ನೇರಳೆಮರ

ನೇರಳೆಮರ

ಬಹುಶಃ ಇಡೀ ಬಯಲಲ್ಲಿ ನಾನೊಬ್ನೆ ಮರ ಅನ್ಸುತ್ತೆ , ಬಿಸಿಲ ಧಗೆ ಸುಡ್ತಾ ಇದ್ರೂ ನಿಂತಿದೀನಿ. ಸುಮಾರು 30 ಹೆಜ್ಜೆ ದೂರದಲ್ಲಿ ಒಂದು ಮಾವಿನಮರ ಇದ್ದ , ಕುಳ್ಳಾಮಣಿ !. ಉಳಿದ ಮಾವಿನ ಮರಗಳ ತರಹ ಉದ್ದ , ಅಗಲ ಬೆಳೀಲೆ ಇಲ್ಲ. ಅವ್ನು ನಿಂತಿದ್ದು ಬಾಗಾಯ್ತಿ ಜಮೀನಿನ ಬದುವಿನ ಮೇಲೆ , ಸರಿಯಾಗಿ ಗೊಬ್ರ , ನೀರು ಬಿದ್ದಿರ್ಲಿಲ್ಲ . ಶಾಲೆ ಮಕ್ಳು ಅವ್ನ ಕುಳ್ಳ ಮೈಮೇಲೆ ಹತ್ತಿ ಮಾವಿನಕಾಯಿ ಕುಯ್ಬೇಕಾದ್ರೆ , ನನ್ ಕಡೆ ನೋಡಿ ನಗೋವ್ನು ! ನಾನಾದ್ರೋ , ನನ್ ಧೂಳು ಮೆತ್ತಿದ ಮೈ ಮುಖ ಆ ಕಡೆ ತಿರುಗಿಸಿ , ಅರ್ಧ ಕಣ್ಣು ಬಿಟ್ಟು ನಗೋ ತರಾ ಮಕಾ ಮಾಡ್ತಿದ್ದೆ . ನನ್ ಮುಂದೆ , 10 ಹೆಜ್ಜೆ ದೂರದಲ್ಲಿ ಒಂದು ಕಲ್ಲು ಕ್ರಷರ್ ಇಡೀ ದಿನ ಟನ್ ಗಟ್ಲೆ ಕಲ್ಲು ಜಲ್ಲಿ ಅಗ್ದು ಹುಡಿ ಮಾಡಿ ಹಾಕೋದು. ಸುಮಾರು 3 ವರ್ಷ ಅದು ಎಡೆ ಬಿಡದೆ ಹೀಗೆ ಕಲ್ಲು ಹುಡಿ ರಾಶಿ ಹಾಕ್ತಿತ್ತು . ಆ ರಾಶಿ ಎಬ್ಸೋ ಧೂಳು ಇಡೀ ಅಗಸೂರು ತುಂಬಾ ತೂರಾಡಿ , ಮರ ಗಿಡ , ಮನೆ ಛಾವಣಿ , ಒಣಗಿ ಹಾಕಿದ್ದ ಬಟ್ಟೆ ಮೇಲೂ ಅಂಟೋದು. ಅಂಕೋಲಾ ,ಯಲ್ಲಾಪುರ ಮಧ್ಯೆ ಹೆದ್ದಾರಿ ಮಾಡೋ ಕಾಂಟ್ರಾಕ್ಟ್ ತಗಂಡ ರಸ್ತೆ ಕಂಪನಿ , ಎಲ್ಲಾ ಜಾಗ ಹುಡ್ಕಿ , ಸರಿ ಮಧ್ಯ ದಾರೀಲಿ ಇರೋ ಅಗಸೂರಲ್ಲೇ ತನ್ನ ಯುನಿಟ್ ಹಾಕೋದು ಉಚಿತ ಅಂತ ಈ ಜಾಗಕ್ಕೆ ಬಂದಿತ್ತು . ಈ ಜಮೀನಿನ ವಾರಸುದಾರ್ರು ಅಂಕೋಲೆಲಿ ಇರ್ತಿದ್ರು , ದೊಡ್ಡ ಜಮೀನ್ದಾರ್ರು ಅಂತ ಕೇಳಿದೀನಿ. ಕಂಪನಿ ಅವ್ರಿಗೆ ವರ್ಷಕ್ಕೆ ಇಂತಿಷ್ಟು ಅಂತ ಸುಂಕ ಕೊಡೋದು. ಹತ್ರದಲ್ಲೇ ಒಂದು ಗೌಡರ ಕೇರಿ , ಹೆಬ್ಬಾರರ ತೋಟ ,ಜಮೀನು ಇದ್ದವು. ಮೊದ ಮೊದಲು ಅವ್ರೆಲ್ಲ ಇದ್ರಿಂದ ಆಗೋ ಅಧ್ವಾನ ಅಂದಾಜು ಹಾಕಿ , ಕಂಪನಿ ಇಲ್ಲಿ ಜಾಂಡಾ ಹೂಡದ ಹಾಗೆ ಜಮೀಂದಾರ್ರ ಹತ್ರ ಹೋಗಿ , ಅಹವಾಲು ಮಾಡಿದ್ರು . ಆದ್ರೆ ಕಂಪನಿ ಬರೋದ್ರಿಂದ ಊರಿನ ಯುವಕರಿಗೆ ಸಿಗೋ ಉದ್ಯೋಗಾವಕಾಶ ನೋಡಿ ಹೆಚ್ಚೇನೂ ಪ್ರತಿಭಟನೆನೂ ನಡೀಲಿಲ್ಲ .
ಮೊದ ಮೊದಲು ಅಲ್ಪ ಸ್ವಲ್ಪ ಜಾಗದಲ್ಲೇ ಕಲ್ಲು ಹುಡಿ ರಾಶಿ ಹಾಕ್ತಿದ್ದೋರು , ಯಾರು ಕೆಳೋವ್ರು ಇಲ್ದೆ ಇರೋದನ್ನ ಗಮನಿಸಿ , ಖಾಲಿ ಬಯಲೆಲ್ಲಾ ತುಂಬೋಕೆ ಶುರು ಮಾಡಿದ್ರು. ಬಯಲು ಅಂದ್ರೆ ಕೇಳ್ಬೇಕಾ ? ಗಾಳಿ ಬೀಸೋಕೆ ಶುರು ಮಾಡಿದ್ರೆ , ಕಲ್ಲು ಹುಡಿನೆಲ್ಲಾ ಹಾರಿಸಿಕೊಂಡು ಹೋಗಿ, ಊರಲೆಲ್ಲಾ ತೂರಾಡೋದು . ಬಯಲಿಗೆ ಅಂಟಿಕೊಂಡಂತೆ ಹೆಬ್ಬಾರರ ತೆಂಗಿನ ತೋಟ , ಬಾವಿ ಬೇರೆ . ಬಾವಿ ನೀರಲ್ಲಿ ಕಲ್ಲು ಹುಡಿ ಬೀಳದ ಹಾಗೆ ವ್ಯವಸ್ಥೆ ಮಾಡೋದೆ ದೊಡ್ಡ ತಲೆ ನೋವಾಗೋಯ್ತು . ಬಾಳೆ ಎಲೆ , ಮಾವಿನ ಮರ ಅಂತೂ ಬೆಳ್ಳಗಾಗತೊಡಗಿದವು . ಅವ್ರ ತಾತನ ಕಾಲದಿಂದಲೂ ಬಾಳೆ ಎಲೇಲೆ ಊಟ ಮಾಡಿದವ್ರು , ಈಗ ಸ್ಟೀಲ್ ತಟ್ಟೆ ಬಳಸಲೇಬೇಕಾದ ಪರಿಸ್ಥಿತಿ ಬಂತು . ಬೇಸಿಗೆ ರಜೇಲಿ ಅಜ್ಜನ ಮನೆಗೆ ಬರೋ ಮೊಮ್ಮಕ್ಕಳು , ಕಲ್ಲು ಗುಡ್ಡ ನೋಡಿ , ಅದ್ರ ಮೇಲೆ ಕುಣ್ಯೋಕೆ , ಆಡೋಕೆ ಹೋಗವ್ರು. ಈ ಕಂಪನಿ ಬರೋಕಿಂತ ಮುಂಚೆ , ಈ ಮಕ್ಳು , ನನ್ ಮೈ ಮೇಲೆ ಆಗೋ ನೇರಳೆ ಹಣ್ಣು ಕೀಳೋಕೆ ಬರೋವ್ರು. ಈಗ ಧೂಳು ಮುಚ್ಚಿ ಬೆಳ್ಳಗೆ ದೆವ್ವದ ಹಾಗೆ ಕಾಣ್ತಿದ್ದೆ . ಹಕ್ಕೀನೂ ಕೂತ್ಕೊಂಡು ಹಿಕ್ಕೆ ಹಾಕ್ತಿರ್ಲಿಲ್ಲ . ಆ ಮಕ್ಳು ಈಗ್ಲೂ ಬರ್ತಿದ್ರು , ಕಲ್ಲು ರಾಶಿ ಎತ್ತೋ ಕ್ರೇನ್ ಮೇಲೆ ಹತ್ತೋಕೆ. " ಅಂಕಲ್ , ಅಂಕಲ್ , ಕ್ರೇನ್ " , ಅಂದಾಕ್ಷಣ , ಕ್ರೇನ್ ಡ್ರೈವರ್ ಇವ್ರನ್ನ ಎರಡು ರೌಂಡ್ ಹಾಕೊವ್ನು . ಒಂದ್ ದಿನ ಯಾರೋ ಬುಧ್ವಂತ ಬಂದು , ಈ ಧೂಳಲ್ಲಿ ಆಸ್ಬೆಸ್ಟಾಸ್ ಇರುತ್ತೆ , ಸಿಕ್ಕಾಪಟ್ಟೆ ವಿಷ ಅಂತ ಹೇಳ್ದ . ಮರುದಿನದಿಂದ ಮಕ್ಳ ಆಟ ನಿಂತೋಯ್ತು . ಹಗಲಿಡೀ ಕಲ್ಲು ಕ್ರಷರ್ ಕೆಟ್ಟ ಶಬ್ದ ಮಾಡ್ತಾ ಕಲ್ಲು ಅಗ್ಯೋದು , ಸಾಲು ಸಾಲು ಟಿಪ್ಪರ್ ಲಾರಿಗಳು , ಈ ರಾಶಿ ಎತ್ಕೊಂಡು , ಬಾಳೆಗುಳಿ , ಯಲ್ಲಾಪುರ ಕಡೆ ಓಡ್ತಿದ್ವು . ನೆಲದ ಮೇಲಿನ ಮಣ್ಣೂ ಕೆಂಬಣ್ಣ ಬಿಟ್ಟು , ಬೆಳ್ಳಗೆ ಹಿಮದ ಹಾಗೆ ಮಿಂಚೋಕೆ ಶುರು ಆಯ್ತು . ಕಣ್ ಕುಕ್ಕೋ ಬಿಳುಪು , ಬೇಸಿಗೇಲಿ ಧಗೆ ಬೇರೆ. ಇದ್ರಿಂದ ಮುಕ್ತಿ ಯಾವಾಗ ಅನ್ಸೋಕೆ ಶುರು ಆಯ್ತು . 3 ವರ್ಷದ ನಂತರ ಅಂತೂ ಹೆದ್ದಾರಿ ತಯಾರಾಯ್ತು . ಆದ್ರೆ ಈ ಬಯಲು ಪೂರ್ತಿ ಬದಲಾಗೋಯ್ತು . ಮಳೆ ನೀರು ಕಲ್ಲು ರಾಶಿನೆಲ್ಲಾ ಜಡ್ಡುಗಟ್ಟಿಸಿ , ಮಣ್ಣಿನ ಗುಣಾನೇ ಬದಲಾಯಿಸಿಬಿಡ್ತು . ಗೌಡರ ಕೇರಿಗೆ ಹೊಂದಿಕೊಂಡ ಅವ್ರ ಗದ್ದೆಯ ಇಳುವರಿನೂ ಕಮ್ಮಿ ಆಗೋಯ್ತು . 2 ಮಳೆಗಾಲ ಕಳೆದರೂ ನನ್ ಮೈಮೇಲೆ ಅಂಟಿಕೊಂಡ ಧೂಳು ತೊಳೀಲೆ ಇಲ್ಲ . ಬಯಲಲ್ಲೆಲ್ಲಾ ಕಲ್ಲು ರಾಶಿ ಹಾಕಿದ ಕಂಪನಿ , ಹೋಗ್ಬೇಕಿದ್ರೆ ಬಯಲನ್ನ ಮೊದಲಿನ ತರ ಮಾಡೋ ಪ್ರಯತ್ನಾನೇ ಮಾಡ್ಲಿಲ್ಲ . ನಮ್ಗೆ ಸರ್ಕಾರ ಇದರ ದುಡ್ಡು ಕೊಟ್ಟಿಲ್ಲ ಅಂತ ಬೇಜವಾಬ್ದಾರಿ ಉತ್ತರ ಕೊಟ್ಟು ಕಳಚಿಕೊಂಡ್ಬಿಡ್ತು . ಕಂಪನಿಗೆ ಲಾಭ ಬಂತು . ಬೇರೆ ಕಡೆ ಇನ್ನೆಲ್ಲೋ ಹೊಸ ಯೋಜನೆನೂ ಸಿಕ್ತು . ಅಲ್ಲೊಂದು ಅಗಸೂರು ಹೀಗೆ ಧೂಳು ತಿಂತಾ ಇದೆ . ನನ್ ತರಾ ಇನ್ನೊಂದು ನೇರಳೆಮರ ಧೂಳು ಗಾಳಿ ಕುಡೀತಾ ಇದೆ.

Rating
No votes yet