ನೇಮಾಡೆಯವರ ಕವಿತೆಗಳು
"ಕತ್ತಲೆಗೂ, ದುಃಖಕ್ಕೂ ನಿಗೂಢ ಸಂಬಂಧವಿದೆ. ಸುತ್ತಲಿನ ವಾಸ್ತವದ ಉಪರೋಧದ ಚಿತ್ರಣ, ಪರಕೀಯತೆ, ಮಾನವ ಅಸ್ತಿತ್ವದ ಗೂಢ - ಇದೆಲ್ಲ ನಗರ ಸಂಸ್ಕೃತಿಯೊಂದಿಗೆ ತಳಕು ಹಾಕುವ ಪ್ರವೃತ್ತಿಗಳು. ನೇಮಾಡೆ ಇದೆಲ್ಲವನ್ನೂ ನೀಡುತ್ತಲೇ ಅದಕ್ಕೊಂದು ಪರ್ಯಾಯ ಸೂಚಿಸುತ್ತಾರೆ. ನೇಮಾಡೆಯ ಕವಿತೆಗಳು ಮಾನವ ಅಸ್ತಿತ್ವದ ಹಿಡಿರುವ ರಚನಾತ್ಮಕ ಮತ್ತು ಶ್ರೇಯಸ್ಕರ ಪ್ರವೃತ್ತಿಗೆ ವಿಶೇಷ ಮಹತ್ವ ನೀಡುತ್ತವೆ." ಹೀಗೆ ಮರಾಠಿಯ ಬಹುಮಾನ್ಯ ಕವಿ ಭಾಲಚಂದ್ರ ನೇಮಾಡೆಯವರನ್ನು ಪರಿಚಯಿಸುವ ಚಂದ್ರಕಾಂತ ಫೋಕಳೆಯವರು ಇತ್ತೀಚೆ ಅವರ ಕವಿತೆಗಳನ್ನು ಅನುವಾದಿಸಿದ್ದಾರೆ. ಮಂಡ್ಯದ ಬ್ಯಾಲದಕೆರೆ ಪ್ರಕಾಷನದಿಂದ ಪ್ರಕಟವಾಗಿರುವ 'ಭಾಲಚಂದ್ರ ನೇಮಾಡೆ ಕವಿತೆಗಳು' ಎಂಬ ಪುಸ್ತಕ ಓದಿ ನೋಡಿ.
ಫೋಕಳೆಯವರು ಬಹಳ ಅನುವಾದ ಮಾಡಿದ್ದಾರೆ. ಕೆಲವು ಪ್ರಕಟಿತವಾದರೆ, ಕೆಲವು ಇನ್ನೂ ಅಪ್ರಕಟಿತ.
ನೇಮಾಡೆ ಕವಿತೆಗಳ ನಿದರ್ಶನ ಈ ಸಾಲುಗಳು:
"ಕೂದಲಂಚಿನಲಿ ಜಾರುತ್ತವೆ ಬೆರಳ ಹೆಜ್ಜೆ
ಬೆರಳ ಸಮತೋಲ ಸಹಿಸಿ ಸಹಿಸಿ ಸೋತಿತು ಅಂಗೈ
ಅದು ಹೇಗೆ ಹೆಣೆಯ ಬಲ್ಲೆ ಅನಂತಾಗಸದ ಕಪ್ಪು ಹಾದಿ!
ಬಿಟ್ಟುಬಿಡು ಕೂದಲೆಲ್ಲ ಆಕಾಶಗಂಗೆಯಾಗಿ ಹರಿಯಲಿ-
ಅಗ್ನಿಬಾಣದ ಕಮಾನಿನಂತೆ
('ಲಾವಣ್ಯದೀಪದ ಬೆಳಕಿನಲಿ' ಕವನದಿಂದ)
ಯಾರಿಗಾಗಿ ಈ ಪ್ರಶಾಂತ ಮೌನದ ಹಾದಿ ಕಾಯುವಿಕೆ?
ಹೊಸ್ತಿಲಲಿ ಊರಿದ ಬಳೆ ನಕ್ಷೆಗಳಿಗೆ ಅರ್ಥವಾಗುವ
ನಿಮ್ಮ ಹೆಬ್ಬೆರಳ ಕೋಮಲತೆ ಯಾರಿಗಾಗಿ?
ಇನ್ನೆಷ್ಟು ದಿನ... ಈ ಕನ್ನಡಿಯೊಳಗಿನ ನಿಮ್ಮದೇ
ಪರಿಚಿತ ಕುಂಕುಮ ಚಂದ್ರನ ಕೆಳಗಿನ ನಸುಕು ಬೋಳು ಹಣೆ?
('ನೀವು ಹೇಗೆ ರಂಗೋಲಿ ಬಿಡಿಸುತ್ತೀರಿ ಕುಲೀನ ವ್ಯಥೆಗಳೇ!' ಕವನದಿಂದ)
ಸಣ್ಣ ಪ್ರಕಾಶನದಿಂದ ಬಂದಿರುವ ಇಂಥ ಪುಸ್ತಕಗಳ ಸಂಖ್ಯೆ ಬೆಳೆಯಲಿ.