೩।।


                                                                                                                              -   ಸದಾನಂದ  

                                                                                                                                                         

Rating
No votes yet

Comments

Submitted by ಗಣೇಶ Mon, 02/04/2013 - 00:47

>>>ನಿಮ್ಮ ಆಯುಷ್ಯ ಸಿರಿ ವೃದ್ಧಿಸುತ್ತಿರುತಿರಲಿ

ನೆಮ್ಮದಿಯ ಜೀವನವು ನಿಮ್ಮದೆನಿಸುತ್ತಿರಲಿ +೧