ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ!
ನಾನು ಚಿಕ್ಕವನಾಗಿದ್ದಾಗ ನಮ್ಮೂರಿನ ಜಟ್ಕಾ ಗಾಡಿಗಳಲ್ಲಿ, ಅಥವ ಆಟೋ ರಿಕ್ಷಾಗಳಲ್ಲಿ ಈ ರೀತಿ ಸಿನೆಮಾ ಜಾಹೀರಾತು ಕೇಳಿಬರ್ತಿತ್ತು. ಈಗ್ಲೂ ಈ ಪರಿಪಾಠ ಇದ್ಯೋ ಇಲ್ವೋ ಗೊತ್ತಿಲ್ಲ.
ಇವತ್ತು ಮರೆತು ನಿರಾಶನಾಗಬಾರದಂತ ಒಂದು ಘಟನೆ ನಡೆಯೋದರಲ್ಲಿತ್ತು. ಆಕಾಶ್ದಲ್ಲಿ ನಡೆಯೋ ಇದನ್ನ ನೋಡ್ದೇ ಇರೋ ಹಾಗೆ ಮೋಡಗಳು ತುಂಬ್ಕೊಂಬಿಟ್ಟಿವೆ ಇಲ್ಲ್ ಹಾಳಾದ್ದು. ಏನ್ಮಾಡೋದು?
ಇವತ್ತು ಜನವರಿ ಮೂರು. ಆಕಾಶ್ದಲ್ಲಿ ಕ್ವಾಡ್ರಾಂಟಿಡ್ಸ್ ಉಲ್ಕಾವರ್ಷ (Quadrantids meteor shower) ನಡ್ಯೋ ದಿನ. ಹಿಂದೆ ಇದ್ದ ಯಾವ್ದೋ ಕ್ಷುದ್ರ ಗ್ರಹವೋ, ಅಥವಾ ಧೂಮಕೇತೂನೋ ಹೋಗ್ತಾ ಇದ್ದ ದಾರಿಗೆ ಹತ್ತಿರವಾಗಿ ಭೂಮಿ ಪ್ರತಿವರ್ಷ ಜನವರಿ ಒಂದರಿಂದ ಏಳರವರೆಗೆ ಹೋಗಾ ಇರತ್ತೆ. ಆಗ, ಆ ಧೂಮಕೇತು ದಾರಿಲಿ ಬಿಟ್ಟ ಸಣ್ಣಪುಟ್ಟ ಚೂರುಪಾರುಗಳು ನಮ್ಮ ಭೂಮಿ ಸುತ್ತ ಇರೋ ಗಾಳೀಲಿ ಭರ್ರಂತ ಉರ್ದು ಹೋಗತ್ವೆ. ಅದು ಜನವರಿ ಮೂರರ ದಿವಸ ಅತೀ ಜಾಸ್ತಿ- ಅಂದ್ರೆ, ಗಂಟೆಗೆ ಸುಮಾರು ೬೦-೭೦ ಉಲ್ಕೆನಾದ್ರೂ ನೋಡ್ಬೋದಂತೆ. ಸ್ವಲ್ಪ ಕತ್ತಲು ಚೆನ್ನಾಗಿರೋ ಜಾಗಕ್ಹೋಗ್ಬೇಕಷ್ಟೆ.
ಈ ಉಲ್ಕೆಗಳು ಆಕಾಶದಲ್ಲಿ ಎಲ್ಲಾದ್ರೂ ಕಾಣಿಸ್ಕೋಬೌದು. ಆದ್ರೆ, ಅವುಗಳ ದಾರೀಲೆ ಹಿಂದಕ್ಕೆ ಹೋದ್ರೆ, ಅವೆಲ್ಲ ಸುಮಾರು ಧ್ರುವನಕ್ಷತ್ರದ ಹತ್ತಿರದಿಂದ ಬರೋ ಹಾಗೆ ತೋರತ್ವೆ. ಅಲ್ಲಿ ಒಂದು ಕ್ವಾಡ್ರನ್ಸ್ ಅನ್ನೋ ರಾಶಿ (constellation) ಇತ್ತು ಹಿಂದೆ. ಅದ್ಕೇ ಇವತ್ತು ಆಗೋ ಉಲ್ಕಾಮಳೆಗೆ ಕ್ವಾಡ್ರಾಂಟಿಡ್ಸ್ ಅಂತ ಹೆಸ್ರಿಟ್ಟಿದ್ದು. ಆದ್ರೆ, ಈಗ ಆ ರಾಶಿನ ತೆಗೆದು ಅಕ್ಕ ಪಕ್ಕದ ರಾಶಿಗಳಿಗೆ ಅದರ ಜಾಗ ಹಂಚಿಬಿಟ್ಟಿದ್ದಾರೆ ಅನ್ನಿ. ಹಾಗಾಗಿ, ಯಾವ್ದಾದ್ರೂ ಆಕಾಶದ ಹೊಸ ಪಟ ನೋಡಿದ್ರೆ, ನಿಮ್ಗೆ ಆ ಹೆಸ್ರು ಕಾಣಲ್ಲ.
ಇಲ್ಲಂತೂ ಮೋಡ. ನಿಮ್ಮೂರಲ್ಲಿ ಮೋಡ ಇಲ್ದಿದ್ರೆ, ರಾತ್ರಿ ಆಕಾಶದ್ಕಡೆ ಸ್ವಲ್ಪ ಗಮ್ನ ಹರ್ಸೋದು ಮರೀಬೇಡಿ. ಉಲ್ಕೆಗಳು ಕಾಣ್ದೇ ಇದ್ರೂ, ಇನ್ನೊಂದು ಒಳ್ಳೇ ದೃಶ್ಯ ಇದೆ. ಅದನ್ನು ನೋಡಕ್ಕೆ ಮರೀಬೇಡಿ.
ಸುಮಾರು ಎರ್ಡು ವರ್ಷಕ್ಕೊಂದ್ಸಲ ಮಂಗಳ ಭೂಮಿಗೆ ಬಹಳ ಹತ್ತಿರವಾಗ್ತಾನೆ. ಈಗ ಅವ್ನು ಆ ರೀತಿ ಹತ್ರಕ್ಕೆ ಬಂದಿದಾನೆ. ರಾತ್ರಿ ಆದ್ಮೇಲೆ, ಸುಮ್ನೆ ಪೂರ್ವ ದಿಕ್ಕಿಗೆ ತಿರ್ಗಿ ಸ್ವಲ್ಪ ತಲೆ ಎತ್ತಿ. ಒಂದೊಳ್ಳೆ ಹವಳದ ತರ್ಹ ಕೆಂಪ್ಗೆ ಕಾಣ್ಸೋನೇ ಮಂಗಳ. ಅದರ ಬಲ ಭಾಗದಲ್ಲಿ, ಸ್ವಲ್ಪ ದೂರದಲ್ಲಿ, ಇನ್ನೊಂದು ಕೆಂಪು ಛಾಯೆಯ ನಕ್ಷತ್ರ ಕಾಣತ್ತೆ. ಅದೇ ಆರ್ದ್ರಾ.
ಇವೆರಡಕ್ಕೂ ಮೇಲೆ ಇನ್ನೊಂದು ಪ್ರಕಾಶಮಾನವಾದ ಕೆಂಪು ಛಾಯೆಯ ಇನ್ನೊಂದು ನಕ್ಷತ್ರ ಇದೆ. ಅದು ರೋಹಿಣಿ. ಈಗ ಮಂಗಳ, ಆರ್ದ್ರಾ ಮತ್ತು ರೋಹಿಣಿ ಒಂದು ಒಳ್ಳೇ ಸಮ ತ್ರಿಕೋನದ ಆಕಾರ ಮಾಡ್ತಾ ಇವೆ. ಮೂರರಲ್ಲಿ ಮಂಗಳ ಹೆಚ್ಚು ಹೊಳೀತಿದೆ. ಹಾಗೂ ಗ್ರಹ ಆದ್ದ್ರಿಂದ ಅದು ಮಿನ್ಗೋಲ್ಲ. ಆರ್ದ್ರಾ, ರೋಹಿಣಿ ಎರಡೂ ಇದಕ್ಕಿಂತ ಕಡೆಮೆ ಪ್ರಕಾಶಮಾನವಾಗಿದ್ದರೂ, ಅವೂ ಎಂಥ ಲೈಟ್ ಪಲ್ಯೂಶನ್ ಇರೋ ಜಾಗ್ದಲ್ಲೂ ಚೆನ್ನಾಗೇ ಕಾಣತ್ವೆ.
ಈ ಸಮತ್ರಿಕೋನ ಕೆಲವು ವಾರ ಮಾತ್ರ ಇರತ್ತೆ. ಆಮೇಲೆ, ಮಂಗಳ ಕದಲಕ್ಕೆ ಶುರುವಾದ್ಮೇಲೆ, ಈ ಆಕಾರ ಹೊರ್ಟುಹೋಗತ್ತೆ.
ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ!