ನ್ಯಾನೋ ಕತೆಗಳು -೨

ನ್ಯಾನೋ ಕತೆಗಳು -೨

ಬೆನ್ನೆಲುಬು
ನಿನ್ನೆಯವೆರೆಗೂ ಭಾರತ ಮಾತೆ ಆರೋಗ್ಯವಾಗಿದ್ದಳು. ಇಂದು ಬೆಳಿಗ್ಗೆ ನೋಡುತ್ತೇನೆ ಬೆನ್ನಲುಬು ಮುರಿದು ವಿಕಲಾಂಗಳಾಗಿದ್ದಳು . ಕಾರಣ ಹುಡುಕಿದಾಗ ತಿಳಿಯಿತು.. ಅದೆಲ್ಲೋ  ಗೊಬ್ಬರ ಕೇಳಿ ಬೀದಿಗಿಳಿದ ರೈತರ ಮೇಲೆ ಸರ್ಕಾರ ಗೋಲಿಬಾರ್  ನಡೆಸಿತ್ತು.

ತಾಯಿ -ಮಗ
ತನ್ನ ಮಗನು ಅಮೇರಿಕಾದಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬಡ್ತಿ ಪಡೆದ ಖುಷಿಯಲ್ಲಿ ಆಕೆ ತನ್ನವರಿಗೆಲ್ಲರಿಗೂ ಸಿಹಿ ಹಂಚುತ್ತಿದ್ದಳು.. “ಎಲ್ಲರು ಒಳಗೆ ಬನ್ನಿ ವ್ಯಾಯಾಮದ ಸಮಯವಾಯ್ತು” ಆ ಕೂಡಲೇ ಒಳಗಿಂದ ಬಂದ  ಕೂಗಿಗೆ ಓಗೊಟ್ಟ ಅವರೆಲ್ಲರೂ ಎದ್ದು “ವೃದ್ದಾಶ್ರಮದ” ಒಳಹೊಕ್ಕರು.
 
ಗೊಂದಲ
ಈ ಇಳಿ ವಯಸ್ಸಿನಲ್ಲೂ ಅವರು ಕ್ರಿಕೆಟ್ ಅಭಿಮಾನಿ.. ಮಿಗಿಲಾಗಿ ತನ್ನ ಹುಟ್ಟೂರು ಬಗ್ಗೆ ತುಂಬು ಅಭಿಮಾನವನ್ನು ಹೊಂದಿದ್ದರು .. ಭಾರತ – ಪಾಕಿಸ್ತಾನ – ಬಾಂಗ್ಲಾದೇಶ ತ್ರಿಕೋಣ ಕ್ರಿಕೆಟ್ ಸರಣಿ ನಡೆಯುವ ವೇಳೆ ತಾನು ಯಾವ ದೇಶಕ್ಕೆ ಸಪೋರ್ಟ್ ಕೊಡಬೇಕೆಂಬ ವಿಚಾರದಲ್ಲಿ ಅವರಿಗೆ ಎಲ್ಲಿಲ್ಲದ ಗೊಂದಲ.
ಅವರು ಹುಟ್ಟೂರು ಸ್ವಾತಂತ್ರ ಪೂರ್ವದಲ್ಲಿ ಭಾರತದಲ್ಲಾದರೆ , ಅನಂತರ ಪಾಕಿಸ್ತಾನವಾಯ್ತು. ಈಗ ಅದು ಬಾಂಗ್ಲಾದೇಶದ ಒಂದು ಭಾಗ..!!
 
ಕ್ಷಮೆ
ಅಂಗಳದಲ್ಲಿ ಆಟವಾಡುತ್ತಿದ್ದ ತನ್ನ ಮುದ್ದು ಮಗಳು ಜೋರಾಗಿ ಎಸೆದ ಕಲ್ಲು ತಂದೆಯ ಹಣೆಗೆ ಬಡಿಯಿತು. “ಅಪ್ಪಾ… ಇದೊಂದು ಸಾರಿ ಕ್ಷಮಿಸಪ್ಪ…” ಹೆದರಿ ಅಳುತ್ತಿದ್ದ ಮಗಳ ಮುಗ್ದತನದ ಮಾತುಗನನ್ನು ಕೇಳಿ ಆತ ಗಲ್ಲವನ್ನು ಚಿವುಟುತ್ತ ಮಗಳನ್ನು ಕ್ಷಮಿಸಿದ್ದ . ವರ್ಷಗಳ ನಂತರ ಅದೇ ಮಗಳು ತಾನು ಪ್ರೀತಿಸಿದ ಹುಡುಗನ ಜೊತೆ ಯಾರಿಗೂ ತಿಳಿಯದಂತೆ ರಿಜಿಸ್ಟ್ರಾರ್ ಮದುವೆಯಾಗಿ ಅಪ್ಪನ ಬಳಿ ಬಂದಿದ್ದಳು. ಕೆಂಪಾದ ಅಪ್ಪನ ಮುಖ ನೋಡಿದವಳೇ ಅಳುತ್ತ ನುಡಿದಳು ” ಅಪ್ಪಾ… ಇದೊಂದು ಸಾರಿ ಕ್ಷಮಿಸಪ್ಪ.. “..
ಈ ಬಾರಿ ಅಪ್ಪ ಕ್ಷಮಿಸಲಿಲ್ಲ..
 

 
 

 

Rating
No votes yet

Comments