ನೈಜ ಸ್ಪಂದನ
ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ
ಕೂಡಲೆಯೆ ಮುಚ್ಚಿಕೊಂಡೆ
ಅರಳಿದ ಕದಂಬಹೂವಂತೆ ಮೈ ನವಿರೇಳೆ
ಹೇಳೆ ಹೇಗದ ಮುಚ್ಚಲೆ?
ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14):
ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತಾಭ್ಯಾಂ ತಸ್ಮಿನ್ದೃಷ್ಟೇ
ಅಂಗಂ ಕದಂಬಕುಸುಮಮಿವ ಪುಲಕಿತಂ ಕಥಂ ನು ಚ್ಢಾದಯಿಷ್ಯಾಮಿ
ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ - 4-14)
ಅಚ್ಛೀಇ ತಾ ಥಡಸ್ಸಂ ದೋಹಿ ವಿ ಹತ್ಥೋಇ ವಿ ತಸ್ಸಿಂ ದಿಟ್ಠೇ
ಅಂಗಂ ಕಲಂಬಕುಸುಮಂ ವ ಪುಲಇಅಂ ಕಹ ಣು ಢಕ್ಕಿಸ್ಸಂ || 4-14||
-ಹಂಸಾನಂದಿ
ಕೊ: ಈ ಪದ್ಯದ ನಾಯಿಕೆ ತನ್ನ ಪ್ರಿಯಕರನೊಂದಿಗೆ ಮುನಿಸು ಹೊಂದಿರುವ 'ಖಂಡಿತೆ'. ತನ್ನ ಪ್ರಿಯಕರನ ಜೊತೆ ಮುನಿಸುಗೊಂಡಿರುವವಳು. ಅವನು ಕಂಡರೆ ಅವನನ್ನು ನೋಡಲೂಬಾರದೆಂದು ಕಣ್ಣುಮುಚ್ಚಿಕೊಳ್ಳುವವಳು - ಆದರೆ ಅವಳ ಕೈ, ಕಣ್ಣುಗಳಂತೆ ಮನಸ್ಸನ್ನು ಕಟ್ಟಿಹಾಕಲು ಅವಳಿಂದ ಅಸಾಧ್ಯವೆನ್ನುವುದು ಪದ್ಯದ ಭಾವ.
ಕೊ.ಕೊ: ಚಿತ್ರದಲ್ಲಿರುವುದು ಕದಂಬ ಹೂವು ( Neolamarckia cadamba). ಕರ್ನಾಟಕದ ಪ್ರಸಿದ್ಧ ರಾಜಮನೆತನ 'ಕದಂಬ' ರಿಗೆ ಹೆಸರು ಬಂದಿರುವುದೂ ಈ ಮರದಿಂದಲೇ ಅಂತೆ. ಕೆಲವರು ಕದಂಬ ಮರವೆಂದರೆ ಈಚಲಮರ ಎನ್ನುವುದೂ ಉಂಟು.
ಕೊ.ಕೊ.ಕೊ: ಹಾಲನ ಗಾಹಾ ಸತ್ತಯಯಿ ನಂತರ ಬಂದ ಅಮರುಕನ ಮೇಲೆ ಪ್ರಭಾವ ಬೀರಿದೆ ಎನ್ನುವು ಅಭಿಪ್ರಾಯವಿದೆ. ಉದಾಹರಣೆಗೆ ಈ ಪದ್ಯವನ್ನೇ ಹೋಲುವ ಹಮ್ಮು ತೊರೆದವಳು - ಈ ಅನುವಾದವನ್ನು ನೋಡಿ.
ಚಿತ್ರಕೃಪೆ: ವಿಕಿಪೀಡಿಯಾ
Comments
ಉ: ನೈಜ ಸ್ಪಂದನ
ಹಂಸಾನಂದಿಯವರೆ, ಕದಂಬ ಪುಷ್ಪದ ( http://en.wikipedia.org/wiki/File:Neolamarckia_Cadamba_Flower.jpg ) ಫೋಟೋ ಏಕೋ ಕಾಣಿಸುತ್ತಿಲ್ಲ. ಹೋಲಿಕೆ ಸೂಪರ್. ಹಾಗೇ ಹಮ್ಮು ತೊರೆದವಳು ಕವನ ಹಾಗೂ ಅನುವಾದ ಇದಕ್ಕಿಂತಲೂ ಚೆನ್ನಾಗಿದೆ.
ಉ: ನೈಜ ಸ್ಪಂದನ
ನಿಜ, ಕಣ್ಣು ಮುಚ್ಚಬಹುದು, ಮನ ಮುಚ್ಚಲಾಗದು!
In reply to ಉ: ನೈಜ ಸ್ಪಂದನ by kavinagaraj
ಉ: ನೈಜ ಸ್ಪಂದನ
ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಗಣೇಶ ಮತ್ತೆ ಕವಿ ನಾಗರಾಜರೆ.
ಕದಂಬ ಹೂವಿನ ಚಿತ್ರ ಹಾಕುವಾಗ, ಏನೋ ಎಡವಿದೆ ಅನ್ನಿಸುತ್ತೆ. ಹಾಗಾಗಿ ಬಂದಿರಲಿಲ್ಲ :) ನೀವು ಕೊಂಡಿ ಹಾಕಿ ನನ್ನ ತಪ್ಪನ್ನು ಸರಿಪಡಿಸಿದ್ದೀರಿ.
ಅಮರುಶತಕದ ಪದ್ಯಗಳು ಸಾಮಾನ್ಯವಾಗಿ ನಾಲ್ಕು ಸಾಲಿನವು. ಹಾಲನ ಪದ್ಯಗಳು ಚಿಕ್ಕವು, ಹಾಗಾಗಿ, ಒಂದು ಮಟ್ಟಕ್ಕೆ ಹೆಚ್ಚಾಗಿ ವಿವರವನ್ನಾಗಲೀ ಉಪಮೆಗಳನ್ನಾಗಲೀ ಕೊಡುವುದು ಅದರಲ್ಲಿ ಕಷ್ಟ ಎನ್ನಿಸುತ್ತೆ. ಅನುವಾದದಲ್ಲಿ ಎರಡೂ ಪದ್ಯಕ್ಕೂ ಒಂದೇ ರೀತಿ ಪ್ರಯತ್ನ ಪಟ್ಟೆನೋ ಇಲ್ಲವೋ ಅದು ಈಗ ತಿಳಿಯದಾಗಿದೆ ;)
In reply to ಉ: ನೈಜ ಸ್ಪಂದನ by hamsanandi
ಉ: ನೈಜ ಸ್ಪಂದನ
ಹಂಸಾನಂದಿಯವರೆ, ಕದಂಬ ಹೂವಿನ ಬಗ್ಗೆ ಕೆಲವರಿಗೆ ಗೊತ್ತಿರಲಿಕ್ಕಿಲ್ಲ. ಅದಕ್ಕೆ ಕೊಂಡಿ ಸೇರಿಸಿದೆ. ಆದರೆ ಅವಸರದಲ್ಲಿ ಮುಂದಿನ ಸಾಲು ತಪ್ಪು ಬರೆದೆ. ಅದು ಹೀಗಾಗಬೇಕಿತ್ತು- ಹಾಗೇ "ಹಮ್ಮು ತೊರೆದವಳು" ಕವನ ಹಾಗೂ ಅನುವಾದನೂ ಚೆನ್ನಾಗಿದೆ. ತಪ್ಪಿಗೆ ಕ್ಷಮಿಸಿ.
ಸಂಸ್ಕೃತದೊಂದಿಗೆ ಪ್ರಾಕೃತ ಮೂಲ ಕವನವೂ ಬರೆಯುತ್ತಿರುವುದಕ್ಕೆ ಧನ್ಯವಾದಗಳು. ಸ್ವಲ್ಪ ಸ್ವಲ್ಪವಾದರೂ ಪ್ರಾಕೃತ ಭಾಷೆಯ ಬಗ್ಗೆ ಗೊತ್ತಾಗುವುದು.
In reply to ಉ: ನೈಜ ಸ್ಪಂದನ by kavinagaraj
ಉ: ನೈಜ ಸ್ಪಂದನ
ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಗಣೇಶ ಮತ್ತೆ ಕವಿ ನಾಗರಾಜರೆ.
ಕದಂಬ ಹೂವಿನ ಚಿತ್ರ ಹಾಕುವಾಗ, ಏನೋ ಎಡವಿದೆ ಅನ್ನಿಸುತ್ತೆ. ಹಾಗಾಗಿ ಬಂದಿರಲಿಲ್ಲ :) ನೀವು ಕೊಂಡಿ ಹಾಕಿ ನನ್ನ ತಪ್ಪನ್ನು ಸರಿಪಡಿಸಿದ್ದೀರಿ.
ಅಮರುಶತಕದ ಪದ್ಯಗಳು ಸಾಮಾನ್ಯವಾಗಿ ನಾಲ್ಕು ಸಾಲಿನವು. ಹಾಲನ ಪದ್ಯಗಳು ಚಿಕ್ಕವು, ಹಾಗಾಗಿ, ಒಂದು ಮಟ್ಟಕ್ಕೆ ಹೆಚ್ಚಾಗಿ ವಿವರವನ್ನಾಗಲೀ ಉಪಮೆಗಳನ್ನಾಗಲೀ ಕೊಡುವುದು ಅದರಲ್ಲಿ ಕಷ್ಟ ಎನ್ನಿಸುತ್ತೆ. ಅನುವಾದದಲ್ಲಿ ಎರಡೂ ಪದ್ಯಕ್ಕೂ ಒಂದೇ ರೀತಿ ಪ್ರಯತ್ನ ಪಟ್ಟೆನೋ ಇಲ್ಲವೋ ಅದು ಈಗ ತಿಳಿಯದಾಗಿದೆ ;)
ಉ: ನೈಜ ಸ್ಪಂದನ
ಹಂಸಾನಂದಿಯವರೆ ನಮಸ್ಕಾರ. ನನಗೆ ಚಿಕ್ಕದಾದರೂ ಹಾಲನ ಆವೃತ್ತಿ ಉಪಮಾ ಸೌಂದರ್ಯದ ದೃಷ್ಟಿಯಿಂದ ಹೆಚ್ಚು ಸೊಗಸಾಗಿದೆ ಎನಿಸಿತು - ಅದರಲ್ಲೂ ಕದಂಬದ ಹೂವಿನ ಹೋಲಿಕೆ ಇಡೀ ಮೈಯೆ ಅರಳಿದ ಕಲ್ಪನೆ ನೀಡುತ್ತದೆ. ಎರಡೂ ಚೆನ್ನಾಗಿವೆ :-)
In reply to ಉ: ನೈಜ ಸ್ಪಂದನ by nageshamysore
ಉ: ನೈಜ ಸ್ಪಂದನ
ಧನ್ಯವಾದ ನಾಗೇಶ ಅವರೆ